ಬುಧವಾರ, ಡಿಸೆಂಬರ್ 11, 2019
20 °C

ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು

Published:
Updated:
ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು

1. ಚಿತ್ರ-1 ಮತ್ತು ಚಿತ್ರ-2ರಲ್ಲಿರುವ ದ್ವಿವಿಧ ಸುಪ್ರಸಿದ್ಧ ಅಂತರಿಕ್ಷ ಸೃಷ್ಟಿಗಳನ್ನು ಗಮನಿಸಿ. ಮೊದಲಿನದು ವಿಧ ವಿಧ ಸಾವಿರಾರು ಕೋಟಿ ವ್ಯೋಮಕಾಯಗಳ ಮಹಾ ಸಮೂಹ . ಎರಡನೆಯದು ನಮ್ಮ ಸೂರ್ಯನಂತಹ ಸಾಧಾರಣ ದ್ರವ್ಯರಾಶಿಯ ನಕ್ಷತ್ರವೊಂದರ ಅವಸಾನದ ವಿದ್ಯಮಾನದ ದೃಶ್ಯ. ಈ ನಿರ್ಮಿತಿಗಳು ಯಾವುವು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?

ಅ. ಸೂಪರ್ ನೋವಾ

ಬ. ಗ್ಯಾಲಕ್ಸಿ

ಕ. ನಕ್ಷತ್ರ ಪುಂಜ

ಡ. ತಾರಾ ಗುಚ್ಛ

ಇ. ಗ್ರಹೀಯ ನೀಹಾರಿಕೆ

ಈ. ಸೂಪರ್ ನೋವಾ ಅವಶೇಷ

2. ಹುಣ್ಣಿಮೆಯ ಪೂರ್ಣ ಚಂದ್ರನ ಹಿನ್ನೆಲೆಯಲ್ಲಿ ಹಾರಿ ಸಾಗುತ್ತಿರುವ ವಲಸೆ ಹಕ್ಕಿಗಳ ದೃಶ್ಯವೊಂದು ಚಿತ್ರ-3 ರಲ್ಲಿದೆ. ಹಗಲೂ-ಇರುಳೂ ತಡೆರಹಿತ ಪಯಣ ನಡೆಸುವ ವಲಸೆ ಹಕ್ಕಿಗಳು ತಮ್ಮ ಸುದೀರ್ಘ ಪಯಣದ ಮಾರ್ಗದರ್ಶನವನ್ನು ಇಲ್ಲಿ ಸೂಚಿಸಿರುವ ಯಾವ ಯಾವ ಅಂಶಗಳಿಂದ ಪಡೆಯುತ್ತವೆ ಗೊತ್ತೇ?

ಅ. ನೆಲದ ಮೇಲಿನ ನೈಸರ್ಗಿಕ ಹೆಗ್ಗುರುತುಗಳು

ಬ. ಆಕಾಶದಲ್ಲಿ ಸೂರ್ಯನ ದಿಕ್ಕು

ಕ. ಚಂದ್ರನ ಬೆಳಕು

ಡ. ನಿರ್ದಿಷ್ಟ ನಕ್ಷತ್ರಗಳ- ನಕ್ಷತ್ರಪುಂಜಗಳ ಸ್ಥಾನ

ಇ. ಭೂ ಕಾಂತಕ್ಷೇತ್ರ

3. ಸಸ್ಯಲೋಕದಲ್ಲಿ ದ್ವಿವಿಧ ಜೀವಿಗಳ ಪರಸ್ಪರ ಅವಲಂಬನೆಯ ಅಸದೃಶ ನಿದರ್ಶನವಾಗಿರುವ ಒಂದು ಸುಪ್ರಸಿದ್ಧ ಸೃಷ್ಟಿ ಚಿತ್ರ-4 ರಲ್ಲಿದೆ.

ಅ. ಈ ಸೃಷ್ಟಿ ಯಾವುದು?

ಬ. ಇಲ್ಲಿ ಪರಸ್ಪರ ಅವಲಂಬನೆಯ ಸಹಬಾಳ್ವೆ ನಡೆಸಿರುವ ಎರಡು ವಿಧ ಜೀವಿಗಳು ಯಾವುವು?

4. ಸಂಪೂರ್ಣ ನೀರ್ಗಲ್ಲಿನಿಂದ ಆವರಿಸಲ್ಪಟ್ಟ ಮೇಲ್ಮೈ; ನೀರ್ಗಲ್ಲ ನೆಲದಲ್ಲಿ ಅಲ್ಲಲ್ಲಿ ಚಿಮ್ಮುತ್ತಿರುವ ಅತಿ ಶೀತಲ ಜಲದ ಕಾರಂಜಿಗಳು- ಇಂತಹ ವಿಸ್ಮಯವಾದ ಲಕ್ಷಣಗಳನ್ನು ಪಡೆದಿರುವ, ಗುರುಗ್ರಹದ ಪ್ರಸಿದ್ಧ, ವಿಶಿಷ್ಟ ಚಂದ್ರದ ಒಂದು ದೃಶ್ಯ ಚಿತ್ರ-5 ರಲ್ಲಿದೆ. ಈ ಚಂದ್ರನ ಹೆಸರೇನು- ಈ ಕೆಳಗಿನ ಪಟ್ಟಿಯಲ್ಲಿ ಗುರುತಿಸಿ. ಇದೇ ಪಟ್ಟಿಯಲ್ಲಿ ಯಾವುದು ಗುರುಗ್ರಹದ ಚಂದ್ರ ಪರಿವಾರಕ್ಕೆ ಸೇರಿಲ್ಲ- ಪತ್ತೆ ಮಾಡಿ:

ಅ. ಗ್ಯಾನಿಮೀಡ್

ಬ. ಹೈಪರಿಯಾನ್

ಕ. ಕ್ಯಾಲಿಸ್ಟೋ

ಡ. ಯೂರೋಪಾ

ಇ. ಮೆಟಿಸ್

5. ಆಹಾರಕ್ಕಾಗಿ ಸಾಗರವನ್ನುಆಶ್ರಯಿಸಿರುವ, ಹಾಗಾಗಿ ‘ಕಡಲ ಹಕ್ಕಿ’ಗಳೆಂದೇ ಗುರುತಿಸಲ್ಪಡುವ ಪಕ್ಷಿ ವಿಧಗಳು ನೂರಾರಿವೆ. ಹೌದಲ್ಲ? ಅಂಥ ಕಡಲಹಕ್ಕಿ ಗುಂಪೊಂದು ಚಿತ್ರ-6ರಲ್ಲಿದೆ. ಕೆಲ ಪ್ರಸಿದ್ಧ ಖಗಗಳ ಈ ಪಟ್ಟಿಯಲ್ಲಿ ಯಾವುವು ಸಾಗರ ಪಕ್ಷಿಗಳಲ್ಲ- ಗುರುತಿಸಬಲ್ಲಿರಾ?

ಅ. ಗನೆಟ್

ಬ. ಪೆಟ್ರೆಲ್

ಕ. ಎಮು

ಡ. ಪೆಂಗ್ವಿನ್

ಇ. ಪಫಿನ್

ಈ. ಬೂಬಿ

ಉ. ಟರ್ಕೀ

ಟ. ಕೊಕ್ಯಾಟೋ

ಣ. ಗಲ್

6. ನಿರಭ್ರ , ಚಂದ್ರರಹಿತ ಇರುಳಿನಾಗಸದಲ್ಲಿ ಬರಿಗಣ್ಣಿಗೇ ಸ್ಪಷ್ಟವಾಗಿ ಗೋಚರಿಸುವ ‘ರಾಶಿ ನಕ್ಷತ್ರ ಪುಂಜ’ವೊಂದರ ಚಿತ್ರಣ ಇಲ್ಲಿದೆ(ಚಿತ್ರ-7):

ಅ. ಈವರೆಗೆ ಗುರುತಿಸಲಾಗಿರುವ ನಕ್ಷತ್ರಪುಂಜಗಳ ಒಟ್ಟು ಸಂಖ್ಯೆ ಎಷ್ಟು?

ಬ. ರಾಶಿ ನಕ್ಷತ್ರಪುಂಜಗಳು ಎಷ್ಟಿವೆ?

ಕ. ಚಿತ್ರ-7ರಲ್ಲಿರುವ ನಕ್ಷತ್ರಪುಂಜದ ಹೆಸರೇನು?

7. ಧರೆಯ ಜೀವೇತಿಹಾಸದಲ್ಲಿ ತುಂಬ ಪ್ರಸಿದ್ಧವಾಗಿರುವ ‘ದೈತ್ಯೋರಗ’ಗಳ (ಡೈನೋಸಾರ್) ಎರಡು ಬಹು ಪರಿಚಿತ ಪ್ರಭೇದಗಳು ಚಿತ್ರ-8 ಮತ್ತು ಚಿತ್ರ-9ರಲ್ಲಿವೆ. ದೈತ್ಯದೇಹಿಗಳಾಗಿದ್ದ ಇವೆರಡೂ ಪ್ರಭೇದಗಳಲ್ಲಿ ಚಿತ್ರ-8ರಲ್ಲಿರುವುದು ಉಗ್ರ, ಬಲಿಷ್ಠ ಬೇಟೆಗಾರನಾಗಿತ್ತಾದರೆ ಚಿತ್ರ-9ರಲ್ಲಿರುವ ಪ್ರಭೇದ ಕಟ್ಟಾ ಸಸ್ಯಾಹಾರಿಯಾಗಿತ್ತು. ಇವೆರಡೂ ಡೈನೋಸಾರ್‌ಗಳನ್ನು ಗುರುತಿಸುವುದು ನಿಮಗೆ ಸಾಧ್ಯವೇ?

ಅ. ಟ್ರೈಸೆರಟಾಪ್ಸ್

ಬ. ಡಿಪ್ಲೊಡೋಕಸ್

ಕ. ಇಗ್ವನೊಡಾನ್

ಡ. ಪ್ಲೆಸಿಯೊಸಾರಸ್

ಇ. ಬ್ರಾಂಟೋಸಾರಸ್

ಈ. ಟಿರನೋಸಾರಸ್ ರೆಕ್ಸ್

ಉ. ಆರ್ಖಿಯಾಪ್ಟರಿಕ್ಸ್

ಟ. ಟೆರನೋಡಾನ್

8. ‘ ಶಿಲೀಂಧ್ರ’ಗಳ( ಫಂಗಸ್) ಒಂದು ವಿಶಿಷ್ಟ ವಿಧ ಚಿತ್ರ-10ರಲ್ಲಿದೆ. ನಾಯಿ ಕೊಡೆ, ಹುಳುಕು, ಹುದುಗು, ಬೂಷ್ಟು ಇತ್ಯಾದಿ ಜೀವಿಗಳನ್ನು ಒಳಗೊಂಡಿರುವ ಶಿಲೀಂಧ್ರ ವರ್ಗ ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿ ಅಲ್ಲ?

ಅ. ಅವು ಪ್ರಾಣಿಗಳೂ ಅಲ್ಲ, ಸಸ್ಯಗಳೂ ಅಲ್ಲ

ಬ. ಅವಕ್ಕೆ ಆಹಾರೋತ್ಪಾದನಾ ಸಾಮರ್ಥ್ಯ ಇಲ್ಲ

ಕ. ಅವು ಬೀಜ ಕಣಗಳ ಮೂಲಕ ಸಂತಾನ ವರ್ಧಿಸಿಕೊಳ್ಳುತ್ತವೆ

ಡ. ಎಲ್ಲ ಶಿಲೀಂಧ್ರಗಳೂ ವಿಷಯುಕ್ತವಾಗಿವೆ, ರೋಗಕಾರಕಗಳಾಗಿವೆ

9. ಕಡಲ ತೀರದ ಮರಳ ರಾಶಿಯ ಕಣಗಳ ಮೇಲೆ ಮತ್ತು ಮರಳಿನ ಕಣಗಳ ನಡುನಡುವೆಯೇ ಬದುಕುವ, ನಮ್ಮ ಬರಿಗಣ್ಣಿಗೆ ಅಗೋಚರವಾಗಿರುವ ಸೂಕ್ಷ್ಮಗಾತ್ರದ ವಿಸ್ಮಯದ ಜೀವಿ ವಿಧಗಳು ಹಲವಾರಿವೆ- ಅಂಥದೊಂದು ಜೀವಿ ಚಿತ್ರ-11 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಜೀವಿಗಳಲ್ಲಿ ಯಾವುವು ನಮ್ಮ ಬರಿಗಣ್ಣಿಗೆ ನೇರವಾಗಿ ಗೋಚರವಾಗುವುದಿಲ್ಲ?

ಅ. ಬ್ಯಾಕ್ಟೀರಿಯಾ

ಬ. ಪ್ಲಾಂಕ್ಟನ್

ಕ. ಧೂಳು ಹುಳು( ಡಸ್ಟ್ ಮೈಟ್ )

ಡ. ಇರುವೆ ಲಾರ್ವಾ

ಇ. ಪ್ಯಾರಾಮೀಸಿಯಂ

ಈ. ಆರ್ಡ್ ವಾರ್ಕ್

10. ಉಲ್ಕೆಯೊಂದು ಭೂಮಿಗೆ ಅಪ್ಪಳಿಸಿದಾಗ ನೆಲದ ಶಿಲೆಗಳು ಕರಗಿ, ಹನಿಗಳಾಗಿ, ಆಕಾಶದತ್ತ ಚಿಮ್ಮಿ, ತಣಿದು, ಘನರೂಪ ತಳೆದು, ಚಿತ್ರ-ವಿಚಿತ್ರ ಮಣಿಗಳಂತಾಗಿ ನೆಲಕ್ಕೆ ಉದುರುತ್ತವೆ! ಹಾಗೆ ರೂಪುಗೊಂಡಿರುವ ವಿಶಿಷ್ಟ ಶಿಲಾ ತುಣುಕುಗಳ ಸಂಗ್ರಹವೊಂದು ಚಿತ್ರ-12 ರಲ್ಲಿದೆ. ಹೀಗೆ ಮೈದಳೆವ ಶಿಲಾಮಣಿಗಳ ಹೆಸರೇನು?

ಅ. ಟೆಕ್ಟೈಟ್

ಬ. ಉಲ್ಕಾ ಶಿಲೆ

ಕ. ಅಗ್ನಿ ಶಿಲೆ

ಡ. ಉಲ್ಕಾ ವರ್ಷ

11. ನಮ್ಮ ಭೂ ವಾಯುಮಂಡಲ ಕ್ರಮೇಣ ಹೇಗೆ ಮಾರ್ಪಡುತ್ತಿದೆ ಎಂಬುದನ್ನು ನಿರೂಪಿಸುವ ಚಿತ್ರ ಸರಣಿಯೊಂದು ಇಲ್ಲಿದೆ (ಚಿತ್ರ-13). ಹಲವು ಅನಿಲಗಳ ಮಿಶ್ರಣವಾಗಿರುವ ವಾತಾವರಣದಿಂದ ಕೆಲವು ಅನಿಲಗಳು ಬಾಹ್ಯಾಕಾಶಕ್ಕೆ ನಿಧಾನವಾಗಿ ಸೋರಿಹೋಗುತ್ತಿವೆ- ಅದು ನಿಮಗೂ ಗೊತ್ತಲ್ಲ? ಹಾಗೆ ಕ್ರಮೇಣ ಕಳೆದುಹೋಗುತ್ತಿರುವ ಅನಿಲಗಳು ಯಾವುವು- ಗುರುತಿಸಿ:

ಅ. ಸಾರಜನಕ

ಬ. ಆಮ್ಲಜನಕ

ಕ. ಇಂಗಾಲದ ಡೈ ಆಕ್ಸೈಡ್

ಡ. ಜಲಜನಕ

ಇ. ಹೀಲಿಯಂ

ಈ. ಆರ್ಗಾನ್

ಉ. ನೀರಾವಿ

ಟ. ಅಮೋನಿಯ

12 ಹೊಂದಿಸಿ ಕೊಡಿ:

1. ರೀಗಲ್ ಅ. ಶಿಲಾ ವಿಧ

2. ಸೆಕ್ವೋಯಾ ಬ. ಮರುಭೂಮಿ

3. ಗ್ಯಾಬ್ರೋ ಕ. ನಕ್ಷತ್ರ

4. ಮಂದಾರಿನ್ ಡ. ರಾಷ್ಟ್ರ

5. ಗೋಬಿ ಇ. ವೃಕ್ಷ

6. ಲೆಸೊಥೋ ಈ. ಭಾಷೆಉತ್ತರಗಳು:

1. ಚಿತ್ರ-1. ಬ. ಗ್ಯಾಲಕ್ಸಿ; ಚಿತ್ರ-2. ಇ. ಗ್ರಹೀಯ ನೀಹಾರಿಕೆ

2. ‘ಕ’ ಬಿಟ್ಟು ಇನ್ನೆಲ್ಲ

3. ಅ. ಲೈಕೆನ್ ( ಕಲ್ಲು ಹೂವು ); ಬ. ಶೈವಲ ಮತ್ತು ಶಿಲೀಂಧ್ರ

4. ಡ. ಯೂರೋಪಾ; ಹೈಪರಿಯಾನ್ ಗುರು ಗ್ರಹದ ಚಂದ್ರ ಅಲ್ಲ

5. ಕ, ಉ ಮತ್ತು ಟ- ಇವು ಕಡಲಹಕ್ಕಿಗಳಲ್ಲ

6. ಅ- 88 ; ಬ- 12; ಕ- ವೃಶ್ಚಿಕ

7. ಚಿತ್ರ 8- ಈ- ಟಿರನೋಸಾರಸ್ ರೆಕ್ಸ್; ಚಿತ್ರ-9 -ಕ - ಇಗ್ವನೋಡಾನ್

8. ‘ಡ‘- ತಪ್ಪು ಹೇಳಿಕೆ

9. ಅ, ಬ, ಕ ಮತ್ತು ಇ

10. ಅ. ಟೆಕ್ಟೈಟ್

11. ಬ, ಡ ಮತ್ತು ಇ

12. 1 - ಕ ; 2 - ಇ ; 3 - ಅ ; 4 - ಈ ; 5 - ಬ ; 6 - ಡ

ಪ್ರತಿಕ್ರಿಯಿಸಿ (+)