ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ ವಿದ್ಯೆಯಿಂದ ಬಾಲಿವುಡ್ ಮೊಗಸಾಲೆಗೆ...

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ರಾಜೀವ್ ಹರಿ ಓಂ ಭಾಟಿಯಾ ಬಗೆಗೆ ಮುಂಬೈನ ಗುರುನಾನಕ್ ಖಾಲ್ಸಾ ಕಾಲೇಜಿನಲ್ಲಿ ತಕರಾರುಗಳಿದ್ದವು. ಒಂದು ವರ್ಷವಾಗಿತ್ತಷ್ಟೆ, ಕಾಲೇಜು ತೊರೆದು ಬ್ಯಾಂಕಾಕ್ ಕಡೆಗೆ ಮುಖ ಮಾಡಲು ನಿರ್ಧರಿಸಿದರು.

ಮನೆಯಲ್ಲಿ ಅಚ್ಚರಿ. ಬಾಲ್ಯದಲ್ಲಿ ನೃತ್ಯ ಪ್ರದರ್ಶನದಿಂದ ಶಹಬ್ಬಾಸ್ ಎನಿಸಿಕೊಂಡಿದ್ದ ಹುಡುಗ ಕುಣಿತದಲ್ಲೇ ಸಾಧನೆ ಮಾಡಬಹುದು ಎಂದು ಅಮ್ಮ ಅರುಣಾ ಭಾಟಿಯಾ ಅಂದುಕೊಂಡಿದ್ದರು.

ಅಪ್ಪ ಹರಿ ಓಂ ಭಾಟಿಯಾಗೆ ಮಗನ ಚಂಚಲಚಿತ್ತ ಆತಂಕ ಮೂಡಿಸಿತ್ತು. ಹೀಗಾಗಿ ಅನಿಶ್ಚಿತತೆಯ ನೆರಳಿನಲ್ಲೇ ಬ್ಯಾಂಕಾಕ್ ವಿಮಾನ ಹತ್ತಿದ್ದು. ಮಾರ್ಷಲ್ ಆರ್ಟ್ಸ್ ಕಲಿಯುವುದು ರಾಜೀವ್ ಉದ್ದೇಶವಾಗಿತ್ತು. ಬೇರೆ ಹುಡುಗರಂತೆ 'ಹೋಮ್ ಸಿಕ್'ಗೆ ಒಳಗಾಗಲಿಲ್ಲ. ಟೇಕ್ವಾಂಡೊದಲ್ಲಿ ಪಡೆದ 'ಬ್ಲ್ಯಾಕ್ ಬೆಲ್ಟ್' ಆತ್ಮವಿಶ್ವಾಸ ತುಂಬಿತ್ತು. ಮಾವ್ ಥಾಯ್ ಕಲಿತು ಬಂದರೆ ಬದುಕು ಸಾರ್ಥಕ ಎಂದಷ್ಟೇ ಆಗ ರಾಜೀವ್ ತಲೆಯಲ್ಲಿ ಓಡುತ್ತಿದ್ದುದು.

ಕಲಿಕೆಗೆ ಶುಲ್ಕ ಕಟ್ಟಲು ಹಣಕ್ಕಾಗಿ ರಾಜೀವ್ ರೆಸ್ಟೊರೆಂಟ್‌ನಲ್ಲಿ ವೇಟರ್ ಆದರು. ಅಲ್ಲಿ ಕೆಲವು ಖಾದ್ಯಗಳನ್ನು ಮಾಡುವುದನ್ನೂ ಕಲಿತರು.

ಭಾರತಕ್ಕೆ ಮರಳುವ ಹೊತ್ತಿಗೆ ದೇಹ ಕಟೆದಂತಾಗಿತ್ತು. ಬೇಕಾದಂತೆ ಬಾಗಿಸುವಷ್ಟು ದೇಹವನ್ನು ದಂಡಿಸಿದ್ದು ಫಲ ನೀಡಿತು. ಹೊಟ್ಟೆಪಾಡಿಗೆಂದು ಮಾರ್ಷಲ್ ಆರ್ಟ್ಸ್ ಪಾಠ ಹೇಳಿಕೊಡಲಾರಂಭಿಸಿದರು. ಶಿಷ್ಯರಲ್ಲಿ ಒಬ್ಬ ಅವರ ಫೋಟೊ ಪಡೆದು, ಮಾಡೆಲಿಂಗ್ ಅವಕಾಶ ಸಿಗಲು ಕಾರಣನಾದ. ಒಂದಿಡೀ ತಿಂಗಳಲ್ಲಿ ಸಂಪಾದಿಸುತ್ತಿದ್ದಷ್ಟೇ ಹಣವನ್ನು ಮಾಡೆಲಿಂಗ್ ಎರಡೇ ದಿನಗಳಲ್ಲಿ ತಂದಿತ್ತಿತು. ಅಂದಿನಿಂದ ಗಳಿಕೆಯ ಗಣಿತದ ಗೀಳೂ ಅಂಟಿಕೊಂಡಿತು.

1980ರ ದಶಕದಲ್ಲಿ ಹೆಸರುವಾಸಿ ಸಿನಿಮಾ ಫೋಟೊಗ್ರಾಫರ್ ಆಗಿದ್ದ ಜಯೇಶ್ ಶೇಟ್ ಗರಡಿಯಲ್ಲಿ 18 ತಿಂಗಳು ರಾಜೀವ್ ಪಳಗಿದರು. ಫೋಟೊಗ್ರಫಿ ಕಲಿಯಬೇಕೆನ್ನುವ ಉದ್ದೇಶವೇನೂ ಅವರಿಗೆ ಇರಲಿಲ್ಲ. ತನ್ನದೊಂದು 'ಪೋರ್ಟ್ ಫೋಲಿಯೊ' ಮಾಡಿಸಿಕೊಳ್ಳಬೇಕೆಂದು ಒಂದೂವರೆ ವರ್ಷ ಹೆಣಗಾಡಿದ್ದು. ಜಯೇಶ್ ಕೇಳಿದಷ್ಟು ಹಣಕ್ಕೆ ಬದಲು ಕೆಲಸ ಮಾಡಿ, ಶುಲ್ಕ ಭರಿಸುವ ಶ್ರಮದ ಮಾರ್ಗವನ್ನು ಅವರು ಆರಿಸಿಕೊಂಡಿದ್ದರು. ಆಗ ಬಾಲಿವುಡ್‌ನ ಕೆಲವರ ಪರಿಚಯವಾಯಿತು. ಅದರಿಂದ ತಕ್ಷಣಕ್ಕೆ ಲಾಭವಾಗದೇ ಇದ್ದರೂ ಗಣಿತ ಇನ್ನೂ ಹರಳುಗಟ್ಟಿತು.

ಮಾಡೆಲಿಂಗ್ ಚಿತ್ರೀಕರಣಕ್ಕಾಗಿ ಒಮ್ಮೆ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಕಾರಣಾಂತರದಿಂದ ವಿಮಾನ ಹಾರುವ ಹೊತ್ತಿಗೆ ನಿಲ್ದಾಣ ತಲುಪುವುದಕ್ಕೆ ಆಗಲಿಲ್ಲ. ತಮ್ಮ ಫೋಟೊಶೂಟ್ ಚಿತ್ರಗಳನ್ನು ಸಿನಿಮಾ ಸ್ಟುಡಿಯೋ ಒಂದಕ್ಕೆ ಕೊಟ್ಟು ಬಂದರು. ನಿರ್ಮಾಪಕ ಪ್ರಮೋದ್ ಚರ್ಕವರ್ತಿ ಕಣ್ಣಿಗೆ ಆ ಫೋಟೊಗಳು ಬಿದ್ದವು. 'ದೀದಾರ್' ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಒಲಿದುಬಂದದ್ದು ಹಾಗೆ.

ಈಗ ರಾಜೀವ್ ಭಾಟಿಯಾ ನಮ್ಮೆಲ್ಲರಿಂದ ಅಕ್ಷಯ್ ಕುಮಾರ್ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಮೊದಲು ಆ್ಯಕ್ಷನ್ ಚಿತ್ರಗಳು, ಆಮೇಲೆ ರೊಮ್ಯಾಂಟಿಕ್ ಇಮೇಜು, ದಿಢೀರನೆ ಕಾಮಿಡಿ ಕಿಲಾಡಿ ಪಟ್ಟ, ಈಗ ಜನಪ್ರಿಯ ಶೈಲಿಯಲ್ಲೂ ಹೊಸತನದ ಹಾದಿ... ಹೀಗೆ ಅಭಿನಯ ಪಲ್ಲಟ ತೋರಿರುವ ಅವರ ಗಣಿತ ಮಾತ್ರ ಗಮನಾರ್ಹ. 'ಫೋರ್ಬ್ಸ್' ಶ್ರೀಮಂತರ ಪಟ್ಟಿಯಲ್ಲಿ ನಾಲ್ಕು ವರ್ಷಗಳಿಂದ ಅವರ ಹೆಸರು ಕಾಣುತ್ತಲೇ ಇದೆ.

ಔಪಚಾರಿಕ ಕಲಿಕೆಯಿಂದ ವಿಮುಖರಾಗಿ ಸಾಹಸ ವಿದ್ಯೆಯ ಬೆನ್ನಿಗೆ ಬಿದ್ದ ಅವರು, ಮನಸ್ಸು ಹೇಳಿದ್ದನ್ನೇ ಮಾಡಿಕೊಂಡು ಬಂದರು. ಅದರ ಫಲವೀಗ ಎದುರಲ್ಲಿದೆ. ಅವರಿಗೀಗ 49 ವರ್ಷ ವಯಸ್ಸಾಗಿದೆ. ಗಣಿತ ಹಾಗೆಯೇ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT