ಸೋಮವಾರ, ಡಿಸೆಂಬರ್ 9, 2019
23 °C

ಬೀದಿನಾಯಿಗಳ ಹಾವಳಿ: ನಾಗರಿಕರ ಪರಿತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿನಾಯಿಗಳ ಹಾವಳಿ: ನಾಗರಿಕರ ಪರಿತಾಪ

ಕೆ.ಆರ್.ಪೇಟೆ: ಪಟ್ಟಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಬರೀ ಮಾತಾಗಿದೆ. ಹೀಗಾಗಿ, ಅನೈರ್ಮಲ್ಯ ಯಾವ ಬಡಾವಣೆಗೆ ಹೋದರೂ ಎದ್ದು ಕಾಣುತ್ತದೆ. ಇಂತಹ ಸ್ಥಿತಿಯಿರುವ ಪಟ್ಟಣದಲ್ಲಿ ಈಗ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ.

ಎಲ್ಲೆಂದರಲ್ಲಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು, ಸಾರ್ವಜನಿ ಕರು ಭಯದಿಂದ ತಿರುಗಾಡುವ ಸ್ಥಿತಿ ಇದೆ. ತಮ್ಮ ಮಕ್ಕಳನ್ನು ರಸ್ತೆಯಲ್ಲಿ ಆಟವಾಡಲು ಬಿಡದೆ ಮನೆಯಲ್ಲಿಯೇ ಕೂಡಿಹಾಕಿಕೊಳ್ಳಬೇಕಾದ ಪರಿಸ್ಥಿತಿ ನಾಗರಿಕರಿಗೆ ಉಂಟಾಗಿದೆ.

ಬೀದಿನಾಯಿಗಳನ್ನು ನಿಯಂತ್ರಿಸ ಬೇಕಾದ ಪುರಸಭೆ ಇತ್ತ ಗಮನ ಹರಿಸುತ್ತಿಲ್ಲ. ನಾಯಿ ಹಿಡಿದು ಅವುಗಳನ್ನು ದೂರ ಸಾಗಿಸಬೇಕು, ಇಲ್ಲ ಅವುಗಳನ್ನು ಹಿಡಿದು ಸಾಯಿಸುವ ಅಥವಾ ಸಂತಾನ ಶಕ್ತಿ ಹರಣ ಮಾಡುವ ಕ್ರಮ ಹಿಂದಿನಿಂದ ಇತ್ತಾದರೂ ಈಗ ಅದನ್ನು ಪುರಸಭೆ ಮರೆತಂತಿದೆ.

‘ಜನರ ಪ್ರಾಣ ರಕ್ಷಿಸಬೇಕಾದ ಪುರಸಭೆ ನಾಯಿ– ಹಂದಿಗಳ ಹಿಂಡು ಹೆಚ್ಚಾಗಲು, ಆ ಮೂಲಕ ನೈರ್ಮಲ್ಯ ಹಾಳಾಗಲು, ರೋಗ– ರುಜಿನಗಳು ಹೆಚ್ಚಾಗಲು ಪರೋಕ್ಷ ಬೆಂಬಲ ನೀಡುತ್ತಿದೆ’ ಎನ್ನುತ್ತಾರೆ ನಾಗರಿಕ ಸುರೇಶ್.

‘ನಮ್ಮ ಬೀದಿಯಲ್ಲಿ ಪ್ರತಿದಿನ ಹತ್ತಾರು ನಾಯಿಗಳು ಗುಂಪುಗುಂಪಾಗಿ ಓಡಾಡುತ್ತವೆ.  ಒಂದು ನಾಯಿ ಮಗುವನ್ನು ಅಟ್ಟಿಸಿಕೊಂಡುಬಂದರೆ ಸಾಕು ಎಲ್ಲ ನಾಯಿಗಳು ಒಟ್ಟಿಗೆ ದಾಳಿ ಇಡುತ್ತವೆ. ಇದರಿಂದ ನಮ್ಮ ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗೆ ಬಿಡದಂತಾಗಿದೆ. ಅಧಿಕಾರಿಗಳು ತಕ್ಷಣ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು’ ಎನ್ನುತ್ತಾರೆ ಹೇಮಾವತಿ ಬಡಾವಣೆ ನಿವಾಸಿ ಕವಿತಾ.

‘ವಾರದ ಎಲ್ಲ ದಿನವೂ ಒಂದಿಲ್ಲೊಂದು ಸಂತೆ ಪಟ್ಟಣದಲ್ಲಿ ನಡೆಯುತ್ತದೆ. ಗ್ರಾಮಾಂತರ ಪ್ರದೇಶದಿಂದ ಸಂತೆಗೆ ಬರುವ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು, ತೆಂಗಿನಕಾಯಿಗಳನ್ನು ಗಾಡಿಯಲ್ಲಿ ತರುವಾಗ ಜೊತೆಯಲ್ಲಿ ಅವರು ಸಾಕಿರುವ ನಾಯಿಗಳೂ ಬರುತ್ತವೆ. ಹೀಗೆ ಬಂದ ಬಹುತೇಕ ನಾಯಿಗಳು ವಾಪಸ್ ಹೋಗದೆ ಪಟ್ಟಣದಲ್ಲಿಯೇ ಉಳಿಯುತ್ತಿವೆ. ಇದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಪುರಸಭೆಯ ಅಧಿಕಾರಿಗಳು.

ನಾಯಿಗಳು ಸದಾ ಜಗಳವಾಡಿಕೊಂಡು ಪಟ್ಟಣದ ಬೀದಿಗಳನ್ನು ಸುತ್ತುತ್ತವೆ. ಸಿಕ್ಕವರನ್ನು ಕಚ್ಚುವುದು ಹೆಚ್ಚಾಗಿದೆ. ತಕ್ಷಣ ಕ್ರಮ ಜರುಗಿಸಿ ನಾಯಿಗಳಿಂದ  ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

 

ಪ್ರತಿಕ್ರಿಯಿಸಿ (+)