ಶುಕ್ರವಾರ, ಡಿಸೆಂಬರ್ 13, 2019
20 °C

ತತ್ವಪದಗಳೆಂಬ ಈ ನೆಲದ ನಿಸರ್ಗ ವಿವೇಕ

ಡಿ.ಎಂ. ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ತತ್ವಪದಗಳೆಂಬ ಈ ನೆಲದ ನಿಸರ್ಗ ವಿವೇಕ

ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಣೆ ಯೋಜನೆಯಡಿ, ತತ್ವಪದಕಾರರ 32 ಸಂಪುಟಗಳು ಜುಲೈ 10ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆಯಾದ ಈ ಕೃತಿಗಳ ಪ್ರಕಟಣೆಯ ಯೋಜನೆ ಸಂಪಾದಕ ಎಸ್. ನಟರಾಜ ಬೂದಾಳು ‘ಮುಕ್ತಛಂದ’ಕ್ಕೆ ನೀಡಿರುವ ವಿಶೇಷ ಸಂದರ್ಶನ ‘ತತ್ವಪದ’ ಲೋಕದ ಅಪೂರ್ವ ಸಂಗತಿಗಳ ಬಗ್ಗೆ ಸಹೃದಯರ ಗಮನ ಸೆಳೆಯುವಂತಿದೆ.

* ಕರ್ನಾಟಕದಲ್ಲಿ ತತ್ವಪದಕಾರರ ಇತಿಹಾಸ ಯಾವ ಬಗೆಯದು?

ತತ್ವಪದಗಳ ರಚನೆ ಯಾವಾಗಿನಿಂದ ಆರಂಭವಾಯಿತು ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ವಚನಕಾರರ ಪೂರ್ವದಲ್ಲಿಯೂ ತತ್ವಪದಕಾರರು ಇದ್ದಿರಬಹುದು. ವಚನಕಾರರಲ್ಲಿಯೂ ಕೆಲವರು ತತ್ವಪದಕಾರರು ಇದ್ದರು. ನೀಲಮ್ಮ, ಅಲ್ಲಮರನ್ನು ತತ್ವಪದಕಾರರಾಗಿಯೂ ಕಾಣಬಹುದು. ತತ್ವಪದ ನದಿಯಂತೆ ಹರಿದು ಬಂದಿದೆ. ಹಿಂದಿನದ್ದನ್ನು ನೆನಪಿನಲ್ಲಿ ಉಳಿಸಿಕೊಂಡಿಲ್ಲ. ಮುಂದೆಯೂ ಹರಿಯುತ್ತಲೇ ಇರುತ್ತದೆ. ಕನ್ನಡ ಸಾಹಿತ್ಯ ಚರಿತ್ರಕಾರರ ದೃಷ್ಟಿಯಲ್ಲಿ 18 ಮತ್ತು 19ನೇ ಶತಮಾನ ಸಾಹಿತ್ಯದ ಬರಗಾಲ! ಆದರೆ ತತ್ವಪದಕಾರರ ಪ್ರಮುಖ ಕಾಲಮಾನ ಅದು. ಚರಿತ್ರಕಾರರ ಈ ಧೋರಣೆ ಕನ್ನಡದ ಬದುಕಿಗೆ, ಸಾಹಿತ್ಯಕ್ಕೆ ಮಾಡಿದ ಅವಮಾನ.

* ಅಕಡೆಮಿಕ್ ವಲಯದಿಂದ ತತ್ವಪದ ಸಾಹಿತ್ಯ ದೂರವೇ ಉಳಿದಂತಿದೆ?

ಯಾವುದು ಕನ್ನಡ ಸಾಹಿತ್ಯ ಎಂದು ವಿವರಿಸಿಕೊಳ್ಳುವುದರಲ್ಲೇ ಒಂದು ಸಾಂಸ್ಕೃತಿಕ ರಾಜಕಾರಣ ಇದೆ. ಯಾವುದನ್ನು ಓದಬೇಕು, ಓದಬಾರದು, ಯಾವುದನ್ನು ಯಾವಾಗ ಓದಬೇಕು, ಯಾರು ಓದಬೇಕು, ಯಾರಿಗೆ ಓದಿಸಬೇಕು, ಯಾವುದನ್ನು ಓದಿಗೆ ಸಿಗದಂತೆ ನೋಡಿಕೊಳ್ಳಬೇಕು ಎನ್ನುವುದನ್ನು ವಿಶೇಷವಾಗಿ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧಿಕಾರ ಕೇಂದ್ರಗಳು ನಿರ್ಧರಿಸುತ್ತವೆ. ಗುರುಭಕ್ತಿ ತೆಗೆದುಕೊಂಡ ಹೊಲೆ ಮಾದಿಗರ ವ್ಯಕ್ತಿಯೊಬ್ಬ ಮೃತಪಟ್ಟರೆ ಜಾತಿಯ ತಾರತಮ್ಯ ಇಲ್ಲದೆ ಗುರು ಮಕ್ಕಳು ಮುಟ್ಟಿ ಅವರನ್ನು ಸಂಸ್ಕಾರ ಮಾಡುತ್ತಾರೆ. ಆ ಜೀವನ ಕ್ರಮವನ್ನು ಅಧಿಕಾರ ಕೇಂದ್ರಿತ ಸಂಸ್ಥೆಗಳು ಸಹಿಸಿಕೊಳ್ಳುತ್ತವೆಯೇ?

ಇಂತಹ ಆದರ್ಶ ಮತ್ತು ಜಾತ್ಯತೀತವಾದ ಬದುಕನ್ನು ಅಧಿಕಾರ ಕೇಂದ್ರಗಳು ಸಹಜವಾಗಿ ಹೊರಗಿಡುತ್ತವೆ. ಆದರೂ ಅವು (ತತ್ವಪದ) ಸುಮ್ಮನೆ ಇರುತ್ತವೆ. ಇದಕ್ಕೆ ಕಾರಣ ಇವುಗಳಿಗೆ ಅಧಿಕಾರದ ಒತ್ತಾಸೆ ಇಲ್ಲ. ‌ಸಾಮಾಜಿಕ, ಧಾರ್ಮಿಕ ಅಧಿಕಾರಕ್ಕೆ ಹಪಹಪಿಸುವುದಿಲ್ಲ. ತಮ್ಮದೇ ಆದ ಸಾಹಿತ್ಯಿಕ, ಸಾಂಸ್ಕೃತಿಕ ಮಾರ್ಗಗಳನ್ನು ಕಂಡುಕೊಂಡು ಸಮಾಧಾನದಿಂದ ಬದುಕುತ್ತವೆ. ಸಹನೀಯವಾದ ಜೀವನ ಕ್ರಮದಲ್ಲಿ ಇರುತ್ತವೆ. ಅತ್ಯಂತ ಪ್ರಜಾಸತ್ತಾತ್ಮಕ ಮತ್ತು ಈ ನೆಲದ ನಿಸರ್ಗ ವಿವೇಕದ ಜೀವನವನ್ನು ತತ್ವಪದಕಾರರು ಕೊಡಬಲ್ಲರು.

* ಶಿಷ್ಟ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯದ ನಡುವಿನ ವ್ಯತ್ಯಾಸಗಳು ಏನು? ಕನ್ನಡ ಸಾಹಿತ್ಯಕ್ಕೆ ತತ್ವಪದದ ಕೊಡುಗೆ ಯಾವ ರೀತಿಯದ್ದು?

ಕನ್ನಡ ಸಾಹಿತ್ಯ ಚರಿತ್ರೆಯ ಬಿಟ್ಟು ಹೋದ ಭಾಗ ತತ್ವಪದ. ಇಂದಿಗೂ ಜೀವಂತವಾಗಿರುವ, ಬಹುದೊಡ್ಡ ಸಮುದಾಯದೊಂದಿಗೆ ಜೀವಿಸುವ ತತ್ವಪದ ಎಲ್ಲಿಂದ, ಏಕೆ ಬಿಟ್ಟು ಹೋಯಿತು ಎನ್ನುವುದು ಅಚ್ಚರಿಯ ಸಂಗತಿ. ನಮ್ಮ ಶಿಷ್ಟ ಸಾಹಿತ್ಯ ಈ ಪ್ರಮಾಣದಲ್ಲಿ ಇರುವುದು ಸಮೃದ್ಧಿಯ ಸೂಚನೆ. ಪ್ರಧಾನಧಾರೆ ಎನ್ನುವ ಸಾಹಿತ್ಯವನ್ನು ಅಧಿಕಾರ ಕೇಂದ್ರಗಳು ನಿರ್ವಹಿಸುತ್ತವೆ. ಇವುಗಳಿಗೆ ಅಧಿಕಾರದ ಒತ್ತಾಸೆ. ಕನ್ನಡದ ಪ್ರಮುಖ ಕವಿ ಯಾರು ಎಂದರೆ ಪಂಪ ಎನ್ನುತ್ತೇವೆ. ಅವರು (ತತ್ವಪದಕಾರರು) ಚಿದಾನಂದ ಅವಧೂತ ಎನ್ನುವರು. ತತ್ವಪದ ಕನ್ನಡದ ಬಹುದೊಡ್ಡ ಸಮೂಹದ ಭಾಗ. ಈ 32 ಸಂಪುಟಗಳ ಪ್ರಕಟಣೆ ಮನೆಯವರನ್ನೇ ಒಳಗೆ ಕರೆಯುವ ಸೂಕ್ಷ್ಮ ಸಂದರ್ಭವಾಗಿದೆ. ಅಂದರೆ ಮನೆಯವರನ್ನೇ ಇಲ್ಲಿಯವರೆಗೆ ಹೊರಗೆ ಕಳುಹಿಸಿದ್ದೇವೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಹಾಡುವುದು ಮತ್ತು ಓದುವುದು ಯಾರನ್ನು ಎಂದು ಕೇಳಿದರೆ ಕಡಕೋಳ ಮಡಿವಾಳಪ್ಪ ಅವರನ್ನು.

ಧಾರವಾಡದ ನೆಲದ ನಿಜವಾದ ಅಂತಃಸತ್ವ ಇಟ್ಟುಕೊಂಡಿರುವ ಧಾರ್ಮಿಕ– ಸಾಂಸ್ಕೃತಿಕ ಸಂಸ್ಥೆ ಎಂದರೆ ಹುಬ್ಬಳ್ಳಿಯ ಸಿದ್ಧಾರೂಢ ಮಠ. ಕಡಕೋಳ ಮಡಿವಾಳಪ್ಪ, ನಿಜಗುಣ ಶಿವಯೋಗಿ, ಚಿದಾನಂದ ಅವಧೂತರು ತಮ್ಮ ಪದಗಳ ಮೂಲಕವೇ ಜನರ ಒಟ್ಟಿಗೆ ತೀವ್ರವಾಗಿ ಬದುಕುತ್ತಿದ್ದಾರೆ. ಸಾಮಾನ್ಯರ ಸಾಹಿತ್ಯ ಮತ್ತು ಪ್ರಧಾನ ಸಾಹಿತ್ಯವನ್ನು ಜೊತೆಯಲ್ಲಿ ಇಟ್ಟು ನೋಡಿದರೆ ತಾತ್ವಿಕವಾಗಿ ಹೆಚ್ಚು ಆಳವಾಗಿ ಬಾಳುತ್ತಿರುವವರು ಸಾಮಾನ್ಯರಾದ ತತ್ವಪದಕಾರರು. ತತ್ವಪದ ಸಾಹಿತ್ಯವನ್ನು ಹೊರಗೆ ನಿಲ್ಲಿಸಲು ಕಾರಣ– ಅದು ಓದಿನ ಸಾಹಿತ್ಯವಲ್ಲ, ಸಾಧಕನ ಸಾಹಿತ್ಯ ಎನ್ನುವುದು. ಹಾಗಿದ್ದರೆ ಈ ಪ್ರಕಟಣೆ ಏಕೆ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದಕ್ಕೆ ಉತ್ತರ: ನಮ್ಮ ನಡುವಿನ ತಾತ್ವಿಕ ಎಚ್ಚರವನ್ನು ಸಮೂಹದ ಮುಂದಿಡುವುದೇ ಪ್ರಕಟಣೆಯ ಉದ್ದೇಶ.

* ಸಂಪುಟದಲ್ಲಿ ಎಷ್ಟು ತತ್ವಪದಕಾರರು ಇದ್ದಾರೆ. ಮತ್ತಷ್ಟು ಸಂಪುಟಗಳನ್ನು ಸಂಪಾದಿಸುವ ಇರಾದೆ ಇದೆಯೇ?

ಈ ಕೆಲಸ ಆರಂಭವಾಗಿ ನಾಲ್ಕು ವರ್ಷಗಳಾಗಿವೆ. ಸರ್ಕಾರ ಇಲ್ಲಿನ ಪ್ರಜಾಸತ್ತಾತ್ಮಕ ಆಶಯಗಳನ್ನು ಪರಿಗಣಿಸಿ ಈ ಯೋಜನೆಗೆ ಒಪ್ಪಿಗೆ ನೀಡಿತು. ಎಲ್ಲ ಸಮುದಾಯಗಳ ಸುಮಾರು 200 ತತ್ವಪದಕಾರರು ಇದ್ದಾರೆ. ಒಂದು ಸಂಪುಟ ಮಹಿಳಾ ತತ್ವಪದಕಾರರಿಗೆ ಮೀಸಲು. ಸ್ವಾತಂತ್ರ್ಯಪೂರ್ವದ ಕೆಲವು ತತ್ವಪದಕಾರರು ಸಂಪುಟದಲ್ಲಿ ಸೇರಿದ್ದಾರೆ. ಎಲ್ಲರನ್ನೂ ತಂದಿದ್ದೇವೆ ಎಂದು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. 18 ಮತ್ತು 19ನೇ ಶತನಮಾದ ತತ್ವಪದಕಾರರು ಪ್ರಮುಖವಾಗಿದ್ದಾರೆ. ಸ್ವಲ್ಪಮಟ್ಟಿಗೆ ಆಚೆ ಈಚಿನ ಕಾಲದವರೂ ಇದ್ದಾರೆ. ಮತ್ತೆ 20 ಸಂಪುಟಗಳನ್ನು ಸಿದ್ಧಗೊಳಿಸಲಾಗುವುದು. ಇದರಲ್ಲಿ ಎಂಟು ಅನುವಾದ ಸಂಪುಟಗಳು ಇರಲಿವೆ. ಕಲಬುರ್ಗಿಯ ಗೋಡೆ ಅವರು ಉರ್ದು ತತ್ವಪದಗಳನ್ನು ಕನ್ನಡಕ್ಕೆ ತರುತ್ತಿದ್ದಾರೆ. ತಮಿಳಿನ ಜೊತೆ ನಮಗೆ ಸಂಪರ್ಕ ಸಿಗಲಿಲ್ಲ. ತತ್ವಪದ ಎನ್ನುವುದು ಸಮುದ್ರ. ಅದರ ಒಂದು ಬೊಗಸೆ ನೀರನ್ನು ಹಿಡಿದಿದ್ದೇವೆ ಅಷ್ಟೇ.

* ಬೇರೆ ಭಾಷೆಗಳಲ್ಲಿ ತತ್ವಪದಗಳ ಸ್ಥಿತಿ ಹೇಗಿದೆ?

ಅತಿ ಹೆಚ್ಚು ತತ್ವಪದಕಾರರು ಕನ್ನಡದಲ್ಲಿ ಇದ್ದಾರೆ. ಕೋಲಾರ, ಪಾವಗಡ ಸೇರಿದಂತೆ ಗಡಿಭಾಗದಲ್ಲಿ ತೆಲುಗು ಮತ್ತು ಕನ್ನಡದ ನಡುವೆ ಕೊಡು ಕೊಳ್ಳುವಿಕೆ ಇದೆ. ತೆಲುಗು, ಮರಾಠಿ ಮತ್ತು ಉರ್ದುವಿನಲ್ಲಿ ತತ್ವಪದಗಳು ಇವೆ. ಆಂಧ್ರಪ್ರದೇಶದ ಪ್ರಭಾವವಿರುವ ಗಡಿಯಲ್ಲಿ ಬೌದ್ಧ ಮಧ್ಯಮ ಮಾರ್ಗದ ಅಚಲ ಪರಂಪರೆಯ ತತ್ವಗಳು ಇವೆ.

* ವಚನಕಾರರು, ಜನಪದ ಹಾಗೂ ತತ್ವಪದಕಾರ ನಡುವಿನ ವ್ಯತ್ಯಾಸಗಳೇನು?

ತತ್ವಪದಕಾರರು ಅಜ್ಞಾತರಲ್ಲ. ಆಯಾ ಶಿಷ್ಯ ಮತ್ತು ಸಾಧಕ ವಲಯಕ್ಕೆ ಹೆಚ್ಚು ಪರಿಚಿತರು. ಹಾಗೆ ನೋಡಿದರೆ ಮಹಾಕವಿಗಳೇ ಅಜ್ಞಾತರು. ಕುಮಾರವ್ಯಾಸನನ್ನು ಗಮಕವಾಚನದ ಮೂಲಕ ಕಷ್ಟಪಟ್ಟು ಬದುಕಿಸಿಕೊಳ್ಳಲಾಗಿದೆ. ಜನಪದ ಸಾಹಿತ್ಯದ ಆವರಣದಲ್ಲಿಯೇ ತತ್ವಪದವೂ ಇದೆ. ಜನಪದ ಸಾಹಿತ್ಯಿಕ ಮತ್ತು ಕಲಾತ್ಮಕವಾದುದು. ತತ್ವಪದ ತಾತ್ವಿಕವಾದುದು. ಇದು ಇಂಥವರ ತತ್ವಪದ ಎಂದು ಸ್ಪಷ್ಟವಾಗಿ ವಿಂಗಡಿಸಲು ಸಾಧ್ಯ. ಷರೀಫರು ಯಾವ ಶಾಲೆಯವರು ಎನ್ನುವುದು ತತ್ವಪದಕಾರರಿಗೆ ಗೊತ್ತು.

ವಚನಕಾರರು ಮತ್ತು ತತ್ವಪದಕಾರರ ಆದರ್ಶಗಳು ಪ್ರಜಾಸತ್ತಾತ್ಮಕವಾಗಿವೆ. ಆದರೆ ವಚನಕಾರರ ನಡುವೆಯೇ ಪರಸ್ಪರ ತಾತ್ವಿಕ ಭಿನ್ನಾಭಿಪ್ರಾಯ, ಪ್ರಶ್ನೆ, ಉತ್ತರ, ಸಂವಾದ, ಅನುಸಂಧಾನ ಇತ್ತು. ಆದರೆ ತತ್ವಪದಕಾರರು ಮುಕ್ತವಾಗಿದ್ದಾರೆ. ತಮ್ಮದನ್ನು ಬಿಟ್ಟುಕೊಡಲು, ಬೇರೆಯದನ್ನು ಸ್ವೀಕರಿಸಲು ಸಿದ್ಧರಿದ್ದಾರೆ.

* ತತ್ವಪದ ಮತ್ತು ಪದಕಾರರ ಹುಡುಕುವಾಗ ನಿಮಗಾದ ವಿಶಿಷ್ಟ ಅನುಭವವೇನು?

ಸಂಭ್ರಮ. ರಹಮತ್ ತರೀಕೆರೆ, ಮೀನಾಕ್ಷಿ ಬಾಳಿ ಸೇರಿದಂತೆ ಹಲವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಚಾಮರಾಜನಗರದ ಯಳಂದೂರಿನಿಂದ ಬೀದರ್‌ವರೆಗೆ ತತ್ವಗಳನ್ನು ಕಟ್ಟಿರುವ ಬಗೆಯೇ ವಿಶೇಷ. ಅವರು ನಂಬಿದ ಜೀವನ ಕ್ರಮದ ಬಗ್ಗೆ ತತ್ವನಿಷ್ಠೆಯಿಂದ ಬಾಳುತ್ತಾರೆ. ಇಲ್ಲಿ ದೇವರು, ದೇವಾಲಯ ಇಲ್ಲ. ಗುರು ಇದ್ದಾನೆ. ಗುರುವಿನ ಬಗ್ಗೆ ಅಧಿಕ ನಿಷ್ಠೆ. ಪುಸ್ತಕದ ತತ್ವ ತತ್ವ ಅಲ್ಲ. ಪುಸ್ತಕೀಯವಾಯಿತು, ಅಕ್ಷರಕ್ಕೆ ಬಂದಿತು ಎಂದರೆ ಅದು ಸ್ಥಗಿತವಾಯಿತು ಎಂದು ಅರ್ಥ. ಮುಂದಕ್ಕೆ ಚಲಿಸಲು, ಹೊಸ ವ್ಯಾಖ್ಯಾನಕ್ಕೆ ಚಲನರೂಪಿಯಾದ ಗುರು ಅವಶ್ಯ. ಗುರು ಮತ್ತು ಶಿಷ್ಯರ ನಡುವೆ ಯಾವುದೇ ಜಾತಿ ಧರ್ಮವಿಲ್ಲ. ತತ್ವಕ್ಕೆ ಕಾಲಿಡುವ ಮುಂಚೆ ಜಾತಿ ಬಿಟ್ಟು ಬರಬೇಕು. ಹುಲಿಯೂರು ದುರ್ಗದ ಕರಡಿಗುಡ್ಡದಲ್ಲಿ ಒಂದು ಸೂಫಿ ಪಂಥದ ಮಠ ಇದೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ದಲಿತ ಹೆಣ್ಣುಮಕ್ಕಳು ನಡೆಸಿಕೊಂಡು ಹೋಗುತ್ತಿದ್ದಾರೆ. ಮೈಸೂರು ಮಹಾರಾಜರು ಈ ಮಠಕ್ಕೆ 15 ಎಕರೆ ಜಮೀನು ನೀಡಿದ್ದಾರೆ.

ಶಿವಾನಂದ ಸುಬ್ರಹ್ಮಣ್ಯ ಎನ್ನುವ ತತ್ವಪದಕಾರರು ‘ಬಲಗೈ ಸಮುದಾಯದ ಹೆಣ್ಣುಮಕ್ಕಳು ಈ ಮಠ ನಡೆಸಿಕೊಂಡು ಹೋಗಬೇಕು’ ಎಂದು ವಿಲ್ ಬರೆದಿಟ್ಟಿದ್ದಾರೆ. ನಾನು ಪ್ರವಾಸದ ವೇಳೆ ಒಬ್ಬ ಮುದುಕಿಯನ್ನು ‘ಏಕೆ ಎಲ್ಲರಿಗೂ ತತ್ವಪದ ಸಿಗುವುದಿಲ್ಲ’ ಎಂದು ಕೇಳಿದೆ. ‘ಇದು ಬಯಲಲ್ಲಿ ಇಟ್ಟ ಗಂಟು. ಯಾರಾದರೂ ಬರಬಹುದು, ಬುತ್ತಿ ಬಿಚ್ಚಿ ಉಣ್ಣಬಹುದು. ದಿನಾ ಚಂಬು, ಗಂಗಾಳ, ಲೋಟ ಬೆಳಗಿದಂಗೆ ಮನಸ್ಸನ ಬೆಳಗಿ ಇಟ್ಕ, ಕಲ್ಮಶ ಉಳಿಸ್ಕಬ್ಯಾಡ’ ಎಂದಿತು. ಇದು ನಿಜಕ್ಕೂ ದೊಡ್ಡ ತಾತ್ವಿಕತೆ.

* ರಾಜ್ಯದ ಯಾವ ಭಾಗದಲ್ಲಿ ತತ್ವಪದಕಾರರ ಪ್ರಭಾವ ದಟ್ಟವಾಗಿದೆ?

ಉತ್ತರ ಕರ್ನಾಟಕದಲ್ಲಿ ತತ್ವಪದಕಾರರು ಹೆಚ್ಚಿರುವಂತೆ ದಕ್ಷಿಣ ಕರ್ನಾಟಕದಲ್ಲಿಯೂ ಇದ್ದಾರೆ. ಆದರೆ ಸಕಲೇಶಪುರದಿಂದ ಆಚೆಯ ಕರಾವಳಿ ಭಾಗದಲ್ಲಿ ತತ್ವಪದಕಾರರು ಸಿಕ್ಕುವುದೇ ಇಲ್ಲ. ಪ್ರಮುಖವಾಗಿ ತತ್ವಪ್ರಸ್ತಾನಗಳನ್ನು ರೂಪಿಸಿದ ಸ್ಥಳ ಅದು. ಆದರೆ ಒಂದು ವರ್ಷ ಹುಡುಕಿಸಿದರೂ ತತ್ವಪದ ದೊರೆಯಲಿಲ್ಲ. ಹೊಸ ತತ್ವಪದಕಾರರೂ ಇದ್ದಾರೆ. ಅವರಿಗೆ ವರ್ತಮಾನದ ಸಂಕಟಗಳು ಪ್ರಮುಖವಾಗಿ ಕಾಣುತ್ತಿವೆ. ಅಂಬೇಡ್ಕರ್, ಗಾಂಧಿ, ಬುದ್ಧನೂ ತತ್ವದ ವಸ್ತುಗಳಾಗಿದ್ದಾರೆ. ಏಕತಾರಿಯಲ್ಲಿ ಬುದ್ಧ ಬಸವನನ್ನು ಕೂರಿಸಿಕೊಂಡಂತೆ, ಅಂಬೇಡ್ಕರ್‌ ಅವರನ್ನು ಕೂರಿಸಿಕೊಂಡಿದ್ದಾರೆ. ಇದು ದೊಡ್ಡ ಆದರ್ಶ.

* ಸಂಪುಟಗಳನ್ನು ಜನರಿಗೆ ತಲುಪಿಸುವ ಬಗೆ ಹೇಗೆ?

ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ತನ್ನದೇ ಆದ ಮಾರಾಟ ವಲಯ ಇದೆ. ತೀರಾ ಹೆಚ್ಚಿನ ಬೆಲೆಯೇನೂ ಇಲ್ಲ. ತತ್ವಪದಕಾರರಿಗೆ ಈ ಪ್ರಕಟಣೆ ಬಗ್ಗೆ ತಿಳಿದಿದೆ.

ಗ್ರಾಮಗಳಲ್ಲಿ ಎರಡು ಮೂರು ತತ್ವಪದಕಾರರ ತಂಡಗಳು ಇವೆ. ಅವರೇ ಇದನ್ನು ಮುಟ್ಟಬಲ್ಲರು. ಹಸ್ತಪ್ರತಿಗಳನ್ನೇ ಬಹಳ ಎಚ್ಚರದಿಂದ ಕಾಪಾಡಿಕೊಂಡಿದ್ದಾರೆ. ತತ್ವಪದಕಾರರು ಪುಸ್ತಕದ ಮೂಲಕ ಬದುಕುವವರಲ್ಲ. ಅದು ಪೂರಕ ಅಷ್ಟೇ.

*

ಇದು ಹಾಡಲ್ಲ; ಬದುಕು

‘ಬರತೀಯಾ, ಫೋಟೊ ತಕ್ಕತೀಯಾ. ಮಾತು ಕೇಳತೀಯಾ. ರಿಕಾರ್ಡ್ ಮಾಡುತೀಯಾ. ಹೋಗತೀಯಾ. ಯಾಕೆ ಹೀಗೆ ಆಡುತೀಯಾ... ಯಾರಾದರೂ ಗುರು ನೋಡ್ಕ, ಸಾಧನೆ ಮಾಡ್ಕ’ –

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಒಬ್ಬ ತತ್ವಪದಕಾರ ಅಜ್ಜಿ ನನಗೆ ಹೇಳಿದ ಮಾತಿದು.

‘ನಿನ್ನ ಪದವ ಪ್ರಿಂಟ್ ಮಾಡಬೇಕು. ನೀ ಸತ್ತು ಹೋದರೆ ಹಾಡು ಹೋಗುತ್ತದೆ. ಮುಂದಿನ ಜನಕ್ಕೆ ಉಳಿಸಬೇಕು’ ಎಂದೆ.

‘ಏಕೆ ಉಳಿಸಬೇಕು. ಹೋದರೆ ಹೋಗುತ್ತೆ ಬಿಡು. ಇನ್ನೆರಡು ಕಟ್ಟಿಕೊಂಡರೆ ಆಯಿತು’ ಎಂದಿತು ಮುದುಕಿ. ಇದು ಹಾಡಲ್ಲ, ಬದುಕು. ತತ್ವ ದಕ್ಕಿದ ಮೇಲೆ ಎರಡು ಕ್ಷಣಕ್ಕೆ ಹಾಡು ಕಟ್ಟಬಹುದು ಎನ್ನುವ ಧ್ವನಿ ಆ ಮುದುಕಿಯದ್ದಾಗಿತ್ತು.

ಪ್ರತಿಕ್ರಿಯಿಸಿ (+)