ಶುಕ್ರವಾರ, ಡಿಸೆಂಬರ್ 13, 2019
17 °C

ಬೀದಿಬದಿ ತಿನಿಸುಗಳಿಗೆ ಭಾರಿ ಬೇಡಿಕೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬೀದಿಬದಿ ತಿನಿಸುಗಳಿಗೆ ಭಾರಿ ಬೇಡಿಕೆ

ಶಿವಮೊಗ್ಗ: ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ನಂತರ ಫುಟ್‌ಪಾತ್‌, ಸಣ್ಣ ಕ್ಯಾಂಟೀನ್‌ಗಳ ತಿಂಡಿ–ತಿನಿಸುಗಳಿಗೆ ನಾಗರಿಕರು ಮುಗಿಬೀಳುತ್ತಿದ್ದಾರೆ. ಹವಾನಿಯಂತ್ರಿತ ಹೋಟೆಲ್‌ ಗಳು ಗ್ರಾಹಕರಿಲ್ಲದೇ ಭಣಗುಡುತ್ತಿವೆ.

₹25 ಲಕ್ಷದ ಒಳಗೆ ವಾರ್ಷಿಕ ವಹಿವಾಟು ನಡೆಸುವ ಹೋಟೆಲ್‌ಗಳಿಗೆ ಯಾವುದೇ ತೆರಿಗೆ ಇಲ್ಲ. ₹ 20 ಲಕ್ಷದಿಂದ ₹ 75 ಲಕ್ಷದವರೆಗಿನ ವಹಿ ವಾಟಿಗೆ ₹ 5 ಲಕ್ಷ, ₹ 75 ಲಕ್ಷ  ದಾಟಿ ದರೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತದೆ. ವಾರ್ಷಿಕ ₹ 20 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಹೋಟೆಲ್‌ಗಳು ಸಂಯುಕ್ತ ತೆರಿಗೆ ಯೋಜನೆಗೆ ಒಳಪಟ್ಟರೆ ಸರಾಸರಿ ಶೇ 4ರಷ್ಟು ತೆರಿಗೆ ನೀಡಬೇಕಾಗುತ್ತದೆ.

ಈ ಎಲ್ಲ ಹಂತದ ತೆರಿಗೆ ವಿಧಾನವೂ ಹವಾನಿಯಂತ್ರಿತ ವ್ಯವಸ್ಥೆ ಇಲ್ಲದ ಹೋಟೆಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಸಂಪೂರ್ಣವಾಗಿ ಅಥವಾ ಒಂದೇ ಒಂದು ಕೊಠಡಿಯಲ್ಲಿ ಹವಾ ನಿಯಂತ್ರಣ ಸೌಲಭ್ಯ ಹೊಂದಿದ್ದರೂ, ಅಂಥ ಹೋಟೆಲ್ ಶೇ 18ರಷ್ಟು ತೆರಿಗೆ ನೀಡಬೇಕಾಗುತ್ತದೆ. ಉದಾಹರಣೆಗೆ ಒಂದು ಕುಟುಂಬ ಇಂತಹ ಹೋಟೆಲ್‌ಗೆ ಹವಾ ನಿಯಂತ್ರಣವಲ್ಲದ ಕೊಠಡಿಯಲ್ಲಿ ಕುಳಿತು ₹ 1,000 ಮೌಲ್ಯದ ಉಪಾಹಾರ ಅಥವಾ ಊಟ ಮಾಡಿದರೆ ₹ 180 ತೆರಿಗೆ ಸೇರಿಸಿ ಕೊಡಬೇಕು.

ಕುಳಿತುಕೊಳ್ಳುವ ಸ್ಥಳಕ್ಕೂ ತೆರಿಗೆ: ಸೋಪು, ಕಾಫಿಪುಡಿ ಸೇರಿದಂತೆ ಯಾವುದೇ ಸಾಮಗ್ರಿಯನ್ನು ಯಾವ ಸ್ಥಳದಲ್ಲಿ ಖರೀದಿಸಿದರೂ ಆ ವಸ್ತುವಿಗೆ ನಿಗದಿ ಮಾಡಿದ ಒಂದೇ ರೀತಿಯ ತೆರಿಗೆ ನೀಡಬೇಕು. ಆದರೆ, ಹೋಟೆಲ್‌ ತಿಂಡಿ, ತಿನಿಸುಗಳಿಗೆ ಈ ತೆರಿಗೆ ಅನ್ವಯಿಸುವುದಿಲ್ಲ.

ಉದಾಹರಣೆಗೆ ಕ್ಯಾಂಟೀನಲ್ಲಿ ₹ 100ರ ಇಡ್ಲಿ ತಿಂದರೆ ಅದರ ಬೆಲೆ ಅಷ್ಟೇ ಇರುತ್ತದೆ. ಅದೇ ಹವಾನಿಯಂತ್ರಿತ ಕೊಠಡಿಗಳಲ್ಲಿ ತಿಂದರೆ ಜಿಎಸ್‌ಟಿ (₹ 18), ನಿರ್ವಹಣಾ ವೆಚ್ಚ (ಆಯಾ ಹೋಟೆಲ್‌ಗಳ ಮೇಲೆ ನಿರ್ಧಾರ) ಸೇರಿ ₹ 130–140 ಆಗುತ್ತದೆ. ಇದಕ್ಕೆ ಕಾರಣ ಹೋಟೆಲ್‌ ಉದ್ಯಮವು ಸೇವಾ ತೆರಿಗೆಯ ವ್ಯಾಪ್ತಿಗೆ ಸೇರಿರುವುದು. ಹಾಗಾಗಿ ಬಹುತೇಕ ಜನರು ದುಬಾರಿ ತೆರಿಗೆ ಹೊರೆ ತಪ್ಪಿಸಿಕೊಳ್ಳಲು ಫುಟ್‌ಪಾತ್, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕ್ಯಾಂಟೀನ್‌ಗಳಿಗೆ ಎಡತಾಕುತ್ತಿದ್ದಾರೆ.

‘ದೊಡ್ಡ ಪ್ರಮಾಣದ ಬಂಡವಾಳ, ದುಬಾರಿ ಬಾಡಿಗೆ, ನೀರು, ವಿದ್ಯುತ್‌ ಶುಲ್ಕ, ಕಾರ್ಮಿಕರಿಗೆ ಪಿಎಫ್‌ ನೀಡಿ, ನಿರ್ವಹಣಾ ವೆಚ್ಚ ಸರಿದೂಗಿಸಲು ಹೋಟೆಲ್‌ಗಳು ತಿನಿಸುಗಳ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ. ಈಗ ತೆರಿಗೆ ಹೊರೆಯೂ ಅಧಿಕವಾಗಿದೆ. ಎಲ್ಲ ಸೇರಿ ಬೆಲೆ ದುಬಾರಿಯಾಗಿ ರುವುದರಿಂದ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇದು ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಹೋಟೆಲ್‌ ಮತ್ತು ಉಪಾಹಾರ ಮಂದಿರಗಳ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್‌.ಗೋಪಿನಾಥ್.

ತೆರಿಗೆ ಮರು ಪಾವತಿಯ ಲಾಭ ಗ್ರಾಹಕರಿಗೆ: ‘ಹೋಟೆಲ್‌ಗಳು ಖರೀದಿ ಸುವ ಸಾಮಗ್ರಿಗಳ ಮೇಲೆ ಎಷ್ಟು ತೆರಿಗೆ ಪಾವತಿಸಿರುತ್ತಾರೆಯೋ ಅದರಲ್ಲಿ ವಾಪಸ್ ಬರುವ ಪ್ರಮಾಣವನ್ನು ಮಾಲೀಕರು ಗ್ರಾಹಕರಿಗೆ ವರ್ಗಾಯಿಸ ಬೇಕು. ಅಂದರೆ ಸಾಮಗ್ರಿಗಳಿಂದ ವಾಪಸ್‌ ಬಂದ ತೆರಿಗೆ ಶೇ 4ರಷ್ಟಿದ್ದರೆ, ಶೇ 18ರ ಜಿಎಸ್‌ಟಿಯಲ್ಲಿ ಅದನ್ನು ಕಳೆದು, ಗ್ರಾಹಕರಿಂದ  ಶೇ 14ರಷ್ಟು ತೆರಿಗೆ ಪಡೆಯಬೇಕು.

ಸಂಯುಕ್ತ ತೆರಿಗೆ ಪದ್ಧತಿಗೆ ಒಳಪಟ್ಟಿದ್ದರೆ ಅದನ್ನು ಬಿಲ್‌ ನಲ್ಲಿ ತೋರಿಸಬೇಕು. ಹೋಟೆಲ್‌ನಲ್ಲಿ ದೊಡ್ಡದಾಗಿ ಪ್ರದರ್ಶಿಸಬೇಕು. ಆದರೆ, ಬಹುತೇಕ ಹೋಟೆಲ್‌ಗಳು ಪಾರದರ್ಶಕವಾಗಿ ತೆರಿಗೆ ಸಂಗ್ರಹಿಸುತ್ತಿಲ್ಲ’ ಎಂದು ಆರೋಪಿಸುತ್ತಾರೆ ನಾಗರಿಕ ವೈ.ಎಸ್‌.ಅಶೋಕ್.

ನೋಂದಾಯಿತ ಹೋಟೆಲ್‌ಗಳು 480: ಶಿವಮೊಗ್ಗ ನಗರದಲ್ಲಿ ನೋಂದಾಯಿತ 480 ಹೋಟೆಲ್‌ ಗಳಿವೆ. ಬೀದಿಬದಿಯಲ್ಲಿ ತಿಂಡಿ ಮಾರು ವವರು ಹಾಗೂ ಕ್ಯಾಂಟೀನ್‌ ನಡೆಸುವ ವರು ಸೇರಿ 400 ಮಾಲೀಕರಿದ್ದಾರೆ.

‘ಬೀದಿಬದಿ ವ್ಯಾಪಾರಿಗಳು ಬಡವ ರಿಗೆ, ನಿತ್ಯ ದುಡಿದು ತಿನ್ನುವ ಜನರಿಗೆ ಸಣ್ಣ ಕ್ಯಾಂಟೀನ್‌ ಹಾಗೂ ತಳ್ಳುಗಾಡಿ ಗಳು ವರದಾನವಾಗಿವೆ. ತೆರಿಗೆ, ದುಬಾರಿ ಬಾಡಿಗೆಯ ಹಂಗಿಲ್ಲದ ಕಾರಣ ಜನರಿಗೆ ಕಡಿಮೆ ಬೆಲೆಯಲ್ಲಿ ತಿನಿಸು ದೊರೆಯತ್ತದೆ’ ಎನ್ನುತ್ತಾರೆ ಅಖಿಲ ಕರ್ನಾಟಕ ರಸ್ತೆಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್‌.ಶಂಕರ್.

ಅಂಕಿ ಅಂಶಗಳು

480 ನೋಂದಾಯಿತ ಹೋಟೆಲ್‌

400 ಬೀದಿಬದಿ ಹೋಟೆಲ್‌ಗಳು

* * 

ಜಿಎಸ್‌ಟಿ ಗೊಂದಲ ಬಗೆಹರಿದಿಲ್ಲ. ಹವಾನಿಯಂತ್ರಣ ವ್ಯವಸ್ಥೆ ಇದ್ದರೂ, ಇಲ್ಲದಿದ್ದರೂ ಶೇ 18 ರಷ್ಟು ತೆರಿಗೆ ವಿಧಿಸುವುದು ಅವೈಜ್ಞಾನಿಕ.

ಎನ್‌.ಗೋಪಿನಾಥ್ ಮಾಲೀಕರು, ಹೋಟೆಲ್‌ ಮಥುರಾ ಪ್ಯಾರಡೈಸ್‌

ಪ್ರತಿಕ್ರಿಯಿಸಿ (+)