ಶನಿವಾರ, ಡಿಸೆಂಬರ್ 14, 2019
21 °C

ಕಾಲೇಜು ಆರಂಭವಾದರೂ ತೆರೆಯದ ಹಾಸ್ಟೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜು ಆರಂಭವಾದರೂ ತೆರೆಯದ ಹಾಸ್ಟೆಲ್

ಹೊಸದುರ್ಗ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿನಿಲಯವು ಕಾಲೇಜು ಆರಂಭವಾಗಿ ಒಂದು ವಾರ ಕಳೆದರೂ ತೆರದಿಲ್ಲ. ‘ಜೂನ್‌ನಲ್ಲಿಯೇ ಪಿಯು, ಡಿಪ್ಲೊಮಾ, ಐಟಿಐ, ಪದವಿ ಕಾಲೇಜು ತರಗತಿಗಳು ಆರಂಭವಾಗಿವೆ.

ಒಂದು ವಾರದಿಂದ ದೂರದ ಊರುಗಳಿಂದ ಕಾಲೇಜಿಗೆ ಬಂದು ಹೋಗುತ್ತಿದ್ದೇವೆ. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರಲು ಆಗುತ್ತಿಲ್ಲ. ಬೆಳಿಗ್ಗೆ, ಸಂಜೆ ಕಾಲೇಜು ಮತ್ತು ಮನೆಗೆ ಹೋಗಿ ಬರುತ್ತಿರುವುದರಿಂದ ದಣಿವು ಹೆಚ್ಚಾಗುತ್ತಿದೆ’ ಎಂದು ಪಿಯು ವಿದ್ಯಾರ್ಥಿಗಳಾದ ರಮೇಶ್‌, ಕಿರಣ್‌, ಪವನ್‌ ಬೇಸರ ವ್ಯಕ್ತಪಡಿಸುತ್ತಾರೆ.

‘ಸುಮಾರು ಹತ್ತು ದಿನಗಳ ಹಿಂದೆ ಬಂದ್‌ ಮಾಡಿರುವ ಹಾಸ್ಟೆಲ್‌ನ ಮುಖ್ಯ ಬಾಗಿಲಿಗಾಗಲೀ  ಒಳಗಿನ ಕೊಠಡಿ ಬಾಗಿಲಿಗಾಗಲೀ ಬೀಗ ಹಾಕಿಲ್ಲ. ದೂಳು ತುಂಬುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿರುವ ಕಟ್ಟಡ ಪಾಳುಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂದಿರುವ ವಿವಿಧ ಸಾಮಗ್ರಿಗಳನ್ನು ರಜೆ ಸಮಯದಲ್ಲಿ ರಕ್ಷಿಸುವವರು ಯಾರು’ ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.

ವಾರ್ಡನ್‌ ಇಲ್ಲ: ‘ಇದೇ ಕಟ್ಟಡದಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಎರಡು ವಿದ್ಯಾರ್ಥಿ ನಿಲಯಗಳನ್ನು (ಎ ಮತ್ತು ಬಿ ವಿಭಾಗ) ನಡೆಸುತ್ತಿದ್ದೆವು. ಇಲ್ಲಿನ ಉಸ್ತುವಾರಿ ನೋಡಿಕೊಳ್ಳಲು ಕಾಯಂ ವಾರ್ಡನ್‌ ಇಲ್ಲ. ಎರಡು ವರ್ಷಗಳಿಂದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದ ಪಾಲಕರಾದ ಮೂಡಲಗಿರಿಯಪ್ಪ ಪ್ರಭಾರರಾಗಿ ನೋಡಿ

ಕೊಳ್ಳುತ್ತಿದ್ದರು.

ಈಗ ವಿದ್ಯಾರ್ಥಿಗಳ ಬಯೊಮೆಟ್ರಿಕ್‌ ಹಾಜರಾತಿ ಕಡ್ಡಾಯ. ಆದ್ದರಿಂದ ಎರಡು ಹಾಸ್ಟೆಲ್‌ಗಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ 2017–18ನೇ ಸಾಲಿಗೆ ವಿದ್ಯಾರ್ಥಿನಿಲಯ ಆರಂಭಿಸುವುದರ ಒಳಗೆ ಕಾಯಂ ವಾರ್ಡನ್‌ ಒಬ್ಬರನ್ನು ನೇಮಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ  ಮನವಿ ಮಾಡಲಾಗಿದೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಬಡಿಗೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿನ ಸಮಸ್ಯೆ: ವಿದ್ಯಾರ್ಥಿನಿಲಯದಲ್ಲಿದ್ದ ಕೊರೆಸಿದ್ದ ಎರಡು ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಟ್ಯಾಂಕರ್‌ ಮೂಲಕ ನೀರು ಒದಗಿಸುವಂತೆ ಸ್ಥಳೀಯ ಪುರಸಭೆ ಹಾಗೂ ತಾಲ್ಲೂಕು ಪಂಚಾಯ್ತಿ ತಿಳಿಸಿದ್ದರೂ ಯಾರೂ ಸ್ಪಂದಿಸುತ್ತಿಲ್ಲ.

ಪುರಸಭೆಯವರು ವಾರಕ್ಕೊಂದು ಟ್ಯಾಂಕರ್‌ ನೀರು ಕೊಡುವುದಾಗಿ ಹೇಳುತ್ತಾರೆ. ಆದರೆ, 200ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗೆ ದಿನಕ್ಕೆ ಒಂದು ಟ್ಯಾಂಕರ್‌ ನೀರು ಸಾಕಾಗುವುದಿಲ್ಲ. ದೊಡ್ಡ ಮಕ್ಕಳಿಗೆ ಕುಡಿಯುವ ನೀರು ಒದಗಿಸಲು ಹರಸಾಹಸ ಮಾಡುವಂತಾಗಿದೆ ಎಂದು ಬಡಿಗೇರ್ ಹೇಳಿದರು.

ಪರಿಸ್ಥಿತಿ ಹೀಗಾದರೆ ವಿದ್ಯಾರ್ಥಿನಿಲಯ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಆದಷ್ಟು ಬೇಗ ಭೂಗರ್ಭಶಾಸ್ತ್ರಜ್ಞರಿಂದ ನೀರಿನ ಮೂಲ ಪತ್ತೆಹಚ್ಚಿ ಕೊಳವೆಬಾವಿ ಕೊರೆಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ ಅವರು.

ಎರಡು ತಿಂಗಳು ರಜೆ

ಪದವಿ ಪರೀಕ್ಷೆ ಮುಗಿದ ನಂತರ ಪ್ರತಿವರ್ಷ ಕನಿಷ್ಠ ಎರಡು ವಾರ ಹಾಸ್ಟೆಲ್‌ ರಜೆ ನೀಡಲಾಗುತ್ತದೆ. ಈ ಬಾರಿ ಕಳೆದ ಜೂನ್‌ 27ರಿಂದ ರಜೆ ಮಾಡಲಾಗಿದೆ. 2017–18ನೇ ಸಾಲಿನ ವಿದ್ಯಾರ್ಥಿ ನಿಲಯ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿ ಹಾಕುತ್ತಿದ್ದಾರೆ. ಐದಾರು ದಿನದ ಒಳಗೆ ಹಾಸ್ಟೆಲ್‌ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ  ವಿ.ಬಡಿಗೇರ್‌ ಹೇಳಿದ್ದಾರೆ.

* *

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತವರು ಜಿಲ್ಲೆಗೆ ಸೇರಿದ ತಾಲ್ಲೂಕಿನ ವಸತಿ ನಿಲಯವು ವಾರ್ಡನ್‌, ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವುದು ಬೇಸರದ ಸಂಗತಿ.

ಹೆಸರು ಹೇಳಲು ಬಯಸದ ಹಿರಿಯ ನಾಗರಿಕ

 

ಪ್ರತಿಕ್ರಿಯಿಸಿ (+)