ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯಗಳ ಅಧಿಕಾರ ಮೊಟಕುಗೊಳಿಸುವ ಹುನ್ನಾರ’

ಮೀಸಲಾತಿ ಪಟ್ಟಿಗೆ ಹಿಂದುಳಿದ ಜಾತಿಗಳ ಸೇರ್ಪಡೆ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ
Last Updated 7 ಜುಲೈ 2017, 20:17 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ   ತಿದ್ದುಪಡಿ ಮಸೂದೆಗೆ ಬೆಂಬಲಿಸುವ ವಿಷಯದಲ್ಲಿ ದಕ್ಷಿಣದ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು  ಪುದುಚೇರಿ ಕೇಂದ್ರದ ಉದ್ದೇಶಿತ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ. ಆದರೆ, ಕೇರಳ ಮಾತ್ರ ಅದನ್ನು ಬೆಂಬಲಿಸಿದೆ.
ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ದಕ್ಷಿಣದ ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿದ್ದುಪಡಿ ಮಸೂದೆಯ ಸಾಧಕ–ಬಾಧಕಗಳ ಕುರಿತು ಚರ್ಚಿಸಿದರು. ತಮಿಳುನಾಡು ಸಭೆಯಲ್ಲಿ ಭಾಗವಹಿಸಿರಲಿಲ್ಲ.

‘ರಾಜ್ಯ ಹಿಂದುಳಿದ ಆಯೋಗಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲು ತಿದ್ದುಪಡಿ ಮಸೂದೆ ರೂಪಿಸಿರುವುದು ಸ್ವಾಗತಾರ್ಹ. ಆದರೆ, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಯಾವ ಜಾತಿಗಳನ್ನು ಸೇರ್ಪಡೆ ಮಾಡಬೇಕು ಎಂದು ನಿರ್ಣಯಿಸುವ ಅಧಿಕಾರ ಆಯಾ ರಾಜ್ಯಗಳಿಗೇ ಇರಬೇಕು. ಇದರಲ್ಲಿ ಕೇಂದ್ರದ ಹಸ್ತಕ್ಷೇಪ ಇರಬಾರದು’ ಎಂಬ ನಿರ್ಣಯ ಕೈಗೊಳ್ಳಲಾಯಿತು. ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

ಈ ನಿರ್ಣಯಕ್ಕೆ ಕೇರಳ ಬಿಟ್ಟು, ಉಳಿದ ರಾಜ್ಯಗಳ ಅಧ್ಯಕ್ಷರು ಸಹಿ ಹಾಕಿದರು. ಕೇರಳ ಆಯೋಗದ ಅಧ್ಯಕ್ಷ  ನ್ಯಾಯಮೂರ್ತಿ ಜಿ. ಶಿವರಾಜನ್‌,  ತಮ್ಮ ಅಭಿಪ್ರಾಯವನ್ನು ಪ್ರತ್ಯೇಕವಾಗಿ ದಾಖಲಿಸಿ  ಸಹಿ ಹಾಕಿದರು.

ಆಂಧ್ರ ಪ್ರದೇಶದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ  ಕೆ.ಎಲ್‌. ಮಂಜುನಾಥ್ ಮಾತನಾಡಿ, ‘ಶೈಕ್ಷಣಿಕ ಅಥವಾ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿವುದು ಸುಲಭ. ಆದರೆ, ದೆಹಲಿಯಲ್ಲಿ ಕುಳಿತು  ಯಾವ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದೆ ಎಂಬುದನ್ನು ಗುರುತಿಸಲು ಸಾಧ್ಯವಿಲ್ಲ’ ಎಂದರು.

‘ಸಾಮಾಜಿಕ ಸ್ಥಿತಿಗತಿ ಒಂದೊಂದು ಹಳ್ಳಿಗೂ ವ್ಯತ್ಯಾಸ ಇರುತ್ತದೆ. ಆಯಾ ರಾಜ್ಯಗಳೇ ಅದನ್ನು ಮೌಲ್ಯಮಾಪನ ಮಾಡಲು ಸಾಧ್ಯ. ಈ ಅಧಿಕಾರವನ್ನು ಮೊಟುಕುಗೊಳಿಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌. ಕಾಂತರಾಜು ಮಾತನಾಡಿ, ‘ಹಿಂದುಳಿದ ವರ್ಗಗಳನ್ನು   ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವೇ ಗುರುತಿಸುವುದಾದರೆ  ರಾಜ್ಯ ಆಯೋಗಗಳ ಅಧಿಕಾರವನ್ನು ಕಿತ್ತುಕೊಂಡಂತಾಗಲಿದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಲಿದೆ’ ಎಂದು ಹೇಳಿದರು.

ಕೇರಳ ಅಭಿಪ್ರಾಯ ಭಿನ್ನ
ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವುದರಿಂದ ಅಧಿಕಾರ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ ಎಂದು ಕೇರಳ  ಆಯೋಗದ  ಅಧ್ಯಕ್ಷ ನ್ಯಾ. ಜಿ. ಶಿವರಾಜನ್ ಅಭಿಪ್ರಾಯಪಟ್ಟರು.

‘ಕೇಂದ್ರ ಸರ್ಕಾರ ಜಾರಿಗೆ ತರುವ  ಯೋಜನೆಗಳಿಗೆ ಸೀಮಿತವಾಗಿ  ಈ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ರಾಜ್ಯಗಳ ಅಧಿಕಾರ ಕಡಿಮೆ ಆಗಲಿದೆ  ಎಂದು ನನಗೆ ಅನ್ನಿಸುವುದಿಲ್ಲ. ಆದರೂ, ಕೆಲವು ಅಂಶಗಳನ್ನು ಮಾರ್ಪಾಡು ಮಾಡಿಕೊಳ್ಳುವುದು ಸೂಕ್ತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT