ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಯೋಜನೆ ಯಾರ ಹೊಣೆ?

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಜಗತ್ತಿನ ಜನಸಂಖ್ಯೆ ಈಗ ಏಳು ನೂರು ಕೋಟಿಯನ್ನು ದಾಟಿಬಿಟ್ಟಿದೆ. ಜನಸಂಖ್ಯೆ ಹೆಚ್ಚಾಗುವುದರಿಂದ ಜಗತ್ತಿಗೆ ಏನೇನು ತೊಂದರೆಗಳಾಗುತ್ತಿವೆ? ಚಿಕ್ಕ ಮಕ್ಕಳಿಗೂ ಗೊತ್ತು. ವಿಶ್ವಸಂಸ್ಥೆಯಂತೂ ‘ಸುರಕ್ಷಿತ ಮತ್ತು ಸ್ವಯಂಪ್ರೇರಿತ ಕುಟುಂಬ ಯೋಜನೆ ಒಂದು ಮಾನವ ಹಕ್ಕು. ಇದು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಅಂಶ ಹಾಗೂ ಬಡತನವನ್ನು ನಿರ್ಮೂಲಗೊಳಿಸುವಲ್ಲಿ ನಮಗಿರುವ ಪ್ರಬಲ ಅಸ್ತ್ರ’ ಎಂದು ಘೋಷಿಸಿ ಸಾಕಷ್ಟು ದಿನಗಳೇ ಆಗಿಹೋಗಿವೆ. ಆದರೆ ಈ ಘೋಷಣೆ ತನ್ನ ಗುರಿ ಸಾಧಿಸಿಲ್ಲ, ಎಂಬುದರ ಗುರುತೆಂಬಂತೆ ವಿಶ್ವ ಜನಸಂಖ್ಯಾ ದಿನದ ಈ ಬಾರಿಯ ಧ್ಯೇಯ ‘ಕುಟುಂಬ ಯೋಜನೆ: ಜನರ ಸಬಲೀಕರಣ, ರಾಷ್ಟ್ರಗಳ ಅಭಿವೃದ್ಧಿ’ - Family Planning: Empowering people, Developing Nations!’ ಇದರ ಹಿಂದೆ ಕಟು ಸತ್ಯವೊಂದಿದೆ.

ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಹಲವು ಅತಿ ಬಡ ದೇಶಗಳಲ್ಲಿ ಇಂದಿಗೂ ಸುಮಾರು ಎರಡು ಕೋಟಿ 14 ಲಕ್ಷದಷ್ಟು ಮಹಿಳೆಯರು ಗರ್ಭಧಾರಣೆ ತಮಗೆ ಬೇಡವೆಂದುಕೊಂಡರೂ, ಅವರಿಗೆ ಕುಟುಂಬ ಯೋಜನೆಯ ಬಗ್ಗೆ ಮಾಹಿತಿಯಿಲ್ಲ; ಮಾಹಿತಿಯಿದ್ದರೂ ಅವುಗಳ ಸುಲಭವಾಗಿ ಕೈಗೆಟುಕುವಂತಿಲ್ಲ ಅಥವಾ ಮಾಹಿತಿ-ಲಭ್ಯತೆ ಎರಡೂ ಇದ್ದರೂ ಅವರ ಲೈಂಗಿಕ ಸಂಗಾತಿಗಳ (ಭಾರತದಲ್ಲಿ ಹೆಚ್ಚಿನ ಸಮಯ ಜೀವನ ಸಂಗಾತಿಗಳ) ಸಹಕಾರವಿಲ್ಲ! ವಿಶ್ವಸಂಸ್ಥೆಯ ಇಷ್ಟೆಲ್ಲಾ ಪ್ರಯತ್ನಗಳ ನಂತರವೂ, ಸತತವಾಗಿ 1990ರಿಂದ ಪ್ರತಿವರ್ಷ ಜುಲೈ 11ರಂದು, ಒಟ್ಟು 17 ವರ್ಷಗಳಿಂದಲೂ ವಿಶ್ವಜನಸಂಖ್ಯಾ ದಿನವನ್ನು ಅರಿವಿಗಾಗಿ ನಡೆಸುತ್ತಿದ್ದರೂ ನಾವೇಕೆ ವಿಫಲರಾಗಿದ್ದೇವೆ?

ಈ ಪ್ರಶ್ನೆಯ ಉತ್ತರ ಸರಳ. ಮೊದಲನೆಯದು – ಗರ್ಭಿಣಿಯಾಗುವ ಹೆಣ್ಣು,  ಗರ್ಭವನ್ನು ನಿಯಂತ್ರಿಸುವ ಹೊಣೆಯನ್ನೂ, ತನಗೆ ಬೇಕಾದರೆ ತಾನೇ ಹೊರಬೇಕು ಎಂಬ ಅಂಶ. ಎರಡನೆಯದು – ಗರ್ಭನಿಯಂತ್ರಣ-ಕುಟುಂಬ ಯೋಜನೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಮುಕ್ತವಾಗಿ ಮಾತನಾಡಲು ವಿದ್ಯಾವಂತರನ್ನೂ ಒಳಗೊಂಡಂತೆ ಹೆಣ್ಣು-ಗಂಡು – ಹೀಗೆ ಪ್ರತಿಯೊಬ್ಬರಿಗೂ ಇರುವ ಮುಜುಗರ. ಮೂರನೆಯದು – ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಜನರಲ್ಲಿ ಇಂದೂ ವ್ಯಾಪಕವಾಗಿರುವ ತಪ್ಪು ನಂಬಿಕೆಗಳು.

ಈ ಮೂರೂ ಅಂಶಗಳಿಗೆ ಸಂಬಂಧಿಸಿದಂತೆ ಕೆಲವು ಉದಾಹರಣೆಗಳನ್ನು ನಾವು ಇಲ್ಲಿ ಗಮನಿಸಬಹುದು:‘ಡಾ

ಕ್ಟ್ರೇ, ನನಗೆ ಒಂದು ಮಗ, ಒಂದು ಮಗಳು. ನಮಗೆ ಮಕ್ಕಳು ಸಾಕಾಗಿತ್ತು. ನಾನು ಅದಾದ ತಕ್ಷಣ ಆಪರೇಷನ್ ಮಾಡಿಸೋಣ ಅಂತ ಅಂದೆ. ‘‘ಇರು, ಮಕ್ಕಳು ಸ್ವಲ್ಪ ದೊಡ್ಡವರಾಗಲಿ’’ ಅಂದ್ರು. ಸರಿ ಕಾಪರ್‌–ಟಿ ಹಾಕಿಸ್ಕೊಂಡೆ, ನನಗೆ ರಕ್ತ ಹೋಗೋಕ್ಕೆ ಶುರುವಾಯ್ತು. ಇವರಿಗೆ ಡಾಕ್ಟರ ಹತ್ತಿರ ಬಂದು ಏನನ್ನೂ ಕೇಳೋಕ್ಕೂ ಸಂಕೋಚ. ಸರಿ, ಡಾಕ್ಟ್ರು ಹೇಳಿದ್ರು ‘‘ಸ್ವಲ್ಪ ದಿವಸ ಕಾಂಡೋಮ್ ಉಪಯೋಗಿಸಿ, ಆಮೇಲೆ ನಿಮಗೇ ಆಪರೇಷನ್ ಮಾಡ್ತೀನಿ’’ ಅಂತ. ಇವರಿಗೆ ‘ಸಂತೋಷ’ ಆಗಲ್ಲಾಂತ, ಸ್ವಲ್ಪ ದಿನ ಏನೂ ಉಪಯೋಗಿಸಲಿಲ್ಲ. ನಾನು ಈವರೆಗೆ ಮೂರು ಸಲ ‘ಅಬಾರ್ಷನ್’ ಮಾಡಿಸಿಕೊಂಡಿದ್ದೀನಿ ಡಾಕ್ಟ್ರೇ. ಪ್ರತಿಸಲ ಅಬಾರ್ಷನ್ ಆದಾಗ್ಲೂ ನನಗೆ ನಾನು ಕೊಲೆ ಮಾಡ್ತಿದ್ದೀನಿ ಅನಿಸುತ್ತೆ. ತಪ್ಪಿತಸ್ಥ ಭಾವನೆಯಿಂದ ನರಳಿ, ನರಳಿ ಸೋತು ಹೋಗಿದೀನಿ’.

ಇದು ಸಾಮಾನ್ಯ ಜನರ ಕಥೆಯಾಯಿತು. ನಾನು ನಿಮ್ಹಾನ್ಸ್‌ಗೆ ಎಂ.ಡಿ. ಮಾಡಲು ಕಾಲಿರಿಸಿದ ವರ್ಷ. ಆ ಕೊಠಡಿಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ನಿಮ್ಹಾನ್ಸ್‌ನ ನರ ಮತ್ತು ಮೆದುಳು ವಿಜ್ಞಾನದ ವಿವಿಧ ಕೋರ್ಸುಗಳಿಗೆ ಸೇರಿದ್ದ ಬುದ್ಧಿವಂತರು. ಅರ್ಧ ಜನ ಎಂ.ಬಿ.ಬಿ.ಎಸ್. ಮುಗಿಸಿ ಕಠಿಣವಾದ ಪರೀಕ್ಷೆಯನ್ನು ದಾಟಿ ಸ್ಪೆಷಲಿಸ್ಟ್ ವೈದ್ಯರಾಗಲು ಹೊರಟಿದ್ದ ದೇಶದ ‘ಕ್ರೀಮ್’ - ಕೆನೆಪದರದ ತರುಣ-ತರುಣಿಯರು. ಸಾರ್ವಜನಿಕ ಆರೋಗ್ಯ ಶಿಕ್ಷಣ - Public health educationನಿಂದ ಡಾ. ಜಯಶ್ರೀ ಆ ದಿನದ ‘ಓರಿಯಂಟೇಷನ್’ ಆರಂಭಿಸಿದ್ದರು. ಅವರ ಪ್ರಶ್ನೆ ’ಏಡ್ಸ್ ತಡೆಯುವ ಸುಲಭ ವಿಧಾನ ಯಾವುದು?’. ಇಡೀ ಕೊಠಡಿಯಲ್ಲಿ ನಿಶ್ಶಬ್ದ!. ನಮ್ಮಲ್ಲಿ ಎಂ.ಬಿ.ಬಿ.ಎಸ್. ಮಾಡಿದ್ದ ಬಹು ಜನರಿಗಂತೂ ಈ ಪ್ರಶ್ನೆಗೆ ‘ಕಾಂಡೋಮ್’ ಎಂಬ ಉತ್ತರ ಗೊತ್ತಿರದಿರಲು ಸಾಧ್ಯವೇ ಇರಲಿಲ್ಲ. ಹೆರಿಗೆಗಳನ್ನು ಮಾಡಿಸಿದ್ದೆವು, ಗರ್ಭನಿರೋಧಕಗಳ ಬಗ್ಗೆ ಸವಿಸ್ತಾರವಾಗಿ ಓದಿದ್ದೆವು, ಏಡ್ಸ್ ಬಗ್ಗೆ, ಅದು ಹರಡುವ ಕ್ರಮಗಳ ಬಗೆಗೂ ಜ್ಞಾನವಿತ್ತು. ಆಗ ಡಾ. ಜಯಶ್ರೀ ಅವರು ಹೇಳಿದರು: ’ನಿಮ್ಮಂತಹ ವೈದ್ಯರು, ಪ್ರಗತಿಪರ ಮನೋಭಾವದವರು, ನಿಮ್ಹಾನ್ಸಿಗೆ ಬರುವ ಬುದ್ಧಿವಂತರು ’’ಕಾಂಡೋಮ್’’ ಎಂಬ ಉತ್ತರವನ್ನು ನಿರ್ವಿಕಾರವಾಗಿ, ಸಂಕೋಚವಿಲ್ಲದೆ ಹೇಳಲು ಹಿಂಜರಿದರೆ, ಇನ್ನು ಅನಕ್ಷರಸ್ಥ-ಹಳ್ಳಿ ಹೆಣ್ಣುಮಕ್ಕಳ, ಅವರ ಗಂಡಂದಿರ ಪಾಡೇನು, ಕೇವಲ ವಿದ್ಯೆಯೊಂದೇ ಎಲ್ಲವೂ ಅಲ್ಲ, ಎಂಬುದನ್ನು ನೀವು ಕಲಿಯಬೇಕು’.

ಪ್ರತಿಯೊಂದು ದಂಪತಿಗೆ ತಮಗೆ ಮಗು ಯಾವಾಗ ಬೇಕು, ಎಷ್ಟು ಮಕ್ಕಳು ಬೇಕು ಎಂದು ನಿರ್ಧರಿಸುವ ಹಕ್ಕು ಇದೆಯಷ್ಟೆ. ಅವರು ಆ ವಿಷಯದಲ್ಲಿ ಸ್ವತಂತ್ರರು. ಇದನ್ನು ನಾವೆಲ್ಲರೂ ಒಪ್ಪುತ್ತೇವೆ. ಆದರೆ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಮಗೆ ಕಷ್ಟವೆನಿಸುತ್ತದೆ. ನಾಲಿಗೆ ತಡವರಿಸುತ್ತದೆ. ಕೆಲವರು ಈ ಬಗ್ಗೆ ಮಾತನಾಡುವುದು ಲೈಂಗಿಕತೆಯ ಬಗೆಗೆ ಮಾತನಾಡುವುದು ಎಂದುಕೊಳ್ಳುತ್ತಾರೆ. ಜನಸಂಖ್ಯಾ ನಿಯಂತ್ರಣಕ್ಕಾಗಿಯಷ್ಟೇ ಕುಟುಂಬ ಯೋಜನೆ ಎಂದು ಭಾವಿಸುತ್ತಾರೆ. ಅದೂ ಆರೋಗ್ಯದ ಒಂದು ಭಾಗ ಎಂಬ ಅರಿವು ನಮ್ಮಲ್ಲಿ ಬಹು ಜನರಿಗಿಲ್ಲ.

‘ಕುಟುಂಬ ಯೋಜನೆ ಆರೋಗ್ಯದ ಒಂದು ಭಾಗ, ಅದು ನಮ್ಮ ’’ಗ್ಲೋಬಲ್ ಹೆಲ್ತ್ ಅಜೆಂಡಾ’’ದಲ್ಲಿ ಅಡಕಗೊಳ್ಳಬೇಕು’ ಎನ್ನುವುದು ಏಕೆ? ಏಕೆಂದರೆ ಈ ಅಜ್ಞಾನದಿಂದ ನಾವು ತೆರುತ್ತಿರುವ ಬೆಲೆ ಬಹಳ ದುಬಾರಿಯಾದದ್ದು. ಗರ್ಭನಿರೋಧಕಗಳ ಸರಿಯಾದ ಬಳಕೆ–ಲಭ್ಯತೆಗಳು ಎರಡು ಕೋಟಿ ನಲವತ್ತು ಲಕ್ಷದಷ್ಟು ಅಬಾರ್ಷನ್ - ಗರ್ಭಪಾತಗಳನ್ನು ತಡೆಗಟ್ಟಬಲ್ಲದು; ಒಂದು ಕೋಟಿ ನಲವತ್ತು ಲಕ್ಷ ಅಸುರಕ್ಷಿತ ಗರ್ಭಪಾತಗಳನ್ನು ತಡೆಯಬಲ್ಲದು, ಒಂದು ಲಕ್ಷ ತಾಯಂದಿರು ಮತ್ತು ಆರು ಲಕ್ಷ ನವಜಾತ ಶಿಶುಗಳ ಜೀವವನ್ನು ಪ್ರತಿವರ್ಷ ಉಳಿಸಬಲ್ಲದು. ಅಂದರೆ ಇದು ಒಂದು ಜೀವನ್ಮರಣದ ಪ್ರಶ್ನೆ! ಈ ಸಾಯುವ ತಾಯಂದಿರು ’ನನಗೆ ಬಸಿರು ಬೇಡ’ ಎಂದರೂ ಬಸಿರಾಗಿ ಸಾಯುತ್ತಾರೆ; ಅಥವಾ ಇಷ್ಟವಿರದಿದ್ದರೂ ಮಗುವಿಗೆ ಜನ್ಮನೀಡಿ ಆ ಮಗು ಜೀವನದ ಮೊದಲ ತಿಂಗಳಲ್ಲಿ ಸಾವನ್ನಪ್ಪುತ್ತದೆ. ಇವೆಲ್ಲವನ್ನು ನೋಡಿದಾಗ ನಮಗನ್ನಿಸುತ್ತದೆ: ‘ಅಯ್ಯೋ ಈ ಮಕ್ಕಳು, ಅವರ ಅಮ್ಮಂದಿರು ಬದುಕಬೇಕು’. ಆದರೆ ಗರ್ಭನಿರೋಧಕಗಳ ಬಗ್ಗೆ ನಮಗೆ ಮಾತನಾಡಲು ನಾಚಿಕೆ! ಹಾಗಾಗಿ ಸುಮ್ಮನಾಗಿಬಿಡುತ್ತೇವೆ! ಪರಿಸ್ಥಿತಿ ಮುಂದುವರೆಯುವಂತೆ ಮಾಡುತ್ತೇವೆ. ಇಡೀ ಜಗತ್ತಿನದು ಬಿಟ್ಟು ಬಿಡಿ, ಕೊನೆ ಪಕ್ಷ ನಮ್ಮ ಸುತ್ತಮುತ್ತಲಿನ ಜನರ ಅಜ್ಞಾನ-ತಪ್ಪು ನಂಬಿಕೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ. ನಮ್ಮಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಗರ್ಭನಿರೋಧಕ ಗುಳಿಗೆಗಳ ಬಗ್ಗೆ ಯೋಚಿಸುವುದು ಒಂದೇ ಒಂದು ಸಂದರ್ಭದಲ್ಲಿ, ಅದು - ‘ಪೂಜೆಯಿದ್ದಾಗ, ದೇವಸ್ಥಾನ ಯಾತ್ರೆಗೆ ಹೋಗುವಾಗ ಮುಟ್ಟನ್ನು ಮುಂದೆ ಹಾಕಲು!’

ಇನ್ನೂ ಒಂದು ವಾದವಿದೆ. ‘ಜನಸಂಖ್ಯೆಯ ಬಗೆಗೆ ನಾವು ಇನ್ನು ಚಿಂತಿಸಬೇಕಾಗಿಯೇ ಇಲ್ಲ. ಕುಟುಂಬಗಳ ಗಾತ್ರ ಜಗತ್ತಿನಾದ್ಯಂತ ಸಹಜವಾಗಿ ಚಿಕ್ಕದಾಗುತ್ತಾ ಬರುತ್ತಿವೆ. ಜಗತ್ತಿನ ಜನಸಂಖ್ಯೆ ಒಂಬೈನೂರು ಕೋಟಿ ಅಥವಾ ಹೆಚ್ಚೆಂದರೆ ಸಾವಿರ ಕೋಟಿ ಮುಟ್ಟಬಹುದು, ಅಷ್ಟೆ’ ಎಂಬುದು ಈ ವಾದ. ಈ ವಾದವೇನಿದ್ದರೂ ಸ್ವಲ್ಪ ಮಟ್ಟಿಗೆ ಮಾತ್ರ ಸರಿ. ಜನಸಂಖ್ಯೆಯ ಹಂಚಿಕೆ ಸಮಾನವಾಗಿಲ್ಲ. ಏಷ್ಯಾ-ಆಫ್ರಿಕಾದ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಏರಿಕೆಯ ಪರಿಣಾಮ ಇನ್ನೂ ಹಲವು ವರ್ಷಗಳವರೆಗೆ ಕಾಣುತ್ತದೆ. ಹಾಗಾಗಿ ‘ಕುಟುಂಬ ಯೋಜನೆ’ ಎನ್ನುವುದು ಕುಟುಂಬದ ಮಟ್ಟದಲ್ಲಿ ನಡೆಯಬೇಕು.

ಕುಟುಂಬ ಯೋಜನಾ ವಿಧಾನಗಳ ಬಗ್ಗೆ ಥೈಲ್ಯಾಂಡಿನಲ್ಲಿ ನಡೆದ ಒಂದು ರೀತಿಯ ಶಿಕ್ಷಣಕ್ರಾಂತಿಯು ಪ್ರಬಲವಾದ ವಿರೋಧವನ್ನೂ ಎದುರಿಸಬೇಕಾಯಿತು. ಈ ಶಿಕ್ಷಣ ಕ್ರಾಂತಿಯಲ್ಲಿ ಬೌದ್ಧಭಿಕ್ಷುಗಳು ‘ಕಾಂಡೋಮ್-ಪಿಲ್ಸ್’ಗಳನ್ನು ಮಂತ್ರಿಸಿ ಪವಿತ್ರವಾಗಿಸಿರುವಂತೆ ಪ್ರಚಾರ, ವಿವಿಧ ರೀತಿಯ ಶಾಲಾ ಆಟಗಳು (B for Birth, C for Condom, V for vasectomy ವಿವಿಧ ವಿಧಾನಗಳನ್ನೊಳಗೊಂಡ ಹಾವು-ಏಣಿ ಆಟ) . ‘ಸ್ಟಾರ್ ಬಿಕ್ಸ್’ ಕಾಫಿ ಶಾಪಿನಲ್ಲಿ ಕಾಫಿ ಜೊತೆಗೆ ಕಾಂಡೋಮ್ ಉಚಿತ– ಹೀಗೆ ಏಡ್ಸ್ ತಡೆಯಲು, ಹದಿಹರೆಯದ ಬಸಿರು ತಡೆಯಲು, ಸುರಕ್ಷಿತ ಲೈಂಗಿಕತೆಗಾಗಿ ಈ ಶಿಕ್ಷಣ ಉಪಯುಕ್ತವಾಯಿತು. ಆದರೆ ವಿರೋಧವೂ ಪ್ರಬಲವಾಗಿತ್ತು. ಏಕೆ? ಕೆಲವರ ಪ್ರಕಾರ ‘ಲೈಂಗಿಕತೆ ಎಂಬುದು ಪವಿತ್ರ - Sex is sacred. ಗರ್ಭನಿರೋಧಕಗಳ ಬಗೆಗೆ ಮಾತನಾಡುವುದರಿಂದ ಜೀವಗಳನ್ನೇನೂ ಉಳಿಸಬಹುದು. ಆದರೆ ಜೊತೆಗೇ ವಿವಾಹೇತರ ಲೈಂಗಿಕತೆ-ವಿವಾಹಪೂರ್ವ ಲೈಂಗಿಕತೆಗಳನ್ನು ಅದು ಹೆಚ್ಚಿಸಬಹುದು ಮತ್ತು ಇದು ಖಂಡಿತ ಅಪಾಯ’. ಹೌದು ಲೈಂಗಿಕತೆಯು ಪವಿತ್ರವಾದದ್ದು ಎಂಬುದನ್ನು ಒಪ್ಪುವುದು, ಪಾಲಿಸುವುದು ಆರೋಗ್ಯಕ್ಕೆ ಉಪಯುಕ್ತವೇ. ಆದರೆ ಒಂದು ದೊಡ್ಡ ಅಧ್ಯಯನದಲ್ಲಿ ಜಗತ್ತಿನಾದ್ಯಂತ ಗರ್ಭನಿರೋಧಕಗಳನ್ನು ಉಪಯೋಗಿಸುವ ಶೇ.98ರಷ್ಟು ದಂಪತಿಗಳು ತಾವು ಒಂದೇ ಸಂಗಾತಿಯೊಡನೆ ಲೈಂಗಿಕ ಕ್ರಿಯೆ ನಡೆಸುವುದನ್ನು, ಗರ್ಭನಿರೋಧಕಗಳಿಂದ ಆ ಕ್ರಿಯೆಯ ಪಾವಿತ್ರ್ಯವಾಗಲೀ, ಸಂತಸವಾಗಲೀ ಕಡಿಮೆಯಾಗದಿರುವುದನ್ನು ಖಚಿತಪಡಿಸಿವೆ. ಹಾಗಾಗಿ ಗರ್ಭನಿರೋಧಕಗಳ ಬಗೆಗಿನ ಜ್ಞಾನ ವಿವಾಹೇತರ-ವಿವಾಹಪೂರ್ವ ಲೈಂಗಿಕತೆಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಒಂದು ಮಿಥ್ಯೆ ಎನ್ನುವುದನ್ನು ನಾವು ಒಪ್ಪಬೇಕಾಗುತ್ತದೆ.

ಒಬ್ಬ ತಾಯಿ ತನ್ನ ಮಗುವನ್ನು ಹೊರುವ, ಹೆರುವ, ಬೆಳೆಸುವ ಸಂದರ್ಭದಲ್ಲಿ ಆಕೆಗೆ ಬೇಕಾದ ಭಾವನಾತ್ಮಕ ನೆಲೆಗಟ್ಟು, ಬೆಂಬಲ ಬಹಳಷ್ಟು. ಇವೆಲ್ಲ ಇಲ್ಲದೆಯೂ ಮಕ್ಕಳನ್ನು ಬೆಳೆಸಲಾಗುವುದಿಲ್ಲವೆಂತಲ್ಲ. ಆದರೆ ತಾಯಿಯ ಆರೋಗ್ಯಕ್ಕಾಗಿ ಮಗುವಿನದು, ಮಗುವಿನದಕ್ಕಾಗಿ ತಾಯಿಯದು ಬಲಿಯಾಗಬಾರದಷ್ಟೆ. ಹಾಗಾಗಿ ಕುಟುಂಬ ಯೋಜನೆ, ಸುರಕ್ಷಿತ ಲೈಂಗಿಕತೆ, ಸುಖೀ-ಆರೋಗ್ಯವಂತ ತಂದೆ-ತಾಯಿ ಮಕ್ಕಳು – ಇವು ಇಂದಿನ ಆರೋಗ್ಯಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT