ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಒತ್ತು‘ವರಿ’: ತೆರವಿಗೆ ನಿರಾಸಕ್ತಿ

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ದೃಷ್ಟಿ ಹಾಯಿಸಿದಷ್ಟು ದೂರವೂ ಹಸಿರು ಕಾನನ, ಮೈದುಂಬಿ ಹರಿಯುವ ನದಿಗಳು, ಸರ್ವ ಋತುವಿನಲ್ಲಿಯೂ ಧುಮ್ಮಿಕ್ಕುವ ಜಲಪಾತಗಳು, ಮುದನೀಡುವ ಹಕ್ಕಿಗಳ ಕಲರವ. . .

ಇದು ನಾಲ್ಕೈದು ದಶಕಗಳ ಹಿಂದಿನ ಚಿತ್ರ. ಅದನ್ನು ಕಂಡೇ ‘ನಾಡಗೀತೆ’ಯನ್ನು ಕೊಟ್ಟ ಕವಿ ಕುವೆಂಪು ಅವರು, ‘ಹಸಿರಿನ ಗಿರಿಗಳ ಸಾಲೆ, ನಿನ್ನಯ ಕೊರಳಿನ ಮಾಲೆ . . .’ ಎಂದು ನಾಡಿನ ಸೊಬಗನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದರು.

ಇಂದು ಆ  ಚಿತ್ರಣವಿಲ್ಲ. ದಟ್ಟ ಕಾಡುಗಳು, ಮುಗಿಲೆತ್ತರದ ಮರಗಳನ್ನು ಕಾಣಬೇಕಾದರೆ ವನ್ಯಜೀವಿ ಧಾಮಗಳಿಗೆ ಹೋಗಬೇಕು. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಕಾಡುಗಳು ಬೋಳಾಗಿ ನಿಂತಿವೆ. ಸಹ್ಯಾದ್ರಿಯ ಗಿರಿಶೃಂಗಗಳು ಕಜ್ಜಿ ಅಂಟಿಕೊಂಡಂತೆ, ತೊನ್ನು ರೋಗ ಅಮರಿಕೊಂಡಂತೆ ಭಾಸವಾಗುತ್ತವೆ.

ಮೇ ಅಂತ್ಯದಿಂದ ಅಕ್ಟೋಬರ್  ಕೊನೆಯವರೆಗೂ ನಿರಂತರ 24 ಗಂಟೆ ಮಳೆ ಸುರಿಯುತ್ತಿದ್ದ ಕಾಲವೊಂದಿತ್ತು. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಈ ಐದಾರು ತಿಂಗಳ ಕಾಲ ಛತ್ರಿ ಇಲ್ಲದೇ ಮನೆಯಿಂದ ಹೊರಬರುವಂತೆಯೇ ಇರಲಿಲ್ಲ. ಕಾಡು–ಗದ್ದೆ ತೋಟಗಳಲ್ಲಿ ಹೋಗಲಿ; ಡಾಂಬರು ಅಂಟಿಸಿದ ರಸ್ತೆಗಳಲ್ಲಿ ಕೂಡ ಭೂಗರ್ಭದಿಂದ ನೀರಿನ ಒರತೆ  ಚಿಮ್ಮುತ್ತಿತ್ತು. ಜಗವೆಲ್ಲ ಜಲಮಯವಾಗುವ ಸನ್ನಿವೇಶ ಮಳೆಗಾಲದಾದ್ಯಂತ ಇರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಸಹ್ಯಾದ್ರಿ ಸೆರಗಿನಲ್ಲಿರುವ ಶೃಂಗೇರಿ, ತೀರ್ಥಹಳ್ಳಿಯಲ್ಲಿ ಕೂಡ ಜೂನ್‌ ಕಳೆದರೂ ಮಳೆಗಾಲ ಆರಂಭವಾಗುವುದಿಲ್ಲ. ದಕ್ಷಿಣದ ಚಿರಾಪುಂಜಿ ಎಂಬ ಹೆಸರನ್ನು ಆಗುಂಬೆ ಕಳೆದುಕೊಳ್ಳುತ್ತಿದೆ. ವರ್ಷಕ್ಕೊಮ್ಮೆ ನದಿ ಉಕ್ಕಿ ಹರಿದರೆ ಅದೇ ಸೋಜಿಗದ ಸಂಗತಿಯಾಗುವ ದಿನಮಾನಗಳನ್ನು ನೋಡುತ್ತಿದ್ದೇವೆ.

ಸಹ್ಯಾದ್ರಿ, ನೀಲಗಿರಿ ಪರ್ವತಶ್ರೇಣಿಯಲ್ಲಿ ಕಾಡುನಾಶವಾಗಿದ್ದರಿಂದ ಪ್ರಾಣಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಆನೆ ಕಾರಿಡಾರ್‌ಗಳು ಒತ್ತುವರಿಯಾಗಿದ್ದರಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಕೊಡಗಿನಲ್ಲಿ ಕಳೆದ ವರ್ಷ ಆನೆದಾಳಿಯಿಂದ ಐವರು ಮೃತಪಟ್ಟಿದ್ದಾರೆ. ಆನೆ, ಹುಲಿ, ಚಿರತೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಜನರನ್ನು ಆತಂಕಕ್ಕೆ ಈಡು ಮಾಡುವ ಪ್ರಕರಣ ವರದಿಯಾಗುತ್ತಲೇ ಇವೆ.

‘2011–2016ರ ಅವಧಿಯಲ್ಲಿ 26 ಹುಲಿಗಳು ದೇಶದಲ್ಲಿ ಸಾವು ಕಂಡಿದ್ದು, ಕರ್ನಾಟಕದಲ್ಲಿ 9 ಹುಲಿಗಳು ಸತ್ತಿವೆ. ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 45 ದಿನ ನಡೆದ ಸಮೀಕ್ಷೆಯಲ್ಲಿ 1,338 ಪ್ರಾಣಿಗಳು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿವೆ’ ಎಂದು ಮಹಾಲೇಖಪಾಲರ ವರದಿ ಉಲ್ಲೇಖಿಸಿದೆ.

ಅರಣ್ಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ರಾಜ್ಯದಲ್ಲಿ ಒಟ್ಟು 43,356 ಚದರ ಕಿ.ಮೀ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶ ಹರಡಿಕೊಂಡಿದೆ. ಅಂದರೆ ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ 22ರಷ್ಟಿದೆ. ಆದರೆ, 2015ರಲ್ಲಿ ನಡೆದ ಭಾರತ ಅರಣ್ಯ ಸಮೀಕ್ಷೆ ಪ್ರಕಾರ ಈ ಪ್ರಮಾಣ ಶೇ 19.96ಕ್ಕೆ ಕುಸಿದಿದೆ. ಅಂದರೆ, 38,284 ಚದರ ಕಿ.ಮೀಯಷ್ಟು ಮಾತ್ರ ಉಳಿದಿದೆ.
‘2001ರಿಂದ 2015ರ ಅವಧಿಯಲ್ಲಿ ದಟ್ಟ ಅರಣ್ಯ ಪ್ರದೇಶವೂ ಗಣನೀಯ ಪ್ರಮಾಣದಲ್ಲಿ ಕರಗಿದೆ. ಅರಣ್ಯದ ಶೋಷಣೆ ದಿನೇದಿನೇ ಹೆಚ್ಚುತ್ತಲೇ ಇದೆ’ ಎಂದು 2016–17ರಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ‘ಕರ್ನಾಟಕ ಆರ್ಥಿಕ ಸಮೀಕ್ಷೆ’ ಆತಂಕ ವ್ಯಕ್ತಪಡಿಸಿದೆ.

‘2001ರಲ್ಲಿ 26,156 ಚದರ ಕಿ.ಮೀ ದಟ್ಟ ಅರಣ್ಯ ಇತ್ತು. 2015ರ ಹೊತ್ತಿಗೆ ಇದು 21,844 ಚದರ ಕಿ.ಮೀಗೆ ಇಳಿಕೆಯಾಗಿದೆ’ ಎಂದು ಸಮೀಕ್ಷೆ ವಿವರಿಸಿದ್ದು,  ಅರಣ್ಯದ ಮೇಲೆ ಮಾನವನ ಆಕ್ರಮಣಕ್ಕೆ ಇದು ಸಾಕ್ಷಿಯಾಗಿದೆ.

ಮಳೆಕಾಡು ನಾಶ: ಕಾಡು ನಾಶದ ವ್ಯಥೆಯ ಕತೆ ಇಂದು ನಿನ್ನೆಯದಲ್ಲ. ಬ್ರಿಟಿಷರು ಭಾರತಕ್ಕೆ ಕಾಲಿಟ್ಟ  ದಿನದಿಂದಲೂ ಕಾಡಿನ ಮೇಲೆ ‘ಉಗ್ರ’ ದಾಳಿ ನಡೆಯುತ್ತಲೇ ಇದೆ.
ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಯಾವುದೇ ಕಾಫಿ, ಟೀ ಪ್ಲಾಂಟೇಶನ್‌ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಬಹುತೇಕ ಎಲ್ಲ ಎಸ್ಟೇಟ್‌ಗಳು ಒಂದು–ಎರಡು ಗುಡ್ಡವನ್ನು ಸುತ್ತುವರಿದಿದ್ದು, ಬ್ರಿಟಿಷರ ಕಾಲದ ಪುರಾತನ ಬಂಗಲೆಗಳು ಈಗಲೂ ಅಲ್ಲಿವೆ.

ಬಳಿಕ ರೈಲ್ವೆ ಮಾರ್ಗ ವಿಸ್ತರಣೆಗಾಗಿ ಪಶ್ಚಿಮಘಟ್ಟದ ಬಲಿಗೆ ಜಾತಿಯ ಕೋಟಿಗಟ್ಟಲೆ ಮರಗಳನ್ನು ಸಾಗಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಇವತ್ತಿಗೂ ರೈಲು ಮಾರ್ಗ ಇಲ್ಲ. ಆದರೆ, ಶಿವಮೊಗ್ಗ  ಸಮೀಪದ ಉಂಬಳೇಬೈಲಿನ ಮೂಲಕ ನರಸಿಂಹರಾಜಪುರ ತಾಲ್ಲೂಕಿನ ಗಡಿಯವರೆಗೆ ಮೀಟರ್ ಗೇಜ್‌ ರೈಲು ಮಾರ್ಗ  ಹಿಂದೆ ಇತ್ತು. ರೈಲ್ವೆ ಹಳಿಗಳ ಕೆಳಗೆ ಹಾಕುತ್ತಿದ್ದ ಮರದ ಸ್ಲೀಪರ್‌ಗಳಿಗೆ ಬೇಕಾದ ಮರ ಸಾಗಿಸಲು ಈ ರೈಲು ಮಾರ್ಗ ನಿರ್ಮಿಸಲಾಗಿತ್ತು. ಅಲ್ಲಿಂದಲೇ ದೊಡ್ಡ ಮಟ್ಟದ ಕಾಡುಕಡಿತ ಶುರುವಾಯಿತು ಎಂದು ಅರಣ್ಯ ಇಲಾಖೆಯ ಮೂಲಗಳೇ ಹೇಳುತ್ತವೆ.

ಅದರ ಜತೆಗೆ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆ, ಬೆಂಕಿ ಪೊಟ್ಟಣ ತಯಾರಿಕಾ ಕಾರ್ಖಾನೆಗಳಿಗಾಗಿ  ಕಾಡು ನಾಶವಾಯಿತು. ಟಿಂಬರ್‌ ಮಾಫಿಯಾಕ್ಕೆ ಬಲಿಯಾದ ಕಾಡಿಗೆ ಲೆಕ್ಕವೇ ಇಲ್ಲ. ನೀರಾವರಿ, ವಿದ್ಯುತ್ ಯೋಜನೆಗಳಿಗಾಗಿ ಅಪಾರ ಪ್ರಮಾಣದ ಅರಣ್ಯ ಪ್ರದೇಶವೂ ಮುಳುಗಡೆಯಾಯಿತು.

ಅದೆಲ್ಲದರ ಜತೆಗೆ ಜನಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿದೆ. 2001ರಿಂದ 2011ರ ಅವಧಿಯಲ್ಲಿ ಜನಸಂಖ್ಯೆ ಶೇ15.6ರಷ್ಟು ಹೆಚ್ಚಳವಾಗಿದೆ. 276ರಷ್ಟಿದ್ದ ಜನಸಾಂದ್ರತೆ 10 ವರ್ಷಗಳಲ್ಲಿ 319ಕ್ಕೆ ಏರಿಕೆಯಾಗಿದೆ. ಕೂಡು ಕುಟುಂಬಗಳು ಕವಲಾಗಿ ಒಡೆದಿವೆ. ಹೀಗಾಗಿ ಜೀವನೋಪಾಯಕ್ಕಾಗಿ ಅರಣ್ಯದ ಮೇಲಿನ ಅವಲಂಬನೆ, ಒತ್ತುವರಿ ಪ್ರಮಾಣ ಕೂಡ ಹೆಚ್ಚಿದೆ. ಇದು ಕೂಡ ಅಲ್ಪ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಿದೆ.

1995ರಿಂದ 2014ರ ಅವಧಿಯಲ್ಲಿ ಅರಣ್ಯ ಅತಿಕ್ರಮಣ ಪ್ರಮಾಣ ನಾಲ್ಕು ಪಟ್ಟು ಹೆಚ್ಚಿದೆ. 42 ಸಾವಿರ ಎಕರೆಯಷ್ಟಿದ್ದ  ಒತ್ತುವರಿ ಈ ಅವಧಿಯಲ್ಲಿ 2 ಲಕ್ಷ ಎಕರೆಗೆ ಏರಿಕೆಯಾಗಿದೆ ಎಂದು ಮಹಾಲೇಖಪಾಲರ ವರದಿ ಆತಂಕ ವ್ಯಕ್ತಪಡಿಸಿದೆ.

ಒತ್ತುವರಿ ತೆರವಿನ ತಾರತಮ್ಯ: ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಅದನ್ನು ತೆರವು ಮಾಡುವ ವಿಷಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ತಾರತಮ್ಯ ಎಸಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

‘ಕೋರ್ಟ್‌ ಆದೇಶದ ಅನ್ವಯ ಎಷ್ಟು ಎಕರೆ ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಿಂದ ಮಾಹಿತಿ ಬರಬೇಕು’ ಎಂದಷ್ಟೇ ಉತ್ತರ ಸಿಗುತ್ತದೆ.

‘ದೊಡ್ಡ ಒತ್ತುವರಿದಾರರನ್ನು ತೆರವು ಮಾಡಿಲ್ಲವೇಕೆ’ ಎಂಬ ಪ್ರಶ್ನೆಗೆ, ‘ತತ್ಕೊಳ, ಸಾರಗೋಡಿನಲ್ಲಿ ಮಾಡಲಾಗಿದೆ. ಮಸಗಲಿಯಲ್ಲಿ ಇಷ್ಟರಲ್ಲೇ ಮಾಡಲಿದ್ದೇವೆ’ ಎಂದು ದಶಕದ ಹಿಂದಿನ ಸಾಧನೆಯನ್ನು ಮುಂದಿಡುತ್ತಾರೆ. 

ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿದವರು, ಡೀಮ್ಡ್ ಅರಣ್ಯದಲ್ಲಿ ಒತ್ತುವರಿ ಮಾಡಿದ ಬಡಪಾಯಿಗಳನ್ನು ಮಾತ್ರ ತೆರವು ಮಾಡಲು ಪೊಲೀಸ್‌ ಬಲ ಬಳಸಲು ಇಲಾಖೆ ಮುಂದಾಗುತ್ತದೆ. ನೂರಾರು ಎಕರೆ ಒತ್ತುವರಿ ಮಾಡಿರುವವರ ಕಡೆ ತಲೆ ಕೂಡ ಹಾಕುವುದಿಲ್ಲ. ಹೆಚ್ಚೆಂದರೆ ಕೋರ್ಟ್‌ ಕಣ್ಣಿಗೆ ಮಣ್ಣೆರಚಲು ಒತ್ತುವರಿಯಾಗಿರುವ ಗಡಿಯಲ್ಲಿ  ‘ಈ ಪ್ರದೇಶದ ಇಷ್ಟು ಎಕರೆ ಅರಣ್ಯ ಇಲಾಖೆಗೆ ಸೇರಿದ್ದು. ಅತಿಕ್ರಮ ನಿಷೇಧಿಸಲಾಗಿದೆ’ ಎಂದು ಫಲಕ ನೆಟ್ಟು ಫೋಟೋ ತೆಗೆದು ಕೋರ್ಟ್‌ಗೆ ನೀಡುವ ಕೆಲಸ ಮಾತ್ರ ಮಾಡಲಾಗುತ್ತಿದೆ ಎಂಬ ಆಪಾದನೆಯೂ ಇದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಫರ್‌ ವಲಯವನ್ನು ಗುರುತಿಸಿ ಸರ್ಕಾರ ಅಧಿಸೂಚನೆ ಹೊರಡಿಸಬೇಕಿತ್ತು. ‘ಪವರ್‌ಫುಲ್‌’ ಸಚಿವರು, ಸಂಸದರ ಆಪ್ತರಿಗೆ ಸೇರಿದ ಕಲ್ಲು ಕ್ವಾರಿಗಳು ಉದ್ಯಾನದ ಬಫರ್‌ ವಲಯದ ವ್ಯಾಪ್ತಿಯಲ್ಲಿ ಇರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಈ ಅಧಿಸೂಚನೆ ಹೊರಬಿದ್ದಿಲ್ಲ. ‘ಇಲಾಖೆಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ತೀರ್ಮಾನ ಕೈಗೊಳ್ಳುವುದು ಸಚಿವ ಸಂಪುಟದ ವಿವೇಚನೆಗೆ ಬಿಟ್ಟ ಅಧಿಕಾರ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ  ಭಾರತೀಯ ಅರಣ್ಯ ಸೇವೆಯ  ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ರಾಜಕೀಯ ಪ್ರಭಾವ ಇರುವವರು, ಧನ ಬಲ ಇರುವವರ ಒತ್ತುವರಿ ತೆರವು ಮಾಡಲು ಕೆಳಹಂತದ ಅಧಿಕಾರಿಗಳು ಧೈರ್ಯ ಮಾಡುವುದಿಲ್ಲ. ಅವರು ಮೇಲಿನಿಂದ ಒತ್ತಡ ತರುತ್ತಾರೆ. ಕೋರ್ಟ್‌ನ ಚಾಟಿಯಿಂದ ತಪ್ಪಿಸಿಕೊಳ್ಳಲು ಸಣ್ಣ ಒತ್ತುವರಿದಾರರನ್ನು ತೆರವು ಮಾಡಿಸುವ ಕೆಲಸ ನಡೆಯುತ್ತಿದೆ. ಸಣ್ಣಪುಟ್ಟವರು ಸಾಲ ಕಟ್ಟದಿದ್ದರೆ ಆಸ್ತಿ ಜಪ್ತಿ ಮಾಡುತ್ತಾರೆ, ಆದರೆ ವಿಜಯ ಮಲ್ಯಗೆ ರಿಯಾಯಿತಿ ಸಿಗುತ್ತದೆ. ಒತ್ತುವರಿ ತೆರವು ಹಾಗೆಯೇ’ ಎಂದು ಅವರು ಇಲಾಖೆಯ ಕಾರ್ಯವೈಖರಿಯನ್ನು ವಿಶ್ಲೇಷಿಸಿದರು.  ‘ರಾಜ್ಯದಲ್ಲಿ ಒತ್ತುವರಿದಾರರ ಸಂಖ್ಯೆ ಮತ್ತು ಜಮೀನು ಎಷ್ಟು’ ಎಂದು ಕೇಳಿದರೆ, ‘ರಾಜ್ಯದಲ್ಲಿ ಕಳ್ಳರ ಸಂಖ್ಯೆ ಎಷ್ಟಿದೆ ಎಂದು ನೀವು ಕೇಳಿದಂತಾಯ್ತು’ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಪ್ರತಿಕ್ರಿಯಿಸಿದರು.

‘ಅರಣ್ಯ ಇಲಾಖೆಗೆ ಸೇರಿದ ಭೂಮಿ ಕಡಿಮೆಯಾಗಿಲ್ಲ. ದಟ್ಟ ಅರಣ್ಯ  ಕಡಿಮೆಯಾಗಿದೆ. ಇಲ್ಲಿಯವರೆಗೆ ಮರಗಳು ವಿರಳವಾಗಿದ್ದ ಅರಣ್ಯ ಪ್ರದೇಶದಲ್ಲಿಯೇ ಕಾಡು ಬೆಳೆಸುವ ಯೋಜನೆ ರೂಪಿಸಲಾಗುತ್ತಿತ್ತು. ಅಲ್ಲಿಯೇ ವನ ಮಹೋತ್ಸವ ಮಾಡಲಾಗುತ್ತಿತ್ತು. ಈ ವರ್ಷದಿಂದ ಆದ್ಯತೆಯನ್ನು ಬದಲಾಯಿಸಲಾಗುತ್ತಿದೆ. ಅರಣ್ಯ ಎಂದು ದಾಖಲೆಗಳಲ್ಲಿದ್ದು, ಅರಣ್ಯದ ಕುರುಹು ಇಲ್ಲದ ಭೂಮಿಯಲ್ಲಿ ಅರಣ್ಯ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಘರ್ಷ ತಡೆಗೆ ಕ್ರಮ: ‘ಕಾಡು ನಾಶ, ಒತ್ತುವರಿಯಿಂದಾಗಿ ಪ್ರಾಣಿಗಳು–ಮಾನವರ ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಅದರ ತಡೆಗೆ ಬೇಲಿ, ಕಂದಕ ನಿರ್ಮಾಣ ಯೋಜನೆ ರೂಪಿಸಲಾಗಿದೆ. ನೀರಿಗಾಗಿ ಕಾಡು ಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯಲು ಕಾಡಿನಲ್ಲಿಯೇ ನೀರಿನ ವ್ಯವಸ್ಥೆ  ಮಾಡಲಾಗಿದೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪಿ. ಅನುರ್‌ ರೆಡ್ಡಿ ಹೇಳಿದರು.

‘ಆನೆ, ಹುಲಿ ದಾಳಿಯಿಂದ ಸಾವಿಗೀಡಾದವರಿಗೆ ನೀಡುವ ಪರಿಹಾರ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ’ ಎಂದೂ ಅವರು ತಿಳಿಸಿದರು. ‘ವನ್ಯಜೀವಿ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿಲ್ಲ. ಅರಣ್ಯದ ಸಾಂದ್ರತೆ ಕಡಿಮೆಯಾಗಿರಬಹುದು. ಜನಸಂಖ್ಯೆ ಬೆಳೆದಂತೆ ಆನೆ ಕಾರಿಡಾರ್‌ ಪ್ರದೇಶ ಒತ್ತುವರಿಯಾಗಿದೆ.ಆನೆಗಳು ಜನವಸತಿ ಪ್ರದೇಶಕ್ಕೆ  ಬರದಂತೆ ತಡೆಯಲು ಅನೇಕ ಕ್ರಮಗಳನ್ನ ಇಲಾಖೆ ಕೈಗೊಂಡಿದೆ’ ಎಂದು ವಿವರಿಸಿದರು.

ರಾಜ್ಯದ ಅಂಕಿ ಅಂಶ (2015ರ ಭಾರತ ಅರಣ್ಯ ಸಮೀಕ್ಷೆ ಮಾಹಿತಿ)
ಒಟ್ಟು ಬೌಗೋಳಿಕ ಪ್ರದೇಶ 1,91,791 ಚದರ ಕಿ.ಮೀ
ಅರಣ್ಯ ಪ್ರದೇಶ 38,284 ಚದರ ಕಿ.ಮೀ
ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾವಾರು 19.96%
* * *
ಅಂಕಿ ಅಂಶಗಳ ಮಾಹಿತಿ ಮೂಲ: ಕರ್ನಾಟಕ ಆರ್ಥಿಕ ಸಮೀಕ್ಷೆ 2016–17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT