ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ತಿನಿಸುಗಳಿಗೆ ಎರಡೆರಡು ತೆರಿಗೆ!

Last Updated 8 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡು ಒಂದು ವಾರ ಕಳೆದಿದೆ. ಈಗಲೂ ಬಹುತೇಕ ಹೋಟೆಲ್‌ಗಳಲ್ಲಿ ಜಿಎಸ್‌ಟಿ ಜತೆಗೆ ಮೌಲ್ಯವರ್ಧಿತ ತೆರಿಗೆ ಹಾಗೂ ಸೇವಾ ತೆರಿಗೆಗಳನ್ನೂ ಸೇರಿಸಿ ಬಿಲ್‌ ವಸೂಲಿ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಜಿಎಸ್‌ಟಿಯಲ್ಲಿ ಸಾಮಾನ್ಯ ಹೋಟೆಲ್‌ಗಳಿಗೆ ಶೇ 12ರಷ್ಟು ಮತ್ತು ಹವಾನಿಯಂತ್ರಿತ (ಎ.ಸಿ.) ಹೋಟೆಲ್‌ಗಳಿಗೆ ಶೇ 18ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ಈ ಹಿಂದೆ ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಈ ತೆರಿಗೆಗಳನ್ನು ಬಿಟ್ಟು ಹೊಸ ತೆರಿಗೆ ಪದ್ಧತಿಯ ಅನುಸಾರ ದರ ನಿಗದಿ ಮಾಡಬೇಕು. ಆದರೆ, ಬಹುತೇಕ ಹೋಟೆಲ್‌ಗಳು ಇದನ್ನು ಪಾಲಿಸುತ್ತಿಲ್ಲ.

ಬಸವನಗುಡಿಯ ಆರ್‌.ವಿ. ರಸ್ತೆ ಬಳಿಯ ಹೋಟೆಲ್‌ವೊಂದರಲ್ಲಿ ಒಂದು ತಟ್ಟೆ ಬಿರಿಯಾನಿಗೆ ಈ ಹಿಂದೆ ₹120 ದರವಿತ್ತು.  ಇದರಲ್ಲೇ ಎಲ್ಲ ತೆರಿಗೆಗಳು ಒಳಗೊಂಡಿದ್ದವು. ಆದರೆ, ಈಗ ಶೇ 18ರಷ್ಟು ಜಿಎಸ್‌ಟಿ ಸೇರಿಸಿ ₹142ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಇಂತಹದ್ದೇ ಪರಿಸ್ಥಿತಿ ಬಹುತೇಕ ಹೋಟೆಲ್‌ಗಳಲ್ಲಿ ಇದೆ. ಕೆಲ ಹೋಟೆಲ್‌ಗಳಲ್ಲಿ ಮಾತ್ರ ಹಳೆಯ ತೆರಿಗೆಗಳನ್ನು ಕಡಿತ ಗೊಳಿಸಿ ಜಿಎಸ್‌ಟಿ ವಿಧಿಸಲಾಗುತ್ತಿದೆ.

‘ನಾನು ಸ್ನೇಹಿತರೊಂದಿಗೆ ಹೋಟೆಲ್‌ಗೆ ಹೋಗಿದ್ದೆ. ಬಿಲ್‌ ನೋಡಿ ಗಾಬರಿ ಆಯಿತು. ₹2,000 ಬಿಲ್‌ ಆಗಿದ್ದರೆ, ಅದಕ್ಕೆ ₹360 ತೆರಿಗೆ ಹಾಕಿದ್ದರು. ಈ ಹಿಂದೆ ಅನೇಕ ಬಾರಿ ಹೀಗೆ ಊಟ ಮಾಡಿದ್ದೆವು. ಆಗೆಲ್ಲಾ  ಬಿಲ್‌ ಮೊತ್ತ  ₹2,000 ಮೀರುತ್ತಿರಲಿಲ್ಲ’ ಎಂದು ಕೋರಮಂಗಲದ ಸಂದೀಪ್‌ ತಿಳಿಸಿದರು.

ರೆಸಿಡೆನ್ಸಿ ರಸ್ತೆಯಲ್ಲಿರುವ ನಾಗಾರ್ಜುನ ಹೋಟೆಲ್‌ನಲ್ಲಿ ಜಿಎಸ್‌ಟಿ ಅನುಸಾರ ತೆರಿಗೆ ವಿಧಿಸಲಾಗುತ್ತಿದ್ದರೂ, ತಿಂಡಿ–ಊಟದ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

‘ಈ ಹಿಂದೆ ಶೇ 6ರಷ್ಟು ತೆರಿಗೆ ಇತ್ತು. ಈಗ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿಲ್ಲ. ಹೀಗಾಗಿ ದರಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಇಲ್ಲಿಗೆ ಬರುವ ಗ್ರಾಹಕರು ಬಹುಪಾಲು ಸ್ಥಿತಿವಂತರು. ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೋಟೆಲ್‌ನ ವ್ಯವಸ್ಥಾಪಕರು ತಿಳಿಸಿದರು.

ಶೇ 20ರಷ್ಟು ವಹಿವಾಟು ಕುಸಿತ
ಮೈಸೂರು:
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಹೋಟೆಲ್‌ ತಿನಿಸು ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರುವುದು ಉದ್ಯಮದ ಮೇಲೆ ಪರಿಣಾಮ ಬೀರಿದೆ. ಒಂದು ವಾರದಿಂದ ಶೇ 15ರಿಂದ 20ರಷ್ಟು ವಹಿವಾಟು ಕುಸಿತ ಕಂಡಿದೆ.

ನಿತ್ಯ ₹ 5,500ರಿಂದ ₹ 20,547 ವಹಿವಾಟು ನಡೆಸುವ ಹೋಟೆಲ್‌ಗಳಿಗೆ ಜಿಎಸ್‌ಟಿಯಲ್ಲಿ ಶೇ 12ರಷ್ಟು ತೆರಿಗೆ ವಿಧಿಸಲಾಗಿದೆ. ಇಷ್ಟು ವಹಿವಾಟು ನಡೆಸುವ ಹೋಟೆಲ್‌ಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಆಹಾರ ಸೇವಿಸುವುದು ತುಟ್ಟಿಯಾಗಿದೆ. ತಿಂಡಿ, ಊಟದ ಬೆಲೆಯೊಂದಿಗೆ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕಿರುವುದು ಗ್ರಾಹಕರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

‘ಪ್ರತಿ ಆಷಾಢದಲ್ಲಿ ನಡೆಯುತ್ತಿದ್ದ ಸರಾಸರಿ ವಹಿವಾಟು ಕುಸಿತ ಕಂಡಿದೆ. ಜಿಎಸ್‌ಟಿ ಹಾಗೂ ಆಷಾಢ ಒಟ್ಟಿಗೆ ಬಂದಿದ್ದರ ಪರಿಣಾಮವೂ ಇದಾಗಿರಬಹುದು. ಇನ್ನೂ ಕೆಲ ದಿನ ಕಳೆದ ಬಳಿಕ  ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಆಹಾರ ಪದಾರ್ಥಗಳಿಗೆ ಸರ್ಕಾರ  ತೆರಿಗೆ ವಿನಾಯ್ತಿ ನೀಡಬೇಕಾಗಿತ್ತು’ ಎಂದು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘ ಅಧ್ಯಕ್ಷ ಸಿ.ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.

‘ತೆರಿಗೆ ಜಾರಿಯಾಗಿದ್ದರಿಂದ ಹೋಟೆಲ್‌ ತಿನಿಸುಗಳ ಬೆಲೆ ಹೆಚ್ಚಾಗಿದೆ ಎಂಬುದು ಅರ್ಧಸತ್ಯ. ಬೇಳೆಕಾಳು, ಧಾನ್ಯ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಾದರೂ, ತಿನಿಸುಗಳ ದರವನ್ನು ವರ್ಷಕ್ಕೆ ಒಮ್ಮೆ ಹೆಚ್ಚಿಸುವುದು ಉದ್ಯಮಿಗಳ ರೂಢಿ. ಪ್ರತಿ ಮಾರ್ಚ್‌ನಲ್ಲಿ ಇದು ನಡೆಯುತ್ತದೆ. ಜುಲೈನಿಂದ ಜಿಎಸ್‌ಟಿ ಜಾರಿಯಾಗುವುದು ಖಚಿತವಾಗಿದ್ದರಿಂದ ದರ ಏರಿಕೆ ಪ್ರಕ್ರಿಯೆ ಕೂಡ ಮುಂದೆ ಹೋಗಿತ್ತು. ತೆರಿಗೆ ಆಧರಿಸಿ ತಿನಿಸುಗಳ ಬೆಲೆ ಏರಿಕೆ ಮಾಡಿರಬಹುದು. ಇದು ಜಿಎಸ್‌ಟಿಯಿಂದ ಆಗಿರುವ ಪರಿಣಾಮ ಅಲ್ಲ’ ಎಂದು ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ ತಿಳಿಸಿದ್ದಾರೆ.

‘ದಾಸ್ತಾನು ಖಾಲಿ ಆಗಲಿ’
ಕೆಲ ಹೋಟೆಲ್‌ಗಳಲ್ಲಿ ಇನ್ನೂ  ಜಿಎಸ್‌ಟಿ ಪ್ರಕಾರ ದರಪಟ್ಟಿಯನ್ನು ಅಳವಡಿಸಿಕೊಂಡಿಲ್ಲ. ‘ನಾವು ಜಿಎಸ್‌ಟಿ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದೇವೆ. ಆದರೆ, ತಿಂಡಿ–ತಿನಿಸುಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಒಂದು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತೇವೆ. ಅದು ಖಾಲಿ ಆಗಬೇಕು. ಅಲ್ಲಿಯವರೆಗೂ ತಿಂಡಿ– ತಿನಿಸುಗಳ ದರಗಳಲ್ಲಿ ವ್ಯತ್ಯಾಸವಿಲ್ಲ’ ಎಂದು ಕೋರಮಂಗಲ 1ನೇ ಬ್ಲಾಕ್‌ನ ವಿಷ್ಣು ಸಾಗರ್‌ ಹೋಟೆಲ್‌ ಮಾಲೀಕ ವಿಜಯ್‌ ತಿಳಿಸಿದರು.

‘ಈ ಹಿಂದೆ ಸಕ್ಕರೆ ಕೆ.ಜಿ.ಗೆ ₹40 ಇತ್ತು. ಜಿಎಸ್‌ಟಿ ಬಂದ ಬಳಿಕ ಸಕ್ಕರೆ ದರ ಹೆಚ್ಚಾಗಿದೆಯೇ ಅಥವಾ ಕಡಿಮೆ ಆಗಿದೆಯೇ ಎಂಬುದನ್ನು ನೋಡಬೇಕು. ಇದೇ ರೀತಿ ಧಾನ್ಯಗಳ ದರ ಹೆಚ್ಚಾಗಿದ್ದರೆ ತಿಂಡಿ–ಊಟದ ದರಗಳನ್ನೂ ಏರಿಸಬೇಕಾಗುತ್ತದೆ’ ಎಂದರು.
*
ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು
ಜಿಎಸ್‌ಟಿ ಒಳ್ಳೆಯದು. ಆದರೆ, ಅದರ ಅನುಷ್ಠಾನ ಸಮರ್ಪಕವಾಗಿ ಆಗಬೇಕು.  ಪ್ರಮುಖವಾಗಿ ಹೋಟೆಲ್‌ ಉದ್ಯಮದಲ್ಲಿ ಇದು ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು.
– ಸುಮಂತ್‌,
ಲಿಂಗರಾಜಪುರ
*
ನಾನು ದಿನದ ಮೂರು ಹೊತ್ತು ಹೋಟೆಲ್‌ ತಿನಿಸುಗಳನ್ನೇ ಅವಲಂಬಿಸಿದ್ದೇನೆ. ಆದರೆ, ಕೆಲ ಹೋಟೆಲ್‌ಗಳಲ್ಲಿ ಹೆಚ್ಚಿನ ದರ ನಿಗದಿ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆ ಉಂಟಾಗಿದೆ.
–ಎಸ್‌.ಉಮೇಶ್‌,
ಜಕ್ಕಸಂದ್ರ
*
ಹೆಚ್ಚಿನ ದರ ಗಮನಕ್ಕೆ ಬಂದಿಲ್ಲ
ನಾನು  ಹೋಟೆಲ್‌ಗಳಿಗೆ ಹೋಗುವುದು ಕಡಿಮೆ. ಕೆಲವೊಮ್ಮೆ ಸಣ್ಣ ಹೋಟೆಲ್‌ಗಳಲ್ಲಿ ಊಟ ಮಾಡುತ್ತೇನೆ. ಆದರೆ, ಎಲ್ಲೂ ಹೆಚ್ಚಿನ ದರ ವಿಧಿಸಿದ್ದು ಗಮನಕ್ಕೆ ಬಂದಿಲ್ಲ.
–ಮಾದೇಗೌಡ,
ಕೆಎಸ್‌ಆರ್‌ಪಿ ಸಿಬ್ಬಂದಿ, ಕೋರಮಂಗಲ
*
ಕೇಕ್‌ ದುಬಾರಿ
ಹುಟ್ಟುಹಬ್ಬ ಆಚರಿಸಲು ಕೇಕ್‌ ಖರೀದಿಸುವಾಗಲೂ  ಆಲೋಚನೆ ಮಾಡುವ ಸ್ಥಿತಿ ಇದೆ. ಕೇಕ್‌ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದೇ ಇದಕ್ಕೆ ಕಾರಣ.  ಕೋರಮಂಗಲದಲ್ಲಿ ಬೇಕರಿಯೊಂದರಲ್ಲಿ ₹30ರಿಂದ ₹1,045 ಮೌಲ್ಯದ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ. ಈ ಹಿಂದೆ  ತಿನಿಸುಗಳ ಮೇಲೆ ಶೇ 14ರಷ್ಟು ತೆರಿಗೆ ಇತ್ತು. ಈಗ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಚಾಕೊಲೆಟ್‌ ಫ್ಯಾಂಟಸಿ ಕೇಕ್‌ ದರ ₹885. ಇದಕ್ಕೆ ₹160 ಜಿಎಸ್‌ಟಿ  ಸೇರಿಸಿ ₹1,045ಕ್ಕೆ ಮಾರಾಟ ಮಾಡಲಾಗುತ್ತಿದೆ.

ಜಿಎಸ್‌ಟಿಗೂ ಮುನ್ನ ಈ ಕೇಕ್‌ನ ಬೆಲೆ ₹885 ಇತ್ತು. ಈಗ ಗ್ರಾಹಕರು ಈ ಹಿಂದಿನ ತೆರಿಗೆಗಳು ಹಾಗೂ ಹೊಸ ತೆರಿಗೆ ಪಾವತಿಸುವಂತಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ‘ಈಗ ಚಾಕೋಲೆಟ್‌ ದರ, ಕಾರ್ಮಿಕರ ವೇತನ ಹೆಚ್ಚಳ ಆಗಿದೆ. ಹೀಗಾಗಿ ಕೇಕ್‌ನ ಬೆಲೆಯನ್ನೂ ಹೆಚ್ಚಳ ಮಾಡಲಾಗಿದೆ’ ಎಂದು ಬೇಕರಿಯ ವ್ಯವಸ್ಥಾಪಕರು ಸಮಜಾಯಿಷಿ ನೀಡಿದರು.
*
ಗ್ರಾಹಕರ ಸಂಖ್ಯೆ ಇಳಿಕೆ
ಜಿಎಸ್‌ಟಿ ಜಾರಿಯ ಬಳಿಕ ಕೆಲ ಹೋಟೆಲ್‌ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ‘ನಮ್ಮ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಶೇ 20ರಷ್ಟು ಕಡಿಮೆ ಆಗಿದೆ. ವಾರಾಂತ್ಯದಲ್ಲಿ ಗ್ರಾಹಕರು ಹೆಚ್ಚಾಗಿ ಬರುತ್ತಾರೆ.  ಬಿಲ್‌ನಲ್ಲಿ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಹಾಕಿದ್ದೀರಿ ಎಂದು ಕೆಲವರು ಕೇಳುತ್ತಾರೆ. ಅವರಿಗೆ ಜಿಎಸ್‌ಟಿ ಬಗ್ಗೆ ವಿವರಿಸುತ್ತೇವೆ’ ಎಂದು ಕೋರಮಂಗಲದ ವಾಂಗ್ಸ್‌ ಕಿಚನ್‌ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಪ್ರಶಾಂತ್‌ ತಿಳಿಸಿದರು.

ಕೋರಮಂಗಲದ ಜೈಕಾ ದರ್ಬಾರ್‌ ರೆಸ್ಟೋರೆಂಟ್‌ನ ಮೊಹಮ್ಮದ್‌ ಸಾಲಿಹ್‌, ‘ಜಿಎಸ್‌ಟಿಯಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.  ಇದರಿಂದ ಗ್ರಾಹಕರ ಕೊರತೆ ಉಂಟಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT