ಬುಧವಾರ, ಡಿಸೆಂಬರ್ 11, 2019
19 °C

ತಿಂಗಳಾದರೂ ಬಾರದ ಪಠ್ಯಪುಸ್ತಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳಾದರೂ ಬಾರದ ಪಠ್ಯಪುಸ್ತಕಗಳು

ಕುಷ್ಟಗಿ: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆದರೂ ಕೆಲ ತರಗತಿಗಳ ಅನೇಕ ವಿಷಯಗಳ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿಲ್ಲ. ಕಳೆದ ವರ್ಷ ಜೂನ್‌ ವೇಳೆಗೆ ಎಲ್ಲ ಪುಸ್ತಕಗಳನ್ನು ವಿತರಿಸಲಾಗಿತ್ತು. ಈ ಬಾರಿ ಕೆಲ ಪುಸ್ತಕಗಳ ಪಠ್ಯಕ್ರಮ ಬದಲಾವಣೆಗೊಂಡಿದ್ದು, ಕೆಲ ಪುಸ್ತಕಗಳು ಇನ್ನೂ ಮುದ್ರಣ ಹಂತದಲ್ಲಿವೆ.

ಪೂರ್ಣಪ್ರಮಾಣದಲ್ಲಿ ಪುಸ್ತಕಗಳು ಬರಬೇಕೆಂದರೆ ಇನ್ನೂ ಎರಡು ಮೂರು ವಾರಗಳು ಬೇಕು. ಹೊಸ ಪಠ್ಯಕ್ರಮವನ್ನು ಒಳಗೊಂಡ ಪುಸ್ತಕಗಳು ಬಾರದ ಕಾರಣ ಪಾಠ ಮಾಡುವುದು ಹೇಗೆ ಎಂಬ ಚಿಂತೆ ಶಿಕ್ಷಕರಲ್ಲಿದೆ.

ಯಾವ ತರಗತಿ?: 3ನೇ ತರಗತಿಯ ಕನ್ನಡ, 5ನೇ ತರಗತಿಯ ಇಂಗ್ಲಿಷ್‌ ಭಾಷಾ ಭಾಗ 1ರ ಪುಸ್ತಕಗಳು. 6ನೇ ತರಗತಿಯ ಸಮಾಜ ವಿಜ್ಞಾನ, ಹಿಂದಿ, 9ನೇ ತರಗತಿಯ ಗಣಿತ ಭಾಗ 1 ಮತ್ತು ಎರಡೂ ತರಗತಿಗಳ ದೈಹಿಕ ಶಿಕ್ಷಣ ಪುಸ್ತಕಗಳು ಬಂದಿಲ್ಲ. ಈ ಬಾರಿ 9ನೇ ತರಗತಿ ಎನ್‌ಇಸಿಆರ್‌ಟಿ ಪಠ್ಯಕ್ರಮ ಇದ್ದು ದೈಹಿಕ ಶಿಕ್ಷಣ ಪುಸ್ತಕ ಪೂರೈಕೆಯಾಗಿಲ್ಲ.

ಪ್ರಾರಂಭದಲ್ಲಿ ಭಾಗ 1ರ ಪುಸ್ತಕಗಳು ಬರಬೇಕಿದ್ದರೂ ಬಹುತೇಕ ಎಲ್ಲ ತರಗತಿಗಳ ಭಾಗ 2ರ ಪುಸ್ತಕಗಳು ಬಂದಿದ್ದು ಸದ್ಯಕ್ಕೆ ಅಗತ್ಯ ಇಲ್ಲದ ಕಾರಣ ಪುಸ್ತಕಗಳ ಮೂಟೆಗಳನ್ನೆಲ್ಲ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿದೆ. ಮಣಿಪಾಲ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಲ್ಲಿ ಪುಸ್ತಕಗಳು ಮುದ್ರಣಗೊಳ್ಳುತ್ತಿದ್ದು, ಮುದ್ರಕರಿಗೆ ಪುಸ್ತಕ ಮುದ್ರಣಕ್ಕೆ ಆದೇಶ ನೀಡುವುದರಲ್ಲಿ ವಿಳಂಬವಾಗಿದೆ. ಅದರಲ್ಲೂ ಭಾಗ 1ರ ಬದಲು 2ನೇ ಭಾಗದ ಪುಸ್ತಕಗಳ ಮುದ್ರಣಗೊಂಡು ಸರಬರಾಜಾಗುತ್ತಿವೆ.

‘ಈ ವರ್ಷ 1–10ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮ ಬದಲಾಗಿರುವುದರಿಂದ ಹಿಂದಿನ ವರ್ಷದ ಪುಸ್ತಕಗಳ ಆಧಾರದ ಮೇಲೆ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ಖಾಲಿ ಕುಳಿತುಕೊಳ್ಳುವಂತಾಗಿದೆ. ವಿಳಂಬ ಹೀಗೆ ಮುಂದುವರಿದರೆ ಪಾಠಗಳನ್ನು ಪೂರ್ಣಗೊಳಿಸುವುದು ಹೇಗೆ ಎಂಬ ಚಿಂತೆಯಾಗಿದೆ’ ಎಂದು ಶಿಕ್ಷಕರು ಹೇಳಿದರು.

‘ಸಕಾಲದಲ್ಲಿ ಪುಸ್ತಕಗಳನ್ನು ಪೂರೈಸುವ ವಿಷಯದಲ್ಲಿ ಶಿಕ್ಷಣ ಇಲಾಖೆ ಪ್ರತಿ ಬಾರಿಯೂ ಎಡವುತ್ತಿದೆ. ಶಾಲೆಗಳು ಆರಂಭಗೊಳ್ಳುವ ಮೊದಲೇ ಪುಸ್ತಕಗಳನ್ನು ಪೂರೈಸುವುದಾಗಿ ತಿಳಿಸಲಾಗಿತ್ತು. ಆದರೆ, ಜುಲೈ ತಿಂಗಳು ಬಂದರೂ ಮುಖ್ಯ ವಿಷಯಗಳ ಪಠ್ಯಪುಸ್ತಕಗಳು ಬಾರದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ’ ಎಂದು ಪಾಲಕರಾದ ವೀರಭದ್ರಗೌಡ ಪಾಟೀಲ, ಪ್ರಭುರಾಜ ತಿಮ್ಮಾಪುರ ಅಸಮಾಧಾನ ವ್ಯಕ್ತಪಡಿಸಿದರು.

‘ಬಂದಿರುವ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತ ಪುಸ್ತಕಗಳು ಮತ್ತು ಖಾಸಗಿ ಶಾಲೆಗಳಿಗೆ ಬೇಡಿಕೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ’ ಎಂದು ಪಠ್ಯಪುಸ್ತಕಗಳ ವಿಭಾಗದ ನೋಡೆಲ್‌ ಅಧಿಕಾರಿ ಸೋಮನಗೌಡ ಪಾಟೀಲ ತಿಳಿಸಿದರು.

ಪ್ರತಿಕ್ರಿಯಿಸಿ (+)