ಶುಕ್ರವಾರ, ಡಿಸೆಂಬರ್ 13, 2019
20 °C

ಬಿಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಡುವು

– ಚಂದ್ರೇಗೌಡ ನಾರಮ್ನಳ್ಳಿ

ಕೆಲಸದ ಹೊರೆಯು ಮುಗಿಯದೇನಮ್ಮಾ

ದಣಿವಾಗದೆ ನಿನಗೆ ?

ಕುಳಿತುಕೋ ಬಾ ಸುಮ್ಮನೆ ಅರೆಕ್ಷಣ

ಜೋಕಾಲಿಯ ತೂಗುವೆ !

ವಾರದಲೊಂದು ಗಳಿಗೆಯಾದರೂ ನಿನ್ನ

ಕೂರಿಸಿ ನಾ ದುಡಿವೆ !

ಕಸವನು ಗುಡಿಸಿ,ಅಡುಗೆಯ ಮಾಡಿ

ಮನೆಯನು ಒಪ್ಪವಾಗಿಡುವೆ!

ಮೂಡಣದ ರವಿ ಪಡುವಣ ಸೇರಿದ

ಕೆಲಸ ಮುಗಿಯುತ್ತಿಲ್ಲ!!

ಕತ್ತೆಯ ಹಾಗೆ ದುಡಿದರೂ ದಿನವಿಡಿ

ಪುರುಸೊತ್ತೇ ಇಲ್ಲ ?

ಬಿಡುವಿನ ದಿನದಲಿ ಒಪ್ಪೊತ್ತಾದರೂ

ಕೇರಂ ಆಡೋಣ

ಐದು, ಹತ್ತು ,

ಇಪ್ಪತ್ತೈದರ

ಲೆಕ್ಕವ ಕಲಿಯೋಣ

ಬೆಳ್ಳಂಬೆಳಗೆ ಭಾನುವಾರ ದಿನ ಹಳ್ಳಿಗೆ ಹೋಗೋಣ

ಹಸಿರಿನ ಗದ್ದೆ ,ಹೊಲ ,ತೋಟ

ಮರಗಿಡ ಸುತ್ತೋಣ

ಸಂಜೆಯ ವೇಳೆ ಬಯಲಲ್ಲೊಂದು

ಸುತ್ತು ಹಾಕೋಣ

ಹೊಂಬಣ್ಣದ ರವಿ ಕಿರಣಗಳಡಿಯಲಿ

ತಂಗಾಳಿಯ ಕುಡಿಯೋಣ

ಹಾರುತ ಗೂಡನು ಸೇರುವ ಹಕ್ಕಿಯ

ಚಿಲಿಪಿಲಿ ಕೇಳೋಣ

ಬಾನಾಡಿಗಳಂತೆ ಹಾಡುತ ಜಿಗಿಯುತಾ

ಮನೆಯನು ಸೇರೋಣ

ಹುಣ್ಣಿಮೆ ಬೆಳಕಲಿ ಮನೆಯ ಮೇಲಿನ

ತಾರಸಿ ಏರೋಣ

ಅಣ್ಣ-ಅಪ್ಪನ ಜೊತೆಯಲಿ ಬೆರೆತು

ಕೈತುತ್ತನು ಸವಿಯೋಣ

ಮನೆ ಮನೆಯಲ್ಲಿ ದುಡಿಯುತ ಮನಗಳು

ದೇಶವ ಕಟ್ಟುತ್ತಿವೆ

ಅವಿರತ ಅಲಸದೆ, ಪ್ರತಿಫಲ ಬಯಸದೆ

ಒಳಿತನೇ ಹರಸುತಿವೆ.

ಪ್ರತಿಕ್ರಿಯಿಸಿ (+)