ಶುಕ್ರವಾರ, ಡಿಸೆಂಬರ್ 13, 2019
16 °C

ಶುದ್ಧ ಸಸ್ಯಾಹಾರಿಗಳಿಗೆ ಹೋಟೆಲ್‌ ಊಟ ದುಬಾರಿ!

ಶಶಿಕಾಂತ ಎಸ್.ಶೆಂಬಳ್ಳಿ Updated:

ಅಕ್ಷರ ಗಾತ್ರ : | |

ಶುದ್ಧ ಸಸ್ಯಾಹಾರಿಗಳಿಗೆ ಹೋಟೆಲ್‌ ಊಟ ದುಬಾರಿ!

ಹೊಸಪೇಟೆ: ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.) ಕಾಯ್ದೆಯಿಂದ ದರ್ಶಿನಿ ಗಳಲ್ಲಿ ಉಪಾಹಾರ ಮತ್ತು ಊಟದ ಬೆಲೆ ಹೆಚ್ಚಳವಾಗಿದ್ದು, ಇದು ನೇರವಾಗಿ ಶುದ್ಧ ಸಸ್ಯಾಹಾರಿಗಳ ಜೇಬಿಗೆ ಇನ್ನಷ್ಟು ಹೊರೆ ಬಿದ್ದಿದೆ. ಜಿ.ಎಸ್‌.ಟಿ. ಬರುವ ಮುನ್ನ ದರ್ಶಿನಿಗಳ ಮೇಲೆ ಶೇ 5ರಷ್ಟು ತೆರಿಗೆ ಇತ್ತು. ಜುಲೈ ಒಂದರಿಂದ ಅದು ಶೇ 12ಕ್ಕೆ ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದೆ. ಇದರ ಬಿಸಿ ನೇರವಾಗಿ ಜನಸಾಮಾನ್ಯರಿಗೆ ತಟ್ಟುತ್ತಿದೆ.

ಈ ಹಿಂದೆ ಒಂದು ಕಪ್‌ ಚಹಾ, ಕಾಫಿಗೆ ₹10 ಇತ್ತು. ಜಿ.ಎಸ್‌.ಟಿ. ಬಳಿಕ ಅದರ ಬೆಲೆ ₹11.20ಕ್ಕೆ ಏರಿದೆ. ಎರಡು ಇಡ್ಲಿಗೆ ಹಿಂದೆ ₹25 ಇತ್ತು. ಇದೀಗ ₹28 ಆಗಿದೆ. ಒಂದು ಮಸಾಲೆ ದೋಸೆ ₹50ರಿಂದ ₨56ಕ್ಕೆ, ಒಂದು ಪ್ಲೇಟ್‌ ಪೂರಿ ₹40ರಿಂದ ₹44.80 ಪೈಸೆ, ದಕ್ಷಿಣ ಭಾರತದ ಊಟ ₹100ರಿಂದ ₹112, ಉತ್ತರ ಭಾರತದ ಊಟ ₹120ರಿಂದ ₹134ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ ಶೇ 50ರಷ್ಟು ಹೋಟೆಲ್‌ ಗಳಲ್ಲಿ ಜುಲೈ ಒಂದ ರಿಂದಲೇ ಜಿ.ಎಸ್‌.ಟಿ. ಜಾರಿಗೆ ಬಂದಿದೆ.

ಏಕಾಏಕಿ ಬೆಲೆ ಹೆಚ್ಚಿಸಿದರೆ ಗ್ರಾಹಕರನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂಬ ಆತಂಕದಲ್ಲಿ ಇನ್ನು ಳಿದ ಹೋಟೆಲ್‌ಗಳು ವಾರ ಕಳೆದರೂ ಹಳೆಯ ಬೆಲೆಯಲ್ಲಿಯೇ ಉಪಾಹಾರ, ಊಟ ಒದಗಿಸುತ್ತಿವೆ. ಆದರೆ, ದೈನಂದಿ ನ ವ್ಯವಹಾರದ ಮೇಲೆ ಯಾವುದೇ ವ್ಯತ್ಯಾಸ ಉಂಟಾಗಿಲ್ಲ.

‘ಕೇಂದ್ರ ಸರ್ಕಾರ ಜಿ.ಎಸ್‌.ಟಿ. ಜಾರಿಗೆ ತಂದಿರುವುದು ಒಳ್ಳೆಯದು. ಈ ಹಿಂದೆ ಮಾರಾಟ ಮತ್ತು ಸೇವಾ ತೆರಿಗೆ ಪ್ರತ್ಯೇಕವಾಗಿ ತುಂಬಬೇಕಿತ್ತು. ಈಗ ಆ ಜಂಜಾಟ ಇಲ್ಲ.  ಅಷ್ಟೇ ಅಲ್ಲ, ಕಾಳ ಸಂತೆಗೂ ಬ್ರೇಕ್‌ ಬಿದ್ದಿದೆ. ಆದರೆ, ಜಿ.ಎಸ್‌.ಟಿ.ಯಿಂದ ಶುದ್ಧ ಸಸ್ಯಾಹಾರ ಊಟ ಒದಗಿಸುವ ದರ್ಶಿನಿಗಳಿಗೆ ತೊಂದರೆಯಾಗಿದೆ.

ಇದರ ನೇರ ಪರಿಣಾಮ ಜನರ ಮೇಲೆ ಬೀಳುತ್ತದೆ’ ಎನ್ನುತ್ತಾರೆ ನಗರದ ಸ್ಟೇಶನ್‌ ರಸ್ತೆಯಲ್ಲಿ ರುವ ಪ್ರಿಯದರ್ಶಿನಿ ಹೋಟೆಲ್‌ ಮಾಲೀಕ ಶ್ರೀನಿವಾಸಬಾಬು. ‘ನಮ್ಮ ಹೋಟೆಲ್‌ನಲ್ಲಿ ಈಗಲೂ ಹಳೆಯ ಬೆಲೆಯಲ್ಲಿಯೇ ಆಹಾರ ಒದಗಿಸುತ್ತಿ ದ್ದೇವೆ. ಶೀಘ್ರದಲ್ಲೇ ಜಿ.ಎಸ್‌.ಟಿ. ಪ್ರಕಾರ ಹಣ ಪಡೆಯುತ್ತೇವೆ. ರಸೀದಿಯಲ್ಲಿ ಮೂಲ ಬೆಲೆ ಹಾಗೂ ಜಿ.ಎಸ್‌.ಟಿ. ದರ ಪ್ರತ್ಯೇಕವಾಗಿ ತೋರಿಸುತ್ತೇವೆ’ ಎಂದು ಹೇಳಿದರು.

‘ಕೆಲವು ಪದಾರ್ಥಗಳ ಬೆಲೆ ನಾಲ್ಕೈದು ರೂಪಾಯಿ ಹೆಚ್ಚಾಗಿದ್ದರೆ, ಮತ್ತೆ ಕೆಲ ತಿನಿಸುಗಳ ಬೆಲೆ ₹10ರಿಂದ ₹15ಕ್ಕೆ ಹೆಚ್ಚಾಗಿದೆ. ನಿತ್ಯ ಹೋಟೆಲ್‌ಗೆ ಬರುವ ಗ್ರಾಹಕರನ್ನು ಸಮಾಧಾನ ಪಡಿಸುವುದರಲ್ಲೇ ಹೋಗುತ್ತಿದೆ’ ಎನ್ನುತ್ತಾರೆ ನಗರದ ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ರಾಘು ಹೋಟೆಲ್‌ ಮಾಲೀಕ ರಾಜೀವ್‌ ತಿಳಿಸಿದರು.

‘ನಮ್ಮ ಹೋಟೆಲ್‌ ಗೆ ಬರುವ ಹೆಚ್ಚಿನವರು ಹಳೆಯ ಗ್ರಾಹಕರು. ಅವರನ್ನು ಕಳೆದುಕೊಳ್ಳಲು ಇಷ್ಟವಿಲ್ಲ.  ಎರಡ್ಮೂರು ತಿಂಗಳ ವರೆಗೆ ಸಮಸ್ಯೆ ಯಾಗಬಹುದು. ನಂತರ ಎಲ್ಲ ಸರಿ ಹೋಗಬಹುದು ಅಂದುಕೊಂಡಿದ್ದೇವೆ’ ಎಂದರು.

‘ಜಿ.ಎಸ್.ಟಿ. ಬಂದ ನಂತರ ಆಹಾರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ಈಗ ನೋಡಿದರೆ ಎಲ್ಲದರ ಬೆಲೆ ಹೆಚ್ಚಳವಾಗುತ್ತಿದೆ. ದರ್ಶಿನಿ, ಹೋಟೆಲ್‌ಗಳು ಶ್ರೀಮಂತರಿಗೆ ಮಾತ್ರ ಎಂಬಂತಾಗಿದೆ’ ಎಂದು ನಗರದ ಬಸವೇಶ್ವರ ಬಡಾವಣೆ ನಿವಾಸಿ ಯೂಸುಫ್‌ ಪಟೇಲ್‌ ಗೋಳು ತೋಡಿಕೊಂಡರು.

ಮದ್ಯ, ಮಾಂಸಪ್ರಿಯರಿಗೆ ಸಿಹಿ ಸುದ್ದಿ

ಜಿ.ಎಸ್‌.ಟಿ.ಯಿಂದ ದರ್ಶಿನಿಗಳ ಮೇಲಿನ ತೆರಿಗೆ ಹೆಚ್ಚಳವಾದರೆ, ಸಸ್ಯಾಹಾರ, ಮಾಂಸಾಹಾರ ಹಾಗೂ ಮದ್ಯ ಪೂರೈಸುವ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳ ತೆರಿಗೆ ಇಳಿಕೆಯಾಗಿದೆ. ರೆಸ್ಟೊರೆಂಟ್‌ಗಳಲ್ಲಿ ಈ ಹಿಂದೆ ಎಲ್ಲ ತರಹದ ಊಟದ ಮೇಲೆ ಶೇ 14.5ರಷ್ಟು ವ್ಯಾಟ್‌ ಹಾಗೂ ಶೇ 9ರಷ್ಟು ಸೇವಾ ತೆರಿಗೆ ಸೇರಿ ಒಟ್ಟು ಶೇ 23.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಜಿ.ಎಸ್‌.ಟಿ. ಬಂದ ಬಳಿಕ ಅದು ಶೇ 18ಕ್ಕೆ ಇಳಿದಿದೆ. ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತವಲ್ಲದ ರೆಸ್ಟೊರೆಂಟ್‌ಗಳಿಗೂ ಇಷ್ಟೇ ತೆರಿಗೆ ವಿಧಿಸಿರುವುದು ವಿಶೇಷ.

ಪ್ರತಿಕ್ರಿಯಿಸಿ (+)