ಸೋಮವಾರ, ಡಿಸೆಂಬರ್ 16, 2019
26 °C
‘ಶಿಸ್ತು ಪಾಲಿಸದಿದ್ದರೆ ಮಗ, ಮೊಮ್ಮಗ ಎಲ್ಲರೂ ಒಂದೇ’

ಪ್ರಜ್ವಲ್‌ ಹಿಂದಿರುವವರು ಸರಿ ಇಲ್ಲ–ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜ್ವಲ್‌ ಹಿಂದಿರುವವರು ಸರಿ ಇಲ್ಲ–ದೇವೇಗೌಡ

ಬೆಂಗಳೂರು: ‘ಪ್ರಜ್ವಲ್ ರೇವಣ್ಣನ  ಹಿಂದೆಮುಂದೆ ಓಡಾಡಿ ಕೊಂಡಿರುವವರು ಸರಿ ಇಲ್ಲ. ಕೆಲವರಿಗೆ ಬೇರೆ ಉದ್ದೇಶವೂ ಇದ್ದಂತಿದ್ದು, ಅವನನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು  ಜಾತ್ಯತೀತ ಜನತಾದಳದ(ಜೆಡಿಎಸ್‌) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.‘ಶಿಸ್ತು ಇಲ್ಲದೆ ಇದ್ದರೆ ಮಗನಾದರೆ ಏನು, ಮೊಮ್ಮಗನಾದರೆ ಏನು. ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು  ಹೇಳಿಕೆ ನೀಡಿದ ಅವನ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.‘ಸೂಟ್‌ಕೇಸ್‌ ಸಂಸ್ಕೃತಿ ಇದೆ ಎಂದು ಪ್ರಜ್ವಲ್‌ ನೀಡಿರುವ ಹೇಳಿಕೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವನ ಮಾತು ನೋವು ತಂದಿದೆ. ನನ್ನ ಬದುಕಿನಲ್ಲಿ ಎಂದೂ ಸೂಟ್‌ಕೇಸ್‌ ಸಂಸ್ಕೃತಿ ಮಾಡಿಲ್ಲ. ದುಡ್ಡು ಮಾಡುವ ಕೆಲಸಕ್ಕೆ ಎಂದೂ ಕೈಹಾಕಿದವನಲ್ಲ. ಬಡ್ಡಿ ಕೊಟ್ಟು ಸಾಲ ತಂದು ಚುನಾವಣೆ ಮಾಡಿದ್ದೇನೆ’ ಎಂದು ನೆನಪಿಸಿಕೊಂಡರು. ‘ಹಾಸನ ಜಿಲ್ಲೆ ಬೇಲೂರಿನಿಂದ ಸ್ಪರ್ಧೆ ಮಾಡುವ ಆಸೆ ಅವನಿಗೆ ಇತ್ತು. ಅಲ್ಲಿ ಟಿಕೆಟ್‌ ಕೊಡಲು ಆಗುವುದಿಲ್ಲ ಎಂದು ಹೇಳಿದ ಮೇಲೆ ಹುಣಸೂರಿಗೆ ಹೋಗಿದ್ದ. ರಾಜಕೀಯ ಎಂಬುದು ಮಕ್ಕಳ ಆಟವಲ್ಲ. ಎಲ್ಲರಿಗೂ ಕೇಳಿದ ಕಡೆ ಟಿಕೆಟ್ ಕೊಡುವುದಿಕ್ಕೆ ಆಗುವುದಿಲ್ಲ. ಕುಟುಂಬದವರಿಗೆ ಟಿಕೆಟ್‌ ನೀಡುವುದರಲ್ಲಿ ನನ್ನ ತೀರ್ಮಾನವೇ ಅಂತಿಮ’ ಎಂದು ಹೇಳಿದರು.‘ರಾಜಕೀಯದಲ್ಲಿ ಆವೇಶದಿಂದ ಮಾತನಾಡಿದರೆ ಏನೂ ಆಗುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರಕರಣಗಳನ್ನು ಅನೇಕ ಬಾರಿ ನೋಡಿದ್ದೇನೆ. ಈ ರೀತಿಯ ಮಾತುಗಳಿಂದ ಅವನಿಗೇ ನಷ್ಟ’ ಎಂದೂ ಅಭಿಪ್ರಾಯಪಟ್ಟರು.ಪ್ರಜ್ವಲ್‌ಗೆ ಬುದ್ಧಿಮಾತು: ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರಕ್ಕೀಡುಮಾಡಿರುವ ಪ್ರಜ್ವಲ್‌ನನ್ನು ಪದ್ಮನಾಭನಗರದ ಮನೆಗೆ ಕರೆಯಿಸಿಕೊಂಡ ದೇವೇಗೌಡ ಅರ್ಧಗಂಟೆಗೂ ಹೆಚ್ಚು ಕಾಲ ಬುದ್ಧಿವಾದ ಹೇಳಿದರು ಎಂದು ಗೊತ್ತಾಗಿದೆ.ಪ್ರಜ್ವಲ್‌ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಿರಾಕರಿಸಿದರು.ಸೂಟ್‌ಕೇಸ್‌ ರಾಜಕೀಯದಲ್ಲಿ ಕುಮಾರಸ್ವಾಮಿ ಎತ್ತಿದ ಕೈ–ಜಮೀರ್

‘ಸೂಟ್‌ ಕೇಸ್‌ ರಾಜಕೀಯ ಮಾಡುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ. ಪ್ರಜ್ವಲ್ ರೇವಣ್ಣ ಹೇಳಿರುವುದು ಸತ್ಯ’ ಎಂದು ಜೆಡಿಎಸ್‌ನಿಂದ ಅಮಾನತು ಗೊಂಡಿರುವ ಶಾಸಕ ಜಮೀರ್‌ ಅಹಮದ್‌ ಖಾನ್‌ ಹಾಗೂ ಎಚ್‌.ಸಿ. ಬಾಲಕೃಷ್ಣ  ಹೇಳಿದರು.

‘ದೇವೇಗೌಡರು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿದರೆ, ಕುಮಾರಸ್ವಾಮಿ ಸೂಟ್‌ಕೇಸ್‌ ತಂದುಕೊಟ್ಟವರಿಗೆ ಮಣೆ ಹಾಕುತ್ತಾರೆ’ ಎಂದು ಜಮೀರ್‌  ಟೀಕಿಸಿದರು.

‘ಕುಮಾರಸ್ವಾಮಿ ಅವರು ತಮ್ಮ ಕುಟುಂಬದವರಿಂದಲೇ ಬೀದಿ ಪಾಲಾಗಲಿದ್ದಾರೆ. ಕೆಟ್ಟ ನಡವಳಿಕೆಯಿಂದ ಇಂದು ಅವರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರು ಸರಿಯಾಗಿ ಇದ್ದಿದ್ದರೆ ಇಷ್ಟೊತ್ತಿಗೆ ಎರಡು ಬಾರಿ ಮುಖ್ಯಮಂತ್ರಿಯಾಗಿರುತ್ತಿದ್ದರು’ ಎಂದು  ಬಾಲಕೃಷ್ಣ ಹೇಳಿದರು.ಅನಿತಾ, ಭವಾನಿಗಷ್ಟೇ ಅವಕಾಶ

‘ನಮ್ಮ ಕುಟುಂಬದಿಂದ ಅನಿತಾ ಮತ್ತು ಭವಾನಿ ಇಬ್ಬರೂ ಚುನಾವಣೆಯಲ್ಲಿ ನಿಲ್ಲಬಹುದು. ಅವರಿಬ್ಬರನ್ನು ಬಿಟ್ಟು ಬೇರೆ ಯಾವ ಹೆಣ್ಣುಮಕ್ಕಳೂ ರಾಜಕೀಯಕ್ಕೆ ಬರುವುದಿಲ್ಲ’ ಎಂದು ದೇವೇಗೌಡ ಹೇಳಿದರು.

‘ಚನ್ನಪಟ್ಟಣ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಆಗ್ರಹ ಮಾಡುವುದು ಸಹಜ. ಅವರು ಸ್ಪರ್ಧೆ ಮಾಡಿದರೆ ರಾಮನಗರ (ಕುಮಾರಸ್ವಾಮಿ ಕ್ಷೇತ್ರ) ಜವಾಬ್ದಾರಿ ಹೊರುವವರು ಯಾರು.  ಕುಮಾರಸ್ವಾಮಿ ಗೆಲುವಿಗೆ ಶ್ರಮಿಸಬೇಕಾದುದು ಅನಿತಾ ಹೊಣೆ. ಅವರಿಗೂ ತಿಳಿ ಹೇಳುತ್ತೇನೆ’ ಎಂದು ಅವರು ಹೇಳಿದರು.‘ಪಕ್ಷದ ಕಾರಣಕ್ಕೆ ಕುಟುಂಬ ಒಡೆಯಲು ಬಿಡುವುದಿಲ್ಲ. ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

*

ಜೆಡಿಎಸ್‌ನಲ್ಲಿ ಯಾವುದೇ  ಭಿನ್ನಮತ ಇಲ್ಲ.  ಪ್ರಜ್ವಲ್‌್ ನೀಡಿದ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ. ದೇವೇಗೌಡರ ತೀರ್ಮಾನ ಅಂತಿಮ.

ಎಚ್‌.ಡಿ.ರೇವಣ್ಣ ,

ಶಾಸಕ

*

ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇಲ್ಲ. ಪ್ರಜ್ವಲ್‌ ರೇವಣ್ಣ ಅವರು ಯಾವುದೋ ವಿಷಯವನ್ನು ಸ್ಪಷ್ಟಪಡಿಸಲು ಹೋಗಿ ಸೂಟ್‌ಕೇಸ್‌ ಪದ ಬಳಸಿದ್ದಾರೆ.

ಮಧು ಬಂಗಾರಪ್ಪ,

ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)