ಭಾನುವಾರ, ಡಿಸೆಂಬರ್ 8, 2019
21 °C

ಕರ್ತವ್ಯದಲ್ಲಿ ನಿಷ್ಠೆ

Published:
Updated:
ಕರ್ತವ್ಯದಲ್ಲಿ ನಿಷ್ಠೆ

2000ರಲ್ಲಿ ಜರುಗಿದ ಘಟನೆಯಿದು. ನಾನು ನನ್ನ ಉಳಿತಾಯದ ಹಣದಲ್ಲಿ ಮನೆಯೊಂದನ್ನು ಕೊಂಡಿದ್ದೆ. ಹೊಸದಾಗಿ ಕೊಂಡ ಮನೆಗೆ ಕೆಲವೊಂದು ರಿಪೇರಿ ಕೆಲಸಗಳು ಅಗತ್ಯವಾಗಿ ಆಗಲೇ ಬೇಕಿತ್ತು. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿದ್ದರಿಂದ ಬ್ಯಾಂಕ್‌ನಲ್ಲಿ ಲೋನ್ ಪಡೆಯುವ ಸಲುವಾಗಿ ವಿಚಾರಿಸಿದೆ.ಮ್ಯಾನೇಜರ್ ಲೋನ್ ಕೊಡಲು ಒಪ್ಪಿಕೊಂಡು ಕೆಲವೊಂದು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಹೇಳಿದರು.

ಅವರು ಸೂಚಿಸಿದ ದಾಖಲೆಗಳೆನ್ನೆಲ್ಲ ನಾಲ್ಕೈದು ದಿನಗಳಲ್ಲಿಯೇ ಹೇಗೋ ಹೊಂದಿಸಿಕೊಂಡು ಅವರನ್ನು ಕಾಣಲು ಹೊರಟೆ. ನಾನು ಕೊಟ್ಟ ದಾಖಲೆಗಳನ್ನೆಲ್ಲ ಪರಿಶೀಲಿಸಿದ ಮ್ಯಾನೇಜರ್ ಅವುಗಳನ್ನು ಹಾಗೆಯೇ ಇಟ್ಟುಕೊಂಡು ಒಂದು ವಾರ ಕಳೆದು ಬರುವಂತೆ ಹೇಳಿದರು. ಒಂದು ವಾರದ ಬಳಿಕ ಹೋದ ಮೇಲೆ, ಅವರು ಇನ್ನೂ ಏನೇನೋ ಕಾರಣಗಳನ್ನು ನನ್ನ ಮುಂದಿಟ್ಟು ಲೋನ್ ಸ್ಯಾಂಕ್ಷನ್ ಮಾಡುವುದನ್ನು ಬೇಕಂತಲೇ ಮುಂದೂಡುತ್ತ ಬಂದರು. ಒಂದೆರಡು ತಿಂಗಳು ಕಳೆಯಿತು. ಒಮ್ಮೆ ಮ್ಯಾನೇಜರ್ ಗೆಳೆಯರೊಬ್ಬರ ಬಳಿ (ಅವರು ನನಗೂ ಪರಿಚಿತರು) ಈ ವಿಷಯವನ್ನು ಪ್ರಸ್ತಾಪಿಸುವ ಸಂದರ್ಭ ಒದಗಿ ಬಂತು. ಅವರು ನನ್ನ ಕೋರಿಕೆಗೆ ಸ್ಪಂದಿಸಿ ಮ್ಯಾನೇಜರ್ ಬಳಿ ಮಾತಾಡಿ ನನಗೆ ಲೋನ್ ತಕ್ಷಣ ಸ್ಯಾಂಕ್ಷನ್ ಆಗುವಂತೆ ಮಾಡಿದರು. ಎರಡು ತಿಂಗಳಲ್ಲಿ ಮನೆಯ ಕೆಲಸವೆಲ್ಲಾ ಜರುಗಿ ಗೃಹ ಪ್ರವೇಶವೂ ಮುಗಿದುಹೋಯಿತು. ಲೋನ್‌ಗೆ ಶಿಫಾರಸು ಮಾಡಿದ ವ್ಯಕ್ತಿಯ ಭೇಟಿಯಾದಾಗ ಅವರಿಗೆ ಥ್ಯಾಂಕ್ಸ್ ಹೇಳಿದೆ. ನನಗೆ ಥ್ಯಾಂಕ್ಸ್ ಹೇಳುವ ಬದಲು ಮ್ಯಾನೇಜರ್‌ಗೆ ಮೊದಲು ಥ್ಯಾಂಕ್ಸ್ ಹೇಳಿ ಎಂದರು. ಒಂದು ದಿನ ಸ್ವಲ್ಪ ಹಣವನ್ನು ಕವರ್‌ನಲ್ಲಿ ಹಾಕಿಕೊಂಡು ಬ್ಯಾಂಕ್‌ನತ್ತ ಹೊರಟೆ. ಸದಾ ಗ್ರಾಹಕರಿಂದಲೇ ತುಂಬಿರುತ್ತಿದ್ದ ಅವರ ಛೇಂಬರ್ ಅಂದು ನನ್ನ ಅದೃಷ್ಟಕ್ಕೆ ಖಾಲಿಯೇ ಇತ್ತು. ಅವರೂ ಸಾವಕಾಶವಾಗಿ ಯಾವುದೋ ಫೈಲ್ ನೋಡುತ್ತ ಕುಳಿತಿದ್ದರು. ನಾನು ಒಳಹೊಕ್ಕು ಮ್ಯಾನೇಜರ್‌ಗೆ ವಂದಿಸಿದೆ. ಅವರೂ ಪ್ರತಿ ವಂದಿಸಿ ನನಗೆ ಕುಳಿತುಕೊಳ್ಳುವಂತೆ ಹೇಳಿದರು. ಕುಳಿತುಕೊಂಡ ಮೇಲೆ ನಾನೇ ಮಾತು ಪ್ರಾರಂಭಿಸಿ, ಏನಿಲ್ಲ ಸಾಹೇಬ್ರೆ, ನನಗೆ ಲೋನ್ ಸ್ಯಾಂಕ್ಷನ್ ಮಾಡಿ ಕೊಟ್ಟಿದ್ದೀರ, ನನ್ನ ಮನೆಯ ಕೆಲಸವೆಲ್ಲ ಮುಗಿಯಿತು, ನಿಮಗೊಂದು ಥ್ಯಾಂಕ್ಸ್ ಹೇಳಿ ಹೋಗೋಣ ಅಂತ ಬಂದೆ. ನಿಮಗೆ ಸ್ವಲ್ಪ ಹಣ ಕೊಡಬೇಕೆಂದಿದ್ದೇನೆ. ತಾವು ಎಷ್ಟು ಅಂಥ ಹೇಳ್ದ್ರೆ. . . ಎನ್ನುವಷ್ಟರಲ್ಲಿ ಮ್ಯಾನೇಜರ್ ನನ್ನ ಮಾತನ್ನು ಮುಂದುವರೆಸಲು ಬಿಡಲಿಲ್ಲ. ನನ್ನ ಮೇಲೆ ತುಸು ಒರಟಾಗಿಯೇ ಹರಿಹಾಯ್ದು ಬಿದ್ದರು. ತಮ್ಮ ಮಂಗಳೂರು ಶೈಲಿ ಕನ್ನಡದಲ್ಲಿ ‘ಎಂಥದ್ದು ನನಗೆ ಹಣ ಕೊಡಲು ನನ್ನನ್ನೇ ಎಷ್ಟು ಅಂತ ಕೇಳುವುದು? ಬ್ಯಾಂಕಿನವರೇನು ನಿಮಗೆ ಪುಕ್ಕಟೆ ಹಣ ಕೊಟ್ಟಿಲ್ಲ ಮಾರಾಯ್ರೆ ! ಲೋನ್‌ಗೆ ಬಡ್ಡಿ ಕೊಡುವುದುಂಟಲ್ಲವೋ? ಮತ್ತೆಂಥದ್ದು ನನಗೆ ಹಣ ಕೊಡಲು ಬರುವುದು?’ ಎಂದು ತಮ್ಮ ಮುಖವನ್ನು ಗಂಟಿಕ್ಕಿಕೊಂಡು ನನ್ನ ಮೇಲೆ ತಿರುಗಿ ಬಿದ್ದರು. ನಾನು ಬೇಸ್ತುಹೋದೆ. ಈ ಹಿಂದೆ ಲೋನ್ ಕೊಡಲು ಅವರು ತೋರಿದ ನಿರ್ಲಕ್ಷ್ಯದಿಂದ ನನ್ನ ಮನಸ್ಸಿನಲ್ಲಿ ಮಡುಗಟ್ಟಿದ್ದ ಬೇಸರವೆಲ್ಲ ಅಂದು ಮಂಜಿನಂತೆ ಕರಗಿ ಹೋಯಿತು.

ಇಂದಿನ ದಿನಗಳಲ್ಲಿ ಇಂತಿಷ್ಟು ಹಣ ಬೇಕೆಂದು ತಾವೇ ಕೇಳಿ ಪಡೆಯುವವರಿದ್ದಾರೆ. ನಾವಾಗಿಯೇ ಹಣ ಕೊಟ್ಟರೂ ಕೆಲವು ಸಮಯ ನಮ್ಮ ಕೆಲಸವಾಗುವುದಿಲ್ಲ. ನಾನು ಕೊಟ್ಟಷ್ಟು ಹಣವನ್ನು ಮ್ಯಾನೇಜರ್ ಹಿಂದು ಮುಂದು ನೋಡದೆ ತೆಗೆದು ತಮ್ಮ ಜೇಬಿಗಿಳಿಸಬಹುದಿತ್ತು. ಆದರೆ ನನ್ನಿಂದ ಹಣ ಪಡೆಯದೆ ತಮ್ಮ ಕರ್ತವ್ಯದಲ್ಲಿ ನಿಷ್ಠೆ ಮೆರೆದ ಅವರ ಸೇವೆ ಶ್ಲಾಘನೀಯ.

–ಎಲ್. ಚಿನ್ನಪ್ಪ, ಬೆಂಗಳೂರು

ಪ್ರತಿಕ್ರಿಯಿಸಿ (+)