ಭಾನುವಾರ, ಡಿಸೆಂಬರ್ 15, 2019
18 °C

ವಿರಾಟ್ ಪಡೆಗೆ ಸರಣಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಟ್ ಪಡೆಗೆ ಸರಣಿ ಗೆಲುವು

ಕಿಂಗ್ಸ್‌ಟನ್‌, ಜಮೈಕಾ : ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ಭಾರತ ಐದು ಪಂದ್ಯಗಳ ಏಕದಿನ ಸರಣಿಯನ್ನು 3–1ರಲ್ಲಿ ತಮ್ಮದಾಗಿಸಿಕೊಂಡಿತು.

ಸಬೀನಾ ಪಾರ್ಕ್‌ನಲ್ಲಿ ಗುರುವಾರ ರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಪೂರ್ಣ ಆಧಿಪತ್ಯ ಸ್ಥಾಪಿಸಿತ್ತು. ಮಹಮ್ಮದ್ ಶಮಿ (48ಕ್ಕೆ4) ಮತ್ತು ಉಮೇಶ್ ಯಾದವ್ (53ಕ್ಕೆ3) ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ಹೀಗಾಗಿ ತಂಡ ಕೇವಲ 205 ರನ್‌ಗಳಿಗೆ ಪತನ ಕಂಡಿತು. ಸುಲಭ ಗುರಿ ಬೆನ್ನಟ್ಟಿದ ಭಾರತ, ನಾಯಕ ವಿರಾಟ್ ಕೊಹ್ಲಿ ಅವರ ಶತಕ (111; 115 ಎ, 12 ಬೌಂ, 2 ಸಿ) ಮತ್ತು ದಿನೇಶ್ ಕಾರ್ತಿಕ್ (50; 52ಎ, 5 ಬೌಂ) ಅವರ ಅರ್ಧಶತಕದ ಬಲದಿಂದ ಸುಲಭ ಜಯ ತನ್ನದಾಗಿಸಿಕೊಂಡಿತು.

ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡು ಮತ್ತು ಮೂರನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ನಾಲ್ಕನೇ ಪಂದ್ಯದಲ್ಲಿ ಜಯ ವೆಸ್ಟ್‌ ಇಂಡೀಸ್‌ ಪಾಲಾಗಿತ್ತು. ಹೀಗಾಗಿ ಅಂತಿಮ ಪಂದ್ಯ ಕುತೂಹಲಕ್ಕೆ ಕಾರಣವಾಗಿತ್ತು. ಈ ಪಂದ್ಯದಲ್ಲಿ ಗೆದ್ದರೆ ಸರಣಿ ಸಮಬಲ ಮಾಡಿಕೊಳ್ಳಲು ಆತಿಥೇಯರಿಗೆ ಅವಕಾಶವಿತ್ತು. ಕಳೆದ ಪಂದ್ಯದಲ್ಲಿ ಭಾರತವನ್ನು ಏಕಪಕ್ಷೀಯವಾಗಿ ಮಣಿಸಿದ್ದ ಜೇಸನ್ ಹೋಲ್ಡರ್‌ ಬಳಗ ಈ ಪಂದ್ಯದಲ್ಲಿ ಮಂಕಾಯಿತು.

ಶಮಿ, ಉಮೇಶ್‌ ಮಿಂಚು

ಗಾಯದ ಸಮಸ್ಯೆಯಿಂದ ಗುಣಮುಖರಾದ ನಂತರ ಎರಡನೇ ಪಂದ್ಯ ಆಡಿದ ಮಹಮ್ಮದ್ ಶಮಿ ಮಿಂಚಿನ ದಾಳಿ ನಡೆಸಿದರು. ಅವರಿಗೆ ಉಮೇಶ್‌ ಯಾದವ್‌ ಉತ್ತಮ ಬೆಂಬಲ ನೀಡಿದರು. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯರ ಮೊದಲ ವಿಕೆಟ್‌ ಕಬಳಿಸಿದ್ದು ಹಾರ್ದಿಕ್ ಪಾಂಡ್ಯ. ಆದರೆ ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಕೈಲ್ ಹೋಪ್‌ ಅವರನ್ನು ಔಟ್‌ ಮಾಡಿದ ಉಮೇಶ್‌ ಯಾದವ್ ಪಂದ್ಯಕ್ಕೆ ತಿರುವು ನೀಡಿದರು.

ರಾಸ್ಟನ್ ಚೇಸ್ ವಿಕೆಟ್ ಕೂಡ ಉಮೇಶ್ ಯಾದವ್‌ ಪಾಲಾಯಿತು. 40ನೇ ಓವರ್‌ನಲ್ಲಿ ನಾಯಕನನ್ನು ವಾಪಸ್‌ ಕಳುಹಿಸಿ ಪಂದ್ಯದ ಮೊದಲ ವಿಕೆಟ್ ತಮ್ಮದಾಗಿಸಿಕೊಂಡ ಶಮಿ ಅರ್ಧಶತಕ ಗಳಿಸಿದ್ದ ವಿಕೆಟ್ ಕೀಪರ್‌ ಶಾಹಿ ಹೋಪ್ ಅವರನ್ನೂ ಪೆವಿಲಿಯನ್‌ಗೆ ಕಳುಹಿಸಿದರು. ಆಶ್ಲೆ ನರ್ಸೆ ಮತ್ತು ದೇವೇಂದ್ರ ಬಿಶೂ ಅವರ ವಿಕೆಟ್‌ ಕೂಡ ಗಳಿಸಿದ ಶಮಿ 19 ರನ್‌ಗಳ ಅಂತರದಲ್ಲಿ ಎದುರಾಳಿಗಳು ನಾಲ್ಕು ವಿಕೆಟ್ ಕಳೆದುಕೊಳ್ಳಲು ಕಾರಣರಾದರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಗಳಿಸುವ ವೆಸ್ಟ್‌ ಇಂಡೀಸ್‌ ಆಸೆ ಕೈಗೂಡಲಿಲ್ಲ.

ಕೊಹ್ಲಿ–ದಿನೇಶ್‌ ಶತಕದ ಜೊತೆಯಾಟ

ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದರೂ ವಿರಾಟ್ ಕೊಹ್ಲಿ ನಾಯಕನ ಆಟವಾಡಿ ತಂಡವನ್ನು ದಡ ಸೇರಿಸಿ

ದರು. ಅಜಿಂಕ್ಯ ರಹಾನೆ ಜೊತೆ ಎರಡನೇ ವಿಕೆಟ್‌ಗೆ 79 ರನ್ ಸೇರಿಸಿದ ಅವರು ಮುರಿಯದ ಮೂರನೇ ವಿಕೆಟ್‌ಗೆ ದಿನೇಶ್ ಕಾರ್ತಿಕ್‌ ಜೊತೆ 122 ರನ್‌ ಜೋಡಿಸಿದರು.

ಬೌಲರ್‌ಗಳ ಮೇಲೆ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದ ಕೊಹ್ಲಿ ಮೋಹಕ ಬ್ಯಾಟಿಂಗ್ ಮೂಲಕ ರಂಜಿಸಿದರು. ಕೆಸ್ರಿಕ್ ವಿಲಿಯಮ್ಸ್ ಅವರ ಎಸೆತವನ್ನು ಬೌಂಡರಿಗೆ ಅಟ್ಟಿ 28ನೇ ಶತಕ ಪೂರೈಸಿದ ಅವರು 79 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್ ಇಂಡೀಸ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 205; ಭಾರತ: 36.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 206 (ಅಜಿಂಕ್ಯ ರಹಾನೆ 39, ವಿರಾಟ್ ಕೊಹ್ಲಿ ಔಟಾಗದೆ 111, ದಿನೇಶ್ ಕಾರ್ತಿಕ್‌ ಔಟಾಗದೆ 50).

ಫಲಿತಾಂಶ– ಭಾರತಕ್ಕೆ 8 ವಿಕೆಟ್‌ಗಳ ಜಯ; 3–1ರಲ್ಲಿ ಸರಣಿ ಗೆಲುವು.  ಪಂದ್ಯಶ್ರೇಷ್ಠ–ವಿರಾಟ್ ಕೊಹ್ಲಿ (ಭಾರತ). ಸರಣಿಯ ಶ್ರೇಷ್ಠ ಆಟಗಾರ–ಅಜಿಂಕ್ಯ ರಹಾನೆ (ಭಾರತ)

ಪ್ರತಿಕ್ರಿಯಿಸಿ (+)