ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿ.ವಿ ಹಗರಣ: ಲಕ್ಷ ನಕಲಿ ಪ್ರಮಾಣಪತ್ರ!

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಿಯುಸಿಗೆ ತತ್ಸಮಾನವಾಗಿ ನೀಡಿದ್ದ ಪ್ರಮಾಣಪತ್ರಗಳು ನಕಲಿ ಎಂದು ತಿಳಿದುಬಂದಿದೆ. ಮುಕ್ತ ವಿ.ವಿಯು ಸುಮಾರು 1 ಲಕ್ಷ ಪ್ರಮಾಣಪತ್ರಗಳನ್ನು ನೀಡಿರಬಹುದು ಎಂದು ಅಂದಾಜಿಸಲಾಗಿದೆ.

ದೂರಶಿಕ್ಷಣದ ಮೂಲಕ ಪಿಯುಸಿಗೆ ತತ್ಸಮಾನವಾಗಿ ಪ್ರಮಾಣಪತ್ರ ನೀಡಲು ವಿ.ವಿಯಲ್ಲಿ ‘ಬ್ರಿಜ್‌ ಕೋರ್ಸ್‌’ ಆರಂಭಿಸಲಾಗಿತ್ತು. ಈ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಆ ಸಂಸ್ಥೆಗಳು ವಿ.ವಿ ಹೆಸರಿನಲ್ಲಿ ಪ್ರಮಾಣಪತ್ರ ನೀಡಿವೆ. ಆದರೆ, ಪಿಯು ಮಂಡಳಿಗೆ ಮಾತ್ರ ಪ್ರಮಾಣಪತ್ರವನ್ನು ನೀಡುವ ಅಧಿಕಾರವಿದ್ದು, ಮುಕ್ತ ವಿ.ವಿ ನೀಡಿರುವ ಪ್ರಮಾಣಪತ್ರಗಳಿಗೆ ಮಾನ್ಯತೆ ಇಲ್ಲವಾಗಿದೆ. ಇದಕ್ಕೆ ದೂರಶಿಕ್ಷಣ ಮಂಡಳಿ ನಿಯಮಾವಳಿಗಳಲ್ಲೂ ಅವಕಾಶವಿಲ್ಲ.

2012ರಿಂದ 2015ರ ವರೆಗೆ ಈ ಕೋರ್ಸ್‌ ನಡೆದಿದ್ದು, ಆಗ ಪ್ರೊ.ಎಂ.ಜಿ.ಕೃಷ್ಣನ್‌ ಕುಲಪತಿಯಾಗಿದ್ದರು. ಕೋರ್ಸ್‌ ನಡೆಸಲು ಮುಕ್ತ ವಿ.ವಿಯು ಹಲವು ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿತ್ತು. ಅಲ್ಲದೇ, 200ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಬೇರೆ ಬೇರೆ ಕೋರ್ಸ್‌ ನಡೆಸಲು ವಿ.ವಿ ಒಪ್ಪಂದ ಮಾಡಿಕೊಂಡಿತ್ತು. ಖಾಸಗಿ ಸಂಸ್ಥೆಗಳು ನೀಡಿರುವ ಬಹುತೇಕ ಪ್ರಮಾಣಪತ್ರಗಳು ನಕಲಿ ಎಂದು ಮುಕ್ತ ವಿ.ವಿ ಮೂಲಗಳು ತಿಳಿಸಿವೆ.

ಪರೀಕ್ಷೆ ನಡೆಸಿರುವುದೇ ಅನುಮಾನ:  ಇದಕ್ಕೆ ಪೂರಕವಾಗಿ, ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ‘ಬ್ರಿಜ್ ಕೋರ್ಸ್‌’ ಮೂಲಕ ಪದವಿ ಕೋರ್ಸಿಗೆ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕುಲಪತಿ ಡಾ.ಎಂ.ಎಸ್‌.ಸುಭಾಸ್‌, ‘ಬ್ರಿಜ್ ಕೋರ್ಸಿನ ಪ್ರಮಾಣಪತ್ರಗಳು ನಕಲಿಯಾಗಿವೆ. ಖಾಸಗಿ ಸಂಸ್ಥೆಗಳು ಈ ಸಂಬಂಧ ಪರೀಕ್ಷೆಗಳನ್ನು ನಡೆಸಿರುವುದೇ ಅನುಮಾನ ಎಂದರು.

ವಿವರ ಕೇಳಿ ಕೆಎಸ್‌ಓಯುಗೆ ಪತ್ರ: ಸಿ.ಶಿಖಾ
ಬೆಂಗಳೂರು:
‘ಅಕ್ರಮವಾಗಿ ಪದವಿ ಪೂರ್ವ ಕೋರ್ಸ್‌ ಆರಂಭಿಸಿ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಿರುವ ಕುರಿತು ವರದಿ ಕೊಡುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಓಯು) ರಿಜಿಸ್ಟ್ರಾರ್‌ಗೆ ಪತ್ರ ಬರೆಯಲಾಗಿದ್ದು ಅವರಿಂದ ವರದಿ ಬಂದ ಬಳಿಕ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಹೇಳಿದರು.

‘ಪದವಿ ಪೂರ್ವ ಕೋರ್ಸ್‌ ಆರಂಭಿಸಲು ಅನುಮತಿ ನೀಡುವ ಅಧಿಕಾರ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮಾತ್ರ ಇದೆ. ಹೀಗಾಗಿ ಯಾವ ನಿಯಮಗಳ ಮೇಲೆ ಕೋರ್ಸ್‌ ಪ್ರಾರಂಭಿಸಲಾಗಿತ್ತು, ಪಠ್ಯಕ್ರಮ, ಪರೀಕ್ಷೆ ನಡೆಸಿದ್ದು ಹೇಗೆ ಎಂಬ ವಿವರಗಳನ್ನು ಕೇಳಿ ಜೂನ್ ಅಂತ್ಯದಲ್ಲಿ ಪತ್ರ ಬರೆಯಲಾಗಿದೆ’ ಎಂದರು
*
ಬ್ರಿಜ್ ಕೋರ್ಸಿನಲ್ಲಿ 1 ಲಕ್ಷ ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರೊ.ಡಿ.ಶಿವಲಿಂಗಯ್ಯ
ಕುಲಪತಿ, ಕೆಎಸ್‌ಒಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT