ಶನಿವಾರ, ಡಿಸೆಂಬರ್ 7, 2019
24 °C

ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ: ಸಚಿವ ಡಿ.ವಿ.ಸದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ: ಸಚಿವ ಡಿ.ವಿ.ಸದಾನಂದಗೌಡ

ತುಮಕೂರು: ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಆರೋಪಿಸಿದರು.

ಶನಿವಾರ ತಾಲ್ಲೂಕಿನ ನಾಗವಲ್ಲಿ ಗ್ರಾಮದಲ್ಲಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್, ಸ್ಟೌ ವಿತರಣೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಖ್ಯಮಂತ್ರಿ ನಿನ್ನೆ ಪ್ರಚಾರ ಕಾರ್ಯಕ್ರಮಕ್ಕೆ ಹೋಗುವ ಅವಶ್ಯಕತೆ ಏನಿತ್ತು? ಅಲ್ಲಿ ಹೋಗಿ ಶಾಂತಿ ಸುವ್ಯವಸ್ಥೆ ಕುರಿತು ಪೊಲೀಸ್, ಹಿರಿಯ ಅಧಿಕಾರಿಗಳ ಸಭೆ ನಡೆಸಿಲ್ಲ. ಬದಲಾಗಿ ಕೋಮುಸೌಹಾರ್ದ ಹದಗೆಡಿಸುವವರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಡಬೇಕು. ಕಾಂಗ್ರೆಸ್ ಕಾರ್ಯಕರ್ತರ ರೀತಿ ಕೆಲಸ ಮಾಡಬಾರದು. ರಾಜ್ಯದಲ್ಲಿ ಎಲ್ಲೆಡೆ ಗಲಾಟೆ, ಶಾಂತಿ ಕದಡುವ ವಾತಾವರಣ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ. ಮಂಗಳೂರು ಗಲಾಟೆ ಪ್ರಕರಣ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ಲೋಪದ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಈಗ ಮತ್ತೊಮ್ಮೆ ಗಮನಕ್ಕೆ ತರುತ್ತೇನೆ. ಸಚಿವರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಒಬ್ಬ ದೇಶಭಕ್ತರು. ಶಾಂತಿ ಕದಡುವ, ಕೋಮುಗಲಭೆಗೆ ಪ್ರೋತ್ಸಾಹಿಸುವ ಕೆಲಸ ಮಾಡಿದವರಲ್ಲ. ಇಂಥವರನ್ನು ಕೋಮು ಸೌಹಾರ್ದ ಕದಡುವ ವ್ಯಕ್ತಿ ಎಂದು ಕಾಂಗ್ರೆಸ್ ಕಳಂಕ ತರುವ ಪ್ರಯತ್ನ ಮಾಡಿದೆ. ದೇಶದ ಕೆಲಸ ಮಾಡಿದವರಿಗೆ ಹಿಂದುತ್ವದ ಪಟ್ಟ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.

ಪರಮೇಶ್ವರ್ ಓಡಿಸಿದ ಸಿಎಂ

ಗೃಹ ಖಾತೆಯನ್ನು ಡಾ.ಜಿ.ಪರಮೇಶ್ವರ್ ಅವರಿಂದ ಕಸಿದುಕೊಂಡು ಮುಖ್ಯಮಂತ್ರಿ ಓಡಿಸಿದ್ದಾರೆ ಎಂದು ಸದಾನಂದಗೌಡ ಅವರು ಆರೋಪಿಸಿದರು.

ಗೃಹಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಶಾಂತಿ ಕಾಪಾಡುವ ಬದಲು ಕದಡಲು ಹೊರಟಿದ್ದಾರೆ. ರಾಜ್ಯದ ಜನರು ಇದನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

ನಾಗವಲ್ಲಿ ಗ್ರಾಮದಲ್ಲಿ ಉಜ್ವಲಾ ಯೋಜನೆ ಕಾರ್ಯಕ್ರಮ ಉದ್ಘಾಟನೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳುವವರಲ್ಲ. ರಾಜ್ಯ ಸರ್ಕಾರ ರಕ್ಷಣೆ ನೀಡದೇ ಇದ್ದರೆ ತಮ್ಮನ್ನು ರಕ್ಷಿಸಿಕೊಳ್ಳುವುದು ಗೊತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಾರೆ. ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅದನ್ನು ಮರೆತಿದ್ದಾರೆ. ಕೆಲ ವಿಷಯಗಳನ್ನು ಉಪೇಕ್ಷೆ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಹಾಗೇಯೇ ರಾಹುಲ್ ಗಾಂಧಿ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)