ಭಾನುವಾರ, ಡಿಸೆಂಬರ್ 8, 2019
21 °C

ಸಮಗ್ರ ಕೃಷಿಯಿಂದ ರೈತರ ಆರ್ಥಿಕ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಗ್ರ ಕೃಷಿಯಿಂದ ರೈತರ ಆರ್ಥಿಕ ಪ್ರಗತಿ

ಅರಕಲಗೂಡು: ಸಮಗ್ರ ಕೃಷಿಯಿಂದ ಮಾತ್ರ ರೈತರಿಗೆ ಲಾಭ ಸಾಧ್ಯ. ರೈತರು ಸಮಗ್ರ ಕೃಷಿಗೆ ಒತ್ತುನೀಡಬೇಕು ಎಂದು ಉಪ ಕೃಷಿ ನಿರ್ದೇಶಕಿ ಎ.ಎಸ್.ಕೋಕಿಲಾ ತಿಳಿಸಿದರು. ಕೃಷಿ ಇಲಾಖೆ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಕಸಬಾ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಏಕ ಬೆಳೆ ಅವಲಂಬಿಸಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ. ಹೈನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಸಂಬಂಧಿತ ಚಟುವಟಿಕೆ ಪಾಲಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 58 ಸಾವಿರ ಮಣ್ಣು ಮಾದರಿ ಪರೀಕ್ಷಿಸಿ 4.35ಲಕ್ಷ ರೈತರಿಗೆ ಮಣ್ಣು ಫಲವತ್ತತೆ ಕುರಿತ  ಪ್ರಮಾಣಪತ್ರ ವಿತರಿಸಿದ್ದು, ಈ ಬಾರಿ 28 ಸಾವಿರ ಮಣ್ಣು ಮಾದರಿ ಪರೀಕ್ಷೆ ಗುರಿ ಇದೆ. ಪ್ರಸ್ತುತ 2 ರಿಂದ 3 ಸಾವಿರ ಮಾದರಿಗಳ ಪರೀಕ್ಷೆ ನಡೆದಿದೆ ಎಂದರು.

ಕೃಷಿ ಭಾಗ್ಯ ಯೋಜನೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಮಳೆ ನೀರನ್ನು ಸಂಗ್ರಹಕ್ಕೆ ಒತ್ತು ನೀಡುವುದು ಇದರ ಉದ್ದೇಶ. ಬದುಗಳು, ಕೃಷಿ ಹೊಂಡ ನಿರ್ಮಾಣ, ನೀರನ್ನು ಕೃಷಿಗೆ ಬಳಸಿಕೊಳ್ಳಲು ಪಂಪ್ ಸೆಟ್ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಕೆ ಕುರಿತ ನಾಲ್ಕು ಹಂತಗಳ ಪ್ಯಾಕೇಜನ್ನು ಈ ಯೋಜನೆ ಹೊಂದಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ 80 ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ರೈತರಿಗೆ ಶೇ 90 ಸಹಾಯ ಧನ ದೊರಕಲಿದೆ ಎಂದು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ  ತಾ.ಪಂ ಉಪಾಧ್ಯಕ್ಷ ಎಸ್‌.ಆರ್‌. ನಾಗರಾಜ್‌, ಲಾಭದಾಯಕವಲ್ಲ ಎಂದು ಯುವ ಜನರು ಕೃಷಿ ವಿಮುಖರಾಗು ತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಪರಿಸ್ಥಿತಿ ಗಂಭೀರವಾಗಲಿದೆ. ಈ ಕುರಿತು ಚಿಂತನೆ ಅಗತ್ಯ ಎಂದರು.

ಕೃಷಿ ವಿಜ್ಞಾನಿಗಳಾದ ಡಾ. ಮಂಜುನಾಥ್, ಡಾ ಪಿ.ಎಸ್.ಪ್ರಸಾದ್‌ ಮಾತನಾಡಿದರು. ಜಿ.ಪಂ.ಸದಸ್ಯೆ ರತ್ನಮ್ಮ ಲೋಕೇಶ್‌ ಅಧ್ಯಕ್ಷತೆ ವಹಿಸಿದ್ದರು, ತಾ.ಪಂ. ಸದಸ್ಯರಾದ ಕಾಂತಮ್ಮ, ವೀರಾಜ್, ಡಿ.ಎಂ ಸರಿತಾ, ಜಿ.ಪಂ. ಮಾಜಿ ಸದಸ್ಯ ವಿ.ಎ. ನಂಜುಂಡ ಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷ ನರಸೇಗೌಡ, ಗ್ರಾ.ಪಂ ಅಧ್ಯಕ್ಷ ರೇವುಕುಮಾರಿ, ಪ.ಪಂ.ಉಪಾಧ್ಯಕ್ಷೆ ಸಾಕಮ್ಮ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ.ಕವಿತಾ, ಕೃಷಿ ಅಧಿಕಾರಿ ಕೆ.ಟಿ.ಭಾಸ್ಕರ್‌ ಉಪಸ್ಥಿತರಿದ್ದರು. ಇದಕ್ಕೆ ಮುನ್ನ ಕೃಷಿ ರಥಯಾತ್ರೆ ನಡೆಯಿತು

ಪ್ರತಿಕ್ರಿಯಿಸಿ (+)