ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬಸ್ತಾನದಲ್ಲೊಬ್ಬ ಅಪರೂಪದ ಒಂಟೆ ವೈದ್ಯ

Last Updated 8 ಜುಲೈ 2017, 19:30 IST
ಅಕ್ಷರ ಗಾತ್ರ

ಒಂಟೆಗಳ ಆರೈಕೆ, ಸೇವೆ ಮಾಡೋದಕ್ಕಾಗಿಯೇ ಅಲ್ಲಾಹು (ದೇವರು) ನಿಮ್ಮನ್ನು ಇಲ್ಲಿಗೆ ಕಳಿಸಿದ್ದಾನೆ. ಅದನ್ನು ಶ್ರದ್ಧೆಯಿಂದ ಮಾಡಿ. ನಿಮ್ಮನ್ನು ಅಲ್ಲಾಹು ಸುಖವಾಗಿ ನೋಡಿಕೊಳ್ಳುತ್ತಾನೆ. ಯಾವುದಕ್ಕೂ ಚಿಂತೆ ಮಾಡಬೇಡಿ!’ ಎಂದು ಉದ್ಗರಿಸಿದವರು ಅರಬ್ಬೀ ರೈತ ಮಹಮ್ಮದ್ ನಿಯಾದಿ. ಆತ ಹಾಗೆ ಹೇಳಿದ್ದು ಅಲ್‌ಏನ್‌ನ (AlAin) ಸುತ್ತಮುತ್ತಲಿನ ನೂರಾರು ಹಳ್ಳಿಗಳಲ್ಲಿ ಮನೆಮಾತಾಗಿರುವ ಒಂಟೆವೈದ್ಯ ಡಾ. ರಾಮಚಂದ್ರ ಭಟ್‌ ಅವರ ಬಗ್ಗೆ. 

ಅರಬರು ಒಂಟೆಯನ್ನು ಬಹಳ ಪ್ರೀತಿಸುತ್ತಾರೆ. ಹಿಂದುಗಳಿಗೆ ಹಸು ಹೇಗೆ ಪೂಜ್ಯವೋ ಹಾಗೆಯೇ ಅರಬರಿಗೆ ಒಂಟೆ ಪೂಜನೀಯ. ಅಷ್ಟೇ ಅಲ್ಲ ಒಂಟೆ ಅವರ ಮನೆಯ ಸದಸ್ಯನಂತೆ. ರೇಸಿನಲ್ಲಿ ಗೆಲ್ಲುವ ಮೂಲಕ ಒಂಟೆ ತನ್ನ ಒಡೆಯನ ಮನೆತನದ ಮರ್ಯಾದೆಯನ್ನು ಬೆಳಗುತ್ತದೆ. ಹಾಲು ಕೊಡುವ ಒಂಟೆಗಿಂತ ರೇಸಿನಲ್ಲಿ ಗೆಲ್ಲುವ ಒಂಟೆಗೆ ಬೆಲೆ ಹೆಚ್ಚು. ಅರಬರು ರೇಸಿಗಾಗಿ, ಸರಕು ಸಾಗಾಣಿಕೆಗಾಗಿ, ಹಾಲುಹೈನಕ್ಕಾಗಿ ಸಾಕುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾಂಸಕ್ಕಾಗಿ ಒಂಟೆಗಳನ್ನು ಬಳಸುತ್ತಾರೆ. 

ತನ್ನ ವೃತ್ತಿಪರತೆಯಿಂದ, ಮಾನವೀಯತೆಯಿಂದ ಗ್ರಾಮೀಣ ಅರಬರ ಮನಸ್ಸನ್ನು ಗೆದ್ದಿರುವ ಡಾ. ರಾಮಚಂದ್ರ ಭಟ್ಟರು ನಮ್ಮವರು. ಕನ್ನಡದವರು. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೀರ್‌ಗಾನ್ ಗ್ರಾಮದ ದಿವಂಗತ ವೆಂಕಟ್ರಮಣ ಭಟ್ಟ್ ಮತ್ತು ಶಾರದಾ ಭಟ್ಟ್ ದಂಪತಿಯ ಪುತ್ರರು. ನಾಲ್ಕುಜನ ಅಣ್ಣಂದಿರು ಮತ್ತು ಇಬ್ಬರು ತಂಗಿಯರ ತುಂಬು ಸಂಸಾರದಲ್ಲಿ ಮುದ್ದಿನಿಂದ ಬೆಳೆದವರು. ನೀರ್ಗಾನ್ ಭಟ್ಟರದ್ದು ಇಂದಿಗೂ ವೈದಿಕಕ್ಕೆ ಹೆಸರಾದ ಮನೆತನ. 

ರಾಮಚಂದ್ರ ಭಟ್ಟ್‌ರು ನೀರ್ಗಾನಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ, ತಟ್ಟೀಕೈಲ್ಲಿ ಹೈಸ್ಕೂಲನ್ನೂ, ಧಾರವಾಡದ ಪ್ರತಿಷ್ಠಿತ ಜೆಎಸ್ಸೆಸ್ ಕಾಲೇಜಿನಲ್ಲಿ ಪಿಯುಸಿ ಓದಿಕೊಂಡು ಮುಂದೆ ಬೀದರಿನ ಸರಕಾರಿ ವೆಟರ್ನರಿ ಕಾಲೇಜಿನಲ್ಲಿ ಪಶುವೈದ್ಯಕೀಯವನ್ನು ಓದಿ ಯಶಸ್ವಿಯಾಗಿ 1994ರ ಜುಲೈನಲ್ಲಿ ಪದವೀಧರರಾದರು. ಪದವೀಧರರಾದ ನಂತರ ಬೆಂಗಳೂರಿನ ರ್‌್ಯಾಲೀಸ್ ಇಂಡಿಯಾ ಪ್ರೈ ಲಿ. ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸವನ್ನು ಪ್ರಾರಂಭಿಸಿದರು. ನಂತರ ಇಂಡಿಯಾನಾ ಡೈರಿಯಲ್ಲಿ ಎರಡೂವರೆ ವರ್ಷ ಕೆಲಸ ಮಾಡಿದರು. ಅಲ್ಲಿರುವಾಗ ಇಂಡಿಯಾನಾ ಫೌಂಡೇಶನ್‌ಅನ್ನು ಪ್ರಾರಂಭಿಸಿ, ತಾನು ಕೆಲಸ ಮಾಡುತ್ತಿದ್ದ ಕಂಪೆನಿಯು ತನ್ನ ಸೇವಾಕ್ಷೇತ್ರವನ್ನು ಪಶುವೈದ್ಯಕೀಯಕ್ಕೆ ವಿಸ್ತರಿಸುವುದಕ್ಕೂ ಕಾರಣೀಕರ್ತರಾದರು. ಅವರಲ್ಲಿ ಕೆಲಸ ಮಾಡುವ ಉತ್ಸಾಹ ಮತ್ತು ಹೊಸತನ್ನು ಹುಡುಕುವ ಕ್ರಿಯಾಶೀಲತೆಗಳಿದ್ದವು. 

‘ನನಗೆ ಕಾಲೇಜಿನ ದಿನಗಳಿಂದಲೂ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಆಸೆ ಇತ್ತು. ಅದಕ್ಕೆ ಪೂರಕವಾಗಿ ದುಬೈನಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ ಆಗಿದ್ದ ಅಣ್ಣ ಗಣಪತಿ ಭಟ್ಟ್ ಪ್ರೋತ್ಸಾಹಪೂರ್ವಕವಾಗಿ ಕರೆದರು. ಹಾಗಾಗಿ ೧997ರ ಜುಲೈನಲ್ಲಿ ನಾನು ದುಬೈಗೆ ಹೋದೆ. ಕೆಲವು ದಿನಗಳು ಅಣ್ಣನ ಮನೆಯಲ್ಲಿದ್ದೆ. ನಂತರ ಗಲ್ಫ್ ವೆಟರ್ನರಿ ಸೆಂಟರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಅವರು ನನಗೆ ಅಲ್‌ಏನ್‌ನಲ್ಲಿ ಪಶುವೈದ್ಯನಾಗಿ ಕೆಲಸವನ್ನು ಮಾಡುವಂತೆ ನಿಯೋಜಿಸಿದರು’ ಎಂದು ಡಾ. ಭಟ್ಟರು ವಿದೇಶದಲ್ಲಿ ತನ್ನ ವೃತ್ತಿಯನ್ನು ಶುರು ಮಾಡಿದ ದಿನಗಳ ಬಗ್ಗೆ ನೆನಪಿಸಿಕೊಳ್ಳುತ್ತಾರೆ. 

ಅರಬರ ದೇಶದಲ್ಲಿ ಡಾಕ್ಟರ್ ಭಟ್ಟರ ಪ್ರಾರಂಭದ ದಿನಗಳು ಕಷ್ಟಕರವಾಗಿದ್ದವು. ಹುಟ್ಟಾ ಸಂಪೂರ್ಣ ಸಸ್ಯಾಹಾರಿಯಾಗಿರುವ ಭಟ್ಟರಿಗೆ ಊಟ ತಿಂಡಿಯದ್ದು ಮೊದಲನೆಯ ಸಮಸ್ಯೆಯಾದರೆ, ಎರಡನೆಯದ್ದು ಭಾಷಾ ಸಮಸ್ಯೆ. ಅವರಿಗೆ ಅರೆಬಿಕ್ ಬರುತ್ತಿರಲಿಲ್ಲ. ಹಿಂದಿಯೂ ಅಷ್ಟೇ ಚಿಂದಿ ಚಿಂದಿಯಾಗಿತ್ತು. 

ಅರಬರ ಜೊತೆಗೆ ಅವರ ಭಾಷೆಯಲ್ಲಿ ಮಾತನಾಡದಿದ್ದರೆ ಸಮಸ್ಯೆ ಮುಗಿಯುವುದಿಲ್ಲ ಎನ್ನುವುದನ್ನು ಬೇಗನೇ ಅರ್ಥಮಾಡಿಕೊಂಡ ಭಟ್ಟರು ಆರೇಳು ತಿಂಗಳಲ್ಲಿ ಅರಬ್ಬಿಯಲ್ಲಿ ಮಾತನಾಡುವುದನ್ನು ಕಲಿತುಕೊಂಡರು. ಈಗಂತೂ ಅವರು ಅರಬರಂತೆಯೇ ಮಾತನಾಡುತ್ತಾರೆ. ಅರಬ್ಬರೂ ಅಷ್ಟೇ ಪ್ರೀತಿಯಿಂದ ಇವರನ್ನು ನಡೆಸಿಕೊಳ್ಳುತ್ತಾರೆ. 

ಮದುವೆಯಾಗಿ ಸಂಸಾರವನ್ನು ಕರೆದುಕೊಂಡು ಹೋಗುವವರೆಗೆ ಅವರ ಪಾಲಿಗೆ ಬದುಕು ಅಸಹನೀಯವಾಗಿತ್ತು. ಬೆಳಿಗ್ಗೆ ಸ್ವಯಂಪಾಕ! ಉಳಿದಂತೆ ಪ್ರತಿದಿನ ಎರಡು ಖುಬ್ಬೂಸ್ (ಮೈದಾಹಿಟ್ಟಿನಿಂದ ತಯಾರಿಸಿದ ದಪ್ಪನೆಯ ಒಣ ರೊಟ್ಟಿ) ಮತ್ತು ಒಂದು ಗ್ಲಾಸ್ ಟೀ ಅಷ್ಟೇ ಊಟ-ತಿಂಡಿಯಾಗಿತ್ತು. ಅಲ್ಲಿಗೆ ಹೋಗಿ ಒಂದೇ ವರ್ಷದಲ್ಲಿ ಡ್ರೈವಿಂಗ್ ಲೈಸೆನ್ಸ್ ತಗೊಂಡಿದ್ದೂ ಸಾಧನೆಯ ಪಟ್ಟಿಯಲ್ಲಿಯೇ ಬರುತ್ತದೆ ಎಂದು ನಸುನಗುತ್ತಾರೆ.

ಮೊದಲು ಏಳು ವರ್ಷಗಳ ಕಾಲ ಬೇರೆ ಕಂಪೆನಿಯಲ್ಲಿ ಪಶುವೈದ್ಯರಾಗಿ ಕೆಲಸ ಮಾಡಿದ ನಂತರ ಡಾ. ರಾಮಚಂದ್ರ ಭಟ್ಟರು 2004ರಲ್ಲಿ ಎರ್ಜುವಾನ್ ವೆಟರ್ನರಿ ಎಸ್ಟಾಬ್ಲಿಶ್ಮೆಂಟ್ ಎನ್ನುವ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿದರು. ಇದರ ಮೂಲಕ ಪಶುವೈದ್ಯಕೀಯ ಸೇವೆ ಮತ್ತು ಪಶು ಔಷಧಿಯ ವ್ಯಾಪಾರವನ್ನು ಶುರು ಮಾಡಿದರು. ಅವರು ಭಾರತದಿಂದ ಪಶು ಆಹಾರ ಮತ್ತು ಔಷಧಿಗಳನ್ನು ತರಿಸಿಕೊಂಡು ಯು.ಎ.ಈ ಮತ್ತು ಓಮನ್ ದೇಶಗಳಲ್ಲಿ ಮಾರುವುದಕ್ಕೂ ಲೈಸೆನ್ಸನ್ನು ಪಡೆದುಕೊಂಡಿದ್ದಾರೆ. ದಿನ ಕಳೆಯುತ್ತಿದ್ದಂತೆಯೇ ಅವರ ಜನಾನುರಾಗಿ ವ್ಯಕ್ತಿತ್ವ, ಪ್ರಾಮಾಣಿಕ ಪ್ರಯತ್ನ ಮತ್ತು ಸೇವೆಯಲ್ಲಿನ ಶ್ರದ್ಧೆ ಅವರು ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ ಹೋಗುವಂತೆ ಮಾಡಿದವು. ತನ್ನ ಸಂಸ್ಥೆಯಲ್ಲಿ ಬಹಳಷ್ಟು ಭಾರತೀಯರಿಗೆ ಕೆಲಸ ಕೊಟ್ಟು ಜೀವನ ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಿದ್ದಾರೆ. ಬೇರೆ ಕಡೆಗಳಲ್ಲಿಯೂ ಕೆಲಸ ಕೊಡಿಸಿದ್ದಾರೆ. 

ಡಾ. ರಾಮಚಂದ್ರ ಭಟ್ಟರು ಒಂಟೆಗಳ ಗರ್ಭಧಾರಣೆಯ ವಿಷಯದಲ್ಲಿ ವಿಶೇಷ ಪರಿಣಿತಿಯನ್ನು ಸಾಧಿಸಿದ್ದಾರೆ. ಶಕ್ತಿಶಾಲಿಯಾದ ಆರೋಗ್ಯವಂತ ಮರಿ ಹುಟ್ಟುವಂತೆ ಸೆಲೆಕ್ಟಿವ್ ಬ್ರೀಡಿಂಗ್‌ಗೆ ಸಹಾಯ ಮಾಡುತ್ತಾರೆ. ಹೀಗೆ ಹುಟ್ಟಿದ ಮರಿಗಳು ಮುಂದೆ ರೇಸುಗಳಲ್ಲಿ ಚಾಂಪಿಯನ್ ಒಂಟೆಗಳಾದಾಗ ಅದರ ಮಾಲೀಕರು ಬಹಳ ಸಂಭ್ರಮ ಪಡುತ್ತಾರೆ. ನಾನು ಕಂಡಂತೆ ಅಲ್ ಏನಿನ ಸುತ್ತಲಿನ ಮರುಭೂಮಿಯಲ್ಲಿನ ಅಲ್ಫೋಹಾ, ಮಲಗಾತ್, ಸೈಯಸ್‌ಬ್ರಾ, ಮಝೀಯದ್ ಮುಂತಾದ ಹಲವಷ್ಟು ಹಳ್ಳಿಯ ಜನರು ಡಾ. ಭಟ್ಟರನ್ನು ಬಹಳ ಗೌರವದಿಂದ, ಪ್ರೀತಿಯಿಂದ ಕಾಣುತ್ತಾರೆ. ಡಾ. ಭಟ್ಟರೇ ಬಂದು ತಮ್ಮ ಒಂಟೆಗಳನ್ನು, ಕುರಿಗಳನ್ನು ಪರೀಕ್ಷಿಸಬೇಕೆಂದು ಬಯಸುತ್ತಾರೆ.

ಅವರ ಕೈಗುಣವನ್ನು ನಂಬುತ್ತಾರೆ. ಯು.ಎ.ಇ(UAE) ಯ ಸಂಸ್ಥಾಪಕ ದಿವಂಗತ ಶೇಖ್ ಜಾಯೇದ್ ಬಿನ್ ಅಲ್ ನಯಾದ್ ಅವರ ಮೂರನೆಯ ಪತ್ನಿಯ ಕಿರಿಯ ಸಹೋದರ ತಾನೀ ಧರ್ಮಖಿ ಅವರ ರೇಸ್ ಒಂಟೆಗಳನ್ನು ಹಾಗೂ ಹೈನುಗಾರಿಕೆ ಒಂಟೆಗಳನ್ನು ಡಾ. ರಾಮಚಂದ್ರ ಭಟ್ಟರೇ ನೋಡಿಕೊಳ್ಳುತ್ತಾರೆ ಎನ್ನುವುದು ಅವರ ಸಾಧನೆ ಮತ್ತು ಅರಬಸ್ಥಾನದಲ್ಲಿ ಅವರ ಸೇವಾವ್ಯಾಪ್ತಿಗೆ ಒಂದು ಉದಾಹರಣೆ ಮಾತ್ರ.

ಒಮ್ಮೆ ಒಂದು ಒಂಟೆಗೆ ಹೆರಿಗೆಯ ಸಮಯದಲ್ಲಿ ಗರ್ಭಕೋಶ ಹೊರಗೆ ಬಂದಿತ್ತು. ಸಾಯಂಕಾಲ ಅಲ್ಲಿನ ಸರಕಾರಿ ಪಶುವೈದ್ಯರು ಬಂದು ಅದನ್ನು ಒಂಟೆಯ ಹೊಟ್ಟೆಯೊಳಗೆ ಹಾಕಿ ಹೋಗಿದ್ದರಂತೆ. ಅದು ರಾತ್ರಿ ಒಂಭತ್ತರಷ್ಟರಲ್ಲಿ ಮತ್ತೆ ಹೊರಗೆ ಬಂತು. ಅಂತಹ ವಿಷಮ ಪರಿಸ್ಥಿತಿಯಲ್ಲಿ ಅದಕ್ಕೆ ಆದಷ್ಟು ಬೇಗ ವಿಶೇಷ ಪರಿಣಿತರಾದ ವೈದ್ಯರು ಚಿಕಿತ್ಸೆ ಕೊಡಬೇಕು. ಇಲ್ಲವಾದರೆ ಒಂಟೆಯ ಜೀವಕ್ಕೆ ಅಪಾಯವಾಗುತ್ತದೆ. ಒಂಟೆಯ ಮಾಲೀಕರು ಡಾ. ಭಟ್ಟರಿಗೆ ದಯವಿಟ್ಟು ಬನ್ನಿ ಅಂತ ಕೈಮುಗಿದುಕೊಂಡರು.

ಅದು ಚಾಂಪಿಯನ್ ಒಂಟೆಗಳ ತಾಯಿ. ಹಾಗಾಗಿ ಅದರ ಜೀವಕ್ಕೆ ಬಹಳ ಬೆಲೆ. ಆವತ್ತು ರಾತ್ರಿ ಮರಳುಗಾಡಿನಲ್ಲಿ ವಿಪರೀತ ಗಾಳಿ. ವಿಪರೀತ ಚಳಿ. ಅದ್ಯಾವುದನ್ನೂ ಲೆಕ್ಕಿಸದೇ ಡಾ. ರಾಮಚಂದ್ರ ಭಟ್ಟರು ತಕ್ಷಣಕ್ಕೆ ಹೊರಟು, ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ ಮೂರು ಗಂಟೆಯ ತನಕ ಕಷ್ಟಪಟ್ಟು ಹೊರಗೆ ಬಂದಿದ್ದ ನೆನೆಯನ್ನು ಒಂಟೆಯ ಹೊಟ್ಟೆಯೊಳಗೆ ಸರಿಯಾಗಿ ಕಳಿಸಿ, ಒಂಟೆಯನ್ನು ಬದುಕಿಸಿದರು. ಇಂತಹ ಹಲವಾರು ಅವಿಸ್ಮರಣೀಯ ಘಟನೆಗಳನ್ನು ಹೇಳುವಾಗ ಭಟ್ಟರು ಗದ್ಗದಿತರಾಗುತ್ತಾರೆ. ಅವರ ಕಣ್ಣುಗಳಲ್ಲಿ ವಿಶೇಷವಾದ ತೃಪ್ತಿಯ ಬೆಳಕು ಮಿಂಚುತ್ತದೆ.
ರಾಮಚಂದ್ರ ಭಟ್ಟರು ಕನ್ನಡದ ವರನಟ ಡಾ. ರಾಜ್ ಕುಮಾರ್‌ ಅಭಿಮಾನಿ, ಭಕ್ತ. ಅವರು ಮದುವೆಯಾಗಿದ್ದು ಏ.24ರಂದು. ಅಂದು ಡಾ. ರಾಜ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಹುಟ್ಟಿದ ದಿನ! ಹಾಗಾಗಿ ತಾನು ಅದೇ ದಿನ ಮದುವೆಯಾಗಬೇಕೆಂದು ನಿರ್ಧರಿಸಿದ್ದರು.

ಭಟ್ಟರ ಬದುಕಿನ ಯಶಸ್ಸಿನ ಹಿಂದಿರುವ ಸ್ತ್ರೀಶಕ್ತಿ ಅವರ ಮನಮೆಚ್ಚಿನ ಮಡದಿ ರೇಖಾ ಭಟ್ಟ್. ಭಟ್ಟರದ್ದು ಮೂವರು ಮುದ್ದಾದ ಮಕ್ಕಳ ತುಂಬು ಸಂಸಾರ. ಈ ದಂಪತಿಯ ಹಿರಿಯ ಮಗಳು ಅನೀಷಾ. ಅಭಯ್ ಮತ್ತು ಅನ್ವಿತ್ ಇಬ್ಬರು ಸುಪುತ್ರರು. ವಿಶೇಷವೆಂದರೆ, ಅನ್ವಿತ್‌ಗೆ ಎರಡು ವರ್ಷವಾಗಲಿಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದೆ! ಪತಿ ಪತ್ನಿ ಇಬ್ಬರದ್ದೂ ಅನ್ಯೋನ್ಯದ ದಾಂಪತ್ಯ. ಇಬ್ಬರದ್ದೂ ಪರೋಪಕಾರೀ ಮನಸ್ಸು. ಆರ್ಥಿಕವಾಗಿ ಅಶಕ್ತರಾಗಿರುವ ಕೆಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಡಾ. ಭಟ್ಟರು ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ. ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡುವ ಧಾರಾಳಿ.

ಡಾ. ರಾಮಚಂದ್ರ ಭಟ್ಟರಿಗೆ ಇನ್ನೂ ಸಾಕಷ್ಟು ಕನಸುಗಳಿವೆ. ತನ್ನ ವ್ಯವಹಾರ ವಹಿವಾಟನ್ನು ವಿಸ್ತರಿಸುವ ಮೂಲಕ ಬಹಳ ಜನರಿಗೆ ಸಹಾಯ ಮಾಡುವ ಉತ್ಸಾಹವಿದೆ. ಅರಬಸ್ಥಾನದಲ್ಲಿ ಹಿಂದೂಸ್ತಾನದ ಬಗ್ಗೆ ಅಪಾರ ಪ್ರೀತಿ, ಗೌರವ ಬರುವಂತೆ ಜನಾನುರಾಗಿಯಾಗಿದ್ದಾರೆ. ಇಂತಹವರ ಸಂತತಿ ಸಾವಿರವಾಗಲಿ ಎಂದು ಅರಬ್ಬರೂ ಪ್ರಾರ್ಥಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT