ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸ್ಥಗಿತ: ದಟ್ಟಣೆಯಿಂದ ಸವಾರರು ಸುಸ್ತು

Last Updated 7 ಜುಲೈ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ಅರ್ಧದಿನ ಮೆಟ್ರೊ ರೈಲುಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.

ಪ್ರತಿನಿತ್ಯವೂ ಮೆಟ್ರೊದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಾರ್ವಜನಿಕರು, ಶುಕ್ರವಾರ ಸಾರಿಗೆ ನಿಗಮ ಹಾಗೂ ಖಾಸಗಿ ವಾಹನಗಳನ್ನೇ ಅವಲಂಬಿಸಿದರು. ಇದರಿಂದ ರಸ್ತೆಯಲ್ಲಿ  ದಟ್ಟಣೆ ಹೆಚ್ಚಾಗಿ ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳು ಸಾಲಾಗಿ ನಿಂತುಕೊಂಡಿದ್ದು ಕಂಡುಬಂತು.

ಶೇಷಾದ್ರಿ ರಸ್ತೆ, ಕೆ.ಆರ್‌.ವೃತ್ತ, ಮೈಸೂರು ಬ್ಯಾಂಕ್‌ ವೃತ್ತ, ನೃಪತುಂಗ ರಸ್ತೆ, ಮಾಗಡಿ ರಸ್ತೆ, ಇನ್‌ಫೆಂಟ್ರಿ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ವೃತ್ತ, ಶಿವಾನಂದ ವೃತ್ತ, ಕೆ.ಜಿ.ರಸ್ತೆ, ಇಂದಿರಾನಗರ, ಹಲಸೂರು, ಬೈಯಪ್ಪನಹಳ್ಳಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಮಲ್ಲೇಶ್ವರ, ಎಂ.ಜಿ.ರಸ್ತೆ, ಮೈಸೂರು ರಸ್ತೆ, ಯಶವಂತಪುರ, ಮೇಖ್ರಿ ವೃತ್ತ, ಜಯನಗರ, ಜೆ.ಪಿ.ನಗರ, ಬಸವನಗುಡಿ ಹಾಗೂ ಸುತ್ತಮುತ್ತ ದಟ್ಟಣೆ ಇತ್ತು.

ಅದರಲ್ಲೂ ಜೆ.ಸಿ.ರಸ್ತೆ, ಪುರಭವನ, ಹಳೇ ಹೈಗ್ರೌಂಡ್ಸ್‌ ಜಂಕ್ಷನ್‌, ಚಾಲುಕ್ಯ ವೃತ್ತದಲ್ಲಿ ವಾಹನಗಳು 1 ಕಿ.ಮೀ ಕ್ರಮಿಸಲು ಅರ್ಧ ಗಂಟೆ ಹಿಡಿಯಿತು. ದಟ್ಟಣೆ ನಿಯಂತ್ರಣಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಹೆಚ್ಚುವರಿ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ರಸ್ತೆಯಲ್ಲಿ ಆಟೊ, ಬೈಕ್‌, ಕಾರುಗಳ ಸಂಖ್ಯೆ ಹೆಚ್ಚಿತ್ತು.

‘ಸಾರ್ವಜನಿಕರು ಮೆಟ್ರೊವನ್ನು  ಅವಲಂಬಿಸಿದ್ದಾರೆ. ಒಂದು ಗಂಟೆ ರೈಲು ಓಡಾಟ ನಿಂತರೂ ಸಮಸ್ಯೆಯಾಗುತ್ತದೆ.  ಇಂಥ ಸ್ಥಿತಿಯಲ್ಲಿ ಅರ್ಧ ದಿನ ಸ್ಥಗಿತವಾಗಿದ್ದರಿಂದ ಸಾರ್ವಜನಿಕರು ನಿಗದಿತ ಸ್ಥಳಕ್ಕೆ ಹೋಗಲು ಪರದಾಡಿದರು’ ಎಂದು ಸಂಚಾರ  ಪೊಲೀಸರು ತಿಳಿಸಿದರು. ‘ನಿಲ್ದಾಣ ಬಳಿಯೇ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರು ಮೆಟ್ರೊದಲ್ಲಿ ಹೋಗುತ್ತಿದ್ದರು. ಆದರೆ, ಶುಕ್ರವಾರ ಅವರೆಲ್ಲ ತಮ್ಮ ವಾಹನಗಳಲ್ಲೇ ಕೆಲಸಕ್ಕೆ ಹೋಗಿದ್ದರಿಂದ ಮೆಟ್ರೊ ಮಾರ್ಗವಿದ್ದ ರಸ್ತೆಯ ಸುತ್ತಮುತ್ತ ದಟ್ಟಣೆ ಕಂಡುಬಂತು’ ಎಂದು ಹೇಳಿದರು.

ಭಾಷಾ ನೀತಿ: ವರದಿ ಕೇಳಿದ ನಗರಾಭಿವೃದ್ಧಿ ಇಲಾಖೆ
ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ಹಿಂದಿ ಬಳಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ತ್ರಿಭಾಷಾ ಸೂತ್ರ ಅನುಷ್ಠಾನದ ವಿಚಾರದಲ್ಲಿ ತಮಿಳುನಾಡು ಹಾಗೂ ಕೇರಳದ ಮೆಟ್ರೊಗಳಲ್ಲಿ ಕೈಗೊಂಡ ಅನುಷ್ಠಾನ ಕ್ರಮದ ಬಗ್ಗೆ  ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಮೆಟ್ರೊ ರೈಲು ನಿಗಮದಿಂದ ವರದಿ ಕೇಳಿದೆ.ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬಂದಿದೆ.

ಜಾಮೀನು ಮೇಲೆ ಬಿಡುಗಡೆ
ನಗರದ ಸರ್‌ ಎಂ.ವಿಶ್ವೇಶ್ವರಯ್ಯ (ಸೆಂಟ್ರಲ್ ಕಾಲೇಜು) ನಿಲ್ದಾಣದಲ್ಲಿ ಮೆಟ್ರೊ ಸಿಬ್ಬಂದಿ ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಪೊಲೀಸರ ನಡುವೆ ನಡೆದ ಮಾರಾಮಾರಿ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಅವರನ್ನು ಜಾಮೀನು ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಮೆಟ್ರೊ ನಿರ್ವಹಣಾ ವಿಭಾಗದ ಉದ್ಯೋಗಿಗಳಾದ ರಾಕೇಶ್‌, ಹರೀಶ್‌ ಹಾಗೂ ಕೆಎಸ್‌ಐಎಸ್‌ಎಫ್‌ ಕಾನ್‌ಸ್ಟೆಬಲ್‌  ಆನಂದ್‌ ಗುಡ್ಡದ, ಲಕ್ಷ್ಮಣ ಬಂಧಿತರು.‘ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ (ಐಪಿಸಿ 353) ಆರೋಪದಡಿ ದೂರು– ಪ್ರತಿ ದೂರು ದಾಖಲಾಗಿದೆ. ಅದರನ್ವಯ ಆರೋಪಿಗಳನ್ನು ಬಂಧಿಸಿ ಮಧ್ಯಾಹ್ನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೆವು. ಅಲ್ಲಿ ಅವರಿಗೆ ಜಾಮೀನು ಮಂಜೂರಾಯಿತು’ ಎಂದು ವಿವರಿಸಿದರು.

ವರದಿ ಸಲ್ಲಿಕೆ: ‘ಘಟನೆ ಸಂಬಂಧ ಕಾನ್‌ಸ್ಟೆಬಲ್‌ ಅವರ ಮೇಲಿರುವ ಆರೋಪಗಳ ಬಗ್ಗೆ ಆಂತರಿಕ ಭದ್ರತಾ ಪಡೆಯ (ಐಎಸ್‌ಡಿ) ಉನ್ನತ ಅಧಿಕಾರಿಗಳಿಗೆ ಎಫ್‌ಐಆರ್‌ ಸಮೇತ ವರದಿ ಕಳುಹಿಸಲಿದ್ದೇವೆ. ಬಳಿಕ ಅವರೇ ಕಾನ್‌ಸ್ಟೆಬಲ್‌ಗಳ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಟ್ವಿಟರ್‌ನಲ್ಲಿ ಆಕ್ರೋಶ
ಮೆಟ್ರೊ ರೈಲು ಸೇವೆ ದಿಢೀರ್‌ ಸ್ಥಗಿತಗೊಂಡ ಬಗ್ಗೆ ಪ್ರಯಾಣಿಕರು  ಟ್ವಿಟರ್‌ನಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ..ಇಂತಹ ಪುಟ್ಟ ಸಮಸ್ಯೆಯನ್ನೂ ಬಗೆಹರಿಸಲು ವಿಫಲವಾದ ಸರ್ಕಾರದ ಅಸಾಮರ್ಥ್ಯ ದಿಗಿಲು ಮೂಡಿಸಿದೆ. ಸಮಸ್ಯೆ ಈ ಮಟ್ಟಕ್ಕೆ ಬೆಳೆಯಲು ಬಿಎಂಆರ್‌ಸಿಎಲ್‌ ಅವಕಾಶ ಕೊಟ್ಟಿದ್ದಾದರೂ ಏಕೆ?
ಪ್ರತಿಮಾ

ಮೆಟ್ರೊ ಸೇವೆ ರದ್ದುಪಡಿಸಿದ ಬಳಿಕವೂ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡದಿರುವುದು ಸಮಂಜಸ ಅಲ್ಲ.  ಈ ಬಗ್ಗೆ  ಪ್ರಯಾಣಿಕರಿಗೆ ಮುನ್ಸೂಚನೆ   ನೀಡಬೇಕಿತ್ತು
ಕಾರ್ತಿಕ್‌ ಜೋಷಿ

ಮೆಟ್ರೊ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ  ಜಗಳದಿಂದಾಗಿ ಲಕ್ಷಗಟ್ಟಲೆ ಜನ ತೊಂದರೆ ಅನುಭವಿಸಿದರು. ಇದನ್ನು ತಡೆಯದ ಬಿಎಂಆರ್‌ಸಿಎಲ್‌ಗೆ  ನಾಚಿಗೆ ಆಗಬೇಕು
ಪ್ರದೀಪ್‌ ಜಿ.ಎನ್‌.

ಇದು ಆಡಳಿತ ವೈಫಲ್ಯ. ಒಬ್ಬ ವ್ಯಕ್ತಿ ಭದ್ರತಾ ತಪಾಸಣೆಗೆ ಒಳಗಾಗಲು ನಿರಾಕರಿಸಿದಕ್ಕಾಗಿ  3 ಲಕ್ಷ ಪ್ರಯಾಣಿಕರ ಮೇಲೆ ಸವಾರಿ ಮಾಡಲಾಗಿದೆ.  ಈ ವ್ಯಕ್ತಿ ಭಾರಿ ಬಲಾಢ್ಯನೇ ಇರಬೇಕು
ವಿದ್ಯಾಧರ ಹತ್ಪಕ್ಕಿ

ಪ್ರಯಾಣಿಕರು ಏನನ್ನುತ್ತಾರೆ?

ಮೆಟ್ರೊವನ್ನು ನಂಬಿ ನಾವು ಪ್ರಯಾಣಕ್ಕೆ ಯೋಜನೆ ರೂಪಿಸುತ್ತೇವೆ.  ಮೆಟ್ರೊಸೇವೆಯನ್ನು ದಿಢೀರ್‌ ಸ್ಥಗಿತಗೊಳಿಸಿದರೆ ಸಾರ್ವಜನಿಕರಿಗೆ ಆಗುವ ನಷ್ಟ ಭರಿಸುವವರು ಯಾರು?
ಆನಂದಮೂರ್ತಿ, ಕೋಲಾರ, ಸುಗಟೂರು  

 ಯಾವುದೇ ಪೂರ್ವಭಾವಿ ಮಾಹಿತಿ ನೀಡದೆ ಸಾರ್ವಜನಿಕರಿಗೆ ತೊದರೆಯಾಗುವ ರೀತಿಯಲ್ಲಿ ಅನವಶ್ಯಕವಾಗಿ ಮೆಟ್ರೊ ಸೇವೆ ಬಂದ್‌ ಮಾಡಿದ್ದು ಖಂಡನೀಯ. ಮೆಜೆಸ್ಟಿಕ್‌ನಿಂದ ಯಲಚೇನಹಳ್ಳಿಗೆ ಪ್ರಯಾಣಿಸಲು ನಾನು ಹರಸಾಹಸಪಟ್ಟೆ
ನಿತಿನ್‌ ರಾಯ್ಕರ್‌
         

ನಾನು ಎಂ.ಜಿ.ರಸ್ತೆಯಿಂದ ಇಂದಿರಾನಗರ ನಡುವೆ ಮೆಟ್ರೊದಲ್ಲಿ ಪ್ರಯಾಣಿಸುತ್ತೇನೆ.  ಬೆಂಗಳೂರಿಗೆ ಬಂದ ಬಳಿಕ ಮೊದಲ ಸಲ ಈ ರೀತಿಯ ಅನುಭವ ಆಗಿದೆ. ಕಚೇರಿ ತಲುಪುವಾಗ ತಡವಾಯಿತು. ಮೆಟ್ರೊ ಸಿಬ್ಬಂದಿ ಕಾನೂನು ರೀತಿ ಹೋರಾಟ ನಡೆಸಬೇಕೇ ಹೊರತು ಮುಷ್ಕರ ನಡೆಸುವುದಲ್ಲ.
ಶಂಪಾ ಸಾಹು

ಮೆಟ್ರೊ ನನ್ನ ಜೀವನದ ಒಂದು ಭಾಗ. ಕಚೇರಿಗೆ ಮೆಟ್ರೊದಲ್ಲೇ ಹೋಗುತ್ತೇನೆ.  ಒಳಜಗಳಕ್ಕೆ ಪ್ರಯಾಣಿಕರನ್ನು ಬಲಿಕೊಟ್ಟಿದ್ದು ಎಳ್ಳಷ್ಟೂ ಸರಿಯಲ್ಲ
ಹರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT