ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸಿಬ್ಬಂದಿ ದಿಢೀರ್‌ ಪ್ರತಿಭಟನೆ: ಪ್ರಯಾಣಿಕರು ತತ್ತರ

Last Updated 7 ಜುಲೈ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲಿನಲ್ಲಿ  ಪ್ರಯಾಣಿಸಿದರೆ ಸಕಾಲದಲ್ಲಿ ಕಚೇರಿಗೆ ತಲುಪಬಹುದು ಎಂಬ ನಂಬಿಕೆಯಿಂದ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಶುಕ್ರವಾರ ಆಘಾತಕ್ಕೊಳಗಾದರು. ಸಿಬ್ಬಂದಿ ಮುಷ್ಕರದಿಂದಾಗಿ ಮೆಟ್ರೊ ರೈಲು ಸೇವೆ ದಿಢೀರ್‌ ಸ್ಥಗಿತಗೊಂಡಿತ್ತು! 

ಬೆಳಿಗ್ಗೆಯಿಂದ  ಮಧ್ಯಾಹ್ನ 12 ಗಂಟೆವರೆಗೆ ‘ನಮ್ಮ ಮೆಟ್ರೊ’ ರೈಲುಗಳು ನಿಲ್ದಾಣದಿಂದ ಹೊರಡಲಿಲ್ಲ. ಮೆಟ್ರೊ ಸಿಬ್ಬಂದಿ ಈ ರೀತಿ ಮುಷ್ಕರ ನಡೆಸಿದ್ದು ಭಾರತದಲ್ಲಿ ಇದೇ ಮೊದಲು.

ಗುರುವಾರ ಸೆಂಟ್ರಲ್‌ ಕಾಲೇಜು ಬಳಿಯ ವಿಶ್ವೇಶ್ವರಯ್ಯ  ಮೆಟ್ರೊ ನಿಲ್ದಾಣದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಆರ್‌ಸಿಎಲ್‌) ಸಿಬ್ಬಂದಿ ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್‌ಎಫ್‌) ಸಿಬ್ಬಂದಿ ನಡುವೆ ನಡೆದ ಗಲಾಟೆ ಸಂಬಂಧ ಬಂಧಿತರಾಗಿದ್ದ ನಿಗಮದ ಸಿಬ್ಬಂದಿ ರಾಕೇಶ್‌ ಹಾಗೂ ಹರೀಶ್‌ ಅವರ ಬಿಡುಗಡೆಗೆ ಒತ್ತಾಯಿಸಿ ಇತರ ಸಿಬ್ಬಂದಿ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ  ಗುರುವಾರ ಸಂಜೆಯೇ ಪ್ರತಿಭಟನೆ ಆರಂಭಿಸಿದ್ದರು.

ರಾತ್ರಿ ಇಡೀ ಪ್ರತಿಭಟನೆ: ಸಿಬ್ಬಂದಿ ರಾತ್ರಿ ಇಡೀ ಪ್ರತಿಭಟನೆ ನಡೆಸಿದ್ದರು. ಬಂಧಿತ ಸಿಬ್ಬಂದಿಯ ಬಿಡುಗಡೆ ಆಗಿರದ ಕಾರಣ ಶುಕ್ರವಾರ ರೈಲು ಸಂಚಾರ ಆರಂಭಿಸಲು ಚಾಲಕ ಸಿಬ್ಬಂದಿ ನಿರಾಕರಿಸಿದರು. ಹಾಗಾಗಿ ಬೆಳಿಗ್ಗೆ 5 ಗಂಟೆಗೆ ಯಾವುದೇ ನಿಲ್ದಾಣದಿಂದ ರೈಲುಗಳು ಹೊರಡಲಿಲ್ಲ.

ತೆರೆಯದ ಬಾಗಿಲು: ನಗರದ   ಮೆಟ್ರೊ ನಿಲ್ದಾಣಗಳು ಬೆಳಿಗ್ಗೆ ಬಾಗಿಲನ್ನೇ ತೆರೆಯಲಿಲ್ಲ. ಸ್ಥಳದಲ್ಲಿದ್ದ  ಭದ್ರತಾ ಸಿಬ್ಬಂದಿ, ‘ಬಿಎಂಆರ್‌ಸಿಎಲ್‌ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಹಾಗಾಗಿ ಮೆಟ್ರೊ ಸಂಚರಿಸುತ್ತಿಲ್ಲ. ಮೆಟ್ರೊ  ಸೇವೆ ಯಾವಾಗ ಆರಂಭವಾಗುತ್ತದೆ ಎಂದು ತಿಳಿಸಿಲ್ಲ’ ಎಂದು ಹೇಳಿ ಪ್ರಯಾಣಿಕರನ್ನು ಹೊರಗೆ ಕಳುಹಿಸಿದರು. 

ಕೆಲವು ನಿಲ್ದಾಣಗಳಲ್ಲಿ, ಮೆಟ್ರೊ ಸೇವೆ ಏಕೆ ಸ್ಥಗಿತಗೊಂಡಿದೆ?  ಮತ್ತೆ ಆರಂಭವಾಗುತ್ತದೆಯೇ ಎಂಬ   ಮಾಹಿತಿ ಅಲ್ಲಿನ ಭದ್ರತಾ ಸಿಬ್ಬಂದಿಗೂ ತಿಳಿದಿರಲಿಲ್ಲ. ಮೆಟ್ರೊಗಾಗಿ ಕಾಯಬೇಕೇ ಅಥವಾ ಬೇರೆ ವಾಹನಗಳ ಮೊರೆ ಹೋಗಬೇಕೇ ಎಂಬ ನಿರ್ಧಾರ ಕೈಗೊಳ್ಳಲೂ ಸಾಧ್ಯವಾಗದೆ ಪ್ರಯಾಣಿಕರು ಗೊಂದಲಕ್ಕೆ ಒಳಗಾದರು. 
ಕೆಲವರು ಬಸ್‌ಗಳಲ್ಲಿ ಪ್ರಯಾಣಿಸಿದರೆ, ಇನ್ನು ಕೆಲವರು ಕ್ಯಾಬ್‌ಗಳನ್ನು ಬಳಸಿದರು.  ಹಲವರು  ಆಟೊರಿಕ್ಷಾ ಮೊರೆ ಹೋದರು. 

ಕೆಲವು ನಿಲ್ದಾಣಗಳಲ್ಲಿ, ಮೆಟ್ರೊ ಸೇವೆ ಏಕೆ ಸ್ಥಗಿತಗೊಂಡಿದೆ?  ಮತ್ತೆ ಆರಂಭವಾಗುತ್ತದೆಯೇ ಎಂಬ   ಮಾಹಿತಿ ಅಲ್ಲಿನ ಭದ್ರತಾ ಸಿಬ್ಬಂದಿಗೂ ತಿಳಿದಿರಲಿಲ್ಲ. ಮೆಟ್ರೊಗಾಗಿ ಕಾಯಬೇಕೇ ಅಥವಾ ಬೇರೆ ವಾಹನಗಳ ಮೊರೆ ಹೋಗಬೇಕೇ ಎಂಬ ನಿರ್ಧಾರ ಕೈಗೊಳ್ಳಲೂ ಸಾಧ್ಯವಾಗದೆ ಪ್ರಯಾಣಿಕರು ಗೊಂದಲಕ್ಕೆ ಒಳಗಾದರು.    ಕೆಲವರು ಬಸ್‌ಗಳಲ್ಲಿ ಪ್ರಯಾಣಿಸಿದರೆ, ಇನ್ನು ಕೆಲವರು ಕ್ಯಾಬ್‌ಗಳನ್ನು ಬಳಸಿದರು.  ಹಲವರು  ಆಟೊರಿಕ್ಷಾ ಮೊರೆ ಹೋದರು.   

ಪ್ರಯಾಣಿಕರ ಕಿಡಿ: ಯಾವ ಮುನ್ಸೂಚನೆ ನೀಡದೇ ಮೆಟ್ರೊ  ಸೇವೆ ರದ್ದುಪಡಿಸಿದ  ಬಿಎಂಆರ್‌ಸಿಎಲ್‌ ವಿರುದ್ಧ  ಪ್ರಯಾಣಿಕರು ಕಿಡಿಕಾರಿದ್ದಾರೆ. ಕೇವಲ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದ ಕಾರಣ ಒಡ್ಡಿ  ಲಕ್ಷಗಟ್ಟಲೆ ಪ್ರಯಾಣಿಕರಿಗೆ ಸಮಸ್ಯೆ ತಂದೊಡ್ಡಿದ ಬಗ್ಗೆ  ಸಾರ್ವಜನಿಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಮಸ್ಯೆಯನ್ನು ಈ ಮಟ್ಟಕ್ಕೆ ಬೆಳೆಯಲು ಬಿಟ್ಟ ಬಿಎಂಆರ್‌ಸಿಎಲ್‌ ಆಡಳಿತದ ನಿಷ್ಕ್ರಿಯತೆ ವ್ಯವಸ್ಥೆಯ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ, ಮಧ್ಯಾಹ್ನದ ವರೆಗೆ ಮೆಟ್ರೊ ಕಾರ್ಯಾಚರಣೆ ಸ್ಥಗಿತಗೊಂಡರೂ ತಲೆಕೆಡಿಸಿಕೊಳ್ಳದ ಸರ್ಕಾರದ ವಿರುದ್ಧವೂ  ಕೆಲವರು ಹರಿಹಾಯ್ದಿದ್ದಾರೆ.
ಸಿಬ್ಬಂದಿ ವಜಾಕ್ಕೆ ಒತ್ತಾಯ:  ‘ಇದು ನಿಗಮದ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಮುಷ್ಕರ ನಡೆಸಿ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿದ ಅಷ್ಟೂ ಸಿಬ್ಬಂದಿಯನ್ನು ವಜಾ ಮಾಡಬೇಕು ’ ಎಂದೂ ಕೆಲವರು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ. ಮೆಟ್ರೊ ಸೇವೆ ಸ್ಥಗಿತಗೊಂಡಿದ್ದರಿಂದ  ಸಮಸ್ಯೆ ಅನುಭವಿಸಿದ ಕೆಲವು ಪ್ರಯಾಣಿಕರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ರೈಲು ತಪ್ಪುವ ಚಿಂತೆ: ‘ನಾನು ಭಾರತೀಯ ವಾಯುಸೇನೆಯಲ್ಲಿ ಕೆಲಸಕ್ಕಿದ್ದೇನೆ. ನಾನು ಕೊಲ್ಕತ್ತಕ್ಕೆ ಹೋಗಬೇಕಿದೆ.  11 ಗಂಟೆಗೆ ಯಶವಂತಪುರ ನಿಲ್ದಾಣದಿಂದ ರೈಲು ಹೊರಡುತ್ತದೆ. ಮೆಟ್ರೊದಲ್ಲಿ ಪ್ರಯಾಣಿಸಿದರೆ ಬೈಯಪ್ಪನಹಳ್ಳಿಯಿಂದ  ಯಶವಂತಪುರವನ್ನು ಒಂದು ಗಂಟೆಯ ಒಳಗೆ ತಲುಪಬಹುದು. ಆ ವಿಶ್ವಾಸದಿಂದ  ಮೆಟ್ರೊ ನಿಲ್ದಾಣಕ್ಕೆ ಬಂದರೆ ಇಲ್ಲಿ ಮುಷ್ಕರ ನಡೆಯುತ್ತಿದೆ. ಮೆಟ್ರೊ ಇಲ್ಲದ ಕಾರಣ  ಬಹುತೇಕ ಎಲ್ಲ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹಾಗಾಗಿ  ಕ್ಯಾಬ್‌ ಮಾಡಿಕೊಂಡು ಹೋದರೂ 11 ಗಂಟೆ ಒಳಗೆ ಯಶವಂತಪುರ ತಲುಪಲು ಸಾಧ್ಯವೇ ಎಂಬ ಚಿಂತೆ ಎದುರಾಗಿದೆ’ ಎಂದು ರಾಜೇಶ್‌ ತಿಳಿಸಿದರು.

ವಿಚಾರಣೆ  ಹಾಜರಾಗಲು ಸಾಧ್ಯವಾಗಲಿಲ್ಲ: ‘ನಾನು ಸಿವಿಲ್‌ ಕೋರ್ಟ್‌ನಲ್ಲಿ ಪ್ರಕರಣವೊಂದರ ಸಂಬಂಧ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿದೆ. ಯಾವಾಗಲೂ ಕೋಲಾರದಿಂದ ಬೈಯಪ್ಪನಹಳ್ಳಿವರಗೆ ಕಾರಿನಲ್ಲಿ ಬಂದು ಇಲ್ಲಿಂದ ಮೆಟ್ರೊ ಮೂಲಕ ಸಿಟಿ ಸಿವಿಲ್‌ ಕೋರ್ಟ್‌ ತಲುಪುತ್ತೇನೆ. ಇವತ್ತು ಮೆಟ್ರೊ ಸ್ಥಗಿತಗೊಂಡಿದ್ದರಿಂದ ಸಕಾಲದಲ್ಲಿ ನ್ಯಾಯಾಲಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ತಿಂಗಳ 17ರಂದು  ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ’ ಎಂದು ಕೋಲಾರ ಸುಗಟೂರಿನ ಆನಂದಮೂರ್ತಿ ತಿಳಿಸಿದರು.

ನನ್ನ ಪಗಾರ ಯಾರು ಕೊಡ್ತಾರೆ: ‘ನಾನು ಬೆಳಿಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಬೇಕಿತ್ತು. ಮೆಟ್ರೊ ಇಲ್ಲದ ಕಾರಣ ಸಕಾಲಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ನನ್ನ ₹ 700 ಕೂಲಿ ವ್ಯರ್ಥವಾಯಿತು. ಈ ನಷ್ಟವನ್ನು ಯಾರು ಭರಿಸುತ್ತಾರೆ’ ಎಂದು ಜಿ.ಎಂ.ಪಾಳ್ಯ ನಿವಾಸಿ, ಕಟ್ಟಡ ಕಾರ್ಮಿಕ ನಾಗರಾಜ್‌ ಪ್ರಶ್ನಿಸಿದರು. ನಗರದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಬೈಯಪ್ಪನಹಳ್ಳಿವರೆಗೆ ಮೆಟ್ರೊದಲ್ಲಿ ಸಂಚರಿಸಿ, ಅಲ್ಲಿಂದ ವೈಟ್‌ಫೀಲ್ಡ್‌, ಐಟಿಪಿಎಲ್‌ ಕಡೆಗೆ  ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಾರೆ.  ಪ್ರತಿಭಟನೆಯಿಂದಾಗಿ ಸಮಸ್ಯೆಗೆ ಸಿಲುಕಿದರು. 

‘ಬಂಧನಕ್ಕೊಳಗಾದವರನ್ನು ಶೀಘ್ರವೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಬಿಎಂಆರ್‌ಸಿಎಲ್‌ ಆಡಳಿತ ಮೀನಮೇಷ ಎಣಿಸಿತ್ತು.  ಅವರ  ಬಿಡುಗಡೆಗೆ   ಕ್ರಮಕೈಗೊಳ್ಳುವುದಾಗಿ ನಿಗಮದ ಅಧಿಕಾರಿಗಳು ಸಂಧಾನ ಸಭೆಯಲ್ಲಿ ಭರವಸೆ ನೀಡಿದರು.  ಹಾಗಾಗಿ ಪ್ರತಿಭಟನೆ ಕೈಬಿಟ್ಟಿದ್ದೇವೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ನಾವು ಎಸ್ಮಾ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ ಅದಕ್ಕೆ ಹೆದರಿ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಒಂದೂವರೆ ವರ್ಷದಿಂದ ಬೇಡಿಕೆಗಳನ್ನು ಆಡಳಿತ ಮಂಡಳಿ ಗಮನಕ್ಕೆ ತರುತ್ತಲೇ ಇದ್ದೇವೆ. ಅವುಗಳನ್ನು ಈಡೇರಿಸಲು ಒಪ್ಪಿದ್ದಾರೆ’ ಎಂದರು.
‘ಗುರುವಾರ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಲು ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ಸಮಿತಿ ನೇಮಿಸಲು ಸಂಧಾನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಂದಿನ ವಾರ ಸಭೆ ನಡೆಸುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಒಪ್ಪಿದ್ದಾರೆ’ ಎಂದು ಸೂರ್ಯನಾರಾಯಣಮೂರ್ತಿ ತಿಳಿಸಿದರು.

ಕಾರ್ಮಿಕ ಸಂಘಟನೆಗೆ ಅವಕಾಶ ಇಲ್ಲ:  ನಿಗಮದ ಕೆಲವು ಸಿಬ್ಬಂದಿ ಸೇರಿ ವರ್ಷದ ಹಿಂದೆ ಕಾರ್ಮಿಕ ಸಂಘಟನೆ ಕಟ್ಟಿಕೊಂಡಿದ್ದಾರೆ. ಅದಕ್ಕೆ ಮಾನ್ಯತೆ ನೀಡುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಇದಕ್ಕೆ ಇನ್ನೂ ಬಿಎಂಆರ್‌ಸಿಎಲ್‌ ಮಾನ್ಯತೆ ನೀಡಿಲ್ಲ. ಇಂಟಕ್‌  ಮುಖಂಡರು ಪ್ರತಿಭಟನಾ ಸ್ಥಳ ತೆರಳುವುದಕ್ಕೂ ನಿಗಮದ ಅಧಿಕಾರಿಗಳು ಆರಂಭದಲ್ಲಿ ಅವಕಾಶ ಕಲ್ಪಿಸಿರಲಿಲ್ಲ.  ‘ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳುವುದಕ್ಕೆ  ಮೆಟ್ರೊ ಕಾಯ್ದೆಯಲ್ಲಿ ಅವಕಾಶ ಇಲ್ಲ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT