ಗುರುವಾರ , ಡಿಸೆಂಬರ್ 12, 2019
17 °C

ಗರ್ಭಧಾರಣೆ: ಮೊಬೈಲ್‌ನಿಂದ ದೂರವಿರಬೇಕೇಕೆ?

Published:
Updated:
ಗರ್ಭಧಾರಣೆ: ಮೊಬೈಲ್‌ನಿಂದ ದೂರವಿರಬೇಕೇಕೆ?

ಮಿತಿ ಮೀರಿದ ಮೊಬೈಲ್‌ ಬಳಕೆ ಪುರುಷರಲ್ಲಿ ತಂದೊಡ್ಡುವ ಫಲವಂತಿಕೆ ಸಮಸ್ಯೆಯ ಕುರಿತು ಕಳೆದ ಬಾರಿ ಚರ್ಚಿಸಲಾಗಿತ್ತು. ಇದು ಪುರುಷರಿಗಷ್ಟೇ ಸೀಮಿತವಲ್ಲ, ಮಹಿಳೆಯರಲ್ಲೂ ಸಮಸ್ಯೆ ಬಿತ್ತುವ ಅಂಶವೇ. ಅದು ಯಾವ ರೀತಿ ಎಂಬುದನ್ನು ತಿಳಿದುಕೊಳ್ಳೋಣ.

ಗರ್ಭಿಣಿಯಾಗಿರುವಾಗ ಮಹಿಳೆಯರು ಮೊಬೈಲ್ ವಿಕಿರಣಗಳಿಗೆ ತೆರೆದುಕೊಂಡರೆ, ಮಗುವಿನ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರಿ ಮುಂದೆ ಮಕ್ಕಳಲ್ಲಿ ಹೈಪರ್‌ಆ್ಯಕ್ಟಿವಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಇತ್ತೀಚೆಗೆ ಯಾಲೆ ವಿಶ್ವವಿದ್ಯಾಲಯದಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ನಡೆಸಿದ ಸಂಶೋಧನೆಯೊಂದು ತಿಳಿಸಿದೆ. ಗರ್ಭಧರಿಸಿದ ಸಮಯದಲ್ಲಿ ಮಹಿಳೆಯು ಮೊಬೈಲ್‌ ಫೋನ್ ವಿಕಿರಣಗಳಿಗೆ ತೆರೆದುಕೊಂಡರೆ ಏನೆಲ್ಲಾ ಪರಿಣಾಮ ಎದುರಿಸಬೇಕಾಗಬಹುದು ಎಂಬುದನ್ನು ಸಾಬೀತುಪಡಿಸಲೆಂದೇ ಸಂಶೋಧನೆಯನ್ನು ಅವರು ಕೈಗೊಂಡಿದ್ದರು. ಇದಕ್ಕೆಂದು ಅವರು ಇಲಿಗಳ ಬೋನನ್ನೊಂದು ಆರಿಸಿಕೊಂಡು, ಅದನ್ನು ಎರಡು ಪ್ರತ್ಯೇಕ ಭಾಗವಾಗಿ, ಕೋಣೆಗಳಂತೆ ವಿಂಗಡಿಸಿದರು. ಗರ್ಭದಲ್ಲಿದ್ದ ಇಲಿಗಳನ್ನು ಆ ಬೋನಿನೊಳಗೆ ಬಿಟ್ಟರು. ಬೋನಿನ ಒಂದು ಕೋಣೆಯ  ಮೇಲ್ಭಾಗದಲ್ಲಿ ಎರಡು ಮೊಬೈಲ್‌ಗಳನ್ನು ಇಟ್ಟು, ಅದನ್ನು ಚಾಲೂ ಮಾಡಲಾಯಿತು. ಬೋನಿನ ಇನ್ನೊಂದು ಬದಿಯ, ಇನ್ನರ್ಧ ಇಲಿಗಳ ಮೇಲೆ ಮೊಬೈಲನ್ನು ಆಫ್‌ ಮಾಡಿಟ್ಟು ಯಾವುದೇ ವಿಕಿರಣ ಅವುಗಳಿಗೆ ತಾಕದಂತೆ ತಡೆಯಲಾಗಿತ್ತು. ಆ ಇಲಿಗಳಿಗೆ ಮರಿಗಳಾಗಿ, ಅವು ದೊಡ್ಡವಾಗುವವರೆಗೂ ಕಾಯ ಲಾಯಿತು. ಆ ಬಳಿಕ ಅವುಗಳ ನಡವಳಿಕೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಮೊಬೈಲ್ ಫೋನ್‌ಗೆ ತೆರೆದುಕೊಂಡ ಇಲಿಗಳು ಅತಿ ಎನ್ನಿಸುವಷ್ಟು ಕ್ರಿಯಾಶೀಲವಾಗಿದ್ದವು. ಆದರೆ ಅವುಗಳ ಸ್ಮರಣಶಕ್ತಿ ಸ್ವಲ್ಪ ಕುಂಠಿತಗೊಂಡಂತಿತ್ತು. ಈ ಇಲಿಗಳ ವರ್ತನೆ ಮಾಮೂಲು ಇಲಿಗಳಿಗಿಂತ ಭಿನ್ನವಾಗಿತ್ತು. ಈ ಅಧ್ಯಯನವು, ಬಯಲಾಜಿಕಲ್ ಬೇಸಿಸ್–ಜೈವಿಕ ಆಧಾರ (ಮಾನವನ ವ್ಯಕ್ತಿತ್ವ ರೂಪಿಸುವ ಮೆದುಳಿನ ವ್ಯವಸ್ಥೆ ಹಾಗೂ ಕಾರ್ಯವೈಖರಿಯ ಸಂಗ್ರಹ) ಮೇಲೆ ಮೊಬೈಲ್‌ ಫೋನ್‌ನಿಂದ ಆಗುವ ಸಮಸ್ಯೆಗಳ ಕುರಿತು ಈ ರೀತಿ ಸಾಬೀತುಪಡಿಸಲು ಹೊರಟಿತ್ತು.

ಮೊಬೈಲ್‌ ವಿಕಿರಣಗಳಿಗೆ ಒಡ್ಡಿಕೊಳ್ಳುವಿಕೆ ಹಾಗೂ ನಡವಳಿಕೆ: ಏಳು ವರ್ಷದ 28,745 ಮಕ್ಕಳು ಹಾಗೂ ಅವರ ತಾಯಂದಿರ ಮೊಬೈಲ್ ಬಳಕೆ ಅಭ್ಯಾಸದ ಮೇಲೆ ನಡೆಸಿದ ‘ಡ್ಯಾನಿಷ್ ನ್ಯಾಷನಲ್ ಬರ್ತ್ ಕೊಹೊರ್ಟ್‌’ ಅಧ್ಯಯನದ ಮಾಹಿತಿಯನ್ನು ಸಂಶೋಧಕರು ವಿಶ್ಲೇಷಿಸಿದರು. ಈ ತಾಯಂದಿರು ತಮ್ಮ ಗರ್ಭಾವಧಿಯಲ್ಲಿ ಹಾಗೂ ನಂತರ ಇದ್ದ ಜೀವನಶೈಲಿ (ಮೊಬೈಲ್ ಫೋನ್ ಬಳಕೆಯನ್ನೂ ಒಳಗೊಂಡು) ಕುರಿತು ಮಾಹಿತಿ ನೀಡಿದರು. ಹಾಗೆಯೇ ತಮ್ಮ ಮಕ್ಕಳು ಏಳು ವರ್ಷ ತಲುಪಿದ ನಂತರ ಅವರಲ್ಲಾದ ನಡವಳಿಕೆಯ ಬದಲಾವಣೆಗಳ ಕುರಿತು ಮತ್ತೊಮ್ಮೆ ಸಂದರ್ಶಿಸಲಾಯಿತು. ಈ ಅಧ್ಯಯನದಿಂದ ಹಲವು ಸಂಗತಿ ಗಳು ತಿಳಿದುಬಂದವು. ಏಳು ವರ್ಷದ ಶೇ. 35.2 ಮಕ್ಕಳು ಮೊಬೈಲ್ ಬಳಸುತ್ತಾರೆ. ಶೇ.1ಕ್ಕೂ ಕಡಿಮೆ ಮಕ್ಕಳು ವಾರದಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಮೊಬೈಲ್ ಬಳಸುತ್ತಾರೆ.

ಆ ಮಕ್ಕಳ ತಾಯಂದಿರು ನೀಡಿದ ವರದಿಯ ಆಧಾರದ ಮೇಲೆ, ಬಹುಪಾಲು, ಅಂದರೆ ಶೇ. 93ರಷ್ಟು ಮಕ್ಕಳಲ್ಲಿ ಯಾವುದೇ ನಡವಳಿಕೆ ತೊಂದರೆಗಳು ಕಂಡುಬಂದಿಲ್ಲ. ಶೇ. 3.3 ಮಕ್ಕಳಲ್ಲಿ ಸ್ವಲ್ಪ ಮಟ್ಟಿಗಿನ ನಡವಳಿಕೆ ಸಮಸ್ಯೆಗಳು ಗೋಚರಿಸಿವೆ ಹಾಗೂ ಶೇ 3.1 ಮಕ್ಕಳಲ್ಲಿ ನಡವಳಿಕೆ, ಹೈಪರ್ ಆ್ಯಕ್ಟಿವಿಟಿ, ಏಕಾಗ್ರತೆ ಕೊರತೆ, ಸಂಬಂಧಗಳಲ್ಲಿ ನಡವಳಿಕೆ ಸಮಸ್ಯೆ ಒಳಗೊಂಡಂತೆ ಭಾವನಾತ್ಮಕ ತೊಂದರೆಗಳನ್ನು ಹೊಂದಿದ ಲಕ್ಷಣಗಳು ಕಂಡುಬಂದಿವೆ.

ಆದರೆ, ಸುಮಾರು ಶೇ.18ರಷ್ಟು ಮಕ್ಕಳು ಗರ್ಭಧಾರಣೆಯ ಸಮಯದಲ್ಲಿ ಅಥವಾ ನಂತರ ಮೊಬೈಲ್‌ ವಿಕಿರಣಗಳಿಗೆ ಒಡ್ಡಿಕೊಂಡಿದ್ದು, ನಡವಳಿಕೆ ಸಮಸ್ಯೆಯ ಸಾಧ್ಯತೆಯನ್ನು ಈ ಗುಂಪು ಹೆಚ್ಚು ಹೊಂದಿರುವುದಾಗಿ ಅಧ್ಯಯನ ಗುರುತಿಸಿತು.

ಈ ಹಿಂದೆಯೂ 13,000 ಮಕ್ಕಳ ಮೇಲೆ ನಡೆಸಿದ ಇಂಥದ್ದೇ ಅಧ್ಯಯನಕ್ಕೆ ಹೋಲಿಸಿದಾಗಲೂ ಈ ಹೊಸ ಅಧ್ಯಯನದ ಅಂಶಗಳು ಆ ಫಲಿತಾಂಶವನ್ನೇ ಬಿಂಬಿಸಿದವು.

ಇದರ ನಂತರ, ಮೊಬೈಲ್ ಬಳಕೆಯ ಅಭ್ಯಾಸದ ಮೇಲೆ ಹನ್ನೊಂದು ವರ್ಷದ ಮಕ್ಕಳ ಅಭಿಪ್ರಾಯವನ್ನೂ ಸಂಗ್ರಹಿಸಲಾಯಿತು. ಇದರಿಂದ ಫಲಿತಾಂಶದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದೀತೇ ಎಂದು ಪರೀಕ್ಷಿಸಲಾಯಿತು.

ಅಧ್ಯಯನದ ಮಿತಿ: ಸದ್ಯದ ಈ ಅಧ್ಯಯನಕ್ಕೆ, ಮೊಬೈಲ್ ಬಳಕೆ ಮಕ್ಕಳ ನಡವಳಿಕೆ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಕೆಲವರು, ‘ಈ ವಿಕಿರಣಗಳು ಭ್ರೂಣಕ್ಕೆ ತಲುಪುವ ಸಾಧ್ಯತೆ ಕಡಿಮೆ ಮಟ್ಟದ್ದಾದ್ದರಿಂದ ಪರಿಣಾಮದ ಬಗ್ಗೆಯೂ ಅಸ್ಪಷ್ಟತೆ ಇದೆ ಎಂದಿದ್ದಾರೆ.

ಆದರೂ ಕೆಲವು ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಳ್ಳುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದೇ. ಇದರಿಂದ ಮುಂದೆ ಸಮಸ್ಯೆ ಬರುವ ಸಾಧ್ಯತೆಯನ್ನು ತಡೆಯುವಂತಾಗುತ್ತದಲ್ಲವೇ? ಗರ್ಭಧಾರಣೆ ಸಮಯದಲ್ಲಿ ಮೊಬೈಲ್ ಬಳಕೆ ತಗ್ಗಿಸುವುದು, ನಂತರ ಪುಟ್ಟ ಮಕ್ಕಳನ್ನು ಮೊಬೈಲ್‌ನಿಂದ ದೂರವಿರುವಂತೆ ಮಾಡುವುದು ಉತ್ತಮ.

ಎಷ್ಟೋ ವೈದ್ಯರು ತಮ್ಮ ರೋಗಿಗಳಿಗೆ ಗರ್ಭಧಾರಣೆ ಸಮಯದಲ್ಲಿ ವಿಕಿರಣ ಸೂಸುವ ಸಾಧನಗಳಿಂದ ದೂರವುಳಿಯುವಂತೆ ಸೂಚನೆ ನೀಡುತ್ತಾರೆ. ಕೆಲವು ಮೊಬೈಲ್ ತಯಾರಕರು ಕೂಡ ಸುರಕ್ಷತಾ ದೃಷ್ಟಿಯಿಂದ ಹೆಚ್ಚು ವಿಕಿರಣಗಳಿಗೆ ಒಡ್ಡಿಕೊಳ್ಳದಂತೆ ಸೂಚನೆ ನೀಡಿರುತ್ತವೆ. ಆದರೆ ಜನರಿಗೆ ಅವುಗಳನ್ನು ಗ್ರಹಿಸುವ ತಾಳ್ಮೆ ಕಡಿಮೆ.

ಫ್ರಾನ್ಸ್ ಒಳಗೊಂಡಂತೆ ಹಲವು ದೇಶಗಳು ಮಕ್ಕಳಿಗೆ ಸಂಬಂಧಿಸಿದಂತೆ ಮೊಬೈಲ್ ಬಳಕೆ ಕುರಿತ ಜಾಹೀರಾತುಗಳನ್ನು ತಡೆಹಿಡಿದಿವೆ. ಆದರೆ ಅವುಗಳತ್ತ ನಮ್ಮ ಲಕ್ಷ್ಯ ಕಡಿಮೆ ಎಂಬುವುದನ್ನೂ ಒಪ್ಪಿಕೊಳ್ಳಲೇಬೇಕಿದೆ.

**

-ಡಾ. ಬೀನಾ ವಾಸನ್, ಆ್ಯಂಡ್ರೊಲಜಿಸ್ಟ್

info@manipalfertility.com

ಪ್ರತಿಕ್ರಿಯಿಸಿ (+)