ಶುಕ್ರವಾರ, ಡಿಸೆಂಬರ್ 6, 2019
18 °C

ದೇವಸ್ಥಾನದ ಆಸ್ತಿ ರಕ್ಷಣೆಯಲ್ಲಿ ನಿರಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಸ್ಥಾನದ ಆಸ್ತಿ ರಕ್ಷಣೆಯಲ್ಲಿ ನಿರಾಸಕ್ತಿ

ಹರಿಹರ: ಎಂಟು ಶತಮಾನಗಳಷ್ಟು ಇತಿಹಾಸವಿರುವ ಹರಿಹರೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ಸರ್ಕಾರದ ನೀತಿ–ನಿಯಮಾವಳಿಗಳೇ ಅಡ್ಡಿ ಯಾಗಿರುವುದು ಆಸ್ತಿಕರಲ್ಲಿ ಬೇಸರಮೂಡಿಸಿದೆ.

ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ಶಿವ ಮತ್ತು ವಿಷ್ಣು ಸಂಗಮ ಕ್ಷೇತ್ರವಾದ ಹರಿಹರ, ಸಮನ್ವಯ ಹಾಗೂ ಸಹಿಷ್ಣುತೆ ನಾಡಿನಲ್ಲಿ ಪ್ರಖ್ಯಾತವಾಗಿದೆ. ವರ್ಷಕ್ಕೊಮ್ಮೆ ಐದು ದಿನಗಳ ಕಾಲ ಹರಿಹರೇಶ್ವರನ ಬ್ರಹ್ಮ ರಥೋತ್ಸವ ನಡೆಯುತ್ತದೆ. ಬಾಕಿ ದಿನಗಳಲ್ಲಿ ರಥದ ನಿಲುಗಡೆಗಾಗಿ ದೇವಸ್ಥಾನ ರಸ್ತೆಯಲ್ಲಿ ರಥದ ಮನೆ ನಿರ್ಮಾಣಗೊಂಡಿದೆ.

ಇದರ ಸಮೀಪದ ಹಳೆ ಕಚೇರಿ ರಸ್ತೆಯಲ್ಲಿ ರಥದ ಪರಿಕರಗಳನ್ನು ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿ ವಸ್ತ್ರ, ವಸ್ತುಗಳನ್ನು ಸಂಗ್ರಹಿಸಿಡಲು ಮನೆಯೊಂದನ್ನು ನಿರ್ಮಿಸಲಾಗಿತ್ತು. ಇವೆರಡೂ ದೇವಸ್ಥಾನ ಹಾಗೂ ಮುಜರಾಯಿ ಇಲಾಖೆಯ ಒಡೆತನದಲ್ಲಿವೆ.

ಈ ಮನೆ ಶಿಥಿಲಗೊಂಡಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ರಥದ ಮನೆಯ ಹಿಂಭಾಗದಲ್ಲಿ ಕೊಠಡಿ ಯೊಂದನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿತ್ತು. ಆ ಮಳಿಗೆಯೂ ಶಿಥಿಲವಾಗಿದ್ದ ಕಾರಣ, ಬಾಡಿಗೆದಾರರು ಅದನ್ನು ತೊರೆದಿದ್ದಾರೆ. ದೇವಸ್ಥಾನದಿಂದ ಬರುವ  ಲಕ್ಷಾಂತರ ರೂಪಾಯಿ ಹಣ ಸರ್ಕಾರಿ ಖಜಾನೆಯಲ್ಲಿದೆ.

ವಿಪರ್ಯಾಸವೆಂದರೆ ಸುಣ್ಣಬಣ್ಣ ಹಾಗೂ ನಿರ್ವಹಣೆಯಿಲ್ಲದೆ ಈ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡು ಕುಸಿದು ಬಿದ್ದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ರಥದ ಮನೆ ಹಿಂಭಾಗದ ಮಳಿಗೆಯ ಗೋಡೆ ಭಾಗಶಃ ಕುಸಿದು ಬಿದ್ದಿದ್ದು, ಮಲಮೂತ್ರ ವಿಸರ್ಜನೆ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಆ ಜಾಗ ಒತ್ತುವರಿಯಾಗಿ ಪರಭಾರೆಯಾಗುವ ಆತಂಕವೂ ಇದೆ.

ದೇವಸ್ಥಾನ ಸಮಿತಿ ಪದಾಧಿಕಾರಿಗಳು ಶಿಥಿಲಗೊಂಡ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡಕ್ಕೆ ಅನುಮತಿ ಕೋರಿ  ಭಾರತೀಯ ಸರ್ವೇಕ್ಷಣ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೂ ಕಾನೂನು ತೊಡಕಿದೆ ಎಂದು ಹೇಳುತ್ತಾ ಇಲಾಖೆ ಕಾಲ ತಳ್ಳುತ್ತಿರುವುದರಿಂದ ಹರಿಹರೇಶ್ವರ ಸ್ವಾಮಿ ಭಕ್ತರಿಗೆ ಭ್ರಮನಿರಸನವಾಗಿದೆ.

ಅಡ್ಡಿ ಆತಂಕಗಳು:  ಹರಿಹರೇಶ್ವರ ದೇವಸ್ಥಾನವು ಭಾರತೀಯ ಸರ್ವೇಕ್ಷಣ ಇಲಾಖೆಯ ನಿರ್ವಹಣೆಯಲ್ಲಿದೆ. ಇಲಾಖೆಯ ನಿಯಮಗಳ ಪ್ರಕಾರ ದೇವಸ್ಥಾನದ 100 ಮೀಟರ್‌ ಸುತ್ತಳತೆ ಪ್ರದೇಶದಲ್ಲಿ ಯಾವುದೇ ನೂತನ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು ಸಾಧ್ಯವಿಲ್ಲ.

100ರಿಂದ 200 ಮೀಟರ್‌  ಸುತ್ತಳತೆ ಪ್ರದೇಶದಲ್ಲಿ ಷರತ್ತುಬದ್ಧ ಪರವಾನಗಿ ದೊರೆಯುತ್ತಿದೆ. ದೇವಸ್ಥಾನದ ಮಾಲೀಕತ್ವದಲ್ಲಿರುವ ಈ ಎರಡೂ ಕಟ್ಟಡಗಳು 100ರಿಂದ 200 ಮೀಟರ್‌ ವ್ಯಾಪ್ತಿಯಲ್ಲಿವೆ. ಆದರೂ ದುರಸ್ತಿ ಹಾಗೂ ನವೀಕರಣಕ್ಕೆ ಪರವಾನಗಿ ನೀಡಿಲ್ಲ. ಹರಿಹರೇಶ್ವರ ದೇವಸ್ಥಾನದ 100ರಿಂದ 200ಮೀ. ಸುತ್ತಳತೆ ಪ್ರದೇಶದಲ್ಲಿ ಧಾರ್ಮಿಕ ಕಟ್ಟಡಗಳ ನವೀಕರಣ ಸೇರಿದಂತೆ ಹಲವಾರು ಖಾಸಗಿ ಕಟ್ಟಡಗಳ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಇತರೆ ಕಾಮಗಾರಿಗಳಿಗೆ ಅನ್ವಯವಾಗದ ಕಾನೂನು ಕೇವಲ ಹರಿಹರೇಶ್ವರ ದೇವಸ್ಥಾನದ ಆಸ್ತಿಗಳಿಗೆ ಏಕೆ ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

‘ಸರ್ಕಾರದ ಜವಾಬ್ದಾರಿ’

ಶತಮಾನಗಳ ಇತಿಹಾಸವಿರುವ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡಗಳ ರಕ್ಷಣೆ ಸರ್ಕಾರದ ಜವಾಬ್ದಾರಿ. ಶಿಥಿಲಗೊಂಡ ಈ ಕಟ್ಟಡಗಳನ್ನು ನವೀಕರಿಸಿ, ಪ್ರವಾಸಿಗೃಹ ನಿರ್ಮಿಸುವುದರಿಂದ ದೇವಸ್ಥಾನ ವೀಕ್ಷಣೆಗೆ  ಬರುವ ಪ್ರವಾಸಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ನಗರಕ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ.

-ಮಂಜುನಾಥ ಅಗಡಿ, ಹರಿಹರ

* * 

ಕಂದಾಯ ನಿರೀಕ್ಷರು ದೇವಸ್ಥಾನದ ಆಡಳಿತಾಧಿಕಾರಿಯಾಗಿರುತ್ತಾರೆ. ಅವರಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು

ಜಿ.ನಳಿನಾ,

ತಹಶೀಲ್ದಾರ್, ಹರಿಹರ

 

ಪ್ರತಿಕ್ರಿಯಿಸಿ (+)