ಭಾನುವಾರ, ಡಿಸೆಂಬರ್ 15, 2019
17 °C

ಹೊಸಪೇಟೆ, ಕೊಪ್ಪಳದಲ್ಲಿ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ, ಕೊಪ್ಪಳದಲ್ಲಿ ಬಿರುಸಿನ ಮಳೆ

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದೆ.ತಾಲ್ಲೂಕಿನ ಹಂಪಿ, ಕಮಲಾಪುರ, ನಲ್ಲಾಪುರ, ಚಿನ್ನಾಪುರ, ಕಡ್ಡಿರಾಂಪುರ ಸೇರಿದಂತೆ ಇತರ ಭಾಗಗಳಲ್ಲಿ ಸಂಜೆ ಒಂದು ತಾಸು ಬಿರುಸಿನ ಮಳೆಯಾಗಿದೆ. ಇದರಿಂದ  ಹಂಪಿಯ ಆನೆಸಾಲು ಮಂಟಪ, ವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ ನೀರು ನಿಂತಿತ್ತು. ಗುರುವಾರ ಸಂಜೆಯೂ ಎರಡು ಗಂಟೆ ಬಿರುಸಿನ ಮಳೆಯಾಗಿದ್ದರಿಂದ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಆವರಣ ಸಂಪೂರ್ಣ ಜಲಾವೃತವಾಗಿತ್ತು.ಧಾರಾಕಾರ ಮಳೆ (ಕೊಪ್ಪಳ ವರದಿ): ತಾಲ್ಲೂಕಿನ ಬಿಕನಹಳ್ಳಿ ಸುತ್ತಮುತ್ತ ಶುಕ್ರವಾರ ಭಾರಿ ಪ್ರಮಾಣದ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ.‘ಗ್ರಾಮದ ಸಮೀಪವಿರುವ ಹಳ್ಳದ ನೀರು ಉಕ್ಕಿ ಹರಿದು ಊರೊಳಗೆ ನುಗ್ಗಿದೆ. ಇದರಿಂದ ಸಮಸ್ಯೆ ಉಂಟಾಗಿದೆ’ ಎಂದು ತಿಪ್ಪನಗೌಡ ಮಾಲಿ ಪಾಟೀಲ ತಿಳಿಸಿದರು.‘ಗ್ರಾಮದ ಹೃದಯ ಭಾಗದಲ್ಲಿ ಸುಮಾರು 2 ಅಡಿಗಳಷ್ಟು ನೀರು ನಿಂತಿದೆ. 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ’ ಎಂದು ಅವರು ಮಾಹಿತಿ ನೀಡಿದರು.ಸಿಡಿಲಿನ ಆಘಾತ: ಕನಕಗಿರಿ ಸಮೀಪದ ಓಬಳಬಂಡಿ ಗ್ರಾಮದ ಹೊಲದಲ್ಲಿ ಶುಕ್ರವಾರ ಸಂಜೆ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೂವರು ಮಹಿಳೆಯರು ಪ್ರಜ್ಞೆ ಕಳೆದುಕೊಂಡಿದ್ದಾರೆ.

*

ಹಳ್ಳದಲ್ಲಿ ಕೊಚ್ಚಿ ಹೋದ ರೈತ

ಸಿಂದಗಿ ತಾಲ್ಲೂಕಿನ ಕರವಿನಾಳ ಗ್ರಾಮದ ಬಳಿಯ ಹಳ್ಳದಲ್ಲಿ ಕೊಚ್ಚಿಹೋಗಿದ್ದ ರೈತರೊಬ್ಬರು, ಶುಕ್ರವಾರ ಹಳ್ಳದ ದಂಡೆಯ ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚಿಕ್ಕಅಲ್ಲಾಪುರದ ಸಾಯಬಣ್ಣ ನಾಯ್ಕೋಡಿ (65) ಮೃತಪಟ್ಟ ರೈತ.ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಗ್ರಾಮದ ಬಳಿಯ ಹಳ್ಳ ತುಂಬಿ ಹರಿಯುತ್ತಿತ್ತು. ಬೆಳಿಗ್ಗೆ ಹೊಲಕ್ಕೆ ಹೋಗಿದ್ದ  ಸಾಯಬಣ್ಣ, ಸಂಜೆ  ಹಳ್ಳ ದಾಟುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಹಳ್ಳದ ದಂಡೆಯ ಮುಳ್ಳಿನಪೊದೆಯಲ್ಲಿ ಶುಕ್ರವಾರ ರೈತನ ಶವ ಪತ್ತೆಯಾಗಿದೆ ಎಂದು ಕಲಕೇರಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)