ಶುಕ್ರವಾರ, ಡಿಸೆಂಬರ್ 13, 2019
20 °C
ವಾರದ ಸಂದರ್ಶನ: ಡಾ.ಎಂ.ಎಸ್.ತಿಮ್ಮಪ್ಪ ವಿಶ್ರಾಂತ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ವಿ.ವಿಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಬೇಕು

ಎ. ಎಂ. ಸುರೇಶ Updated:

ಅಕ್ಷರ ಗಾತ್ರ : | |

ವಿ.ವಿಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಬೇಕು

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ-2017 ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಇದರಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆಯಾಗಲಿದೆ. ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇನ್ನಷ್ಟು ಹೆಚ್ಚಾಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಕಾಯ್ದೆ ಬಗ್ಗೆ ತಮ್ಮ ನಿಲುವು ಏನು? ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಗುಣಮಟ್ಟದ ಕುಸಿತ, ಬೋಧಕರ ಕೊರತೆ, ಕುಲಪತಿಗಳ ನೇಮಕದಲ್ಲಿ ಆಗುತ್ತಿರುವ ವಿಳಂಬ, ಭ್ರಷ್ಟಾಚಾರ ಇತ್ಯಾದಿ ವಿಷಯಗಳ   ಬಗ್ಗೆ  ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

* 2017ರ ಉದ್ದೇಶಿತ ಕಾಯ್ದೆಯಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆಯಾಗುವುದಿಲ್ಲವೇ?

ಖಂಡಿತ ಧಕ್ಕೆಯಾಗುತ್ತದೆ. ವಿ.ವಿ ಸ್ವಾಯತ್ತತೆ ಮೊಟಕುಗೊಳಿಸುವ ಕೆಲಸ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. 2000ದವರೆಗೂ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ– 2000 ಜಾರಿಯಾದ ನಂತರ ಮೊದಲ ಬಾರಿಗೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮೊಟಕು ಮಾಡುವ ಕೆಲಸ ಶುರುವಾಯಿತು. ಸರ್ಕಾರದ ಹಸ್ತಕ್ಷೇಪವೂ ಆರಂಭವಾಯಿತು. 2000ದವರೆಗೂ ಕುಲಪತಿಗಳ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ.

ಕುಲಪತಿಗಳ ನೇಮಕ ಸಂಬಂಧ ರಚನೆ ಆಗುತ್ತಿದ್ದ ಶೋಧನಾ ಸಮಿತಿಯಲ್ಲಿ ಸಿಂಡಿಕೇಟ್, ಯುಜಿಸಿ ಮತ್ತು ರಾಜ್ಯಪಾಲರ ಪ್ರತಿನಿಧಿ ಅಷ್ಟೇ ಇರುತ್ತಿದ್ದರು. ಆದರೆ, 2000ದ ಕಾಯ್ದೆ ಪ್ರಕಾರ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗೂ ಅವಕಾಶ ಕಲ್ಪಿಸಲಾಯಿತು. ಸಮಿತಿಯಲ್ಲಿನ ನಾಲ್ಕು ಮಂದಿ ಪೈಕಿ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಕಾಯ್ದೆಯಲ್ಲಿ ಇದೆ. ಆದರೆ, ಸರ್ಕಾರದ ಪ್ರತಿನಿಧಿಯನ್ನೇ ಅಧ್ಯಕ್ಷರಾಗಿ ನೇಮಿಸುವ ಮೂಲಕ ನೇರ ಹಸ್ತಕ್ಷೇಪ ಆರಂಭವಾಯಿತು.

ಸ್ವಾಯತ್ತತೆ ಕಸಿದುಕೊಳ್ಳುವುದು ಮೂರ್ಖತನ. ಶಿಕ್ಷಣ ವ್ಯವಸ್ಥೆಯ ಘನತೆಗೆ ಮಾಡಿದ ಅವಮಾನ. ನೌಕರಶಾಹಿ ವ್ಯವಸ್ಥೆಯ ಧೋರಣೆಯಿಂದಾಗಿ ಈ ರೀತಿ ಆಗುತ್ತಿದೆ. ಇದರಿಂದ ವಿದ್ಯೆಯ ಶ್ರೇಷ್ಠತೆ, ಉತ್ಕೃಷ್ಟತೆ ಸಂಪೂರ್ಣ ನಾಶವಾಗುತ್ತದೆ.

* ಈ ಕಾಯ್ದೆ ತರುವುದರ ಉದ್ದೇಶ ಏನಿರಬಹುದು?

ಸರ್ಕಾರ ತನಗೆ ಬೇಕಾದವರೊಬ್ಬರನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನಾಗಿ ಮಾಡಲು ಹೊರಟಿತು. ಆದರೆ, ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಅದಕ್ಕೆ ಒಪ್ಪಲಿಲ್ಲ. ತಾನು ಹೇಳಿದವರೇ ನೇಮಕವಾಗಬೇಕು ಎಂಬ ಸರ್ಕಾರದ ಧೋರಣೆಯಿಂದಾಗಿ ಈ ಕಾಯ್ದೆಯನ್ನು ರೂಪಿಸಲಾಗಿದೆ ಅಷ್ಟೆ. ಇದರ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶವಿಲ್ಲ. ಮಸೂದೆಯನ್ನು ಸಿದ್ಧಪಡಿಸುವ ಮುನ್ನ ಶಿಕ್ಷಣ ತಜ್ಞರ ಸಲಹೆಯನ್ನೂ ಪಡೆದಿಲ್ಲ. ಅಧಿಕಾರಿಗಳು ರೂಪಿಸಿರುವ ಮಸೂದೆ ಇದು.

ವಿಶ್ವವಿದ್ಯಾಲಯಗಳ ಕಾಯ್ದೆ ಸಂಬಂಧ ಎಂ.ಆರ್.ಶ್ರೀನಿವಾಸನ್ ಮತ್ತು ಎನ್.ಆರ್.ಶೆಟ್ಟಿ ಅವರು ನೀಡಿರುವ ವರದಿಗಳು ಸರ್ಕಾರದ ಮುಂದಿವೆ. ಆದರೆ ಈ ವರದಿಗಳತ್ತ ಗಮನವನ್ನೇ ಹರಿಸಿಲ್ಲ. ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದಿದ್ದರೆ ತಜ್ಞರ ಶಿಫಾರಸುಗಳನ್ನು ಆಧರಿಸಿ ಕಾಯ್ದೆ ರೂಪಿಸಬಹುದಿತ್ತು.

* ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಅಧಿಕಾರವನ್ನು ವಿಶ್ವವಿದ್ಯಾಲಯಗಳಿಂದ ಕಸಿದುಕೊಳ್ಳುವುದು ಸರಿಯೇ?

ದೈನಂದಿನ ಚಟುವಟಿಕೆಗಳಲ್ಲಿ ಸರ್ಕಾರ ಮೂಗು ತೂರಿಸುವುದರಿಂದ ವಿಶ್ವವಿದ್ಯಾಲಯಗಳಿಗೆ ಇನ್ನಷ್ಟು ಕಳಂಕ ಬರಲಿದೆ. ವಿಶ್ವವಿದ್ಯಾಲಯಗಳ ಕಾಮಗಾರಿಗಳಲ್ಲಿ ಅವ್ಯವಹಾರ ಆಗುತ್ತಿದೆ. ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಾಗಿ ವಿಶ್ವವಿದ್ಯಾಲಯಗಳಿಗೆ ಇರುವ ಅಧಿಕಾರವನ್ನು ಮೊಟಕುಗೊಳಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಒಂದೆರಡು ವಿಶ್ವವಿದ್ಯಾಲಯಗಳಲ್ಲಿ ಆಗಿರುವ ಲೋಪಗಳನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಸ್ವಾಯತ್ತತೆ ಕಸಿದುಕೊಳ್ಳುವುದು ಸರಿಯಲ್ಲ. ಭ್ರಷ್ಟಾಚಾರ ನಡೆದಿದ್ದರೆ, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ, ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ರಂಗವಿಠಲಾಚಾರ್ ಸಮಿತಿ ನೀಡಿರುವ ವರದಿ ದೂಳು ತಿನ್ನುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಲು ಸರ್ಕಾರವೇ ಕಾರಣ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಉಳಿದವರು ಎಚ್ಚೆತ್ತುಕೊಳ್ಳುತ್ತಿದ್ದರು.

ನೇಮಕಾತಿ, ಪಠ್ಯ ನಿಗದಿಯಲ್ಲಿ ತಜ್ಞರ ಮಾತೇ ಅಂತಿಮವಾಗಬೇಕು. ಈಗಿರುವ ನೇಮಕಾತಿ ವ್ಯವಸ್ಥೆಯಲ್ಲಿ ತಜ್ಞರು ಇರುತ್ತಾರೆ. ಸಂಶೋಧನೆ, ಅನುಭವ, ನಿಯತಕಾಲಿಕಗಳಲ್ಲಿ ಲೇಖನಗಳ ಪ್ರಕಟ ಸೇರಿದಂತೆ ಒಟ್ಟಾರೆ ಅಕಾಡೆಮಿಕ್ ಆಡಿಟ್‌ನಲ್ಲಿ 300ರಿಂದ 330 ಅಂಕಗಳನ್ನು ಪಡೆಯಬೇಕು. ಅಂತಹವರು ಮಾತ್ರ ನೇಮಕವಾಗಲು ಸಾಧ್ಯ. ನೇಮಕಾತಿ ಮಂಡಳಿಯಲ್ಲಿ ಆಯಾ ವಿಷಯಗಳ ತಜ್ಞರು ಇರುತ್ತಾರೆ. ಡೀನ್‌ಗಳನ್ನು ಒಳಗೊಂಡ ಸಮಿತಿ ಅಂಕ

ಗಳನ್ನು ನೀಡುತ್ತದೆ. ಇಲ್ಲಿ ಕುಲಪತಿಗಳ ಪಾತ್ರ ಗೌಣ. ಒಂದು ವೇಳೆ ಅವ್ಯವಹಾರ ಆದರೆ ತಿದ್ದುಪಡಿ ತರಲು ಈಗಿರುವ ಕಾಯ್ದೆಯಲ್ಲಿ ಅವಕಾಶ ಇದೆ.  2000ಕ್ಕಿಂತ ಹಿಂದೆ ಅವ್ಯವಹಾರ ನಡೆದಿಲ್ಲ. 2000ದ ನಂತರ ಸರ್ಕಾರದ ನೇತೃತ್ವದಲ್ಲಿ ನೇಮಕವಾದ ಕೆಲ ಕುಲಪತಿಗಳ ಅವಧಿಯಲ್ಲೇ ಭ್ರಷ್ಟಾಚಾರ ನಡೆದಿದೆ ಎಂಬುದು ಗಮನಿಸಬೇಕಾದ ಅಂಶ. ಸರ್ಕಾರದ ಹಸ್ತಕ್ಷೇಪ ಇದ್ದ ಕಾರಣ ಈ ರೀತಿ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ಇದ್ದರೆ ಮಾತ್ರ ಚೆನ್ನಾಗಿ ಬೆಳೆಯಲು ಸಾಧ್ಯ ಎಂಬುದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ) ಮೊದಲಾದವು ಉತ್ತಮ ನಿದರ್ಶನ. ಈಗ ಶೇ5ರಿಂದ 10ರಷ್ಟು ಭ್ರಷ್ಟಾಚಾರ ಇರಬಹುದು. ಆದರೆ, ಸರ್ಕಾರದ ಹಸ್ತಕ್ಷೇಪ ಇದ್ದಾಗ ಶೇ 90ರಷ್ಟು ಭ್ರಷ್ಟಾಚಾರ ಇರುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಸಾರ್ವತ್ರೀಕರಣಗೊಳಿಸಿ ಸ್ವಾಯತ್ತತೆಗೆ ಭಂಗ ತರುವುದು ಸರಿಯಲ್ಲ.

* ನಮ್ಮ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಯಾಕೆ ಸಾಧ್ಯವಾಗಿಲ್ಲ?

ಜಾಗತಿಕ ಮಟ್ಟದಲ್ಲಿ ನೋಡಿದಾಗ ಇಂದು ಅನೇಕ ಹೊಸ ವಿಷಯಗಳು ಬಂದಿವೆ. ಆದರೆ, ಆ ವಿಷಯಗಳನ್ನು ವಿ.ವಿ.ಗಳ ಪಠ್ಯದಲ್ಲಿ ಅಳವಡಿಸಿಕೊಂಡಿಲ್ಲ. ಕೆಲವು ವಿ.ವಿ.ಗಳು ಹೊಸ ವಿಭಾಗಗಳನ್ನು ಆರಂಭಿಸಿದ್ದರೂ, ಹುದ್ದೆಗಳು ಸೃಷ್ಟಿಯಾಗಿಲ್ಲ. ಹೊಸ ವಿಷಯಗಳು ಬಂದಾಗ ಸಂಶೋಧನೆ, ಬೋಧನೆ ಮತ್ತು ವಿಸ್ತರಣೆ ಒಟ್ಟಿಗೆ ಆಗಬೇಕು. ಅದರ ಫಲ ವಿದ್ಯಾರ್ಥಿಗಳಿಗೆ ಸಿಗಬೇಕು. ಪಠ್ಯದಲ್ಲಿ ಸಂಶೋಧನೆ ಇದ್ದಾಗ ಇದು ಆಗುತ್ತದೆ. ಆದರೆ, ಇಂದು ಸಂಶೋಧನೆಯೇ ಕುಂಠಿತಗೊಂಡಿದೆ. ಅತಿಥಿ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತದೆ. ಸಂಶೋಧನೆಯಲ್ಲಿ ತೊಡಗಲು ಅವರಿಗೆ ಅವಕಾಶ ಇಲ್ಲ. ಶ್ರೇಷ್ಠ ಶಿಕ್ಷಕರ ಅನುಭವ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಬೋಧಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣದ ಜೀವಾಳ. ಆದರೆ, ಬೋಧನೆಯಲ್ಲಿ ತೊಡಗುವವರಿಗೆ ಸೂಕ್ತ ತರಬೇತಿ ಇಲ್ಲ. ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುವ, ವಿದ್ಯಾರ್ಥಿ ಕೇಂದ್ರೀತವಾದ ಶಿಕ್ಷಣ ವ್ಯವಸ್ಥೆ ಇಲ್ಲ. ಹೀಗಾಗಿಯೇ ವಿದ್ಯಾವಂತರು ಸನ್ನಡತೆ ಇಲ್ಲದ ಕ್ರಿಮಿನಲ್‌ಗಳಾಗುತ್ತಿದ್ದಾರೆ.

* ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆಯಲು ಏನು ಮಾಡಬೇಕು?

ಶ್ರೇಷ್ಠ ಶಿಕ್ಷಕರ ನೇಮಕ, ಸಬಲೀಕರಣಕ್ಕೆ ಉತ್ತೇಜನ ನೀಡಬೇಕು. ಈಗಿರುವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು, ಬೋಧಕರಿಗಿಂತ ವಿ.ವಿ.ಗಳ ಅಂಗ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಇದೆ. ಇದನ್ನು ತಪ್ಪಿಸಬೇಕು. ಪಠ್ಯ ವಿಷಯದಲ್ಲಿ ವಿದ್ಯಾರ್ಥಿಗಳು, ಬೋಧಕರ ಮಾತೇ ಅಂತಿಮವಾಗಬೇಕು. ವಿದೇಶಗಳ ಪಠ್ಯವನ್ನು ಅನುಕರಣೆ ಮಾಡುವ ಬದಲು ನಾವು ಕೈಗೊಳ್ಳುವ ಸಂಶೋಧನೆಯೇ ಪಠ್ಯವಾಗಬೇಕು.

ಪಠ್ಯ ರೂಪಿಸುವಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಅಡೆತಡೆಗಳನ್ನು ಹೋಗಲಾಡಿಸಿ ಸ್ವಾಯತ್ತತೆ ನೀಡಬೇಕು. ಇದು ಸಾಧ್ಯವಾಗಬೇಕಾದರೆ ಸರ್ಕಾರದ ಧೋರಣೆ, ನೌಕರಶಾಹಿಯ ಮನೋಭಾವದಲ್ಲಿ ಬದಲಾವಣೆ ಆಗಬೇಕು.ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು  ಸರ್ಕಾರಕ್ಕೆ ಕಳುಹಿಸುವುದು. ಅಲ್ಲಿ ಒಪ್ಪಿಗೆ ಪಡೆಯಲು ಕುಲಪತಿಗಳು ಕೈಕಟ್ಟಿಕೊಂಡು ನಿಲ್ಲುವುದನ್ನು ತಪ್ಪಿಸಬೇಕು.

* ಕುಲಪತಿಗಳು, ಕುಲಸಚಿವರು ಪಾಠ ಮಾಡುವುದನ್ನು ಕಡ್ಡಾಯಗೊಳಿಸಿರುವುದು ಸರಿಯೇ?

ಇದು ತಪ್ಪು. ಇದರಿಂದ ಅವರ ಘನತೆಗೆ ಧಕ್ಕೆಯಾಗಲಿದೆ. ಪಾಠ ಮಾಡುವುದನ್ನು ಅವರ ವಿವೇಚನೆಗೆ ಬಿಡಬೇಕು. ಬೋಧನೆಯಲ್ಲಿ ಆಸಕ್ತಿ ಹೊಂದಿರುವ ಕುಲಪತಿಗಳು ಸಮಯ ದೊರೆತಾಗ ತಾವಾಗಿಯೇ ಪಾಠ ಮಾಡುತ್ತಾರೆ. ಕುಲಪತಿ ಪಾಠ ಮಾಡುತ್ತಿದ್ದಾರೆ ಎಂದರೆ, ಕುಲಪತಿ ಹುದ್ದೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಭಾವಿಸಬೇಕಾಗುತ್ತದೆ. ತರಗತಿಗಳು ಕುಂದು ಕೊರತೆಗಳನ್ನು ಹೇಳಿಕೊಳ್ಳುವ ಸಭೆಗಳಾಗಬಹುದು.

* ಕುಲಪತಿಗಳ ನೇಮಕ ಯಾಕೆ ವಿಳಂಬವಾಗುತ್ತಿದೆ?

2000ದಲ್ಲಿ ವಿಶ್ವವಿದ್ಯಾಲಯ ಕಾಯ್ದೆ ಬರುವವರೆಗೂ ಹಾಲಿ ಕುಲಪತಿಯ ಅವಧಿ ಮುಗಿಯುವ ಹಿಂದಿನ ದಿನವೇ ನೂತನ ಕುಲಪತಿಯ ನೇಮಕವಾಗುತ್ತಿತ್ತು. ಈ ಕಾಯ್ದೆ  ಬಂದ ನಂತರ ತನಗೆ ಬೇಕಾದವರನ್ನು ಶೋಧನಾ ಸಮಿತಿಗೆ, ಕುಲಪತಿ ಸ್ಥಾನಕ್ಕೆ ನೇಮಕ ಮಾಡಬೇಕು ಎಂಬ ಹಟದಿಂದಾಗಿ ನೇಮಕಾತಿಯಲ್ಲಿ ವಿಳಂಬ ಆಗುತ್ತಿದೆ. ಇದರಿಂದಾಗಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ.

* ಸರ್ಕಾರ ಅಷ್ಟೆ ಅಲ್ಲದೆ ರಾಜ್ಯಪಾಲರೂ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕುಲಪತಿ ಸ್ಥಾನಕ್ಕೆ ಪ್ರಾಮಾಣಿಕರನ್ನು ನೇಮಕ ಮಾಡಲು ಸಾಧ್ಯವೇ?

ಇತ್ತೀಚಿನ ವರ್ಷಗಳಲ್ಲಿ ಕುಲಾಧಿಪತಿಗಳ ವಿರುದ್ಧವೂ ದೂರುಗಳು ಕೇಳಿ ಬರುತ್ತಿವೆ. ನೇಮಕ ಸಂದರ್ಭದಲ್ಲಿ ವ್ಯವಹಾರ ಕುದುರಿಸುವುದು ಅನಿಷ್ಟ ಪದ್ಧತಿ. ಇದನ್ನು ತಪ್ಪಿಸಬೇಕಾದರೆ ಸರ್ಕಾರ, ರಾಜ್ಯಪಾಲರ ಹಸ್ತಕ್ಷೇಪ ಇರಬಾರದು. ಶಿಕ್ಷಣ ತಜ್ಞರೇ ಕುಲಪತಿಗಳನ್ನು ನೇಮಕ ಮಾಡುವಂತಾಗಬೇಕು.

ಎಂ.ಆರ್.ಶ್ರೀನಿವಾಸನ್ ಸಮಿತಿ ಈ ನಿಟ್ಟಿನಲ್ಲಿ ಶಿಫಾರಸು ಮಾಡಿತ್ತು. ಕುಲಪತಿ ಸ್ಥಾನಕ್ಕೆ ಅರ್ಹರಾದ ಪ್ರಾಧ್ಯಾಪಕರ ಪಟ್ಟಿಯನ್ನು ಉನ್ನತ ಶಿಕ್ಷಣ ಪರಿಷತ್ ಪ್ರತಿ ವರ್ಷ ಸಿದ್ಧಪಡಿಸಬೇಕು. ಯಾವುದೇ ವಿಶ್ವವಿದ್ಯಾಲಯದ ಕುಲಪತಿ ನಿವೃತ್ತಿಯಾದಾಗ, ಆ ಸ್ಥಾನಕ್ಕೆ ಅರ್ಹರಾದ ಮೂವರ ಹೆಸರನ್ನು ಪರಿಷತ್, ಸರ್ಕಾರಕ್ಕೆ ಕಳುಹಿಸಬೇಕು. ಆ ಪೈಕಿ ಒಬ್ಬರನ್ನು ನೇಮಕ ಮಾಡಬೇಕು.  ಶೈಕ್ಷಣಿಕವಾಗಿ ಸಾಧನೆ ಮಾಡಿದವರು ಪಟ್ಟಿಯಲ್ಲಿ ಇರಬೇಕು. ಸಾಮಾನ್ಯವಾಗಿ ಅಂಥಹವರಿಗೆ ₹50 ಲಕ್ಷ, ₹1 ಕೋಟಿ ಕೊಟ್ಟು ಲಾಬಿ ಮಾಡುವ ಶಕ್ತಿ ಇರುವುದಿಲ್ಲ. ಹೀಗಾಗಿ ಪ್ರಾಮಾಣಿಕರು ಬರುವ ವಿಶ್ವಾಸವಿದೆ.

* ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಬಿಲ್ ಪಾವತಿಸಲು, ಸಂಬಳ ನೀಡಲು ಹಣವಿಲ್ಲ. ಇದಕ್ಕೆ ಯಾರು ಹೊಣೆ?

ಸರ್ಕಾರ ನೀಡುವ ಅನುದಾನ ಸಂಬಳಕ್ಕೆ ಸಾಕಾಗುತ್ತಿಲ್ಲ. ಯುಜಿಸಿಯಿಂದ ಸಂಶೋಧನೆಗೆ ಬರುವ ಹಣದಲ್ಲಿ ಕುರ್ಚಿ, ಮೇಜು ಇತ್ಯಾದಿಗಳ ವ್ಯವಸ್ಥೆ ಮಾಡಿರುವ ಉದಾಹರಣೆ ಅನೇಕ ವಿ.ವಿಗಳಲ್ಲಿದೆ. ವಿಶ್ವವಿದ್ಯಾಲಯಗಳ ಉನ್ನತಿಯನ್ನು ಸರ್ಕಾರ ಬಯಸುವುದಾದರೆ, ಅವುಗಳಿಗೆ ಸ್ವಾಯತ್ತತೆ ಮತ್ತು ಹೆಚ್ಚಿನ ಅನುದಾನ ನೀಡಬೇಕು.

* ಬೆಂಗಳೂರು ವಿಶ್ವವಿದ್ಯಾಲಯದ ವಿಭಜನೆ ಅಗತ್ಯವಿತ್ತೇ?

ಸಂಪೂರ್ಣವಾಗಿ ಬದಲಾವಣೆ ತಂದು ಪರೀಕ್ಷೆ ಮತ್ತು ಆಡಳಿತ ವಿಭಾಗವನ್ನು ಕಂಪ್ಯೂಟರೀಕರಣ ಗೊಳಿಸಿದ್ದರೆ ವಿಭಜನೆ ಅಗತ್ಯ

ವಿರಲಿಲ್ಲ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಯನ್ನು ಒಳಗೊಂಡ ಆನ್‌ಲೈನ್‌ ಪರೀಕ್ಷಾ ಪದ್ಧತಿ ಜಾರಿ ಮಾಡಿದರೆ 24 ಗಂಟೆಯಲ್ಲಿ ಫಲಿತಾಂಶ ಕೊಡಬಹುದು.

ಚಿತ್ರಗಳು: ರಂಜು ಪಿ.

ಪ್ರತಿಕ್ರಿಯಿಸಿ (+)