ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಹಂತಕರಿಗೆ ಪೊಲೀಸ್ ಗುಂಡೇಟು

18 ಬಾರಿ ಇರಿದು ರೌಡಿ ರಂಜಿತ್‌ನನ್ನು ಕೊಂದಿದ್ದ ಆರೋಪಿಗಳು ಸೆರೆ
Last Updated 7 ಜುಲೈ 2017, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಬರ್ಟ್‌ಸನ್ ರಸ್ತೆಯ ದನದ ದೊಡ್ಡಿಯಲ್ಲಿ ರಂಜಿತ್‌ (28) ಎಂಬ ರೌಡಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಆರೋಪಿಗಳ ಪೈಕಿ ಇಬ್ಬರಿಗೆ ಪೊಲೀಸರು ಕಾಚರಕನಹಳ್ಳಿ ಸಮೀಪದ ಸಂಡೆ ಮಾರ್ಕೆಟ್‌ನಲ್ಲಿ ಗುರುವಾರ ರಾತ್ರಿ ಗುಂಡು ಹೊಡೆದಿದ್ದಾರೆ.

ಗಾಯಗೊಂಡಿರುವ ಭದ್ರಾವತಿಯ ಸಂತೋಷ್ (19) ಹಾಗೂ ಯಾದಗಿರಿಯ ಶ್ಯಾಮ್ (19) ಬಾಣಸವಾಡಿಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರಮೋದ್ ತಲೆಮರೆಸಿಕೊಂಡಿದ್ದಾನೆ.

ಸಂತೋಷ್ ಹಾಗೂ ಶ್ಯಾಮ್, ತಮ್ಮನ್ನು ಹಿಡಿಯಲು ಬಂದ ಇಬ್ಬರು ಹೆಡ್‌ಕಾನ್‌ಸ್ಟೆಬಲ್‌ಗಳ ಮೇಲೆ  ಚಾಕುವಿನಿಂದ ಹಲ್ಲೆ ನಡೆಸಿದ್ದರು. ಆಗ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಹಾರಿಸಿದ್ದ ಗುಂಡುಗಳು, ಅವರ ಎಡಗಾಲನ್ನು ಹೊಕ್ಕಿದ್ದವು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಅವುಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಾಬಲ್ಯಕ್ಕೆ ಕಾದಾಟ: ನಂಜಪ್ಪ ಗಾರ್ಡನ್ ನಿವಾಸಿಯಾಗಿದ್ದ ರಂಜಿತ್, 2 ವರ್ಷಗಳಿಂದ ಫ್ರೇಜರ್‌ಟೌನ್ ಹಾಗೂ ಬಾಣಸವಾಡಿ ಠಾಣೆಗಳ ವ್ಯಾಪ್ತಿಯಲ್ಲಿ ಸ್ಥಳೀಯರನ್ನು ಹೆದರಿಸಿಕೊಂಡು ಬದುಕುತ್ತಿದ್ದ. ಪೊಲೀಸರು ರೌಡಿಪಟ್ಟಿ ತೆರೆದ ಬಳಿಕ, ಆತನ ಉಪಟಳ ಮತ್ತಷ್ಟು ಹೆಚ್ಚಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯವಾಗಿ ತನ್ನಷ್ಟೇ ಪ್ರಾಬಲ್ಯ ಹೊಂದಿದ್ದ ಪ್ರಮೋದ್ ಮೇಲೆ ರಂಜಿತ್‌ಗೆ ಮೊದಲಿನಿಂದಲೂ ಸಿಟ್ಟಿತ್ತು. ಇದೇ ವಿಚಾರವಾಗಿ ಪರಸ್ಪರರ ನಡುವೆ ಆಗಾಗ್ಗೆ ಕಿತ್ತಾಟ ನಡೆಯುತ್ತಲೇ ಇತ್ತು.

ಈ ನಡುವೆ ಪೋಷಕರಿಂದ ದೂರಾದ ರಂಜಿತ್, ಸಮೀಪದ ದನದ ದೊಡ್ಡಿಯಲ್ಲಿ ಉಳಿದುಕೊಳ್ಳುತ್ತಿದ್ದ. ಅದೇ ದೊಡ್ಡಿಯಲ್ಲಿ ಪ್ರಮೋದ್‌ನ ಹತ್ತು ಹಸುಗಳಿದ್ದವು. ಹಾಲು ಕರೆಯಲು ಅಲ್ಲಿಗೆ ಹೋದಾಗಲೆಲ್ಲ ಆತನ ಜತೆ ರಂಜಿತ್ ವಿನಾ ಕಾರಣ ಜಗಳ ತೆಗೆಯುತ್ತಿದ್ದ. ಹೀಗೆ, ತಿಂಗಳಲ್ಲಿ ಆತ, 2 ಬಾರಿ ಪ್ರಮೋದ್‌ಗೆ ಹೊಡೆದಿದ್ದ ಎನ್ನಲಾಗಿದೆ.

ಹತ್ಯೆಗೆ ಸಂಚು: ತನ್ನ ಮೇಲೆ ಹಲ್ಲೆ ನಡೆಸಿದ ರಂಜಿತ್‌ನನ್ನು ಮುಗಿಸಲು ನಿರ್ಧರಿಸಿದ ಪ್ರಮೋದ್, ಗೆಳೆಯರಾದ ಸಂತೋಷ್ ಹಾಗೂ ಶ್ಯಾಮ್ ಅವರ ನೆರವು ಕೇಳಿದ್ದ. ಸಂಚು ರೂಪಿಸಿಕೊಂಡು ಬುಧವಾರ ರಾತ್ರಿ 11.30ರ ಸುಮಾರಿಗೆ ದೊಡ್ಡಿಗೆ ನುಗ್ಗಿದ್ದ ಮೂವರೂ, ಚಾಕುವಿನಿಂದ 18 ಕಡೆ ಇರಿದು ರಂಜಿತ್‌ನನ್ನು ಕೊಂದು ಪರಾರಿಯಾಗಿದ್ದರು.

ಪಿಸ್ತೂಲ್ ತೋರಿಸಿದರು: ‘ಸ್ಥಳೀಯರ ವಿಚಾರಣೆಯಿಂದ ಹಂತಕರು ಯಾರೆಂಬುದು ಗೊತ್ತಾಯಿತು. ಅವರ ಪತ್ತೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ‘ಟವರ್ ಡಂಪ್’ ತನಿಖೆ ನಡೆಸಿದಾಗ, ಆರೋಪಿಗಳ ಮೊಬೈಲ್‌ಗಳು ಪೂರ್ವ ವಿಭಾಗದ ವ್ಯಾಪ್ತಿಯ ಟವರ್‌ಗಳಿಂದಲೇ ಸಂಪರ್ಕ ಪಡೆಯುತ್ತಿರುವುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ಕಾರ್ಯಾಚರಣೆಯನ್ನು ವಿವರಿಸಿದರು.

‘ಸಂತೋಷ್ ಹಾಗೂ ಶ್ಯಾಮ್ ಬೈಕ್‌ನಲ್ಲಿ ಹೆಣ್ಣೂರಿನ ಮುಸ್ಲಿಂ ಕಾಲೊನಿಗೆ ಬರುತ್ತಿರುವ ವಿಷಯ ತಿಳಿಯಿತು. ಅಲ್ಲಿ ಒಂದು ತಂಡ ನಾಕಾಬಂದಿ ಹಾಕಿಕೊಂಡು ತಡೆಯಲು ಮುಂದಾಯಿತು. ಆಗ ಹೆಡ್‌ಕಾನ್‌ಸ್ಟೆಬಲ್ ಶ್ರೀನಿವಾಸ್ ಅವರ ಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಗಳು, ಮಿಂಚಿನ ವೇಗದಲ್ಲಿ ಬೈಕ್ ಓಡಿಸಿಕೊಂಡು ಕಾಚರಕನಹಳ್ಳಿ ಕಡೆಗೆ ಹೋದರು.’

‘ತಕ್ಷಣ ಸಿಬ್ಬಂದಿಯು ಆ ಭಾಗದಲ್ಲಿದ್ದ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಅವರ ತಂಡಕ್ಕೆ ಮಾಹಿತಿ ರವಾನಿಸಿತು. ಕೂಡಲೇ ಅವರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡರು. ಪೊಲೀಸರನ್ನು ನೋಡುತ್ತಿದ್ದಂತೆಯೇ ಅವರಿಬ್ಬರೂ ಬಲಕ್ಕೆ ತಿರುವು ತೆಗೆದುಕೊಳ್ಳಲು ಹೋಗಿ ಸಂಡೆ ಮಾರ್ಕೆಟ್ ಬಳಿ ಬೈಕ್‌ನಿಂದ ಬಿದ್ದರು.’
‘ಈ ವೇಳೆ ಹೆಡ್‌ಕಾನ್‌ಸ್ಟೆಬಲ್ ಶಶಿಧರ್ ಅವರ ಬಲಗೈಗೆ ಚಾಕುವಿನಿಂದ ಹೊಡೆದ ಅವರು, ಪೊಲೀಸರತ್ತ ಪಿಸ್ತೂಲ್ ತೋರಿಸಿ ಬೆದರಿಸಿದರು.’

‘ಎರಡು ಸುತ್ತು  ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ ಇನ್‌ಸ್ಪೆಕ್ಟರ್, ಅವರು ಮತ್ತೆ ದಾಳಿಗೆ ಯತ್ನಿಸಿದಾಗ ಇಬ್ಬರಿಗೂ ಕಾಲಿಗೆ ಗುಂಡು ಹೊಡೆದರು. ರಕ್ತಸ್ರಾವವಾಗಿ ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಆರೋಪಿಗಳ ಪೂರ್ವಾಪರ
ನಂದಿನಿಲೇಔಟ್‌ನಲ್ಲಿ ನೆಲೆಸಿದ್ದ ಸಂತೋಷ್, ಶೇಷಾದ್ರಿಪುರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ. ಶ್ಯಾಮ್, ರಾಜಾಜಿನಗರ ನಿವಾಸಿಯಾಗಿದ್ದು ಕಾರು ಚಾಲಕನಾಗಿದ್ದಾನೆ. ಪ್ರಮೋದ್ ಹಾಲು ವ್ಯಾಪಾರದ ಜತೆಗೆ, ನಾಯಿ ಮರಿಗಳನ್ನು ಮಾರಾಟ ಮಾಡುತ್ತಾನೆ.

‘ಬೆಂಕಿ ಪೊಟ್ಟಣ ಕೊಡಲಿಲ್ಲ’
‘ನಾನು, ಶ್ಯಾಮ್ ಹಾಗೂ ಪ್ರಮೋದ್ ರಾತ್ರಿ ರಾಬರ್ಟ್‌ಸನ್ ರಸ್ತೆಗೆ ಹೋಗಿದ್ದೆವು. ಸಿಗರೇಟು ಹಚ್ಚಿಕೊಳ್ಳಲು ಬೆಂಕಿ ಪೊಟ್ಟಣ ಇರಲಿಲ್ಲ. ಹೀಗಾಗಿ, ಪೊಟ್ಟಣ ಕೇಳಲು ರಂಜಿತ್‌ ಬಳಿ ಹೋದೆವು. ಏಕಾಏಕಿ ನಮ್ಮ ಜತೆ ಜಗಳ ಪ್ರಾರಂಭಿಸಿದ ಆತ, ಪ್ರಮೋದ್‌ನ ಕೆನ್ನೆಗೆ ಹೊಡೆದ. ಕೋಪದ ಭರದಲ್ಲಿ ಎಲ್ಲರೂ ಇರಿದು ಕೊಂದೆವು’ ಎಂದು ಸಂತೋಷ್ ಮೊದಲು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು. ಬಳಿಕ ಶ್ಯಾಮ್‌ನನ್ನು ವಿಚಾರಣೆ ನೆಸಿದಾಗ, ಪ್ರಮೋದ್‌ ಮೇಲೆ ನಡೆದ ಹಲ್ಲೆಗೆ ಪ್ರತೀಕಾರವಾಗಿ ರಂಜಿತ್‌ನನ್ನು ಹತ್ಯೆಗೈದಿದ್ದಾಗಿ ತಪ್ಪೊಪ್ಪಿಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT