ಮಂಗಳವಾರ, ಡಿಸೆಂಬರ್ 10, 2019
17 °C

ರಕ್ತದ ಮೇಲೆ ತೆರಿಗೆ!

Published:
Updated:
ರಕ್ತದ ಮೇಲೆ ತೆರಿಗೆ!

ಮಹಿಳೆಯರ ಮೂಲಭೂತ ಅವಶ್ಯಕತೆಯಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿರುವ ಸರ್ಕಾರದ ನಡೆಯ ಬಗ್ಗೆ ವ್ಯಾಪಕವಾದ ಚರ್ಚೆ ಶುರುವಾಗಿದೆ. ಮನುಷ್ಯಸಮಾಜ ನಾಗರಿಕವಾಗುತ್ತ ಸಾಗಿದಂತೆ ಜೀವಸಂಕುಲದ ಮುನ್ನಡೆಗೆ ಕಾರಣವಾಗುವ ಋತುಸ್ರಾವದ ಪ್ರಾಕೃತಿಕ ನಿಯಮವನ್ನೂ ಅರ್ಥ ಮಾಡಿಕೊಳ್ಳಬಹುದು ಎಂಬುದೊಂದು ಸಹೃದಯತೆಯ ನಂಬಿಕೆ. ಆದರೆ ವಾಣಿಜ್ಯಲೋಕದ ಈ ತೀವ್ರಗತಿಯ ಓಟದಲ್ಲಿ ಅವುಗಳನ್ನೆಲ್ಲ ಅರ್ಥ ಮಾಡಿಕೊಳ್ಳಲು ಪುರುಸೊತ್ತಿಲ್ಲ ಎಂಬಂತಿದೆ ತೆರಿಗೆ ಹೇರಿಕೆಯ ಈ ಪ್ರಕ್ರಿಯೆ.

ಆಡಳಿತದ ಸೂತ್ರವನ್ನು ಭದ್ರಪಡಿಸಿಕೊಳ್ಳಲು ಜನಸಾಮಾನ್ಯರ ಮೇಲೆ ವಿವಿಧ ತೆರಿಗೆ ಹೇರುವುದು ಪುರಾತನ ಕಾಲದಿಂದಲೂ ಸಾಗಿಬಂದ ವಿಧಾನ. ಜನರ ವಿವಿಧ ಅವಶ್ಯಕತೆಗಳ ಮೇಲೆ ತೆರಿಗೆ ಹೇರುವ ಮೂಲಕ ಲಭ್ಯವಾಗುವ ಸಂಪನ್ಮೂಲದಲ್ಲಿ ಸುಧಾರಣೆ, ಸಮಾನತೆ ತರುವ ಆಶಯ ಆಡಳಿತ ವ್ಯವಸ್ಥೆಗೆ ಇರುವುದನ್ನು ನಾಗರಿಕ ಸಮಾಜ ಒಪ್ಪಬಹುದು. ಆದರೆ ಪ್ರಾಕೃತಿಕ ವಿಚಾರಗಳ ಮೇಲೆ ತೆರಿಗೆ ಹೇರಿಕೆ ಸಂವೇದನಾರಹಿತವಾಗಿ ಕಾಣಿಸುತ್ತದೆ.

ಈ ನಿಟ್ಟಿನಲ್ಲಿ ಜಿಎಸ್‌ಟಿ ಜಾರಿ ಆಗುವ ಮುನ್ನವೇ ಮಹಿಳೆಯರು ಅಭಿಯಾನವೊಂದನ್ನು ಆರಂಭಿಸಿದ್ದರು. ಸಂಸದೆ ಸುಶ್ಮಿತಾ ದೇವ್‌ ನೇತೃತ್ವದಲ್ಲಿ ಆನ್‌ಲೈನ್‌ ನಲ್ಲಿ ಸಹಿ ಸಂಗ್ರಹ ಮಾಡಿ, ಮನವಿಯೊಂದನ್ನು ಸಚಿವ ಅರುಣ್‌ ಜೇಟ್ಲಿ ಅವರಿಗೆ ಸಲ್ಲಿಸಲಾಗಿದ್ದು, ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿಧಿಸದಂತೆ ಕೋರಲಾಗಿತ್ತು.

ಸ್ವಚ್ಛ ಭಾರತ್‌ ಮಿಶನ್‌ ಕುರಿತು ಕೇಂದ್ರ ಸರ್ಕಾರ ಅಭಿಮಾನ ಪಡುವುದಾದರೆ, ‘ಬೇಟಿ ಬಚಾವೋ’, ‘ಬೇಟಿ ಪಡಾವೋ’ ಎಂಬ ಘೋಷಣೆಯ ಬಗ್ಗೆಯೂ ಅಭಿಮಾನ ಇರುವುದಾದರೆ, ಸ್ವಚ್ಛತೆಗೂ, ಹೆಣ್ಮಕ್ಕಳ ಮಾಸಿಕ ಅಗತ್ಯಕ್ಕೂ ಸಂಬಂಧ ಇರುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ಜಡಿಯುವುದು ಪರಸ್ಪರ ವಿರುದ್ಧ ಎಂಬುದನ್ನು ಮನವಿ ವಿವರಿಸಿದೆ.

355 ದಶಲಕ್ಷ ಮಹಿಳೆಯರ ಪೈಕಿ ಶೇ. 12ರಷ್ಟು ಮಹಿಳೆಯರು ಮಾತ್ರ ನ್ಯಾಪ್‌ಕಿನ್‌ ವಿಧಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನ್ಯಾಪ್‌ಕಿನ್‌ ಬಳಕೆಯ ಪ್ರಮಾಣ ಇನ್ನೂ ಕಡಿಮೆ ಇದೆ. ಭಾರತದಲ್ಲಂತೂ ಶೇ. 70ರಷ್ಟು ಮಹಿಳೆಯರಿಗೆ ನ್ಯಾಪ್‌ಕಿನ್‌ ಖರೀದಿಸುವ ಸಾಮರ್ಥ್ಯ ಇಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಮಹಿಳೆಯರು ನ್ಯಾಪ್‌ಕಿನ್‌ ಬಳಸುವಂತೆ ಶಿಕ್ಷಣ ನೀಡುವ ಅಗತ್ಯವೂ ಇದೆ – ಎನ್ನುತ್ತಾರೆ ಮಹಿಳಾಪರ ವಿಷಯಗಳ ಕುರಿತು ಕೆಲಸ ಮಾಡುವ ಎನ್‌ಜಿಒ ಮುಖಂಡರು.

ಆದರೆ ಜಿಎಸ್‌ಟಿಗೂ ಮುನ್ನ ಇದ್ದ ತೆರಿಗೆ ಪ್ರಮಾಣಕ್ಕಿಂತ ಜಿಎಸ್‌ಟಿ ಜಾರಿಯ ಬಳಿಕದ ತೆರಿಗೆ ಪ್ರಮಾಣ ಇಳಿಕೆಯಾಗಿದೆ. ಸ್ಥಳೀಯ ಮಟ್ಟದ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸಣ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ತಯಾರಾಗುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಯಾವುದೇ ತೆರಿಗೆ ಹೇರುವುದಿಲ್ಲ ಎನ್ನುವುದು ಸರ್ಕಾರದ ಸಮರ್ಥನೆ. ಬಹುರಾಷ್ಟ್ರೀಯ ಕಂಪೆನಿಗಳ ದುಬಾರಿ ನ್ಯಾಪ್‌ಕಿನ್‌ಗಳ ಭರಾಟೆಗೆ ಕಡಿವಾಣ ಹಾಕುವುದೂ ಇದರ ಉದ್ದೇಶ ಎನ್ನಲಾಗಿದೆ.

ತೆರಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸುವವರು ಸರ್ಕಾರದ ಈ ಸಮರ್ಥನೆಯ್ನೂ ಒಪ್ಪುವುದಿಲ್ಲ. ಸ್ಥಳೀಯ ಉದ್ಯಮಕ್ಕೆ ನೆರವಾಗುವ ಉದ್ದೇಶವಿದ್ದರೆ, ಸರ್ಕಾರ ಅದಕ್ಕೆ ಪೂರಕವಾದ ವ್ಯವಸ್ಥೆಯೊಂದನ್ನು ರೂಪಿಸಬೇಕಲ್ಲವೆ ಎಂದು ಅವರು ಪ್ರಶ್ನಿಸುತ್ತಾರೆ.

ದೇಶಾದ್ಯಂತ ಅಗ್ಗದ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರಾಟ ಮಾಡುವ ಸಂಸ್ಥೆಗಳಿವೆ. ಲಾಭರಹಿತ ಸಂಸ್ಥೆಗಳು ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪ್ಯಾಡ್‌ಗಳನ್ನು ವಿತರಿಸಿ, ಹೆಣ್ಮಕ್ಕಳಲ್ಲಿ ನೆಮ್ಮದಿ ಭಾವ ಮೂಡಿಸಲು ಪ್ರಯತ್ನಿಸುತ್ತಿವೆ. ಕಿಶೋರಾವಸ್ಥೆಯಲ್ಲಿ ಋತುಸ್ರಾವ ಆರಂಭವಾದಾಗ ಆಗುವ ಮಾನಸಿಕೆ ಏರಿಳಿತವನ್ನು ಒಂದೆಡೆ ಸಂಭಾಳಿಸುವ, ಓದಿನತ್ತ ಗಮನ ಹರಿಸಬೇಕಾದ ಜೊತೆಗೆ ಸ್ರಾವವನ್ನು ನಿಭಾಯಿಸಿ ಸಂಜೆಯವರೆಗೆ ತರಗತಿಯಲ್ಲಿ ಪ್ರಶಾಂತ ಮನಃಸ್ಥಿತಿಯಲ್ಲಿ ಕುಳಿತುಕೊಳ್ಳಬೇಕಾದ ಮಕ್ಕಳ ಮನೋಭಾವನೆಯನ್ನೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ, ತೆರಿಗೆ ವಿನಾಯಿತಿ ಆಗ್ರಹಿಸುವವರು.

ಕೇವಲ ಮಹಿಳಾಪರ ಹೋರಾಟಗಾರರಷ್ಟೇ ಅಲ್ಲ, ಮಾನವೀಯ ನೆಲೆಯಲ್ಲಿ ಯೋಚಿಸುವ ಎಲ್ಲರೂ ಈ ತೆರಿಗೆಯನ್ನು ವಿರೋಧಿಸಬೇಕಾಗಿದೆ ಎನ್ನುವುದೂ ಮತ್ತೊಂದು ಆಗ್ರಹ. ಇದು ಅಕ್ಷರಶಃ ‘ರಕ್ತದ ಮೇಲೆ ವಿಧಿಸಿರುವ ತೆರಿಗೆ’ ಎಂದು ಟೀಕಿಸಿ, ತೆರಿಗೆ ಸಂಪೂರ್ಣ ತೆಗೆದು ಹಾಕುವಂತಹ ಆಗ್ರಹಗಳೂ ವ್ಯಕ್ತವಾಗಿದೆ.

ಪ್ರಾಕೃತಿಕವಾದ ಪ್ರಕ್ರಿಯೆಗೆ ತೆರಿಗೆ ವಿಧಿಸುವುದನ್ನು ವಿರೋಧಿಸುವುದು ಒಂದೆಡೆಯಾದರೆ, ತೆರಿಗೆಮುಕ್ತ ವಸ್ತುಗಳ ಪಟ್ಟಿಯಲ್ಲಿರುವ ಅಂಶಗಳನ್ನು ಗಮನಿಸಿದರೆ, ಪುರುಷರ ಲೋಲುಪತೆ ಬೇಕಾಗುವ ವಸ್ತುಗಳಿಗೆ ಶೂನ್ಯ ತೆರಿಗೆ ವಿಧಿಸಿರುವುದು ಕಾಣಿಸುತ್ತದೆ ಎನ್ನುತ್ತಾರೆ, ಮಹಿಳಾಪರ ಸಂಘಟನೆಯಲ್ಲಿ ಕೆಲಸ ಮಾಡುವ ಮಂಗಳೂರಿನ ಶಾಲಿನಿ ಸುವರ್ಣ.

ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಸಲಕರಣೆಗಳು ತೆರಿಗೆಮುಕ್ತವಾಗಿವೆ. ಎಷ್ಟೋ ಐಶಾರಾಮಿ ವಸ್ತುಗಳೂ ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಹಾಗಿದ್ದರೆ ತೆರಿಗೆ ಪ್ರಕ್ರಿಯೆಯನ್ನು ಮಾನವೀಯ ನೆಲೆಯಲ್ಲಿ ಯೋಚಿಸುವ ವ್ಯವಧಾನವನ್ನು ನೀತಿ ನಿರೂಪಕರು ಕಳೆದುಕೊಂಡಿದ್ದಾರೆಯೇ – ಎಂಬುದು ಅವರ ಪ್ರಶ್ನೆ.

‘ಹಿಂದಿನ ಕಾಲದಲ್ಲಿ ಸ್ತನಗಳ ಮೇಲೆ, ಸೌಂದರ್ಯದ ಮೇಲೆ, ಸ್ತನಗಳನ್ನು ಮುಚ್ಚಿಕೊಳ್ಳಬೇಕಾಗಿದ್ದರೆ ತೆರಿಗೆ ನೀಡಬೇಕಾದ ಕ್ರೂರ ಪರಿಸ್ಥಿತಿಗಳು ಇದ್ದುದನ್ನೂ ಇತಿಹಾಸದಲ್ಲಿ ಓದಿದ್ದುಂಟು. ಚೀನಾದಲ್ಲಿ ಉದ್ಯೋಗಸ್ಥ ಮಹಿಳೆ ಎರಡನೇ ಬಾರಿಗೆ ಗರ್ಭವತಿ ಆಗಿಲ್ಲ ಎಂಬುದನ್ನು ಸಾಬೀತು ಪಡಿಸಲು ಪ್ರತಿ ತಿಂಗಳೂ ಸ್ರಾವದ ಪ್ಯಾಡ್‌ಗಳನ್ನು ಉದ್ಯೋಗದಾತರಿಗೆ ತೋರಿಸಬೇಕಾದ ಕ್ರೂರತೆ ಇದ್ದುದನ್ನೂ ಪತ್ರಿಕೆಗಳು ವರದಿ ಮಾಡಿವೆ. ಯಾವ ದೇಶದಲ್ಲೇ ಆಗಲಿ, ಮಹಿಳೆಯ ಅಸ್ತಿತತ್ವವೇ ಒಂದು ಹೊರೆಯೇನೋ ಎಂಬಂತೆ ಬಿಂಬಿಸುವ ನಡೆಗಳು ಜೀವಪರವಾದ ನಡೆಯಂತೂ ಅಲ್ಲ. ಋತುಸ್ರಾವ ಈ ಜೀವಸಂಕುಲ ಮುಂದುವರೆಯಲು ಬೇಕಾದ ಅತ್ಯಗತ್ಯ ಪ್ರಕ್ರಿಯೆ ಎಂಬುದನ್ನು ನೀತಿನಿರೂಪಕರಿಗೆ ಅರ್ಥ ಮಾಡಿಸುವುದಾದರೂ ಯಾರು? ಸ್ಯಾನಿಟರಿ ಪ್ಯಾಡ್‌ಗಳು ಐಶಾರಾಮಿ ಅಲಂಕಾರಿಕ ವಸ್ತುಗಳಂತೆಯೇ ಇರಬಹುದು ಎಂಬ ಭಾವನೆ ಅವರಲ್ಲಿರಬಹುದೇ’ ಎಂದು ಅವರು ಪ್ರಶ್ನಿಸುತ್ತಾರೆ.

***

ಅನಿವಾರ್ಯತೆ ಅರಿಯಲಿ

‘ಒಂದು ದೇಶ-ಒಂದು ತೆರಿಗೆ’ – ಸಾಕಷ್ಟು ಗೊಂದಲದ ಮಧ್ಯೆಯೂ ಜಾರಿಯಾಗಿತ್ತು ಇತಿಹಾಸ. ತೆರಿಗೆಯ ನೀತಿ ಉತ್ಪನ್ನ ಕೇಂದ್ರಿತ ಎಂದ ಮೇಲೆ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಜಿಎಸ್‌ಟಿ ಹೇರಿಕೆ ಸಮವಲ್ಲ ಎಂದೆನಿಸುತ್ತದೆ. ಕೇವಲ ಒಂದು ವಸ್ತುವಾಗಿ ನ್ಯಾಪ್ಕಿನ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಕ್ಕಿಂತ, ಹೆಣ್ಮಕ್ಕಳ ಅನಿವಾರ್ಯತೆಯನ್ನು ಅರಿತು ತೀರ್ಮಾನ ತೆಗೆದುಕೊಳ್ಳಬೇಕಾದ್ದು ಭಾರತದಂತಹ ದೇಶಕ್ಕೆ ಅಗತ್ಯ. ಯಾಕೆಂದರೆ ಯಾಂತ್ರಿಕವಾಗಿ ಬದುಕುವವರಿಗಿಂತ ಭಾವನಾತ್ಮಕವಾಗಿ ಜೀವಿಸುವವರ ಸಂಖ್ಯೆ ಅಧಿಕ. ಕಾಂಡೋಮನ್ನು ಉಚಿತವಾಗಿ ನೀಡುವ ಸರ್ಕಾರ, ಮಹಿಳೆಯರ ದೈಹಿಕ ಸ್ಥಿರತೆಗೆ ಅಗತ್ಯವಾದ ನ್ಯಾಪ್ಕಿನ್‌ಗಳಿಗೆ ದುಬಾರಿ ತೆರಿಗೆ ವಿಧಿಸುತ್ತದೆ ಎಂದಾದರೆ ಇದನ್ನು ಏನೆಂದು ತಿಳಿಯಬೇಕು. ನಗರ ಜೀವನ ನ್ಯಾಪ್ಕಿನ್ ಬಳಕೆಯ ಅನಿವಾರ್ಯತೆ ಹೆಚ್ಚಿಸಿದೆ. ಈಗಾಗಲೇ ಅವುಗಳ ಬೆಲೆ ಕಡಿಮೆಯೇನು ಇಲ್ಲ. ಮತ್ತೆ ತೆರಿಗೆ ಹೊರೆ  ದೊಡ್ಡ ತಲೆನೋವು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.-ಪವಿತ್ರ ಬಿದ್ಕಲ್‌ಕಟ್ಟೆ, ಉದ್ಯೋಗಿ

**

ಮಂಡಳಿಗೆ  ಮನವರಿಕೆ ಅಗತ್ಯ

ತೆರಿಗೆದರ ನಿಗದಿ ಅಥವಾ ಬದಲಾವಣೆಯ ಅಂತಿಮ ನಿರ್ಧಾರ ಜಿಎಸ್‌ಟಿ ಮಂಡಳಿಗೆ ಸೇರಿದೆ. ಹೀಗಾಗಿ ಜಿಎಸ್‌ಟಿ ಮಂಡಳಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ತೆರಿಗ ದರ ಇಳಿಕೆ ಆಗುವ ಸಾಧ್ಯತೆ ಇದೆ. ಮಂಡಳಿಯು ತೆರಿಗೆ ವಿಧಿಸಬಹುದಾದಂತಹ ಸರಕುಗಳಿಗೆ ತೆರಿಗೆದರ ನಿಗದಿ ಮಾಡಿದೆ. ಆ ಸಂದರ್ಭದಲ್ಲಿ ಕೇಂದ್ರ ಅಬಕಾರಿ ಸುಂಕ ಮತ್ತು ರಾಜ್ಯಗಳ ತೆರಿಗೆ ಸೇರಿಸಿ ಹತ್ತಿರಕ್ಕೆ ಒಂದು ನಿಗದಿತ ಬೆಲೆ ನೀಡಿದೆ. ಸದ್ಯದ ಮಟ್ಟಿಗೆ ಹೊಸ ವ್ಯವಸ್ಥೆಯ ಜಾರಿಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಮುಂದೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ವಸ್ತುಗಳ ದರ ಪರಿಷ್ಕರಣೆ ಮಾಡುವಂತೆ ಮನವರಿಕೆ ಮಾಡಿಕೊಟ್ಟರೆ ಬದಲಾವಣೆ ಮಾಡುವ ಸಾಧ್ಯತೆಗಳು ಇರುತ್ತವೆ. ಮಂಡಳಿಯಲ್ಲಿರುವ ಒಟ್ಟು 36 ಸದಸ್ಯರಲ್ಲಿ 20 ಸದಸ್ಯರು ಒಪ್ಪಿಗೆ ನೀಡಿದರೆ ಮಾತ್ರ ತೆರಿಗೆದರಗಳ ನಿಗದಿ ಅಥವಾ ಬದಲಾವಣೆ ಸಾಧ್ಯ -ಮನೋಹರ ಬಿ.ಟಿ., ಎಫ್ ಕೆಸಿಸಿಐನ ಜಿಎಸ್ ಟಿ ಸಮಿತಿ ಅಧ್ಯಕ್ಷ

**

ಪರಿಸರದ ಅಂಶ

ಸಾಮಾನ್ಯವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ನಂಬಿಕೆ ಇದೆ. ಅವುಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸುವುದರಿಂದ ಮಣ್ಣಿನಲ್ಲಿ ಕೊಳೆಯಲಾರವು. ಆದರೆ ಇಂತಹ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ ಎನ್ನುತ್ತಾರೆ ಬರಹಗಾರ್ತಿ ವಾಣಿ.  ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ದಿನದ 24 ಗಂಟೆಯೂ ದುಡಿಮೆ, ಸಂಶೋಧನೆ, ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವಾಗ ಸ್ಯಾನಿಟರಿ ಪ್ಯಾಡ್‌ಗಳು ತೀರಾ ಅನಿವಾರ್ಯ. ಬೆಳಿಗ್ಗೆಯಿಂದ ಸಂಜೆವರೆಗೆ ಕಚೇರಿಯಲ್ಲಿ ದುಡಿಯುವ ಮಹಿಳೆಯೂ ಸ್ಯಾನಿಟರಿ ಪ್ಯಾಡ್‌ಗಳನ್ನು ಅನಿವಾರ್ಯವಾಗಿ ಬಳಸಲೇಬೇಕು. ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಸಾವಯವ ಉತ್ಪನ್ನಗಳು ಬರಬೇಕೇ ಹೊರತು ತೆರಿಗೆಯ ಮೂಲಕ ಪ್ಯಾಡ್‌ಗಳ ಬಳಕೆಯನ್ನು ತಡೆಯುವುದಂತೂ ಸಾಧುವಲ್ಲ, ಮಾನವೀಯವೂ ಅಲ್ಲ. ಹಾಗಾಗಿ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದು ಅವರು ಆಗ್ರಹಿಸುತ್ತಾರೆ.

**

ಹೆಣ್ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಮೊದಲಿನಿಂದಲೂ ಸಮಾಜ ಹೆಣ್ಮಕ್ಕಳನ್ನು ಎರಡನೆಯವಳಾಗಿಯೇ ಕಾಣುತ್ತಿದೆ. ಹೆಣ್ಣಿನ ಶೃಂಗಾರಕ್ಕೆ ಸಂಬಂಧಿಸಿದ ವಸ್ತುಗಳಿಗೆ ಕಡಿಮೆ ತೆರಿಗೆ ವಿಧಿಸಿ ಮೂಲಭೂತ ಅವಶ್ಯಕತೆಯಾದ ಸ್ಯಾನಿಟರಿ ಪ್ಯಾಡ್‌ಗಳಿಗೆ ಅಧಿಕ ತೆರಿಗೆ ವಿಧಿಸಿರುವುದು ಸರಿಯಲ್ಲ. ಪ್ಯಾಡ್‌ಗಳಿಗೆ ಹಣ ಹೆಚ್ಚಾದರೆ ಅವರು ಮತ್ತೆ ಹಳೆ ಪದ್ಧತಿಯನ್ನು (ಬಟ್ಟೆ ಬಳಸುವುದು) ಅನುಸರಿಸಬಹುದು.-ಎನ್. ಗಾಯತ್ರಿ, ಸಹ ಸಂಪಾದಕಿ ‘ಹೊಸತು’ ಮಾಸಪತ್ರಿಕೆ

**

ಸ್ಯಾನಿಟರಿ ಪ್ಯಾಡ್‌ಗಳು ಬೇಕಿಲ್ಲ!       

ಮುಂದುವರೆದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ಸ್‌ಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದ್ದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿರುವುದರಿಂಕದ ಮುಂದುವರೆದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್‌ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕಾರ್ಪೊರೇಟ್‌ಗಳಿಗೆ ತಮ್ಮ ಪ್ಯಾಡ್ಸ್‌ಗಳನ್ನು ಡಂಪ್ ಮಾಡುವುದಕ್ಕಿನ್ನು ಉಳಿದಿರುವುದು ನಮ್ಮಂಥ ದೇಶ. ಪರಂಪರಾಗತವಾಗಿ ಬಂದಿರುವುದು ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಪ್ಪು ತಿಳಿವಳಿಕೆ ನಮಗೆ. 2015-16ರ National Family Health Survey (NFHS) ಪ್ರಕಾರ ಶೇ. 48.5 ಗ್ರಾಮೀಣ, ಶೇ. 77.5 ನಗರ ಅಂದರೆ ಶೇ. 57.6 ಒಟ್ಟೂ ಪ್ಯಾಡ್ಸ್‌ ಬಳಕೆದಾರರು. ಶೇ.12 ಜಿಎಸ್‌ಟಿಯಿಂದ ಡಿಮಾಂಡ್-ಸಪ್ಲೈ ಆಧಾರಿತವಾದ ಪ್ಯಾಡ್ಸ್‌ ಬಳಕೆ ಕಡಿಮೆಯಾಗುತ್ತದೆಂಬುದು ಸರಿಯಲ್ಲ, ಹಾಗೇ ಒಂದು ವೇಳೆಯಿದ್ದರೂ ಬೇರೆ ಪರಿಸರಸ್ನೇಹಿ ಪರ್ಯಾಯಗಳಿಗದು ಅನುವು ಮಾಡಿಕೊಡಲಿ!-ಮಾಳವಿಕಾ ಅವಿನಾಶ್‌, ನಟಿ

**

ಉಚಿತವಾಗಿ ಪ್ಯಾಡ್ ನೀಡಲಿ

ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ಮೂಲಭೂತ ಅವಶ್ಯಕತೆ. ಮೂಲಭೂತ ವಸ್ತುವಿಗೆ ಟ್ಯಾಕ್ಸ್ ನಿಗದಿಪಡಿಸಿರುವುದು ಸರಿಯಲ್ಲ. ಅಲ್ಲದೇ ಸರಕಾರ ಇಕೋ ಫ್ರೆಂಡ್ಲಿ ಫ್ಯಾಡ್‌ಗಳನ್ನು ಉಚಿತವಾಗಿ ಮಹಿಳೆಯರಿಗೆ ನೀಡಬೇಕು. ಪ್ಯಾಡ್‌ಗಳ ಮೇಲೆ ಈಗ ತೆರಿಗೆ ಹಾಕಿ ಇನ್ನಷ್ಟು ದುಬಾರಿ ಮಾಡುವುದು ಸರಿಯಲ್ಲ.

ದು. ಸರಸ್ವತಿ, ಸಾಮಾಜಿಕ ಕಾರ್ಯಕರ್ತೆ

ಪ್ರತಿಕ್ರಿಯಿಸಿ (+)