ಶನಿವಾರ, ಡಿಸೆಂಬರ್ 14, 2019
21 °C

ಜಿಲ್ಲಾ ಕಾಂಗ್ರೆಸ್‌ನಿಂದ ಬೂತ್‌ ಸಮಿತಿ ರಚನೆ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಜಿಲ್ಲಾ ಕಾಂಗ್ರೆಸ್‌ನಿಂದ ಬೂತ್‌ ಸಮಿತಿ ರಚನೆ

ವಿಜಯಪುರ: ಬೆಳಗಾವಿ ವಿಭಾಗದ ಎಐಸಿಸಿ ಉಸ್ತುವಾರಿ ಮಾಣಿಕ್ಕಂ ಟ್ಯಾಗೋರ್‌ ಸೂಚನೆಯಂತೆ ಜಿಲ್ಲಾ ಕಾಂಗ್ರೆಸ್‌ ಘಟಕ ಬೂತ್‌ ಸಮಿತಿ ರಚನೆಗೆ ಮುಂದಾಗಿದೆ.

ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ 16 ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಏಳು ಬಿಸಿಸಿಗಳಲ್ಲಿ ಮಾತ್ರ ಬೂತ್‌ ಸಮಿತಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಒಂಬತ್ತು ಬ್ಲಾಕ್‌ಗಳಲ್ಲಿ ನಡೆದಿದೆ.

ಜಲಸಂಪನ್ಮೂಲ ಸಚಿವ ಎಂ.ಬಿ.­ಪಾಟೀಲ ಪ್ರತಿನಿಧಿಸುವ ಬಬಲೇ­ಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಬ­ಲೇಶ್ವರ, ತಿಕೋಟಾ ಬ್ಲಾಕ್‌ ಸಮಿತಿಗಳು ಈಗಾಗಲೇ ಬೂತ್‌ ಸಮಿತಿ ರಚಿಸಿವೆ. ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌.ನಾಡಗೌಡ ಪ್ರತಿನಿಧಿಸುವ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ದೇಬಿಹಾಳ ಬ್ಲಾಕ್‌ನಲ್ಲಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದರೆ, ತಾಳಿಕೋಟೆ ಬ್ಲಾಕ್‌ನಲ್ಲಿ ಸಮಿತಿ ರಚನೆ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರವನ್ನು ಎ.ಎಸ್‌.ಪಾಟೀಲ ನಡಹಳ್ಳಿ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್‌ನಿಂದ ದೂರವಾದ ಬಳಿಕ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರೇ ಈ ಕ್ಷೇತ್ರದ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಈ ಕ್ಷೇತ್ರ ವ್ಯಾಪ್ತಿಯ ದೇವರ ಹಿಪ್ಪರಗಿ ಬ್ಲಾಕ್‌ಗೆ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಪಾಟೀಲ ಅಧ್ಯಕ್ಷರಿದ್ದು, ಬೂತ್‌ ಸಮಿತಿ ರಚನೆ ಪೂರ್ಣಗೊಂಡಿದೆ. ಹೂವಿನ ಹಿಪ್ಪರಗಿ ಬ್ಲಾಕ್‌ನಲ್ಲೂ ಬೂತ್‌ ಸಮಿತಿ ರಚಿಸಲಾಗಿದೆ.

ಕರ್ನಾಟಕ ಸಾಬೂನು ಮಾರ್ಜಕ ನಿಯಮಿತದ ಅಧ್ಯಕ್ಷ ಪ್ರೊ.ರಾಜು ಆಲಗೂರ ಪ್ರತಿನಿಧಿಸುವ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಠಾಣ ಬ್ಲಾಕ್‌ನಲ್ಲಿ ರಚನೆ ಪ್ರಕ್ರಿಯೆ ಪೂರ್ಣಗೊಂಡರೆ, ಚಡಚಣ ಬ್ಲಾಕ್‌ನಲ್ಲಿ ಇನ್ನೂ ನಡೆದಿದೆ. ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ರವಿಗೌಡ ಪಾಟೀಲ ಈ ಹಿಂದೆ ಚಡಚಣ ಬ್ಲಾಕ್‌ ಅಧ್ಯಕ್ಷರಾಗಿದ್ದರು.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂದಗಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗೆ ನಾಲ್ಕೈದು ತಿಂಗಳ ಹಿಂದೆ ನೂತನ ಅಧ್ಯಕ್ಷರನ್ನಾಗಿ ವಿಠ್ಠಲ ಕೋಳೂರ ನೇಮಿಸಿದ ಬಳಿಕ, ಚಟುವಟಿಕೆಗಳು ಚುರುಕಿನಿಂದ ನಡೆದಿದ್ದು, ಈ ಬ್ಲಾಕ್‌ ವ್ಯಾಪ್ತಿಯಲ್ಲೂ ಬೂತ್‌ ಸಮಿತಿ ರಚನೆ ಪ್ರಕ್ರಿಯೆ ಸಂಪೂರ್ಣಗೊಂಡಿದೆ. ಆಲಮೇಲ ಬ್ಲಾಕ್‌ನಲ್ಲಿ ಇನ್ನೂ ಪ್ರಕ್ರಿಯೆ ನಡೆದಿದೆ.

‘ಇಂಡಿ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ಲಾಕ್‌ ಕಾಂಗ್ರೆಸ್‌ ಘಟಕಗಳ ವ್ಯಾಪ್ತಿಯಲ್ಲಿ ಬೂತ್‌ ಸಮಿತಿ ರಚನೆ ಪ್ರಕ್ರಿಯೆ ನಡೆದಿದೆ. ಜೂನ್‌ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಇನ್ನೂ ಮುಗಿಯದ ಬ್ಲಾಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇ ತಿಂಗಳಲ್ಲಿ ಮಾಣಿಕ್ಕಂ ಟ್ಯಾಗೋರ್‌ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಜೂನ್‌ ಅಂತ್ಯದೊಳಗೆ ಎಲ್ಲೆಡೆ ಬೂತ್ ಸಮಿತಿ ರಚಿಸಲು ಸೂಚಿಸಿದ್ದರು. ಅದರಂತೆ ಕೆಲ ಬ್ಲಾಕ್‌ಗಳಲ್ಲಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನುಳಿದ ಬ್ಲಾಕ್‌ಗಳಲ್ಲಿ ನಡೆದಿದೆ. ಇದೇ 15ರೊಳಗೆ ರಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾ ಘಟಕಕ್ಕೆ ಮಾಹಿತಿ ನೀಡುವಂತೆ ಎಲ್ಲ ಬಿಸಿಸಿ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ’ ಎಂದು ರವಿಗೌಡ ಹೇಳಿದರು.

ಮಾಣಿಕ್ಕಂ ಇದೇ 13, 21ಕ್ಕೆ ಭೇಟಿ

ಇದೇ 13ರಂದು ವಿಜಯಪುರ ನಗರಕ್ಕೆ ಎಐಸಿಸಿ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಕಂ ಟ್ಯಾಗೋರ್ ಭೇಟಿ ನೀಡಲಿದ್ದಾರೆ. ಈ ಸಂದರ್ಭ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯಪುರ, ಜಲನಗರ ಬ್ಲಾಕ್‌ಗಳ ಪದಾಧಿ­ಕಾರಿಗಳ ಸಭೆ ನಡೆಸಲಿದ್ದಾರೆ.

21ರಂದು ಮತ್ತೆ ಭೇಟಿ ನೀಡಲಿದ್ದು, ಬಬಲೇಶ್ವರ ವಿಧಾ­ನ­ಸಭಾ ಕ್ಷೇತ್ರ ವ್ಯಾಪ್ತಿಯ ಬಬ­ಲೇಶ್ವರ, ತಿಕೋಟಾ ಬ್ಲಾಕ್ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ.

ಸಭೆಗಳಿಗೆ ಶಾಸಕರು, ಮಹಾನಗರ ಪಾಲಿಕೆ, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.­ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉಪಸ್ಥಿತರಿರಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ತಿಳಿಸಿದರು.

ಅಂಕಿ–ಅಂಶ

8 ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರ

16 ಬ್ಲಾಕ್‌ಗಳು ಕಾರ್ಯನಿರ್ವಹಣೆ

1869 ಬೂತ್‌ಗಳು ಅಸ್ತಿತ್ವದಲ್ಲಿ

400 ಅಧಿಕ ಬೂತ್‌ ಅಸ್ತಿತ್ವದಲ್ಲಿ

* *

16 ಬ್ಲಾಕ್‌ಗಳಲ್ಲಿ ಈಗಾಗಲೇ 7 ಬ್ಲಾಕ್‌ಗಳಲ್ಲಿ ಬೂತ್‌ ಸಮಿತಿ ರಚಿಸಲಾಗಿದೆ. ಉಳಿದ 9 ಬ್ಲಾಕ್‌ಗಳಲ್ಲಿ ಇದೇ 15ರೊಳಗೆ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ

ರವಿಗೌಡ ಪಾಟೀಲ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಪ್ರತಿಕ್ರಿಯಿಸಿ (+)