ಶನಿವಾರ, ಡಿಸೆಂಬರ್ 7, 2019
24 °C
ಉಪನಗರ ರೈಲು ಯೋಜನೆ ಅನುಷ್ಠಾನ ಚುರುಕುಗೊಳಿಸಲು ಸಮಾಲೋಚನಾ ಸಭೆ

ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ರೈಲು

ಬೆಂಗಳೂರು:‘ವಿಮಾನನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸುವ ಕುರಿತು ಯೋಜನೆ ರೂಪಿಸಲು ಶೀಘ್ರವೇ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಉಪನಗರ ರೈಲು ಯೋಜನೆಯ ಅನುಷ್ಠಾನದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ  ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಸಂಸದ ಪಿ.ಸಿ.ಮೋಹನ್‌, ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಯಶವಂತಪುರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಲಹಂಕ ಮಾರ್ಗವಾಗಿ ಪರ್ಯಾಯ ರೈಲು ಮಾರ್ಗ ನಿರ್ಮಿಸುವ   ಚಿಂತನೆ ಇದೆ. ಇಲ್ಲಿ ಭೂಸ್ವಾಧೀನ  ಕಷ್ಟ. ಅದಕ್ಕಾಗಿ  ಆಧುನಿಕ ತಂತ್ರಜ್ಞಾನಗಳ ಮೂಲಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯನ್ನು ಪರಿಗಣಿಸಲು  ರಾಜ್ಯ ಸರ್ಕಾರ ಕೋರಿದೆ. ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸುವ ಬಗ್ಗೆ ರೈಟ್ಸ್‌ ಸಂಸ್ಥೆ ಕಾರ್ಯಸಾಧ್ಯತಾ ವರದಿ  ಸಿದ್ಧಪಡಿಸಲಿದೆ. ಇದರ  ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ವರದಿ  ಕೈಸೇರಿದ ಬಳಿಕ   ರೈಲ್ವೆ ಸಚಿವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ’ ಎಂದು ತಿಳಿಸಿದರು. 

‘ಉಪನಗರ  ರೈಲು ಯೋಜನೆಯ ಮೊದಲ ಹಂತದಲ್ಲಿ ನಾಲ್ಕು   ಪ್ಯಾಸೆಂಜರ್‌ ರೈಲುಗಳನ್ನು ಮೆಮು (ಮೈನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯುನಿಟ್‌) ರೈಲುಗಳನ್ನಾಗಿ ಪರಿವರ್ತಿಸಲಾಗುತ್ತದೆ. ಕ್ರಮೇಣ 15 ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತಿಸುವ ಚಿಂತನೆ ಇದೆ. ಇದರಿಂದ ನಗರದಲ್ಲಿನ ಸಂಚಾರ ದಟ್ಟಣೆ ಶೇ  30ರಿಂದ 40ರಷ್ಟು ಕಡಿಮೆಯಾಗಲಿದೆ’ ಎಂದು ಹೇಳಿದರು.

‘ಬೈಯಪ್ಪನಹಳ್ಳಿಯಲ್ಲಿ ಏಳು ಫ್ಲಾಟ್‌ಫಾರಂಗಳನ್ನು  ಹಾಗೂ ರೈಲುಗಳ ನಿರ್ವಹಣೆಗೆ 3 ಪಿಟ್‌ಲೈನ್‌ಗಳನ್ನು   ನಿರ್ಮಿಸುವ ಯೋಜನೆಯಿದೆ.  ಈ ವರ್ಷಾಂತ್ಯದೊಳಗೆ 3 ಫ್ಲಾಟ್‌ಫಾರಂಗಳು ಸಿದ್ಧವಾಗಲಿವೆ’  ಎಂದರು. vಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ‘ಉಪನಗರ ಯೋಜನೆಗೆ  ಅಂದಾಜು ₹ 9,000 ಕೋಟಿ  ವೆಚ್ಚವಾಗಲಿದೆ. ಇದರಲ್ಲಿ ಶೇ 20ರಷ್ಟನ್ನು ಕೇಂದ್ರ ಸರ್ಕಾರ ಹಾಗೂ ಶೇ  20ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿವೆ. ಉಳಿದ ಶೇ 60ರಷ್ಟು ಮೊತ್ತವನ್ನು ಸಾಲ ಪಡೆಯಲಾಗುವುದು.  ಸಾಲದಲ್ಲೂ ಶೇಕಡ 50ರಷ್ಟು ವೆಚ್ಚವನ್ನು ಕೇಂದ್ರ ಭರಿಸಬೇಕು ಎಂಬುದು ನಮ್ಮ ಕೋರಿಕೆ’ ಎಂದರು.

‘ವರ್ತುಲ ರೈಲು ಸೌಕರ್ಯ ಕಲ್ಪಿಸಿ’

‘ನಗರಕ್ಕೆ ವರ್ತುಲ ರೈಲು ಸೌಕರ್ಯ ಕಲ್ಪಿಸಬೇಕು.  ಈಗಿರುವ ಹಳಿಗಳಲ್ಲೇ ಸ್ಥಳೀಯ ರೈಲುಗಳನ್ನು ಓಡಿಸಬೇಕು. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಾರ್ವಜನಿಕ ಸಾರಿಗೆ ಕಲ್ಪಿಸಬೇಕು’ ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ  (ಕಮ್ಯುನಿಸ್ಟ್‌) ಒತ್ತಾಯಿಸಿದೆ. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳ ಕೊರತೆ ನಾಟಕವಾಡಿ ಮೆಮು ರೈಲುಗಳನ್ನು ಬಿಳಿಯಾನೆ ಮಾಡಲು ಹೊರಟಿವೆ’ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್‌) ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ. ಜ್ಞಾನಮೂರ್ತಿ ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)