ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ನೈರ್ಮಲ್ಯಕ್ಕೆ ಆದ್ಯತೆ: ಸಿದ್ದರಾಮಯ್ಯ

Last Updated 7 ಜುಲೈ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮತ್ತು ಕಸ ವಿಲೇವಾರಿ ನಮ್ಮ ಮೊದಲ ಆದ್ಯತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಚಿಕ್ಕಬಾಣಾವಾರ, ನಾಗಸಂದ್ರ ಹಾಗೂ ರಾಜಾಕೆನಾಲ್‌ನಲ್ಲಿ ನಿರ್ಮಿಸಿರುವ ಒಟ್ಟು 6.5 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರಕ್ಕೆ ಪ್ರತಿನಿತ್ಯ 180 ಕೋಟಿ ಲೀ.  ನೀರು ಸರಬರಾಜಾಗುತ್ತಿದೆ. ಅದರಲ್ಲಿ 144 ಕೋಟಿ ಲೀ. ನೀರು ತ್ಯಾಜ್ಯ ನೀರಾಗಿ ಮಾರ್ಪಡುತ್ತದೆ. ಅದರಲ್ಲಿನ 84 ಕೋಟಿ ಲೀ. ನೀರನ್ನು ಮಾತ್ರ ಜಲಮಂಡಳಿ ಸಂಸ್ಕರಣೆ ಮಾಡುತ್ತಿದೆ. ಇನ್ನುಳಿದ ತ್ಯಾಜ್ಯ ನೀರು ಸಂಸ್ಕರಿಸಲು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಹಿಂದಿನ ಸರ್ಕಾರಗಳ ನಿರ್ಲಕ್ಷದಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಕಲುಷಿತಗೊಂಡಿವೆ. ಅದರಿಂದಾಗಿ ನಾವು ಟೀಕೆಗೆ ಗುರಿಯಾದೆವು. ಆ ಕೆರೆಗಳನ್ನು ಉಳಿಸಲು ತ್ಯಾಜ್ಯನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ನಾವೇ ಗೆಲ್ಲುತ್ತೇವೆ’: ‘ನಗರದ ಹೊರವಲಯದ 110 ಹಳ್ಳಿಗಳಿಗೆ ನೀರು ಪೂರೈಕೆ ಕಾಮಗಾರಿ ಆರಂಭಿಸಲಾಗಿದೆ. ಆ ಹಳ್ಳಿಗಳ ಒಳಚರಂಡಿ ವ್ಯವಸ್ಥೆಗೂ ಅನುದಾನ ನೀಡಿ’ ಎಂದು ಶಾಸಕ ಬಿ.ಎ.ಬಸವರಾಜು ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.

‘ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ. ನೀನೇ ಶಾಸಕನಾಗಿರುತ್ತಿಯಾ, ಎಲ್ಲ ಹಳ್ಳಿಗಳಿಗೆ ಸುವ್ಯವಸ್ಥಿತ ಒಳಚರಂಡಿ ಸೌಲಭ್ಯ ಕಲ್ಪಿಸೋಣ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ)ಯ ಹಣಕಾಸು ಮತ್ತು ತಾಂತ್ರಿಕ ನೆರವಿನೊಂದಿಗೆ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT