ಸೋಮವಾರ, ಡಿಸೆಂಬರ್ 16, 2019
23 °C
ಮಲ್ಲೇಶ್ವರದಲ್ಲಿ ‘ಸಹಕಾರ ಸೌಧ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿ.ಎಂ ಸಲಹೆ

ಸಹಕಾರ ಸಂಸ್ಥೆಗೆ ಲಾಭವಷ್ಟೇ ಉದ್ದೇಶವಾಗಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಕಾರ ಸಂಸ್ಥೆಗೆ ಲಾಭವಷ್ಟೇ ಉದ್ದೇಶವಾಗಬಾರದು

ಬೆಂಗಳೂರು: ‘ಸಹಕಾರ ಸಂಸ್ಥೆಗಳು ಕೇವಲ ಲಾಭದ ಉದ್ದೇಶದಿಂದಷ್ಟೇ ಕೆಲಸ ಮಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.ಸಹಕಾರ ಇಲಾಖೆ ಮಲ್ಲೇಶ್ವರದಲ್ಲಿ ನಿರ್ಮಿಸಿರುವ ‘ಸಹಕಾರ ಸೌಧ’ವನ್ನು  ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದ ಎಲ್ಲ ವರ್ಗದವರಿಗೂ ಸಮಾನ ಸವಲತ್ತುಗಳು ಸಿಗಬೇಕು. ಅದು ಸಹಕಾರ ರಂಗದಿಂದ ಮಾತ್ರ ಸಾಧ್ಯ. ಇದನ್ನು ಗಮನದಲ್ಲಿರಿಸಿಕೊಂಡು ಸಹಕಾರ ಬ್ಯಾಂಕ್‌ಗಳು  ಕಾರ್ಯನಿರ್ವಹಿಸಬೇಕು ಎಂದರು.‘ರಾಜ್ಯದಲ್ಲಿ ಒಟ್ಟು 41,000 ಸಹಕಾರ ಸಂಘಗಳಿವೆ. 2.5 ಕೋಟಿ ಜನ ಸದಸ್ಯರಿದ್ದಾರೆ. 24 ಲಕ್ಷ ರೈತರಿಗೆ ₹11,000 ಕೋಟಿ ಸಾಲದ ರೂಪದಲ್ಲಿ ವಿತರಣೆಯಾಗಿದೆ. ಅದರಲ್ಲಿ 22.27 ಲಕ್ಷ ರೈತರ ₹ 8,165 ಕೋಟಿ ಸಾಲ ಮನ್ನಾ ಮಾಡಿದ್ದೇವೆ’ ಎಂದು ವಿವರಿಸಿದರು.‘ಸಹಕಾರ ಸೌಧ ಎಚ್.ಎಸ್. ಮಹದೇವ ಪ್ರಸಾದ್ ಅವರ ಕನಸಿನ ಕೂಸು. ಅವರು ಸಹಕಾರ ಸಚಿವರಾಗಿದ್ದಾಗ ಕಟ್ಟಡ ನಿರ್ಮಿಸಲು ಹಣ ಬಿಡುಗಡೆ ಮಾಡಿಸಿದ್ದರು. ಆದರೆ, ಉದ್ಘಾಟನೆ ಸಂದರ್ಭದಲ್ಲಿ ಅವರು ಇಲ್ಲ’ ಎಂದು ನೆನಪಿಸಿಕೊಂಡರು.ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ‘ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಅನೇಕ ದೇಶಗಳು ತೊಂದರೆಗೆ ಸಿಲುಕಿದವು. ಆದರೆ, ಇಲ್ಲಿ ಜನರಿಗೆ ಉಳಿತಾಯದ ಪರಿಕಲ್ಪನೆ ಇರುವುದು ಮತ್ತು ಹೆಚ್ಚಾಗಿ ಸಹಕಾರ ಬ್ಯಾಂಕ್‌ಗಳನ್ನು ಅವಲಂಬಿಸಿರುವುದರಿಂದ ಹೆಚ್ಚಿನ ತೊಂದರೆ ಆಗಲಿಲ್ಲ’ ಎಂದರು.

*

ಸಹಕಾರ ಸೌಧಕ್ಕೆ ಸಿದ್ಧನಗೌಡ ಪಾಟೀಲ ಹೆಸರು


ಸಹಕಾರ ಸೌಧಕ್ಕೆ ಸಹಕಾರ ಪಿತಾಮಹ ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲರ ಹೆಸರು ನಾಮಕರಣ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದರು.

ಸಿದ್ಧನಗೌಡ ಪಾಟೀಲ  ಗದಗ ಜಿಲ್ಲೆಯ ಕಣಗಿನಹಾಳದಲ್ಲಿ 1904ರಲ್ಲಿ ಸಹಕಾರ ಸಂಘ ಸ್ಥಾಪಿಸಿದರು. ಇದು ಭಾರತದಲ್ಲೇ ಮೊದಲು. ಸಹಕಾರ ಚಳವಳಿ ಆರಂಭಿಸಿದ್ದಕ್ಕಾಗಿ ಸಹಕಾರ ಪಿತಾಮಹ ಎಂದೂ ಅವರನ್ನು ಕರೆಯಲಾಗುತ್ತದೆ. ಬೃಹತ್ ಸೌಧಕ್ಕೆ ಅವರ ಹೆಸರಿಡುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)