ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಬೆಳೆಯುವ ರೈತರಲ್ಲಿ ಆತಂಕ

Last Updated 8 ಜುಲೈ 2017, 9:17 IST
ಅಕ್ಷರ ಗಾತ್ರ

ಮಡಿಕೇರಿ: ಮಲೆನಾಡು, ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲೇ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆ ಆಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಈ ಬಾರಿಯೂ ಜಿಲ್ಲೆ ಬರಕ್ಕೆ ತುತ್ತಾಗಲಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿದ್ದು ಭತ್ತದ ಕೃಷಿಗೆ ನೀರಿನ ಕೊರತೆ ಎದುರಾಗುವ ಆತಂಕವಿದೆ.

ಜೂನ್‌ ಕೊನೆಯಲ್ಲಿ ಸುರಿದಿದ್ದ ಭಾರೀ ಮಳೆಗೆ ರೈತರು ಭತ್ತ ನಾಟಿಗೆ ಸಸಿಮಡಿ ಮಾಡಿಕೊಂಡಿದ್ದರು. ಜಿಲ್ಲೆಯ ಕೆಲವು ಕಡೆ ಈಗಾಗಲೇ ಸಸಿ ಬೆಳೆದು ನಿಂತಿದೆ. ಇನ್ನು ಕೆಲವು ಕಡೆ ಸಸಿ ಮಡಿಗೆ ನೀರಿನ ಕೊರತೆ ಎದುರಾಗಿದೆ.

ಭಾಗಮಂಡಲ, ನಾಪೋಕ್ಲು, ಶ್ರೀಮಂಗಲ, ಚೆಯ್ಯಂಡಾಣೆ, ಮರಗೋಡು, ಸಂಪಾಜೆ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಹಳ್ಳಗಳಲ್ಲಿ ಹರಿಯುತ್ತಿರುವ ನೀರನ್ನು ಗದ್ದೆಗಳಿಗೆ ಹರಿಸಿಕೊಳ್ಳುತ್ತಿರುವ ಪರಿಣಾಮ ಸಸಿ ಹಸಿರಾಗಿದೆ. ಆದರೆ, ಬಿಟ್ಟಂಗಾಲ, ಸುಂಟಿಕೊಪ್ಪ, ಸಿದ್ದಾಪುರ, ತಿತಿಮತಿ, ಬಾಳೆಲೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಚೆನ್ನಯ್ಯನಕೋಟೆಯಲ್ಲಿ ಸಸಿಮಡಿ ಹಾಕಿದ್ದರೂ ನಾಟಿ ಕಾರ್ಯದ ಸಿದ್ಧತೆಗೆ ನೀರಿನ ಕೊರತೆಯಿದೆ. ಹಳ್ಳ, ತೋಡುಗಳ ಪಕ್ಕದ ಭತ್ತದ ಗದ್ದೆಗಳಿಗೆ ಮಾತ್ರ ನೀರು ಲಭ್ಯವಾಗುತ್ತಿದ್ದು, ಮಧ್ಯಭಾಗದ ಗದ್ದೆಗಳಿಗೆ ನೀರಿಲ್ಲದ ಸ್ಥಿತಿಯಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಗದ್ದೆಗಳಲ್ಲಿ ನೀರು ಆವರಿಸಿಕೊಳ್ಳುತ್ತಿಲ್ಲ. ಕೊಡ್ಲಿಪೇಟೆ, ಶಾಂತಳ್ಳಿ, ಕೂಡಿಗೆ, ಹೆಬ್ಬಾಲೆ, ಕುಶಾಲನಗರ, ಹಾನಗಲ್ಲು, ಶನಿವಾರಸಂತೆಯಲ್ಲಿ ಭತ್ತದ ಸಸಿ ಮಡಿಗೂ ನೀರಿಲ್ಲ. ಕಳೆದ ವರ್ಷವೂ ಭತ್ತದ ಕದಿರುಕಟ್ಟುವ ವೇಳೆಗೆ ಮಳೆ ಕೈಕೊಟ್ಟು ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ನಾಟಿ ಮಾಡಲೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಗೆ ರೈತರು ಸಿಲುಕಿದ್ದಾರೆ.

2,500 ಹೆಕ್ಟೇರ್‌ ಪ್ರದೇಶ: ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 2,000 ಹೆಕ್ಟೇರ್‌್ ಹಾಗೂ ಚಿಕ್ಲಿಹೊಳೆ ನೀರು ಬಳಸಿಕೊಂಡು 400 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ಚಿಕ್ಲಿಹೊಳೆ ಇನ್ನೂ ಭರ್ತಿಗೊಂಡಿಲ್ಲ.

ಹಾರಂಗಿಗೆ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಇಲ್ಲ. ಕಳೆದ ವರ್ಷದ ಜುಲೈ 10ರ ವೇಳೆಗೆ ಹಾರಂಗಿ ಭರ್ತಿಗೊಂಡಿತ್ತು. ಹಾರಂಗಿ ಜಲಾಶಯದ ಗರಿಷ್ಠಮಟ್ಟವು 2,859 ಅಡಿಗಳಾಗಿದ್ದು, 2,829.83 ಅಡಿ ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,849 ಅಡಿಗೆ ತಲುಪಿತ್ತು.

ಕಳೆದ ವರ್ಷ ಆರಂಭದಲ್ಲಿ ಹಾರಂಗಿಯಿಂದ ಭತ್ತದ ನಾಟಿಗೆ ನೀರು ಹರಿಸಲಾಗಿತ್ತು. ಕಾಳುಕಟ್ಟುವ ವೇಳೆಯಲ್ಲಿ ತಮಿಳುನಾಡಿಗಾಗಿ ಹಾರಂಗಿಯಿಂದಲೂ ನೀರು ಹರಿದುಹೋಯಿತು. ಆಗ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಒಣಗಿತ್ತು. ಹೀಗಾಗಿ, ಶಿರಂಗಾಲ, ಹೆಬ್ಬಾಲೆ, ಸಿದ್ದಾಪುರ ಗೇಟ್‌ ಸುತ್ತಮುತ್ತ ಭತ್ತದ ಕೃಷಿಯತ್ತ ರೈತರ ಆಸಕ್ತಿ ಕಡಿಮೆಯಾಗಿದೆ.

ಉತ್ತರ ಕೊಡಗು ವ್ಯಾಪ್ತಿಯಲ್ಲಿ 3,500 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಕಳೆದ ತಿಂಗಳು ಸುರಿದ ಮಳೆಗೆ ಬೆಳೆ ಉತ್ತಮವಾಗಿದೆ. ಒಂದು ವಾರದಿಂದ ಮಳೆ ಕೊರತೆ ಎದುರಾಗಿದ್ದು ಮುಸುಕಿನ ಜೋಳ ಮಳೆಯನ್ನು ಬೇಡುತ್ತಿದೆ. ಸೋಮವಾರಪೇಟೆ, ಶನಿವಾರಸಂತೆ, ಕುಶಾಲನಗರ ವ್ಯಾಪ್ತಿಯಲ್ಲಿ ಶುಂಠಿಯನ್ನು ವ್ಯಾಪಕವಾಗಿ ಹಾಕಲಾಗಿದ್ದು ಅದಕ್ಕೂ ಮಳೆಯ ಕೊರತೆ ಎದುರಾಗಿದೆ.

ಭತ್ತ ಬೆಳೆಯುವ ಪ್ರದೇಶ ಹೆಕ್ಟೇರ್‌ಗಳಲ್ಲಿ
30,500 ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ

6,500 ಮಡಿಕೇರಿ ತಾಲ್ಲೂಕು

7,600 ಸೋಮವಾರಪೇಟೆ ತಾಲ್ಲೂಕು

14,000 ವಿರಾಜಪೇಟೆ ತಾಲ್ಲೂಕು

2,400 ಹಾರಂಗಿ, ಚಿಕ್ಲಿಹೊಳೆ ವ್ಯಾಪ್ತಿಯ ನೀರಾವರಿ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT