ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ನಾಲ್ಕು ಚಿನ್ನ

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಭಾರತದ ಅಥ್ಲೀಟ್‌ಗಳ ಪ್ರಾಬಲ್ಯ ಮುಂದುವರಿದಿದೆ. ಎರಡನೇ ದಿನವಾದ ಶುಕ್ರವಾರ ಆತಿಥೇಯರ ಖಾತೆಗೆ ನಾಲ್ಕು ಚಿನ್ನ ಸೇರ್ಪಡೆಯಾಗಿದೆ.

ಮಹಿಳೆಯರ ಮತ್ತು ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಕ್ರಮವಾಗಿ ನಿರ್ಮಲಾ ಶೆರಾನ್‌ ಮತ್ತು ಮಹಮ್ಮದ್‌ ಅನಾಸ್‌ ಅವರು ಮೊದಲ ಸ್ಥಾನ ಗಳಿಸಿದ್ದಾರೆ. 1,500 ಮೀಟರ್ಸ್‌ ಓಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ  ಅಜಯ್‌ಕುಮಾರ್‌ ಸರೋಜ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಕೇರಳದ ಪಿ.ಯು. ಚಿತ್ರಾ ಅವರಿಂದ ಚಿನ್ನದ ಸಾಧನೆ ಮೂಡಿಬಂದಿದೆ.

ಮಹಿಳೆಯರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಣದಲ್ಲಿದ್ದ ಮಂಗಳೂರಿನ ಎಂ.ಆರ್‌.ಪೂವಮ್ಮ  ನಾಲ್ಕನೇ ಸ್ಥಾನದೊಂದಿಗೆ (53.36ಸೆ.)  ಹೋರಾಟ ಮುಗಿಸಿದ್ದಾರೆ. ಈ ವಿಭಾಗದಲ್ಲಿ 21 ವರ್ಷದ ಶೆರಾನ್‌ ಅವರು 52.01 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಭಾರತದ ಜಿಸ್ನಾ ಮ್ಯಾಥ್ಯೂ (53.32 ಸೆ.) ಅವರು  ಕಂಚು ತಮ್ಮದಾಗಿಸಿಕೊಂಡರು. ಪುರುಷರ 400 ಮೀಟರ್ಸ್‌ ಓಟದಲ್ಲಿ  ಅನಾಸ್‌ ಅವರು ನಿಗದಿತ ದೂರ ಕ್ರಮಿಸಲು 45.77 ಸೆಕೆಂಡು ತೆಗೆದು ಕೊಂಡರು. ರಾಜೀವ್‌ ಅರೋಕಿಯಾ (46.14ಸೆ.) ಈ ವಿಭಾಗದ ಬೆಳ್ಳಿಗೆ ಕೊರಳೊಡ್ಡಿದರು.

1500 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿತ್ರಾ ಮತ್ತು ಅಜಯ್‌ಕುಮಾರ್‌ ಅವರು ಕ್ರಮವಾಗಿ 4 ನಿಮಿಷ 17.92 ಸೆಕೆಂಡು ಹಾಗೂ 3 ನಿಮಿಷ 45.85 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮಹಿಳೆಯರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದ್ಯುತಿ ಚಾಂದ್‌ ಅವರು ಕಂಚಿಗೆ ತೃಪ್ತಿಪಟ್ಟರು.

ಒಟ್ಟು 14 ಪದಕಗಳನ್ನು ಗೆದ್ದಿರುವ ಭಾರತ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. ಆತಿ ಥೇಯರ ಖಾತೆಯಲ್ಲಿ ಆರು ಚಿನ್ನ, ಎರಡು ಬೆಳ್ಳಿ ಮತ್ತು ಆರು ಕಂಚಿನ ಪದಕಗಳಿವೆ.

ಬರಿಗಾಲಿನಲ್ಲಿ ಲಕ್ಷ್ಮಣನ್‌ ಅಭ್ಯಾಸ
‘ಲಕ್ಷ್ಮಣನ್‌ ಅವರು ಪುಡುಕೊಟ್ಟೈನ ಹೆದ್ದಾರಿಗಳಲ್ಲಿ ಬರಿಗಾಲಿನಲ್ಲೇ ಅಭ್ಯಾಸ ನಡೆಸುತ್ತಿದ್ದರು. ಅವರ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ’ ಎಂದು ಕೋಚ್‌ ಎಸ್‌. ಲೋಕನಾಥನ್‌ ಅವರು ತಿಳಿಸಿದ್ದಾರೆ. ಚೆನ್ನೈನ ಲಕ್ಷ್ಮಣನ್‌ ಅವರು ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮೊದಲ ದಿನ 5,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದರು.

‘16ನೇ ವಯಸ್ಸಿನಲ್ಲಿ ಲಕ್ಷ್ಮಣನ್‌ ನನ್ನ ಬಳಿ ತರಬೇತಿಗೆ ಸೇರಿದ್ದ. ಆ ವಯಸ್ಸಿನಲ್ಲಿ ಆತ ಕ್ರೀಡೆಯ ಬಗ್ಗೆ ಹೊಂದಿದ್ದ ಬದ್ಧತೆ ನೋಡಿ ತುಂಬಾ ಖುಷಿಯಾಗಿತ್ತು. ಅವನ ನ್ನು ಮಗನಂತೆ ನೋಡಿ ಕೊಂಡಿದ್ದೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ  ಆತ ಚಿನ್ನ ಗೆದ್ದ ಸುದ್ದಿ ಕೇಳಿ ಹೆಮ್ಮೆಯ ಭಾವ ಮೂಡಿತು. ಪುಡುಕೊಟ್ಟೈ ಎಂಬ ಸಣ್ಣ ಹಳ್ಳಿಯ ಯುವಕ ಚಿನ್ನ ಗೆದ್ದಿದ್ದು ನಿಜಕ್ಕೂ ಹೆಮ್ಮೆ ಪಡುವಂತಹ ಸಾಧನೆ’ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಮತ್ತೆ ಫೀನಿಕ್ಸ್‌ನಂತೆ ಎದ್ದು ಬರುವೆ’
‘ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಕಂಚು ಗೆದ್ದಿದ್ದು ತೃಪ್ತಿ ನೀಡಿದೆ.   ಗಾಯದ ಕಾರಣ ಈ ಬಾರಿ ಚಿನ್ನ ಜಯಿ ಸಲು ಆಗಲಿಲ್ಲ. ಹಾಗಂತ ನಿರಾಸೆಯಲ್ಲೇ  ಕಾಲ ಕಳೆಯುವುದಿಲ್ಲ. ಮುಂದಿನ ವರ್ಷ  ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳು ನಡೆಯಲಿದ್ದು ಅವು ಗಳಲ್ಲಿ ಚಿನ್ನ ಗೆದ್ದು  ಸಾಮರ್ಥ್ಯ ಸಾಬೀತುಪಡಿಸುತ್ತೇನೆ’ ಎಂದು ಕರ್ನಾ ಟಕದ ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT