ಶನಿವಾರ, ಡಿಸೆಂಬರ್ 7, 2019
24 °C
ಜಿ20 ಶೃಂಗ ಸಭೆ ಆರಂಭ: ಬ್ರಿಕ್ಸ್‌ ಅನೌಪಚಾರಿಕ ಸಭೆಯಲ್ಲಿ ಮೋದಿ–ಕ್ಸಿ ಮಾತುಕತೆ

ಮಾತಿಗೆ ತಡೆಯಾಗದ ಗಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಮಾತಿಗೆ ತಡೆಯಾಗದ ಗಡಿ

ಹ್ಯಾಂಬರ್ಗ್‌: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ)  ಮುಖಂಡರ ಅನೌಪಚಾರಿಕ ಸಭೆಯ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಭಾರತ–ಚೀನಾ ನಡುವಣ ಸಿಕ್ಕಿಂ ವಲಯದ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ಹಾಗಾಗಿ ಈ ಇಬ್ಬರು ಮುಖಂಡರು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇಲ್ಲ ಎಂದು ಎರಡೂ ದೇಶಗಳು ಹೇಳಿದ್ದವು. ಮಾತುಕತೆಗೆ ಪೂರಕವಾದ ವಾತಾವರಣ ಇಲ್ಲ ಎಂದು ಚೀನಾ ಹೇಳಿತ್ತು.ಮಾತುಕತೆ ಅಧಿಕೃತವಾಗಿ ನಿಗದಿ ಆಗಿರಲಿಲ್ಲ. ಹಾಗಿದ್ದರೂ ಇಬ್ಬರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಟ್ವೀಟ್‌ ಮಾಡಿದ್ದಾರೆ.ಪರಸ್ಪರ ಹೊಗಳಿದ ಕ್ಸಿ–ಮೋದಿ: ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ಇದ್ದರೂ ಮೋದಿ ಮತ್ತು ಕ್ಸಿ ಅವರು ಪರಸ್ಪರರನ್ನು ಹೊಗಳಿದ್ದಾರೆ. ಚೀನಾದ ನಾಯಕತ್ವದಲ್ಲಿ ಬ್ರಿಕ್ಸ್‌ ಚಟುವಟಿಕೆಗಳು ವೇಗ ಪಡೆದುಕೊಂಡಿವೆ ಎಂದು ಮೋದಿ ಹೇಳಿದರು. ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗ ಸಭೆಗೆ ಎಲ್ಲ ಸಹಕಾರ ನೀಡುವುದಾಗಿಯೂ ಅವರು ಭರವಸೆ ನೀಡಿದರು.ಮೋದಿ ಅವರ ನಂತರ ಮಾತನಾಡಿದ ಕ್ಸಿ ಅವರು, ಕಳೆದ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್‌ ಗುಂಪಿನಲ್ಲಿ ಆಗಿರುವ ಕೆಲಸಗಳನ್ನು ಶ್ಲಾಘಿಸಿದರು. ಜಿ20 ಶೃಂಗ ಸಭೆಯ ಸಂದರ್ಭದಲ್ಲಿ ಬ್ರಿಕ್ಸ್‌ ನಾಯಕರು ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.ಬ್ರಿಕ್ಸ್‌ ಬಲವಾದ ಧ್ವನಿಯಾಗಿ ಹೊರಹೊಮ್ಮಿದೆ. ಭಯೋತ್ಪಾದನೆ ತಡೆ ಮತ್ತು ಜಾಗತಿಕ ಆರ್ಥಿಕ ವಿಚಾರಗಳಲ್ಲಿ  ಈ ಗುಂಪು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು. ಅವರು ಹಿಂದಿಯಲ್ಲಿಯೇ ಮಾತನಾಡಿದರು.ಪ್ರತಿಭಟನೆಯ ಕಾರ್ಮೋಡ: ಜಾಗತೀಕರಣ, ಬಂಡವಾಳಶಾಹಿ ನೀತಿ ಮತ್ತು ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದನ್ನು ಖಂಡಿಸಿ ಹ್ಯಾಂಬರ್ಗ್‌ ನಗರದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ 75ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದಾಗಿ ನಗರದ ಪಶ್ಚಿಮ ಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು.ಭಯೋತ್ಪಾದನೆ: ಪಾಕ್‌ಗೆ ಪರೋಕ್ಷ ಟೀಕೆ

‘ಭಯೋತ್ಪಾದನೆಯನ್ನು ಕೆಲವು ದೇಶಗಳು ತಮ್ಮ ರಾಜಕೀಯ ಲಾಭಕ್ಕೆ ಸಾಧನದಂತೆ ಬಳಸಿಕೊಳ್ಳುತ್ತಿವೆ. ಜಿ–20 ರಾಷ್ಟ್ರಗಳು ಇದನ್ನು ಸಾಂಘಿಕವಾಗಿ ಹತ್ತಿಕ್ಕಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ. ಜಿ–20 ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಲಷ್ಕರ್‌ ಎ ತಯಬಾ (ಎಲ್‌ಇಟಿ), ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗಳು ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಮಧ್ಯೆ ಭಿನ್ನತೆ ಇರುವುದು ಹೆಸರಿನಲ್ಲಿ ಮಾತ್ರ. ಉಳಿದಂತೆ ಅವೆಲ್ಲವುಗಳ ಸಿದ್ಧಾಂತ ಒಂದೇ ಆಗಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ಐಎಸ್ ಮತ್ತು ಅಲ್‌ ಕೈದಾ ಉಗ್ರರು ಮಧ್ಯಪ್ರಾಚ್ಯ ದೇಶಗಳಲ್ಲಿ ಹಾಗೂ ಬೋಕೊ ಹರಮ್ ನೈಜೀರಿಯಾದಲ್ಲಿ ನಡೆಸುತ್ತಿರುವಂತಹ ದುಷ್ಕೃತ್ಯಗಳನ್ನೇ ಎಲ್‌ಇಟಿ ಮತ್ತು ಜೆಇಎಂಗಳು ದಕ್ಷಿಣ ಏಷ್ಯಾದಲ್ಲಿ ನಡೆಸುತ್ತಿವೆ. ಇಂತಹ ಕೃತ್ಯಗಳ ವಿರುದ್ಧ ಜಾಗತಿಕ ಸಮುದಾಯ ತೆಗೆದುಕೊಳ್ಳುತ್ತಿರುವ ಕ್ರಮಗಳು ತೀರಾ ದುರ್ಬಲವಾಗಿವೆ ಎಂದು ಹೇಳಲು ಬೇಸರವಾಗುತ್ತಿದೆ. ಈ ಉಗ್ರರಿಗೆ ಹಣ ಮತ್ತು ಶಸ್ತ್ರಾಸ್ತ್ರ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಮತ್ತಷ್ಟು ಸಹಕಾರ ಅಗತ್ಯ’ ಎಂದು ಅವರು ಆಗ್ರಹಿಸಿದ್ದಾರೆ. ಉಗ್ರರ ನಿಗ್ರಹಕ್ಕೆ ಸಂಬಂಧಿಸಿದ 11 ಯೋಜನಾ ಕಾರ್ಯಸೂಚಿಗಳನ್ನು ಪ್ರಧಾನಿ ಮೋದಿ ಇಲ್ಲಿ ಮಂಡಿಸಿದರು.

*

ಮೋದಿ ಒತ್ತಾಯ

* ಬ್ರಿಕ್ಸ್‌ ತನ್ನದೇ ಆದ ಸಾಲ ಮೌಲ್ಯಮಾಪನ ಸಂಸ್ಥೆ ಆರಂಭಿಸಬೇಕು

* ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಈಗಿನ ಜಾಗತಿಕ ಆರ್ಥಿಕ ಸಮತೋಲನವನ್ನು ಬಿಂಬಿಸಬೇಕು

ಕ್ಸಿ ಹೇಳಿದ್ದು

* ಪ್ರಾದೇಶಿಕ ವಿವಾದಗಳನ್ನು ‘ಶಾಂತಿಯುತವಾಗಿ ಪರಿಹರಿಸಲು’ ಬ್ರಿಕ್ಸ್‌ ದೇಶಗಳು ಉತ್ತೇಜನ ನೀಡಬೇಕು

* ಜಾಗತಿಕ ಮುಕ್ತ ಅರ್ಥ ವ್ಯವಸ್ಥೆ ಸ್ಥಾಪನೆಗೆ ಬ್ರಿಕ್ಸ್‌ ದೇಶಗಳು ನಿರಂತರವಾಗಿ ಶ್ರಮಿಸಬೇಕು

ಪ್ರತಿಕ್ರಿಯಿಸಿ (+)