ಶನಿವಾರ, ಡಿಸೆಂಬರ್ 7, 2019
24 °C
ಮಂಗಳೂರು ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಯತ್ನ

ಮಂಗಳೂರು: ‘ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟು ಕೊಂಡು ಹಿಂದೂ ಮತಗಳನ್ನು ಧ್ರುವೀಕರಣ ಮಾಡುವ ದುರುದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.ನಗರದ ಹೊರವಲಯದ ಅಡ್ಯಾರ್‌ನಲ್ಲಿ ಶುಕ್ರವಾರ ನಡೆದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಕಾಂಗ್ರೆಸ್‌ ಚುನಾಯಿತ ಪ್ರತಿನಿಧಿಗಳು ಮತ್ತು ಪ್ರಮುಖ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚುನಾವಣೆ ಎದುರಿಸಲು ಬಿಜೆಪಿ ಬಳಿ ಯಾವುದೇ ವಿಷಯಗಳಿಲ್ಲ. ಕೋಮು ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಇದೇ ಕಾರಣಕ್ಕಾಗಿ ಮತೀಯ ದ್ವೇಷದ ಘರ್ಷಣೆಗಳು ನಡೆಯುತ್ತಿವೆ’ ಎಂದರು.2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಲ್ಲಿ ಬಿಜೆಪಿಯವರು ಚರ್ಚ್‌ಗಳ ಮೇಲೆ ದಾಳಿ ಮಾಡಿದ್ದರು. ಈಗಲೂ ಮತ್ತೆ ಮತ್ತೆ ಅದನ್ನೇ ಮಾಡಲು ಹೊರಟಿದ್ದಾರೆ. ಇಂತಹ ಪ್ರಯತ್ನಗಳಿಗೆ ಕರಾವಳಿಯ ಜನರು ಬೆಂಬಲ ನೀಡಬಾರದು. ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಬಿಜೆಪಿಯ ಕೋಮುವಾದಿ ಕಾರ್ಯಸೂಚಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.‘ಬಂಟ್ವಾಳದಲ್ಲಿ ನಡೆಯುತ್ತಿರುವ ಕೊಲೆ, ಗಲಭೆಗಳಿಗೆ ರಾಜಕೀಯ ದುರುದ್ದೇಶವಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕೋಮು ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವವರ ಮನೆಯ ಮಕ್ಕಳು ಗಲಭೆಗಳಲ್ಲಿ ಸಾಯುವುದಿಲ್ಲ. ಬಡವರು, ಹಿಂದುಳಿದವರ ಮಕ್ಕಳು ಹಿಂಸೆಗೆ ಬಲಿಯಾಗುತ್ತಾರೆ. ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ’ ಎಂದು ಹೇಳಿದರು.‘ಇವರು ಅಧಿಕಾರದಲ್ಲಿ ಇದ್ದಾಗ ಕಮಿಷನ್ ಆಸೆಗಾಗಿ ಸೈಕಲ್‌, ಸೀರೆ ಹಂಚಿದ್ದು ಬಿಟ್ಟರೆ ಏನೂ ಮಾಡಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಚುನಾವಣೆ ಎದುರಿಸಲಾಗದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಾರಕ್ಕೆ ಕರೆತರಲು ಬಿಜೆಪಿ ಹೊರಟಿದೆ. ಹಿಂದುತ್ವದ ವಿಚಾರಧಾರೆ ಬಳಸಿಕೊಂಡು ಜನರನ್ನು ಕೆರಳಿಸಿ ಅಧಿಕಾರಕ್ಕೆ ಬರಲು ಇದು ಉತ್ತರ ಪ್ರದೇಶ ಅಲ್ಲ, ಕರ್ನಾಟಕ. ಇಲ್ಲಿ ಕೋಮುದ್ವೇಷದ ಬೀಜ ಬಿತ್ತಿ, ಅದರ ಫಲ ಪಡೆಯಲು ಬಿಜೆಪಿ ಅಥವಾ ಪಿಎಫ್‌ಐಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)