ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತನಿಗೆ ಕಳುಹಿಸಿದ ಪತ್ರ ಆಕೆಯ ಕೈಸೇರಿತು...!

Last Updated 8 ಜುಲೈ 2017, 19:54 IST
ಅಕ್ಷರ ಗಾತ್ರ

ವೃತ್ತಿಯ ಏಕತಾನತೆಯಿಂದ  ಬೇಸರವಾದಾಗಲೆಲ್ಲಾ  ಅದನ್ನು  ದಾಟಲು  ನಾನು  ಮೊರೆಹೋಗುವುದು  ಕತೆ–ಕಾದಂಬರಿಗಳಿಗೆ. ಒಂದು ಸಂಜೆ ನಾ.ಡಿಸೋಜರ ಕತೆಯೊಂದನ್ನು ಓದುವುದರಲ್ಲಿ ಮಗ್ನನಾಗಿದ್ದೆ.  ಅಲ್ಲಿಗೆ ಬಂದ ವಯೋವೃದ್ಧರಿಬ್ಬರು ನನ್ನ ಗಮನವನ್ನು ತಮ್ಮ ಕಡೆ  ಸೆಳೆದರು. ಮಾತಿಗೆ  ತೊಡಗಿದಾಗ ಅವರಿಬ್ಬರೂ  ಬಾಲ್ಯ ಸ್ನೇಹಿತರಿದ್ದು, ಒಬ್ಬರು ಮುನ್ನಾಸಾಬ್ ವಿಶ್ರಾಂತ  ಉಪಾಧ್ಯಾಯರು,  ಇನ್ನೊಬ್ಬರು ಬೆಟ್ಟಯ್ಯ  ಲ್ಯಾಂಡ್‌ಲಾರ್ಡ್ ಎಂದು ಗೊತ್ತಾಯಿತು. ತಮ್ಮ ಬಗ್ಗೆ ಅವರು ಚುಟುಕಾಗಿ ಹೇಳಿಕೊಂಡರು....

ಸುಮಾರು ಏಳು  ದಶಕಗಳಿಂದ ಅಕ್ಕಪಕ್ಕದ  ಮನೆಯವರಾಗಿದ್ದರು. ಮುನ್ನಾಸಾಬರು, ಬೆಟ್ಟಯ್ಯನ ಮಗ ಚಿರಂಜೀವಿಗೆ ಅವನ ಬಾಲ್ಯದಲ್ಲಿ ಅನೇಕ ವರ್ಷ ಮನೆ ಪಾಠ ಮಾಡಿದ್ದಲ್ಲದೇ ಪ್ರೌಢ ಶಾಲೆಯಲ್ಲಿ ಅವನಿಗೆ ಉಪಾಧ್ಯಾಯರಾಗಿದ್ದರು. ಆತ್ಮೀಯ ಗೆಳೆಯನ ಮಗನಾದ್ದರಿಂದ ಕಾಳಜಿಯಿಂದ  ಅವನನ್ನ ತಿದ್ದಿ-ತೀಡುವ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದರು. ಕಾಲೇಜು  ವ್ಯಾಸಂಗಕ್ಕಾಗಿ ಚಿರಂಜೀವಿ ಬೆಂಗಳೂರಿಗೆ ಹೋದರೂ ಊರಿಗೆ ಬಂದಾಗಲೆಲ್ಲ ಮುನ್ನಾಸಾಬರ  ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಅವನ  ಮಾತು ವರ್ತನೆಗಳನ್ನು ಕಂಡು ಮುನ್ನಾಸಾಬರು ಶಿಷ್ಯನ ಬಗ್ಗೆ ಹೆಮ್ಮೆಪಡುತ್ತಿದ್ದರಲ್ಲದೇ  ಗೆಳೆಯನೊಂದಿಗೆ, ‘ನನ್ನ ಶಿಷ್ಯನ ಮುಂದೆ ನೀನೇನು?’ ಎಂದೆಲ್ಲಾ  ಹಾಸ್ಯ ಮಾಡುತ್ತಿದ್ದರು.

ಚಿರಂಜೀವಿಯ ಕಾಲೇಜು  ವ್ಯಾಸಂಗ  ಮುಗಿಯುತ್ತಿದ್ದಂತೆ ತಮ್ಮ ದೂರದ  ಸಂಬಂಧಿ ಹೊನ್ನಯ್ಯ ಅವರ ಮಗಳು ಭಾಗ್ಯವತಿ ಜೊತೆ ಚಿರಂಜೀವಿಗೆ   ಮದುವೆ  ಮಾಡಿದರು. ಎರಡು ವರ್ಷಗಳ ನಂತರ ತನ್ನ ಮಾವನ ಒತ್ತಾಯ ಮತ್ತು  ಬೆಂಬಲದಿಂದ ಚಿರಂಜೀವಿ ಚುನಾವಣೆಯ ಕಣಕ್ಕಿಳಿದು ಜಯವನ್ನೂ ಸಾಧಿಸಿದ. ಅವನ ಜಯಕ್ಕೆ  ಬಹುಮಟ್ಟಿಗೆ   ಸಾಹುಕಾರ್   ಹೊನ್ನಯ್ಯ ಅವರು ಮಾಡಿದ ಪ್ರಯತ್ನಗಳೇ ಕಾರಣವಾಗಿದ್ದವು.

ಚುನಾವಣೆ ಮುಗಿಯುತ್ತಿದ್ದಂತೆಯೇ ಸಾಹುಕಾರ್ ಹೊನ್ನಯ್ಯ ಅವರ ಗ್ರಾಮದಲ್ಲಿ ವಿಜಯೋತ್ಸವ ಏರ್ಪಟ್ಟಿತು. ಸಮಾರಂಭದ ಅಧ್ಯಕ್ಷತೆಯನ್ನು ಮುನ್ನಾಸಾಬ್‌ ಅವರೇ ವಹಿಸುವಂತೆ ಪ್ರಮುಖರೆಲ್ಲ ಅವರ ಮನವೊಲಿಸಿದ್ದರು. ಅಧ್ಯಕ್ಷ  ಭಾಷಣದಲ್ಲಿ ಮುನ್ನಾಸಾಬರು ‘ಜಗತ್ತು ಇವತ್ತು ಭ್ರಷ್ಟವಾಗಿದೆ ಎಂಬ ಅರಿವು ನಮಗಿದ್ದರೆ ಸಾಲದು, ಜಗತ್ತು ಹೀಗಿರುವುದಕ್ಕೆ ನಾವೆಲ್ಲರೂ ಕಾರಣ ಎಂಬ ಎಚ್ಚರ ಮತ್ತು ಪಾಪಪ್ರಜ್ಞೆ ನಮ್ಮ ಮನಸ್ಸಿನಲ್ಲಿ  ಹುಟ್ಟಿಕೊಂಡಾಗ ಮಾತ್ರ ಪರಿಸ್ಥಿತಿ ಬದಲಾಗುತ್ತದೆ. ಚಿರಂಜೀವಿಯವರಿಗೆ  ಜೀವನ ಪ್ರೀತಿಯಿದೆ. ಆದ್ದರಿಂದ ಅವರು ಬದುಕನ್ನು ವಿಕೃತಗೊಳಿಸಬಾರದೆಂಬ ಎಚ್ಚರವನ್ನು ಕಾಪಾಡಿಕೊಳ್ಳಬೇಕು.

ಈಗ ಅವರು ಒಬ್ಬರಾಜಕಾರಣಿ. ಇನ್ನು ಮುಂದೆ ಅವರು ಯಾವಾಗಲೂ ವಿವಿಧ ಜನರಿಂದ ಸುತ್ತುವರೆಯುತ್ತಾರೆ. ಆಗ ಅವರ ಮತ್ತು ಸುತ್ತುವರೆಯುವವರ  ಚಿಂತನೆಗಳು  ಚೆನ್ನಾಗಿರುವಂತೆ ನೋಡಿಕೊಳ್ಳಬೇಕಾದ ಹೊಣೆ ಅವರ ಮೇಲಿರುತ್ತದೆ. ಆಗ ಮಾತ್ರ ಅವರಿಂದ  ಸಕಾರಾತ್ಮಕ  ಸಂಗತಿಗಳು ಹೊರಬರಲು ಸಾಧ್ಯ. ವಿಧಾನಸೌಧದಲ್ಲಿ  ಅವರು ಎತ್ತುವ  ಧ್ವನಿ ಪ್ರಾಮಾಣಿಕವಾಗಿರಬೇಕು. ಅದು ಉಳಿದೆಲ್ಲವನ್ನೂ ನೋಡಿಕೊಳ್ಳುತ್ತದೆ...’ ಮುಂತಾದ ಎಚ್ಚರದ  ಮಾತುಗಳನ್ನು  ಹೇಳುತ್ತಾ  ಅಧ್ಯಕ್ಷ ಭಾಷಣ  ಮುಗಿದಾಗ   ಸಭಿಕರ  ಕರತಾಡನ, ಹರ್ಷೋದ್ಗಾರ  ಕಿವಿಗಡಚಿಕ್ಕುವಂತಿತ್ತು. ತಮ್ಮ  ಮಗನನ್ನು ಈಗ  ದೊಡ್ಡ  ವ್ಯಕ್ತಿಯಂತೆ  ಭಾವಿಸಿ  ಆಡಿದ  ಮಾತುಗಳಿಂದ  ಬೆಟ್ಟಯ್ಯನವರು  ಆನಂದದಿಂದ   ಗದ್ಗದಿತರಾದರು.

ಚಿರಂಜೀವಿಯು  ರಾಜ್ಯದ  ಜನಪ್ರತಿನಿಧಿಯಾಗಿ  ಬೆಂಗಳೂರಿನಲ್ಲಿ   ಸಂಸಾರ  ಹೂಡಿದ. ತನ್ನ  ಹೆಂಡತಿ  ತಂದ  ಕೋಟ್ಯಂತರ ರೂಪಾಯಿ ಹಣ
ದಿಂದ ಒಂದು  ಕಾಲೇಜನ್ನು  ಸ್ಥಾಪಿಸಿ  ಅನೇಕ  ಉಪನ್ಯಾಸಕರನ್ನು ನೇಮಿಸಿಕೊಂಡ.  ನಾಲ್ಕಾರು  ವರ್ಷಗಳು  ಕಳೆಯುತ್ತಿದ್ದಂತೆ  ಒದಗಿ  ಬಂದ   ಐಶ್ವರ್ಯ, ಅಂತಸ್ತು, ಕೀರ್ತಿ ಮತ್ತು  ಬಹುಪರಾಕ್‌ ಅನ್ನು  ಸರಿದೂಗಿಸಲಾಗದೆ ಮುನ್ನಾಸಾಬ್‌ ಅವರ  ಆಶಯಗಳನ್ನು  ಗಾಳಿಗೆ  ತೂರಿದ. ಊರನ್ನೇ  ಮರೆತ. ಅತಿ  ಮಹತ್ವಾಕಾಂಕ್ಷೆಯನ್ನು  ತನ್ನೊಳಗಿಳಿಸಿಕೊಂಡು ಅದನ್ನೇ ಚೆನ್ನಾಗಿ  ಸಾಕತೊಡಗಿದ. ದುರ್ವರ್ತನೆ–ದುಶ್ಚಟಗಳಿಗೆ   ಶರಣಾದ.  ಅವನ  ಹೆಸರು  ಅನೇಕ ಹಗರಣಗಳೊಂದಿಗೆ  ತಳುಕು  ಹಾಕಿಕೊಂಡಿತು.  ಮಾಧ್ಯಮಗಳಿಗೆ    ಗ್ರಾಸವಾಗಿ, ಕೆಟ್ಟ ಹೆಸರು ಪಡೆದು ಬೀದಿ  ಜನರ  ಬಾಯಿಗೂ  ಬಿದ್ದ...

ಇಷ್ಟು ವಿಚಾರಗಳನ್ನು  ಬೆಟ್ಟಯ್ಯ ಅವರು ನೋವಿನಿಂದ  ಹೇಳಿಕೊಳ್ಳುತ್ತಿದ್ದಾಗ  ನನಗೆ  ವಿಚಿತ್ರ  ವೇದನೆಯ  ಅನುಭವವಾಗುತ್ತಿತ್ತು. ಮಾತನ್ನು ಮುಂದುವರೆಸಿದ ಅವರು   ಚಿರಂಜೀವಿಯೊಂದಿಗೆ  ಮುಖಾಮುಖಿ   ಮಾತನಾಡಲು ಇಷ್ಟವಿಲ್ಲವೆಂದು  ಹೇಳಿ  ಒಂದು  ಬಿರುನುಡಿಯ ಪತ್ರವನ್ನು  ತಯಾರಿಸಿಕೊಡಲು  ಕೇಳಿಕೊಂಡರು. ಅದು  ಮಾನನಷ್ಟ  ಮೊಕದ್ದಮೆಗೆ ದಾರಿಮಾಡಿಕೊಟ್ಟರೂ  ಚಿಂತೆಯಿಲ್ಲವೆಂದರು.

ಅವರ  ಇಷ್ಟದಂತೆ  ಒಂದು  ಪತ್ರವನ್ನು  ಸಿದ್ಧಪಡಿಸಿದೆ.  ಅದು  ಚಿರಂಜೀವಿ ವಿಳಾಸದಲ್ಲಿ ತಲುಪುವಂತೆ ಮತ್ತು ಅವನ ಕೈಗೇ ನೇರವಾಗಿ ಸೇರುವಂತೆ ಎಚ್ಚರ ವಹಿಸಲು ಸೂಚಿಸಿದೆ.  ನನ್ನ  ಸೂಚನೆಯಂತೆ   ಅವರು   ಅದನ್ನು ‘ರಿಜಿಸ್ಟರ್ಡ್  ಪೋಸ್ಟ್’ ಮುಖಾಂತರ  ಕಳುಹಿಸಿದರು.

ನಾನು  ತಯಾರಿಸಿದ  ಪತ್ರದಲ್ಲಿ ಚಿರಂಜೀವಿಯನ್ನು  ‘ಭ್ರಷ್ಟ’ ಎಂದು  ಸಂಬೋಧಿಸಿ ಶುರು ಮಾಡಿದ್ದೆ. ‘ನಮ್ಮೆಲ್ಲರ  ಆಶಯಗಳಿಗೆ  ತಿಲಾಂಜಲಿ  ಇಟ್ಟ  ನೀನು  ಸೈತಾನನಂತೆ   ಕಾಣುತ್ತಿರುವೆ.  ಸರ್ವಶಕ್ತನಾಗಲು ಹೋಗಿ ಯಾವೆಲ್ಲಾ ರೀತಿಗಳಲ್ಲಿ ಅನೈತಿಕ ಕೆಲಸಗಳನ್ನು ಮಾಡಿಬಿಟ್ಟೆ. ಸುಖದ ಅಮಲು  ಏರಿಸಿಕೊಂಡು ಪಾಪ-ಪುಣ್ಯದ ಗೆರೆ ಕಾಣದಂತೆ ಮಾಡಿಕೊಂಡೆ. ಪುಂಡ ಪೋಕರಿಗಳ ದಂಡು ಕಟ್ಟಿಕೊಂಡು ಅವರಿಂದಾಗುತ್ತಿದ್ದ ಅನ್ಯಾಯಕ್ಕೆ  ತಲೆಕೆಡಿಸಿಕೊಳ್ಳಲಾಗದಷ್ಟು  ಅಪ್ರಾಮಾಣಿಕನಾದೆ. ಹೊಗಳಿಕೆಯನ್ನು  ಉಪ್ಪಿನಕಾಯಿಯಾಗಿಸಿಕೊಳ್ಳದೆ, ಅದನ್ನೇ ಊಟವಾಗಿ ಮಾಡಿಕೊಂಡು  ಅದು  ಬದುಕನ್ನು ಕಿತ್ತುಕೊಂಡದ್ದನ್ನು ಗಮನಿಸಿಕೊಳ್ಳಲಾಗದಷ್ಟು ಖಬರುಗೇಡಿಯಾಗಿ ಹೋದೆ.

ನಿನ್ನ ಕಾಲೇಜಿನ ಉಪನ್ಯಾಸಕಿಯೊಬ್ಬಳಿಗೆ   ಪ್ರೇಮ ಭಿಕ್ಷೆ ಬೇಡಲು ಹೋಗಿ  ನಿನ್ನಂತಹ  ಸಂಸ್ಕಾರವಿಲ್ಲದವನ  ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲವೆಂದು   ಆಕೆ  ಉಗಿದು  ಹೋಗಲಿಲ್ಲವೇ?   ಹಣ  ನೋಡಲು  ಮಾತ್ರ ನಿನ್ನ ಒಳಗಣ್ಣು  ತೆರೆಯುತ್ತಿತ್ತು.  ಸಮಾಧಾನ, ತೃಪ್ತಿ, ನೆಮ್ಮದಿಯಂತಹ   ಮನಸ್ಸಿನ ಸಂಗತಿಗಳ  ವಿಷಯದಲ್ಲಿ   ಅದರ  ಪಾತ್ರವನ್ನು  ಗೊತ್ತು ಮಾಡಿಕೊಳ್ಳುವ  ದಿಸೆಯಲ್ಲಿ ನೀನು  ಮುಗ್ಗರಿಸಿಬಿದ್ದೆ. ಹಣ  ಮಾಡುವ ಧಾವಂತ  ಮತ್ತು ಖುಷಿಯಲ್ಲಿ  ಬುದ್ಧಿಭಾವಗಳನ್ನು  ಒತ್ತೆಯಿಡುವವರ  ಪಟ್ಟಿಗೆ ನೀನೂ  ಸೇರಿಹೋದೆ. ನೀನೇ  ಸೃಷ್ಟಿಸಿಕೊಂಡ   ರಾಜಕೀಯ ಜಂಜಾಟಗಳಿಂದ   ಸಂಬಂಧಗಳು   ಅರ್ಥ  ಕಳೆದುಕೊಂಡವು.   ಕೆಲವು  ವರ್ಷಗಳ  ಹಿಂದೆ ಮುಖ್ಯವಾಗಿದ್ದೆಲ್ಲಾ ದಿನದಿಂದ  ದಿನಕ್ಕೆ ಮಸುಕಾಗಿಹೋಯಿತು.

ಪ್ರಚಾರಬಲದಿಂದ  ನೀನು  ರೂಪುಗೊಳ್ಳಲು  ಮಾಡಿದ  ಪ್ರಯತ್ನಗಳು  ನನಗೆ ನೋವುಂಟು  ಮಾಡಿದವು.  ಒಮ್ಮೆ   ನಿನ್ನಪ್ಪನ, ಮಾವನ ಮತ್ತು  ನನ್ನ ಕಡೆ  ನೋಡು. ನಮ್ಮಲ್ಲಿ   ಜೀವ ಶಕ್ತಿ,   ಅಂತರಂಗದ ಸಂಪತ್ತು  ಇನ್ನೂ   ಕರಗಿಲ್ಲ; ಕಂಡವರೆಲ್ಲರ ಕೈಕುಲುಕಿ, ಇಷ್ಟವಿಲ್ಲದಿದ್ದರೂ  ಮುಗುಳ್ನಕ್ಕು  ಅಸಹ್ಯವಾದರೂ  ನಮ್ಮ ಒಳತೊಟಿಗಳನ್ನು  ಸೊರಗಿಸಿಕೊಂಡಿಲ್ಲ; ನಮ್ಮ ನರಮಂಡಲಗಳನ್ನು ಕುಸಿಯುವಂತೆ ಮಾಡಿಕೊಂಡಿಲ್ಲ. ನೀನು   ಆತ್ಮಗೌರವದೊಂದಿಗೆ  ರಾಜಿ  ಮಾಡಿಕೊಂಡು ರಾಜಕಾರಣ  ಮಾಡಿದೆ.

ಒಟ್ಟಿನಲ್ಲಿ  ನಿನ್ನನ್ನು  ನೀನು  ಕಂಡುಕೊಳ್ಳುವ ದಿಕ್ಕಿನಲ್ಲಿ ಎಂದೂ  ನಡೆಯದೆ  ಹೋದೆ.  ನೀನು  ಬದುಕಿನಲ್ಲಿ  ಸೋತಿರುವೆ  ಎಂದು  ಹೇಳಲು  ನನಗೆ  ಯಾವ  ಅಳುಕೂ  ಇಲ್ಲ.  ನನ್ನ  ಸಾಫಾ-ಸೀದಾ  ಗೆಳೆಯ ಬೆಟ್ಟದಂತ  ಬೆಟ್ಟಯ್ಯ  ಈಗ  ಹಾಸಿಗೆ  ಹಿಡಿದಿದ್ದಾನೆ.  ಅವನ  ಕೊರಗು  ನನಗೆ  ಸಂಕಟ   ತರುತ್ತಿದೆ.  ಈ ಕ್ಷಣದಿಂದ  ನಮ್ಮೆಲ್ಲರಿಗೆ  ನೀನು  ಅನಿಷ್ಟ...’ ಎಂದು ಮುನ್ನಾಸಾಬರ   ಮಾತುಗಳಲ್ಲಿ  ಮುಗಿಸಿದ್ದೆ.

ಮುನ್ನಾಸಾಬರ  ಪತ್ರ  ಅಂಚೆಯ  ಮೂಲಕ  ಚಿರಂಜೀವಿಯ ವಿಳಾಸಕ್ಕೆ  ತಲುಪಿದ ಸಮಯದಲ್ಲಿ  ಅವನು ಕೆಲವು  ಶ್ರೀಮಂತ ಗೆಳೆಯರೊಂದಿಗೆ  ಯುರೋಪ್ ದೇಶಗಳ   ಪ್ರವಾಸಕ್ಕೆ   ಹೋಗಿದ್ದ.  ಪತ್ರವನ್ನು ಅವನ ಹೆಂಡತಿ ಭಾಗ್ಯವತಿ  ಪಡೆದುಕೊಂಡಿದ್ದಳು. ಕೆಲವೇ ದಿನಗಳಲ್ಲಿ ಪತ್ರದಲ್ಲಿದ್ದ  ವಿಚಾರಗಳೆಲ್ಲವೂ  ಸಂಬಂಧಪಟ್ಟವರೆಲ್ಲರ ಗಮನಕ್ಕೆ ಬಂದು ಚಿರಂಜೀವಿ ಓಕರಿಕೆ ತರುವ ವ್ಯಕ್ತಿಯಾದ. ವಿಷಯ ತಿಳಿದು ಬೆಂಗಳೂರಿಗೆ ವಾಪಸಾದ ಚಿರಂಜೀವಿ ವಿಮಾನ ನಿಲ್ದಾಣದಿಂದ ಕ್ರೋಧಾವೇಶದಿಂದಲೇ ಮನೆ ತಲುಪಿದ. ಹೆಂಡತಿಯಿಂದ  ಪತ್ರ ಪಡೆದು ಓದಿಕೊಂಡು, ತನ್ನ ಪಟಾಲಂ ಅನ್ನು ಮನೆಗೆ ಬರಮಾಡಿಕೊಂಡು  ಸಮಾಲೋಚಿಸಿ ಮುನ್ನಾಸಾಬರ ವಿರುದ್ಧ  ಕ್ರಿಮಿನಲ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದೇ ಸರಿಯೆಂದು ತೀರ್ಮಾನಿಸಿದ.

ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ  ಮುನ್ನಾಸಾಬರ  ಪರ  ವಕಾಲತ್ತು ವಹಿಸಿದೆ. ಅದು ‘ಸಮನ್ಸ್ ಕೇಸ್’  ಆದ್ದರಿಂದ ಅದನ್ನು ರದ್ದು ಮಾಡುವಂತೆ ವಾದಿಸಲು  ಸಾಧ್ಯವಿರಲಿಲ್ಲ. ಹೈಕೋರ್ಟಿನಲ್ಲಿ  ಮೊಕದ್ದಮೆಯಲ್ಲಿ  ಜರುಗಿದ್ದ ಎಲ್ಲಾ   ಪ್ರಕ್ರಿಯೆಗಳು  ಊರ್ಜಿತವಲ್ಲವೆಂದು ಘೋಷಿಸಲು ಅರ್ಜಿ ಸಲ್ಲಿಸಿದೆ.

1978 ಜನವರಿ ಮಾಹೆಯಲ್ಲಿ ಮುನ್ನಾ ಸಾಬ್  ಅವರ  ಕ್ರಿಮಿನಲ್  ಅರ್ಜಿಯ ವಿಚಾರಣೆ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಸಿ.ಹೊನ್ನಯ್ಯರ ಮುಂದೆ ನಡೆಯಿತು. ನನ್ನ ವಾದವನ್ನು ಪ್ರಾರಂಭಿಸುತ್ತಿದ್ದಂತೆಯೇ ನ್ಯಾಯಮೂರ್ತಿಗಳು, ‘ಹನುಮಂತರಾಯರೆ, ನಿಮ್ಮ ಕಕ್ಷಿದಾರರು ಚಿರಂಜೀವಿಗೆ ಬರೆದಿರುವ ಪತ್ರವನ್ನು ನಾನು ಒಂದಲ್ಲ ಎರಡು ಬಾರಿ ಓದಿಕೊಂಡೆ. ಅದರಲ್ಲಿ ನಿಮ್ಮ  ಕಕ್ಷಿದಾರ ಮುನ್ನಾಸಾಬ ಅವರು ಬಹು ಕಠೋರ, ನಿಂದನೆಯ  ಮತ್ತು ಮಾನಹಾನಿಕಾರಕ  ಆರೋಪಗಳನ್ನು  ಮಾಡಿದ್ದಾರೆ.

ಅವರ ವರ್ತನೆ ಮತ್ತು ಚಾರಿತ್ರ್ಯ ವಧೆಯೂ ಆಗಿದೆ. ನಿಮ್ಮ ವಾದವನ್ನು ಸಂಪೂರ್ಣವಾಗಿ  ಕೇಳಿಕೊಳ್ಳುವ  ಮುನ್ನವೇ  ನನ್ನ ಅಭಿಪ್ರಾಯವನ್ನು ಹೇಳುತ್ತಿರುವುದಕ್ಕೆ ನಿಮ್ಮ ಕ್ಷಮೆಯಿರಲಿ. ಏನೇ  ಆದರೂ  ಚಿರಂಜೀವಿ ಅಧೀನ ಕ್ರಿಮಿನಲ್ ಕೋರ್ಟ್‌ನಲ್ಲಿ  ಹೂಡಿರುವ ಮಾನಹಾನಿ  ಮೊಕದ್ದಮೆ ವಿಚಾರಣಾ ಯೋಗ್ಯವಾದದ್ದೆಂದು  ನಮಗೆ ಕಂಡು ಬಂದಿದೆ. ಇದರ  ಮೇಲೆ ವಾದ-ಪ್ರತಿ ವಾದಗಳನ್ನು ಮುಂದುವರೆಸಿ  ನ್ಯಾಯಾಲಯದ ಸಮಯವನ್ನು ಹಾಳುಮಾಡುವುದು  ಬೇಡ.  ಮುನ್ನಾಸಾಬ್  ಬಳಸಿರುವ  ಮಾನಹಾನಿಕರ ಪದಗಳಿಗೆ  ಸಮರ್ಥನೆಯಿದ್ದರೆ, ಇಲ್ಲವೆ ಭಾರತೀಯ ದಂಡ ಸಂಹಿತೆಯ 499ನೇ   ಕಲಮಿನಲ್ಲಿ ಇರುವ ಹತ್ತು ಅಪವಾದಗಳಲ್ಲಿ ಯಾವುದಾದರೂ ಒಂದು ಅನ್ವಯಿಸಿದಲ್ಲಿ ಮಾತ್ರ  ಕೇಸನ್ನು  ಗೆಲ್ಲಲು  ಸಾಧ್ಯ. ಏನು ಹೇಳುವಿರಿ?” ಎಂದು ನನ್ನನ್ನು ಪ್ರಶ್ನಿಸಿದರು.

ನ್ಯಾಯಮೂರ್ತಿಗಳ  ಮಾತುಗಳಿಂದ  ಉತ್ತೇಜಿತರಾದ ಚಿರಂಜೀವಿಯ ಪರ ವಕೀಲರು ಕೂಡಲೇ ಎದ್ದು ನಿಂತು ‘ಮೈ ಲಾರ್ಡ್, ತಮ್ಮ  ಮಾತುಗಳನ್ನೇ  ಪ್ರತಿವಾದದಲ್ಲಿ ನಾನು ಹೇಳಬೇಕೆಂದಿದ್ದೆ. ನನ್ನ ಪ್ರತಿವಾದವನ್ನು  ತಾತ್ಪರ್ಯರೂಪದಲ್ಲಿ ತಮ್ಮಿಂದ  ಕೇಳಿದ  ಹಿನ್ನೆಲೆಯಲ್ಲಿ  ನಾನು  ವಾದ  ಮಾಡಲು  ಉಳಿದಿರುವುದೇನೂ  ಇಲ್ಲ,  ಮುಂದಿನ  ವಿಚಾರ  ತಮಗೆ ಬಿಟ್ಟದ್ದು’ ಎಂದು  ಕ್ಲುಪ್ತವಾಗಿ  ಹೇಳಿ  ಕುಳಿತರು. ಕೂಡಲೇ  ನ್ಯಾಯಮೂರ್ತಿಗಳ  ಗಮನವನ್ನು  ನನ್ನ  ಕಡೆ  ಸೆಳೆದುಕೊಂಡು  ‘ಮೈ ಲಾರ್ಡ್, ತಾವು ಮೊಕದ್ದಮೆ ಸಂಬಂಧದಲ್ಲಿ  ಮುಟ್ಟಿದ  ವಿಚಾರಗಳು  ವಾಸ್ತವಿಕ ಅಂಶಗಳಿಗೆ   ಸಂಬಂಧಿಸಿದವು. ಆದರೆ  ಅವುಗಳನ್ನು  ಮೀರಿದ  ಒಂದು  ಕಾನೂನಿನ ಅಂಶ  ಇರುವುದರ  ಕುರಿತು  ನಾನು  ವಾದಿಸಬೇಕಾದ ಅವಶ್ಯಕತೆಯಿದೆ’ ಎಂದೆ. ‘ಅಂತಹ  ಮಹತ್ತರವಾದ  ಕಾನೂನಿನ ಅಂಶ ಇರುವುದಾದರೂ  ಏನು’ ಎಂದು  ನನ್ನನ್ನು  ನಯವಾಗಿ  ಪ್ರಶ್ನಿಸಿದರು.

ಆಗ ನಾನು,  ‘ಮುನ್ನಾಸಾಬರು  ಚಿರಂಜೀವಿಯ ಕುರಿತಾದ ಪತ್ರವನ್ನು  ಚಿರಂಜೀವಿಯ ಹೆಸರಿಗೇ  ಕಳುಹಿಸಿದರು. ಅದನ್ನು  ಚಿರಂಜೀವಿಯವರೇ  ಓದಿಕೊಂಡಿದ್ದರೆ  ಕಾನೂನು ಪ್ರಕಾರ  ಮಾನಹಾನಿಯಾಗುತ್ತಿರಲಿಲ್ಲ. ಕಾರಣ  ಒಬ್ಬ  ವ್ಯಕ್ತಿ ಬೇರೆಯವರ ಅಭಿಪ್ರಾಯದಲ್ಲಿ  ಕೀಳಾದಲ್ಲಿ ಮಾತ್ರ ಮಾನಹಾನಿಯಾದುದರ  ಬಗ್ಗೆ ದೂರಬಹುದೇ ಹೊರತು ತನ್ನ  ಅಭಿಪ್ರಾಯದಲ್ಲಿ  ಕೀಳಾದಾಗ ಅಲ್ಲ. ಪತ್ರವನ್ನು ಬೇರೆಯವರು ಪಡೆದುಕೊಳ್ಳಬಾರದಿತ್ತು. ಚಿರಂಜೀವಿಯು  ವಿದೇಶ ಪ್ರವಾಸದಲ್ಲಿದ್ದಾಗ ಆ ಪತ್ರ  ಮುನ್ನಾಸಾಬರಿಗೇ  ವಾಪಸಾಗಬೇಕಾಗಿತ್ತು. ಭಾಗ್ಯವತಿ ಚಿರಂಜೀವಿಯವರ  ಅರ್ಧಾಂಗಿಯಾದರೂ ಆ  ಪತ್ರವನ್ನು  ಪಡೆದುಕೊಂಡು ಓದಿಕೊಳ್ಳುವ  ಹಕ್ಕು  ಇರಲಿಲ್ಲ. ಈ ಪ್ರಕರಣದ ಸಂದರ್ಭದಲ್ಲಿ ಚಿರಂಜೀವಿ ಪತ್ರವನ್ನು ಓದಿಕೊಂಡಿದ್ದರೂ ಪ್ರಕಟಗೊಂಡಿತೆಂಬ ಅರ್ಥ ಬರುತ್ತಿರಲಿಲ್ಲ. ಅವನಿಗೆ ಸಂಬಂಧಿಸಿದ ಪತ್ರವನ್ನು ಬೇರೆ ಯಾರೇ ಓದಿಕೊಂಡರೂ ಪ್ರಕಟವಾಯಿತೆಂದು ಕಾನೂನಿನಲ್ಲಿ ಭಾವಿಸಲಾಗದು. ಪತ್ರ

ವನ್ನು ಬೇರೆಯವರಿಗೆ ಮುನ್ನಾಸಾಬ್ ಚಿರಂಜೀವಿ ಕುರಿತು ಬರೆದಿದ್ದಾಗ  ಮಾತ್ರ ಪ್ರಕಟವಾಯಿತೆಂಬ ಅರ್ಥ ಪಡೆದುಕೊಳ್ಳುತ್ತಿತ್ತು. ಪತ್ರದ ಸಂದರ್ಭದಲ್ಲಿ ಅವಮಾನಿತನಿಗೇ ಅದನ್ನು ಬರೆದಿದ್ದು ಪ್ರಕಟಣೆ ಎನಿಸಿಕೊಳ್ಳುವುದಿಲ್ಲ. ಅಧೀನ  ನ್ಯಾಯಾಲಯವು ಪ್ರಕರಣದ  ಈ ಮಗ್ಗುಲನ್ನು ಗುರುತಿಸಿಕೊಳ್ಳು
ವುದರಲ್ಲಿ  ಸಂಪೂರ್ಣವಾಗಿ ವಿಫಲವಾಗಿದೆ. ಇದು  ಅಧೀನ  ನ್ಯಾಯಾಲಯಕ್ಕೆ  ತೋಚಿದ್ದರೆ ಮುನ್ನಾಸಾಬರಿಗೆ  ಆರೋಪಿಯಾಗಲು ಕಾರಣವೇ  ಇರುತ್ತಿರಲಿಲ್ಲ’ ಎಂದಾಗ ನ್ಯಾಯಮೂರ್ತಿಗಳು ವಿಸ್ಮಯರೀತಿಯಲ್ಲಿ ನನ್ನನ್ನು ನೋಡಿದರು.

  ಆ ಸಂಬಂಧದಲ್ಲಿ ಇಬ್ಬರೂ ವಕೀಲರುಗಳನ್ನು ಇನ್ನಷ್ಟು  ಚರ್ಚೆಗೆ ಎಳೆದರು. ಅಂತಿಮವಾಗಿ  ನಾನು ಎತ್ತಿದ್ದ ‘ಕಾನೂನಿನ ಅಂಶ’ವನ್ನು ಅನುಮೋದಿಸುತ್ತಾ ಚಿರಂಜೀವಿಯ ದೂರನ್ನು ರದ್ದುಪಡಿಸಿದರು.  ನಾನು  ಕೋರ್ಟ್‌ನಿಂದ  ಹೊರಗೆ  ಬಂದಾಗ  ಚಿರಂಜೀವಿ  ಮತ್ತು  ಅವನ ನೂರಾರು ಪಟಾಲಂಗಳ  ಬೆನ್ನುಗಳೇ ಕಾಣಿಸುತ್ತಿದ್ದವು.
ಲೇಖಕ ಹೈಕೋರ್ಟ್‌ ವಕೀಲ
(ಹೆಸರು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT