ಭಾನುವಾರ, ಡಿಸೆಂಬರ್ 8, 2019
21 °C

ಉನಾದಲ್ಲಿ ದಲಿತರ ಮೇಲಿನ ಹಲ್ಲೆಗೆ ವರ್ಷ: ಸಂತ್ರಸ್ತರಿಗೆ ಇನ್ನೂ ದೊರೆತಿಲ್ಲ ನ್ಯಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉನಾದಲ್ಲಿ ದಲಿತರ ಮೇಲಿನ ಹಲ್ಲೆಗೆ ವರ್ಷ: ಸಂತ್ರಸ್ತರಿಗೆ ಇನ್ನೂ ದೊರೆತಿಲ್ಲ ನ್ಯಾಯ

ಅಹಮದಾಬಾದ್: ಗುಜರಾತ್‌ನ ಉನಾ ತಾಲ್ಲೂಕಿನಲ್ಲಿ ಗೋರಕ್ಷಕರು ದಲಿತರ ಮೇಲೆ ನಡೆಸಿ ವರ್ಷವಾಗುತ್ತಾ ಬಂದರೂ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರಕಿಸಿಕೊಡಲಾಗಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ಗೋಹತ್ಯೆ ಮಾಡಿದ್ದಾರೆಂದು ಆರೋಪಿಸಿ ಕಳೆದ ವರ್ಷ ಜುಲೈ 11ರಂದು ಉನಾದ ಸರ್‌ವಯ್ಯಾ ದಲಿತ ಕುಟುಂಬದ ಸದಸ್ಯರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ್ದರು. ಅಲ್ಲದೆ, ಅವರನ್ನು ಅರೆನಗ್ನಗೊಳಿಸಿ 25 ಕಿಲೋಮೀಟರ್ ಮೆರವಣಿಗೆ ಮಾಡಿಸಿದ್ದರು. ಘಟನೆ ದೇಶದಾದ್ಯಂತ ಸಂಚಲನ ಮೂಡಿಸಿದ್ದಲ್ಲದೆ, ಗುಜರಾತಿನಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

ಹಲ್ಲೆ ವಿರುದ್ಧ 10 ದಿನ ಭಾರಿ ಪ್ರತಿಭಟನೆ ನಡೆಸಲಾಗಿತ್ತಲ್ಲದೆ, ‘ದಲಿತ ಆಸ್ಮಿತ ಯಾತ್ರೆ’ ನಡೆಸಲಾಗಿತ್ತು. ಆಗ ಅಂದಿನ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಅವರು ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿದ್ದರ ಜತೆಗೆ, ಸಂತ್ರಸ್ತರಿಗೆ ₹ 4 ಲಕ್ಷ ಪರಿಹಾರ ಘೋಷಿಸಿದ್ದರು. ಆದರೆ, ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರೆತಿಲ್ಲ ಎಂದು ದಲಿತ ಮುಖಂಡರು ಅಲವತ್ತುಕೊಂಡಿದ್ದಾರೆ.

ಜುಲೈ 12ರಿಂದ ಬೃಹತ್ ಪ್ರತಿಭಟನೆ: ಘಟನೆಗೆ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಜುಲೈ 12ರಿಂದ 18ರವರೆಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ದಲಿತ ಮುಖಂಡ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ. ‘ಆಜಾದಿ ಕೂಚ್’ ಎಂಬ ಹೆಸರಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

‘ದಲಿತ ಆಸ್ಮಿತ ಯಾತ್ರೆಯನ್ನು (ಉನಾದಲ್ಲಿ ನಡೆದ ದಲಿತರ ಮೇಲಿನ ಹಲ್ಲೆ ಪ್ರತಿಭಟಿಸಿ ನಡೆಸಲಾಗಿದ್ದ 10 ದಿನಗಳ ಯಾತ್ರೆ) ಮತ್ತೆ ನೆನಪಿಸಬೇಕಿದೆ. ಇದು ರಾಜ್ಯದಲ್ಲಿ ದಲಿತ ಚಳವಳಿಯನ್ನು ಪುನಶ್ಚೇತನಗೊಳಿಸಲಿದೆ’ ಎಂದು ಮೇವಾನಿ ತಿಳಿಸಿದ್ದಾರೆ.

ಗಮನಸೆಳೆದ ವಿಡಿಯೊ: ಉನಾ ಘಟನೆ ನಡೆದು ಒಂದು ವರ್ಷವಾಗುತ್ತಿರುವ ನಡುವೆಯೇ ಘಟನೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಮನಸೆಳೆದಿದೆ. ಮತ್ತೆ ಪ್ರತಿಭಟನೆಯ ಕಿಚ್ಚು ಹೊತ್ತಿಸಿದೆ ಎನ್ನಲಾಗಿದೆ.

ಕಳೆದ ವರ್ಷ ನಡೆದಿದ್ದೇನು?: ಹಸುವನ್ನು ಕೊಂದು ಚರ್ಮ ಸುಲಿದಿದ್ದಾರೆಂಬ ಆರೋಪದ ಮೇಲೆ ಸರ್‌ವಯ್ಯಾ ದಲಿತ ಕುಟುಂಬದ ಏಳು ಮಂದಿ ಸದಸ್ಯರ ಮೇಲೆ ಮೇಲೆ ಗೋರಕ್ಷಕರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಬಾಲು, ಇವರ ಪತ್ನಿ ಕುಲ್ವಾರ್, ಮಕ್ಕಳಾದ ವಸ್‌ರಾಂ , ರಮೇಶ್, ಸಂಬಂಧಿಕರಾದ ಅಶೋಕ್ ಹಾಗೂ ಬೇಚಾರ್ ಹಲ್ಲೆಗೊಳಗಾಗಿದ್ದರು. ಇವರನ್ನು ರಕ್ಷಿಸಲು ಮುಂದಾಗಿದ್ದ ದೇವಋಷಿ ಭಾನು ಎಂಬುವವರ ಮೇಲೂ ಹಲ್ಲೆ ನಡೆಸಲಾಗಿತ್ತು.

ನ್ಯಾಯ ಮರೀಚಿಕೆ: ‘60 ದಿನಗಳ ಒಳಗಾಗಿ ಪ್ರಕರಣ ದಾಖಲಿಸುವುದಾಗಿ ಅಂದು ಸರ್ಕಾರ ಭರವಸೆ ನೀಡಿತ್ತು. ಘಟನೆ ನಡೆದ ವರ್ಷವಾಗಿದೆ. 12 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇತರ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಶೀಘ್ರ ಬಿಡುಗಡೆಯಾಗಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹೇಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಡಲು ಸಾಧ್ಯ’ ಎಂದು ದಲಿತ ಚಳವಳಿಗಾರ್ತಿ, ಗುಜರಾಥ್ ದಲಿತ ಸಂಘಟನಾದ ನೇತೃತ್ವ ವಹಿಸಿರುವ ಜಯಂತಿ ಮಕಡಿಯಾ ಪ್ರಶ್ನಿಸಿದ್ದಾರೆ. ಉನಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)