ಶುಕ್ರವಾರ, ಡಿಸೆಂಬರ್ 13, 2019
17 °C

ಅಲ್ಪಾವಧಿ, ಕಡಿಮೆ ನೀರಿನ ಬೆಳೆ ಬೆಳೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಪಾವಧಿ, ಕಡಿಮೆ ನೀರಿನ ಬೆಳೆ ಬೆಳೆಯಿರಿ

ಧಾರವಾಡ: ‘ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗುತ್ತಿಲ್ಲವಾದ ಕಾರಣ ರೈತರು ಮಿತ ನೀರು ಬಳಕೆಯ ಅಲ್ಪಾವಧಿ ಬೆಳೆಗಳನ್ನು ಬೆಳೆಯಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. ‘ಈವರೆಗೂ ಶೇ 50ಕ್ಕೂ ಕಡಿಮೆ ಮಳೆಯಾಗಿದೆ. ಇನ್ನು ಮುಂದೆ ಬಿತ್ತನೆ ಕಾರ್ಯ ಕೈಗೊಳ್ಳುವ ರೈತರು ಕೃಷಿ ಇಲಾಖೆ ಶಿಫಾರಸು ಮಾಡಿರುವ ಕಡಿಮೆ ಅವಧಿಯ ಹಾಗೂ ಹೆಚ್ಚು ನೀರು ಬೇಡದ ಬೆಳೆಗಳನ್ನು ಬೆಳೆಯಬೇಕು’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಈವರೆಗೆ ಜಿಲ್ಲೆಯ ಧಾರವಾಡ ತಾಲ್ಲೂಕಿನಲ್ಲಿ ಶೇ 17, ಹುಬ್ಬಳ್ಳಿ ಶೇ 28, ಕಲಘಟಗಿ ಶೇ 91, ಕುಂದಗೋಳ ಶೇ 22 ಹಾಗೂ ನವಲಗುಂದ ತಾಲ್ಲೂಕಿನಲ್ಲಿ ಶೇ 11ರಷ್ಟು ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೇವಲ ಶೇ. 31ರಷ್ಟು ಮಾತ್ರ ಬಿತ್ತನೆ ಆಗಿದೆ. ಒಟ್ಟು 2.31ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 72,572 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೀಗಾಗಿ ರೈತ ಸಮುದಾಯ ತೀವ್ರ ಚಿಂತೆಗೀಡಾಗಿದೆ’ ಎಂದರು.

‘ಈಗಲೂ ಉತ್ತಮ ಮಳೆಯಾಗಲಿದೆ ಎಂಬ ನಿರೀಕ್ಷೆ ಇದೆ. ಆದರೂ, ಮುನ್ನೆಚ್ಚರಿಕೆಯ ಕ್ರಮವಾಗಿ ಅಲ್ಪಾವಧಿ ಬೆಳೆ ಬೆಳೆಯುವುದು ಉತ್ತಮ. ರೈತರು ಇಂಥ ಪರ್ಯಾಯ ಬೆಳೆ ಬೆಳೆಯಲು ಮುಂದಾದರೆ ಅಗತ್ಯವಿರುವ ಬಿತ್ತನೆ ಬೀಜ ಲಭ್ಯವಿದೆ’ ಎಂದು ಹೇಳಿದರು.

‘ಇದೇ ಅವಧಿಯಲ್ಲಿ ಕಳೆದ ವರ್ಷ ಶೇ 56ರಷ್ಟು (1.10ಲಕ್ಷ ಹೆಕ್ಟೇರ್‌) ಬಿತ್ತನೆಯಾಗಿತ್ತು. ಕೃಷಿ ಚಟುವಟಿಕೆಗಳು ನಡೆಯದಿದ್ದರೆ, ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಬೆಳೆವಿಮೆಯನ್ನು ರೈತರು ಕಡ್ಡಾಯವಾಗಿ ಮಾಡಿಸಬೇಕು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯ ವಿಮಾ ಕಂತು ತುಂಬಲು ಜುಲೈ 31 ಕೊನೆಯ ದಿನಾಂಕ. ಹೋಬಳಿ ಪಟ್ಟಿಯಲ್ಲಿ ನೀಡಲಾಗಿರುವ ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ವಿಮಾ ಕಂತು ತುಂಬಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘2016ರ ಮುಂಗಾರಿನಲ್ಲಿ ಬೆಳೆಹಾನಿಯಾದ 90,794 ರೈತರ ಖಾತೆಗಳಿಗೆ ₹ 77.83 ಕೋಟಿ ಜಮೆ ಆಗಿದೆ. 790 ರೈತರಿಗೆ ಹಣ ಸಂದಾಯ ಆಗುವುದು ಬಾಕಿ ಇದೆ. ಆಧಾರ್‌ ಸಂಖ್ಯೆ ಜೋಡಣೆಯಾಗದ ಕಾರಣ ವಿಳಂಬವಾಗಿದೆ’ ಎಂದು ತಿಳಿಸಿದರು.

ಈಜುಕೊಳದ ಪ್ರಸ್ತಾವ ಬಂದಿಲ್ಲ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಈಜುಕೊಳದ ಅಭಿವೃದ್ಧಿಗೆ ಅನುಮತಿ ನೀಡುತ್ತಿಲ್ಲ ಎಂಬ ಸಂಸದ ಪ್ರಹ್ಲಾದ ಜೋಶಿ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮನಹಳ್ಳಿ ಅವರು, ‘ಈ ಸಂಬಂಧ ಯಾರಿಂದಲೂ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಬಂದಿಲ್ಲ. ಒಂದೊಮ್ಮೆ ಅಂಥದ್ದೊಂದು ಅವಕಾಶ ಸಿಕ್ಕರೆ ತುಂಬು ಸಂತೋಷದಿಂದ ಅನುಮತಿ ನೀಡಲಾಗುವುದು. ಧಾರವಾಡಕ್ಕೆ ಅತ್ಯಾಧುನಿಕ ಈಜುಕೊಳದ ಅಗತ್ಯವಿದೆ’ ಎಂದು ಹೇಳಿದರು.

‘ರಾಜ್ಯ ಓಲಿಂಪಿಕ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಖಾತೆಗೆ ₹ 54 ಲಕ್ಷವನ್ನು ಜಿಲ್ಲಾಡಳಿತ ಜಮಾ ಮಾಡಿತ್ತು. ಖಾತೆ ಸಂಖ್ಯೆ ಸರಿಹೊಂದದ ಕಾರಣ ₹8 ರಿಂದ 10 ಲಕ್ಷ ಜಿಲ್ಲಾಡಳಿತದ ಖಾತೆಗೆ ಮರಳಿ ಬಂದಿದೆ. ಈ ವಿಷಯವನ್ನು ರಾಜ್ಯ ಓಲಿಂಪಿಕ್‌ ಸಂಸ್ಥೆಗೆ ತಿಳಿಸಲಾಗಿದೆ. ಅಲ್ಲಿಂದ ಉತ್ತರ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮುಂಗಾರು ಬೆಳೆಗಳ ಮಾಹಿತಿ

ಧಾರವಾಡ: ಮಳೆ ಕಡಿಮೆ ಆಗಿರುವ ಕಾರಣ ಮುಂದಿನ ದಿನಗಳಲ್ಲಿ ಮಳೆಯಾದಾಗ ಬೆಳೆಯಬಹುದಾದ ಬೆಳೆಗಳ ವಿವರವನ್ನು ಕೃಷಿ ಇಲಾಖೆ ನೀಡಿದೆ.ಧಾರವಾಡ, ಹುಬ್ಬಳ್ಳಿ ತಾಲ್ಲೂಕಿನಲ್ಲಿ ಕಪ್ಪು ಮಣ್ಣು ಹೊಂದಿದವರು ಇದೇ ತಿಂಗಳು ಎರಡನೇ ವಾರ ಮಳೆಯಾದರೆ ಶೇಂಗಾ, ಹಬ್ಬು ಶೇಂಗಾ, ಮೆಣಸಿನಕಾಯಿ, ಗೋವಿನ ಜೋಳ, ಬಟಾಣಿ, ಅಲಸಂದೆ, ಹತ್ತಿ, ಮೇವಿನ ಜೋಳ, ಮೇವಿನ ಗೋವಿನ ಜೋಳ ಬೆಳೆಯಬಹುದು.

ಧಾರವಾಡ ತಾಲ್ಲೂಕಿನಲ್ಲಿ ಕೆಂಪು ಜೇಡಿ ಮಣ್ಣು ಹೊಂದಿದವರು ಇದೇ ತಿಂಗಳು ಎರಡನೇ ವಾರ ಮಳೆಯಾದರೆ ಕಬ್ಬು, ಮೇವಿನ ಗೋವಿನ ಜೋಳ, ತರಕಾರಿ, ಮೇವಿನ ಬೆಳೆ, ಕುಂದಗೋಳ ತಾಲ್ಲೂಕಿನ ಶೇಂಗಾ, ಗೋವಿನ ಜೋಳ, ಹಬ್ಬು ಶೇಂಗಾ, ಔಡಲ, ಮೆಣಸಿನಕಾಯಿ, ತೊಗರಿ, ಹತ್ತಿ, ಮೇವಿನ ಜೋಳ, ಮೇವಿನ ಗೋವಿನ ಜೋಳ, ಮೇವಿನ ಸಜ್ಜೆ, ಮೇವಿನ ಅಲಸಂದೆ ಬೆಳೆ ಬೆಳೆಯಬಹುದಾಗಿದೆ.

ಕೂರಿಗೆ ಭತ್ತ ಎಲ್ಲಾ ತಾಲ್ಲೂಕುಗಳಲ್ಲಿ ಹಕ್ಕಲು ಅಥವಾ ಮಧ್ಯಮ, ರಂಗೀ ಜಮೀನನಲ್ಲಿ ಭತ್ತ, ಗೋವಿನ ಜೋಳ, ಸೋಯಾ ಅವರೆ, ಸಂಕರಣ ಹತ್ತಿ, ತೊಗರಿ, ಪುಂಡಿ, ತರಕಾರಿ, ಮೇವಿನ ಜೋಳ, ಹುರಳಿ, ಸಾವೆ ಮತ್ತು ನವಣೆ ಬೆಳೆಯಬಹುದು.

ನವಲಗುಂದ ತಾಲ್ಲೂಕಿನ ಕಪ್ಪು ಮಣ್ಣಿನಲ್ಲಿ ಹತ್ತಿ, ಗೋವಿನ ಜೋಳ, ಮೆಣಸಿನಕಾಯಿ, ಈರುಳ್ಳಿ, ಕಲಘಟಗಿ ತಾಲ್ಲೂಕಿನಲ್ಲಿ ನಾಟಿ ಭತ್ತ, ಸೋಯಾ ಅವರೆ, ಗೋವಿನ ಜೋಳ, ಹತ್ತಿ, ತೊಗರಿ ಬೆಳೆಬಹುದಾಗಿದೆ ಎಂದು ತಿಳಿಸಲಾಗಿದೆ.

* * 

ಮೋಡ ಬಿತ್ತನೆ ಕುರಿತು ಸರ್ಕಾರ ಯಾವುದೇ ಮಾಹಿತಿ ಕೇಳಿಲ್ಲ. ಮುಂದಿನ ದಿನಗಳಲ್ಲಿ ಕೇಳಿದರೆ, ಅಗತ್ಯವಿರುವ ಪ್ರದೇಶಗಳ ಮಾಹಿತಿ ಸರ್ಕಾರಕ್ಕೆ ಕಳುಹಿಸಲಾಗುವುದು

ಎಸ್‌.ಬಿ.ಬೊಮ್ಮನಹಳ್ಳಿ

ಜಿಲ್ಲಾಧಿಕಾರಿ

ಪ್ರತಿಕ್ರಿಯಿಸಿ (+)