ಭಾನುವಾರ, ಡಿಸೆಂಬರ್ 15, 2019
18 °C

ಬಂಟ್ವಾಳದಲ್ಲಿ ಮತ್ತೊಂದು ಚೂರಿ ಇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳದಲ್ಲಿ ಮತ್ತೊಂದು ಚೂರಿ ಇರಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಮತ್ತೊಂದು ಚೂರಿ ಇರಿತ ಪ್ರಕರಣ ಶನಿವಾರ ಮಧ್ಯಾಹ್ನ ನಡೆದಿದೆ.

ಮಂಗಳವಾರ ಚೂರಿ ಇರಿತದಿಂದ ಗಾಯಗೊಂಡು ಶುಕ್ರವಾರ ಮೃತಪಟ್ಟಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ  ಪಾರ್ಥಿವ ಶರೀರದ ಮೆರವಣಿಗೆ ಸಾಗಿಹೋದ ಬೆನ್ನಲ್ಲೇ ಕೈಕಂಬದಲ್ಲಿ ರಿಯಾಝ್‌ ಎಂಬ ಯುವಕನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ.

ಗಾಯಗೊಂಡಿರುವ ರಿಯಾಝ್‌ ಫರಂಗಿಪೇಟೆ ನಿವಾಸಿ. ಬೈಕ್‌ನಲ್ಲಿ ಹೋಗುತ್ತಿದ್ದ ತನ್ನನ್ನು ಬೆನ್ನಟ್ಟಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಗಾಯಾಳುವನ್ನು ಮಂಗಳೂರಿನ ಹೈಲ್ಯಾಂಡ್‌ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ, ‘ಚೂರಿ ಇರಿತದಿಂದ ಗಾಯಗೊಂಡಿರುವ ಬಗ್ಗೆ ನಮಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಕೈಕಂಬದಲ್ಲಿ ಬೆಳಿಗ್ಗೆ ನಡೆದ ಕಲ್ಲು ತೂರಾಟದ ಸಮಯದಲ್ಲಿ ಗಾಯಗೊಂಡಿರುವ ಸಾಧ್ಯತೆಯೂ ಇದೆ. ಪರಿಶೀಲನೆ ನಡೆಸಲಾಗುವುದು’ ಎಂದರು.

11 ಮಂದಿ ಬಂಧನ:

ಶರತ್‌ ಮಡಿವಾಳ ಶವಯಾತ್ರೆಯ ಹಿಂದೆ ಸಾಗುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಪೊಲೀಸರು ಈವರೆಗೆ 11 ಮಂದಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ಬಂಟ್ವಾಳದ ಸಜಿಪ ಗ್ರಾಮದ ಕೆಂದೂರಿನಲ್ಲಿ ಶರತ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಶನಿವಾರ ಮಧ್ಯಾಹ್ನ ನಡೆಯಿತು. ಸಂಘ ಪರಿವಾರದ ಸಾವಿರಾರು ಕಾರ್ಯಕರ್ತರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಪ್ರತಿಕ್ರಿಯಿಸಿ (+)