ಸೋಮವಾರ, ಡಿಸೆಂಬರ್ 16, 2019
18 °C

‘ಹೈಟೆಕ್ ಪೊಲೀಸಿಂಗ್’ ಇಂದಿನ ಅನಿವಾರ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೈಟೆಕ್ ಪೊಲೀಸಿಂಗ್’ ಇಂದಿನ ಅನಿವಾರ್ಯ’

ಹಾವೇರಿ: ‘ತಂತ್ರಜ್ಞಾನದ ಬೆಳವಣಿಗೆ ಜೊತೆ ಪೊಲೀಸ್‌ ಕಾರ್ಯವೈಖರಿಯೂ ಬದಲಾಗಿದ್ದು, ಆಧುನಿಕತೆಗೆ ತಕ್ಕಂತೆ ಪೊಲೀಸರೂ ‘ಹೈಟೆಕ್’ ಆಗಬೇಕು’ ಎಂದು ಪೂರ್ವ ವಲಯ ಪೊಲೀಸ್‌ ಮಹಾ ನಿರೀಕ್ಷಕ (ಐ.ಜಿ.) ಡಾ.ಎಂ.ಎಂ. ಸಲೀಂ ಹೇಳಿದರು.

ಇಲ್ಲಿನ ಕೆರಿಮತ್ತಿಹಳ್ಳಿಯಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ 6ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ, ಬಳಿಕ ‘ಹಾವೇರಿ ಜಿಲ್ಲಾ ಪೊಲೀಸ್ ವೆಬ್‌ಸೈಟ್’ ಹಾಗೂ  ಸಾಮಾಜಿಕ ಜಾಲತಾಣ ನಿರ್ವಹಣಾ ಕೋಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ವಾನ ದಳ ಹಾಗೂ ಬೆರಳಚ್ಚು ತಂಡಕ್ಕೆ ಅವಲಂಬಿಸಿದ್ದ ಪೊಲೀಸ್‌ ತನಿಖೆಯು ಈಗ ಉಪಗ್ರಹ ತಂತ್ರಜ್ಞಾನ ಬಳಕೆಯ ತನಕ ಬೆಳೆದಿದೆ. ಈ ಬೆಳವಣಿಗೆಗೆ ತಕ್ಕಂತೆ ಪೊಲೀಸರೂ ಕಾರ್ಯವೈಖರಿ ಬದಲಾಯಿಸಿಕೊಳ್ಳಬೇಕು’ ಎಂದರು.‘ಪೊಲೀಸರ ವ್ಯಕ್ತಿತ್ವದಲ್ಲಿ ಸಜ್ಜನಿಕೆ–ಸೌಜನ್ಯ, ಕರ್ತವ್ಯದಲ್ಲಿ ಶಿಸ್ತು–ಬದ್ಧತೆ ಹಾಗೂ ಕಾರ್ಯವೈಖರಿಯಲ್ಲಿ ಪ್ರಾಮಾಣಿಕತೆ–ಪಾರದರ್ಶಕತೆ ಮುಖ್ಯ’ ಎಂದರು.

‘ಸಾರ್ವಜನಿಕರ ಸಂತೃಪ್ತಿ’ಯೇ ಪೊಲೀಸರ ಕೆಲಸದ ಮೌಲ್ಯಮಾಪನ. ಸಾರ್ವಜನಿಕ ಅಭಿಪ್ರಾಯವೇ ಇಲ್ಲಿ ಮುಖ್ಯವಾಗುತ್ತದೆ. ಅದಕ್ಕಾಗಿ ಹೆಚ್ಚು ಹೆಚ್ಚು ಸಲಹೆ–ಸೂಚನೆ, ಟೀಕೆ–ಟಿಪ್ಪಣಿಗಳನ್ನು ಸ್ವಾಗತಿಸಿ. ಅದರಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಪ್ರಬುದ್ಧರಾಗಿ’ ಎಂದರು.

‘ಹಾವೇರಿ ಪೊಲೀಸ್ ತಾಂತ್ರಿಕವಾಗಿ ಆಧುನೀಕರಣಗೊಳ್ಳಬೇಕು. ‘ಹೈ ಟೆಕ್’ ವ್ಯವಸ್ಥೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆಸುತ್ತಿರುವ ಕಾರ್ಯಗಳು ಶ್ಲಾಘನೀಯ. ಇಲಾಖೆಯ ಪ್ರತಿ ಸಿಬ್ಬಂದಿಯೂ ಕಾನೂನು ಮತ್ತು ತಂತ್ರಜ್ಞಾನದ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.

‘ಬೆಂಗಳೂರು ನಗರ ಪೊಲೀಸರ ಫೇಸ್‌ಬುಕ್‌ಗೆ 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಇದ್ದಾರೆ. ಇದು ಪೊಲೀಸರಿಗೂ ವೇಗವಾಗಿ ಕೆಲಸ ಮಾಡಲು ನೆರವಾಗಿದೆ’ ಎಂದರು. ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದ ಅವರು, ‘ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕರ್ತವ್ಯದಲ್ಲಿ ಬಳಸಿಕೊಂಡು ಉತ್ತಮ ಹೆಸರು ಪಡೆಯಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ, ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಆರ್‌ಪಿಐ ಮಾರುತಿ ಹೆಗ್ಡೆ, ದಿಲೀಪ್  ಇದ್ದರು.  ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ಮಂಜುನಾಥ (ಸರ್ವೋತ್ತಮ), ಹಸನ್‌ಸಾಬ್ (ಒಳಾಂಗಣ ಮತ್ತು ಆಲ್‌ರೌಂಡರ್), ತೇಜಸ್ (ಹೊರಾಂಗಣ), ಫೈರಿಂಗ್ (ಗಿರೀಶ್ ಕೆ.ಎಸ್.) ಅವರಿಗೆ ಪ್ರಶಸ್ತಿ ನೀಡಲಾಯಿತು. ಆಕರ್ಷಕ ಪಥಸಂಚಲನ ನಡೆಯಿತು. 

‘ಗೌರವವೇ  ಪ್ರೇರಣೆ’

ಹಾವೇರಿ: ‘ಬಾಲ್ಯದಲ್ಲಿ ನಮ್ಮ ಊರಿಗೆ ಬರುತ್ತಿದ್ದ ಪೊಲೀಸರನ್ನು ಕಂಡಾಗ ಉಂಟಾಗುತ್ತಿದ್ದ ಭಯ ಹಾಗೂ ಊರವರು ಅವರ ಮೇಲೆ ಹೊಂದಿದ್ದ ಗೌರವವೇ ಇಲಾಖೆಗೆ ಸೇರಲು ಪ್ರೇರಣೆ ನೀಡಿತು’ ಎಂದು ಇಲ್ಲಿನ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ 6ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಶುಕ್ರವಾರ ‘ಡಿ.ಜಿ. ಮತ್ತು ಐ.ಜಿ.ಪಿ ಟ್ರೋಫಿ’ (ಸರ್ವೋತ್ತಮ ಪ್ರಶಿಕ್ಷಣಾರ್ಥಿ) ಪಡೆದ ಮಂಜುನಾಥ ಬಿ.ಎಸ್. ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನಾನು ಬೆಂಗಳೂರಿನ ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ ಕಾನ್‌ಸ್ಟೆಬಲ್ ಆಗಿ 3 ವರ್ಷಗಳ ಹಿಂದೆ ನೇಮಕಗೊಂಡಿದ್ದೆನು. ಆದರೆ, ತವರಿನಲ್ಲಿ ಸೇವೆ ಸಲ್ಲಿಸಬೇಕು ಎಂಬ ಇಚ್ಛೆಯಿಂದ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಗೆ ಸೇರಿದ್ದೇನೆ’ ಎಂದರು.

ಶಿವಮೊಗ್ಗದ ತೀರ್ಥಹಳ್ಳಿಯ ಹೆಗ್ಗೋಡು ಬಳಿಯ ಬೋಗಾರುಕೊಪ್ಪದ ಮಂಜುನಾಥ, ಬಿ.ಕಾಂ. ಪದವೀಧರರು. ಕೃಷಿಕರಾದ ಶಿವಪ್ಪ ಬಿ.ಎಸ್ ಹಾಗೂ ಲಲಿತಾ ದಂಪತಿ ಪುತ್ರ.

‘ಪೊಲೀಸ್ ಅಧಿಕಾರಿ ಆಗಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಇಲ್ಲಿ ಉತ್ತಮ ತರಬೇತಿ ನೀಡಿದರು’ ಎಂದರು.

ಅತ್ಯುತ್ತಮ ಪ್ರಶಿಕ್ಷಣಾರ್ಥಿ:  ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಆಯ್ಕೆಯಾದ, ರಾಯಚೂರಿನ ಮುದಗಲ್‌ನ ಹುಸೇನ್‌ಸಾಬ್   ‘ಆಲ್‌ರೌಂಡರ್ ಬೆಸ್ಟ್‌’ ಪ್ರಶಸ್ತಿಗೆ (ಅತ್ಯುತ್ತಮ ಪ್ರಶಿಕ್ಷಣಾರ್ಥಿ) ಪಾತ್ರರಾದರು. ರಹೀಮಾನ್‌ ಸಾಬ್ ಮತ್ತು ಜಹೀರಾಬಿ ದಂಪತಿ ಮಗನಾದ ಹುಸೇನ್‌ಸಾಬ್ ತಮ್ಮ ಮನೆಯಲ್ಲಿ  ಸರ್ಕಾರಿ ಕೆಲಸ ದೊರೆತ ಮೊದಲಿಗರಾಗಿದ್ದಾರೆ.

‘ಸಂಬಂಧಿಕರಾದ ಎಎಸ್‌ಐ ಇಮಾಮ್‌ಸಾಬ್ ಹಾಗೂ ಮೊಹೀನ್‌ ಸಾಬ್ ಅವರು ನೀಡಿದ ಪ್ರೇರಣೆ ಹಾಗೂ ಸಹಕಾರದಿಂದ ಪೊಲೀಸ್ ಇಲಾಖೆಗೆ ಸೇರಲು ಸಾಧ್ಯವಾಯಿತು’ ಎಂದು ಹುಸೇನ್‌ಸಾಬ್‌ ತಿಳಿಸಿದರು. ‘ಈ ಹಿಂದೆ ಬೆಂಗೂರಿನಲ್ಲೂ ಪೊಲೀಸ್ ಆಯ್ಕೆಗೆ ಯತ್ನಿಸಿ ವಿಫಲನಾಗಿದ್ದೆನು. ಆದರೆ, ಛಲ ಬಿಡದೇ ಪ್ರಯತ್ನ ಮುಂದುವರಿಸಿದ್ದು, ಈಗ ಸಂತಸ ನೀಡಿದೆ. ಇಲ್ಲಿ ಉತ್ತಮ ತರಬೇತಿ ಸಿಕ್ಕಿದೆ. ಇನ್ನೂ ಉನ್ನತ ಹುದ್ದೆಗೆ ಆಯ್ಕೆಯಾಗಲು ಪ್ರಯತ್ನ ನಡೆಸುತ್ತೇನೆ’ ಎಂದರು.

‘ವಾಟ್ಸಪ್‌– ಫೇಸ್‌ಬುಕ್’ ಮೇಲೆ  ಕಣ್ಣು

‘ಸಾಮಾಜಿಕ ಜಾಲತಾಣದ ಮೂಲಕ ಶಾಂತಿ ಕೆಡಿಸುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚುತ್ತಿದೆ. ಸುಳ್ಳು ಮಾಹಿತಿ, ವದಂತಿ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ ಈ ಕಿಡಿಗೇಡಿಗಳ ಮೇಲೆ ನಿಗಾ ಇರಿಸಲು ‘ಸಾಮಾಜಿಕ ಜಾಲತಾಣ ನಿರ್ವಹಣಾ ಕೋಶ’ವನ್ನು ಆರಂಭಿಸಲಾಗಿದೆ’ ಎಂದು ಐ.ಜಿ. ಡಾ.ಎಂ.ಎಂ. ಸಲೀಂ ಹೇಳಿದರು.

‘ಒಟ್ಟು 36 ಜಾಲತಾಣಗಳ ಮೇಲೆ ನಿಗಾ ಇರಿಸಲಾಗುವುದು. ನನ್ನ ನೇತೃತ್ವದಲ್ಲೇ ಕೋಶವು ಕಾರ್ಯ ನಿರ್ವಹಿಸಲಿದೆ’ ಎಂದು ಎಸ್ಪಿ ಸಿ. ವಂಶಿಕೃಷ್ಣ ಹೇಳಿದರು.

* *

ಹಳ್ಳಿಯಲ್ಲಿರುವ ಸಣ್ಣ ಮಕ್ಕಳೇ ಅಂತರ್ಜಾಲ ಬಳಕೆಯಲ್ಲಿ ನಿಪುಣರಾಗುತ್ತಿದ್ದಾರೆ. ತಂತ್ರಜ್ಞಾನಕ್ಕೆ ತಕ್ಕಂತೆ ಪೊಲೀಸರು ‘ಅಪ್‌ಡೇಟ್‌’ ಆಗುವುದು ಅನಿವಾರ್ಯ

ಡಾ. ಎಂ.ಎಂ. ಸಲೀಂ

ಐ.ಜಿ, ಪೂರ್ವ ವಲಯ

ಪ್ರತಿಕ್ರಿಯಿಸಿ (+)