ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ತಾಲ್ಲೂಕುಗಳಿಗೆ ‘ಕೃಷಿ ಭಾಗ್ಯ’ ವಿಸ್ತರಣೆ

Last Updated 8 ಜುಲೈ 2017, 5:43 IST
ಅಕ್ಷರ ಗಾತ್ರ

ಬೀದರ್: ‘ಹುಮನಾಬಾದ್‌ ಮತ್ತು ಭಾಲ್ಕಿ ತಾಲ್ಲೂಕುಗಳಲ್ಲಿ  ಜಾರಿಯಲ್ಲಿದ್ದ ‘ಕೃಷಿ ಭಾಗ್ಯ’ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗ ವಿಸ್ತರಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕೃಷಿ ಇಲಾಖೆಯು ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮಗ್ರ ಕೃಷಿ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲೆಯ ಶೇ 70ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಗಲಿರುಳು ದುಡಿಯುವ ರೈತರು ಪ್ರವಾಹ, ಆಲಿಕಲ್ಲು ಮಳೆ, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ ಮತ್ತಿತರ ಸಮಸ್ಯೆಗಳಿಂದ ನಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರ ರೈತರ ಜೊತೆಗಿದೆ. ರೈತರು ಸಮಸ್ಯೆಗಳಿಗೆ ಎದೆಗುಂದದೆ ಆತ್ಮಸ್ಥೈರ್ಯದೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
‘ಸದ್ಯ ಎಲ್ಲ ಕ್ಷೇತ್ರಗಳಲ್ಲೂ ಹಲವು ಬದಲಾವಣೆ ಆಗುತ್ತಿದೆ. ಕಾಲಕ್ಕೆ ಅನುಗುಣವಾಗಿ ರೈತರೂ ಕೂಡ ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕು.

ಬೀಜ ಬಿತ್ತನೆ. ಕೊಯ್ಲು ಸೇರಿದಂತೆ ಎಲ್ಲ ಚಟುವಟಿಕೆಗಳಿಗೂ ಯಂತ್ರಗಳನ್ನು ಬಳಸಿಕೊಳ್ಳಬೇಕು. ಭೂಮಿಗೆ ಸೂಕ್ತವಾದ ಬೆಳೆ ಬೆಳೆದರೆ ಮಾತ್ರ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ’ ಎಂದರು.

‘ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ವಿಷಕಾರಿ ಔಷಧಿಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಹೆಚ್ಚು ಪೋಷಕಾಂಶಗಳಿರುವ ಸಿರಿಧಾನ್ಯ ಬೆಳೆಯಲು ಹೆಚ್ಚು ಆಸಕ್ತಿ ತೋರಬೇಕು’ ಎಂದು ತಿಳಿಸಿದರು.

‘ಬರಗಾಲದಲ್ಲೂ ಹೆಚ್ಚು ಫಸಲು ಪಡೆದು ಲಾಭ ಗಳಿಸಿದ ಹಲವು ರೈತರು ಜಿಲ್ಲೆಯಲ್ಲಿದ್ದಾರೆ. ರೈತರು ಅವರನ್ನು ಮಾದರಿಯನ್ನಾಗಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 2.70 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸುಮಾರು 52,000 ಕ್ವಿಂಟಲ್ ಬಿತ್ತನೆ ಬೀಜ ಹಾಗೂ 16,000 ಟನ್ ರಸಗೊಬ್ಬರ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಕಾರಂಜಾ ಯೋಜನೆ ಮತ್ತು ಚುಳಕಿ ನಾಲಾ ಯೋಜನೆಗಳು ವಿಫಲವಾಗಿವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕಳೆದ ಮುಂಗಾರಿನಲ್ಲಿ ಕಾರಂಜಾ ಜಲಾಶಯದಲ್ಲಿ 7 ಟಿಎಂಸಿ ಹಾಗೂ ಚುಳುಕಿ ನಾಲಾದಲ್ಲಿ ಒಂದೂವರೆ ಟಿಎಂಸಿ ನೀರು ಸಂಗ್ರಹವಾಗಿದೆ. ಹಲವು ರೈತರ ಜಮೀನಿಗೆ ನೀರನ್ನೂ ಬಿಡಲಾಗಿದೆ’ ಎಂದು ಅವರು ಹೇಳಿದರು.

‘ಪ್ರವಾಹ ಮತ್ತು ಬರಗಾಲದಂಥ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸಿದೆ. ಸುಮಾರು ₹545 ಕೋಟಿ ಇನ್‌ಪುಟ್‌ ಸಬ್ಸಿಡಿ ನೀಡಿದೆ. ಜಿಲ್ಲೆಗೆ ₹140 ಕೋಟಿ ಬೆಳೆ ವಿಮೆ ಹಣ ಬಿಡುಗಡೆಯಾಗಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ರಹೀಂಖಾನ್ ಮಾತನಾಡಿ, ‘ನಗರದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ರೈತರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ‘ರೈತರ ಏಳಿಗೆಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗೆಗೆ ಮಾಹಿತಿ ನೀಡಲು ಸಮಗ್ರ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಅಭಿಯಾನ ಅಂಗವಾಗಿ ಹೋಬಳಿ ಮಟ್ಟದಲ್ಲಿ 2 ವಾಹನಗಳ ಮೂಲಕ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರ ಮಾಡಲಾಗುವುದು. ರೈತರು ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ ಪಾಟೀಲ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ದಯಾನಂದ ಸ್ವಾಮಿ, ಶೋಭಾದೇವಿ ಕಾರಬಾರಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ರಂಗಮಂದಿರದವರೆಗೆ ಅಲಂಕೃತ ಎತ್ತಿನ ಗಾಡಿಗಳು, ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು.

* * 

ಬಚಾವತ್ ಆಯೋಗದ ತೀರ್ಪಿನ ಅನುಸಾರ ಗೋದಾವರಿ ನದಿಯಿಂದ ಬೀದರ್‌ ಜಿಲ್ಲೆಯ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳಲಾಗುವುದು.
ಈಶ್ವರ ಖಂಡ್ರೆ,
ಜಿಲ್ಲಾ  ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT