ಬುಧವಾರ, ಡಿಸೆಂಬರ್ 11, 2019
19 °C
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಯೋಜನೆ

ಪರ್ಯಾಯ ರಸ್ತೆ ಕಾಮಗಾರಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ಯಾಯ ರಸ್ತೆ ಕಾಮಗಾರಿ ಸ್ಥಗಿತ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ–7ಕ್ಕೆ (ಬಳ್ಳಾರಿ ರಸ್ತೆ)  ಪರ್ಯಾಯವಾಗಿ ನಿರ್ಮಿಸುತ್ತಿದ್ದ ರಸ್ತೆಯ ಕಾಮಗಾರಿ ಕೆಲವು ದಿನಗಳಿಂದ ಸ್ಥಗಿತಗೊಂಡಿದೆ.ಫೆಬ್ರುವರಿಯಲ್ಲಿ ಏರ್‌ಶೋ ವೇಳೆ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಕೆಲವೇ ದಿನಗಳಲ್ಲಿ ಕಾಮಗಾರಿ ನೆಪದಲ್ಲಿ ಮುಚ್ಚಲಾಗಿತ್ತು. ಇದರಿಂದ ಆ ರಸ್ತೆಯಲ್ಲಿ ಸಂಚರಿಸಿದ್ದ ವಾಹನಗಳೆಲ್ಲ ಮತ್ತೆ ಬಳ್ಳಾರಿ ರಸ್ತೆ ಮೂಲಕವೇ ವಿಮಾನ ನಿಲ್ದಾಣಕ್ಕೆ ಹೋಗಲು ಆರಂಭಿಸಿದ್ದವು.ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪ್ರಕಟಿಸಿದ್ದರು. ಕಾಮಗಾರಿ ಮುಗಿಯಲು ಇನ್ನೂ ನಾಲ್ಕು ತಿಂಗಳು ಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.ಈ ಮಾರ್ಗದಲ್ಲಿ ಅರೆಬರೆ ಕಾಮಗಾರಿ ನಡೆದಿದೆ. ರಸ್ತೆಯನ್ನು ಕಿತ್ತು ಹಾಕಲಾಗಿದೆ. ವಾಹನಗಳು ಹೋಗದಂತೆ ಬ್ಯಾರಿಕೇಡ್‌  ಹಾಕಲಾಗಿದೆ.‘ಈ ರಸ್ತೆ ಟ್ಯಾಕ್ಸಿ ಚಾಲಕರಿಗೆ ಹೆಚ್ಚು ಅನುಕೂಲವಾಗಿತ್ತು. ಕಡಿಮೆ ಸಮಯದಲ್ಲಿ ದಟ್ಟಣೆ ಕಿರಿಕಿರಿ ಇಲ್ಲದೆ ವಿಮಾನ ನಿಲ್ದಾಣ ತಲುಪಬಹುದಿತ್ತು. ಏಕಾಏಕಿ ಈ ರಸ್ತೆಯನ್ನು ಬಂದ್‌ ಮಾಡಿದ್ದರಿಂದ ತೊಂದರೆ ಉಂಟಾಗಿದೆ’ ಎಂದು ಚಾಲಕ ರವಿಕುಮಾರ್‌ ಅಳಲು ತೋಡಿಕೊಂಡರು.ತಂತಿ ಸ್ಥಳಾಂತರ, ಡಾಂಬರೀಕರಣ: ‘ಏರ್‌ಶೋ ದಿನ ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ಈ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಬಳಿಕ ಆ ಮಾರ್ಗದಲ್ಲಿ ವಿದ್ಯುತ್ ತಂತಿ ಸ್ಥಳಾಂತರ ಹಾಗೂ ಡಾಂಬರು ಹಾಕುವ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಕೆಪಿಟಿಸಿಎಲ್‌ ಸದ್ಯದಲ್ಲೇ ತಂತಿಗಳನ್ನು ಸ್ಥಳಾಂತರ ಮಾಡಲಿದೆ. ಬಳಿಕ ಕಾಮಗಾರಿ ವೇಗ ಪಡೆದುಕೊಳ್ಳಲಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.‘ಈ ಕಾರ್ಯಕ್ಕೆ ನಾವು ಅಂದಾಜು ವೆಚ್ಚವನ್ನು ಸಿದ್ಧಪಡಿಸುತ್ತಿದ್ದೇವೆ. ಶೀಘ್ರದಲ್ಲಿ ಅದನ್ನು ಬಿಬಿಎಂಪಿಗೆ ನೀಡಲಿದ್ದೇವೆ. ಪಾಲಿಕೆ ಹಣ ಪಾವತಿ ಮಾಡಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಒಂದೆರಡು ತಿಂಗಳಲ್ಲಿ ಈ ಕಾರ್ಯ ಮುಗಿಯಲಿದೆ’ ಎಂದು ಕೆಪಿಟಿಸಿಎಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.ಪ್ರತಿದಿನ 20 ಸಾವಿರ ಟ್ಯಾಕ್ಸಿ ಓಡಾಟ: ‘ನಗರ ಹಾಗೂ ನಿಲ್ದಾಣದ ನಡುವೆ ಪ್ರತಿದಿನ 20 ಸಾವಿರ ಟ್ಯಾಕ್ಸಿಗಳು ಓಡಾಡುತ್ತವೆ. ಇವೆಲ್ಲವೂ ಸದ್ಯ ಬಳ್ಳಾರಿ ರಸ್ತೆಯ ಮೂಲಕ ನಿಲ್ದಾಣಕ್ಕೆ ಹೋಗುತ್ತಿವೆ. ಪ್ರತಿ ಬಾರಿಯೂ ಟೋಲ್‌ನಲ್ಲಿ ₹ 125 ಶುಲ್ಕ ಪಾವತಿಸಬೇಕಿದೆ. ಪರ್ಯಾಯ ಮಾರ್ಗವನ್ನು ಬಳಸಿದರೆ ಶುಲ್ಕ ಪಾವತಿಸುವ ಪ್ರಮೇಯವೇ ಇರುವುದಿಲ್ಲ’ ಎಂದು ವಾಹನ ಚಾಲಕ ಅನಿಲ್‌  ತಿಳಿಸುತ್ತಾರೆ.‘ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಎಲ್ಲ ಇಲಾಖೆಯವರು ಒಗ್ಗಟ್ಟಿನಿಂದ ಕೆಲಸ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಒತ್ತಾಯಿಸುತ್ತಾರೆ. 

ಪ್ರತಿಕ್ರಿಯಿಸಿ (+)