ಭಾನುವಾರ, ಡಿಸೆಂಬರ್ 15, 2019
17 °C
ಅಕ್ರಮ ಹಣ ವರ್ಗಾವಣೆ ಪ್ರಕರಣ l ಸಿಬಿಐ ದಾಳಿಯ ಮಾರನೇ ದಿನ ಮತ್ತೊಂದು ಆಘಾತ

ಲಾಲು ಮಗಳ ಮನೆ ಮೇಲೆ ಇ.ಡಿ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಲು ಮಗಳ ಮನೆ ಮೇಲೆ ಇ.ಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ ಮತ್ತು ಅಳಿಯ ಶೈಲೇಶ್‌ ಕುಮಾರ್‌ಗೆ ಸೇರಿದ ಮೂರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

ಮಿಸಾ ದಂಪತಿಗೆ ಸೇರಿದ, ದೆಹಲಿಯ ಗೀತೋರ್ಣಿ, ಬಿಜ್ವಾಸನ್ ಮತ್ತು  ಸೈನಿಕ್‌ ಪ್ರದೇಶದಲ್ಲಿರುವ ತೋಟದ ಮನೆಗಳ ಮೇಲೆ ಹಾಗೂ ಮಿಶೈಲ್ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್  ಎಂಬ ಸಂಸ್ಥೆಯ ಮೇಲೆ ಬೆಳಗಿನ ಜಾವ ದಾಳಿ ಮಾಡಲಾಗಿದೆ.

ದಾಳಿಯ ಸಂದರ್ಭದಲ್ಲಿ, ಆರೋಪಗಳಿಗೆ ಸಾಕ್ಷ್ಯ ಒದಗಿಸುವಂತಹ ದಾಖಲೆಗಳು, ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಈಗ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯಬಿದ್ದರೆ, ಅವರಿಗೆ ಸಮನ್ಸ್‌ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತೆರಿಗೆ ವಂಚಿಸುವ ಉದ್ದೇಶಕ್ಕಾಗಿಯೇ ಸ್ಥಾಪಿಸಲಾದ  90 ಕಂಪೆನಿಗಳನ್ನು ಬಳಸಿಕೊಂಡು ಉದ್ಯಮಿ ಸಹೋದರರಾದ ಸುರೇಂದ್ರ ಕುಮಾರ್ ಜೈನ್ ಮತ್ತು ವೀರೇಂದ್ರ ಕುಮಾರ್ ಜೈನ್ ಅವರು ಭಾಗಿಯಾಗಿರುವ, ₹8,000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಇ. ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಜೈನ್ ಸಹೋದರರನ್ನು ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈಗಾಗಲೇ ಬಂಧಿಸಿದ್ದಾರೆ. ಮಿಶೈಲ್ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್ ಕಂಪೆನಿಯ ಜೊತೆಯೂ ಜೈನ್ ಸಹೋದರರ ವ್ಯವಹಾರವಿತ್ತು. ಮಿಸಾ ಭಾರತಿ ಮತ್ತು ಅವರ ಪತಿ ಅವರು  ಈ ಕಂಪೆನಿಯ ನಿರ್ದೇಶಕರಾಗಿದ್ದರು ಎಂದು ಹೇಳಲಾಗಿದೆ.

ತೆರಿಗೆ ವಂಚಿಸಿ ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದ ನಾಲ್ಕು ಕಂಪೆನಿಗಳು, 2007–08ರಲ್ಲಿ ಪ್ರತಿ ಷೇರಿಗೆ ₹ 100ರಂತೆ  ಮಿಶೈಲ್ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್ ಕಂಪೆನಿಯ 1.20 ಲಕ್ಷ ಷೇರುಗಳನ್ನು ಖರೀದಿಸಿದ್ದವು. ನಂತರ ಪ್ರತಿ ಷೇರಿಗೆ ₹10 ಪಾವತಿಸಿ ಭಾರತಿ ಅವರು ಅಷ್ಟೂ ಷೇರುಗಳನ್ನು ಖರೀದಿ ಮಾಡಿದ್ದರು ಎಂದು ಇ. ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಮಿಶೈಲ್ ಪ್ರಿಂಟರ್ಸ್ ಆ್ಯಂಡ್ ಪ್ಯಾಕರ್ಸ್ ಕಂಪೆನಿಗೆ ಅಕ್ರಮ ಹಣ ವರ್ಗಾವಣೆ ಮಾಡಲು ನೆರವಾದ ಲೆಕ್ಕ ಪರಿಶೋಧಕ ರಾಜೇಶ್ ಅಗರ್‌ವಾಲ್ ಅವರನ್ನೂ ಈಗಾಗಲೇ ಬಂಧಿಸಲಾಗಿದೆ.

‘ದಾಳಿಯ ಮಾಹಿತಿ ಇರಲಿಲ್ಲ’: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಮತ್ತು ಅವರ ಕುಟುಂಬದ ಸದಸ್ಯರ ಮನೆಗಳ ಮೇಲೆ ಸಿಬಿಐ ದಾಳಿ ಮಾಡುವ ಮೊದಲು ರಾಜ್ಯದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂಬ ವರದಿಯನ್ನು  ಬಿಹಾರ ಸರ್ಕಾರ ತಳ್ಳಿಹಾಕಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪಿ. ಕೆ. ಠಾಕೂರ್ ಅವರಿಗೆ ಸಿಬಿಐ ಮಾಹಿತಿ ಮೊದಲೇ ನೀಡಿತ್ತು ಎಂಬ ಪತ್ರಿಕಾ ವರದಿಗಳು ಆಧಾರ ರಹಿತವಾದುದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಜೆಡಿಯು ಮೌನ: ಸಿಬಿಐ ದಾಳಿಯ ನಂತರ ಕಾಂಗ್ರೆಸ್ ಮುಖಂಡರು ಲಾಲೂ ಪ್ರಸಾದ್ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈ ವಿಚಾರದಲ್ಲಿ ಮೌನ ತಾಳಿದೆ.

***

ವಿರೋಧ ಪಕ್ಷದ ಮುಖಂಡರೆಲ್ಲಾ ಕಳಂಕಿತರೆ?

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆಸುತ್ತಿರುವ ದಾಳಿಗಳನ್ನು ಗಮನಿಸಿದರೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಮುಖಂಡರನ್ನು ಹೊರತುಪಡಿಸಿ ಉಳಿದ ಪಕ್ಷಗಳ ನಾಯಕರೆಲ್ಲ ಕಳಂಕಿತರು ಎಂಬ  ಭಾವನೆ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.

ಲಾಲೂ ಪ್ರಸಾದ್ ಮತ್ತು ಅವರ ಕುಟುಂಬದ ಸದ್ಯರ ಮನೆ ಮತ್ತು ಸಂಸ್ಥೆಗಳ ಮೇಲೆ ನಡೆದಿರುವ ದಾಳಿಯನ್ನು ಅವರು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷಗಳ ಮುಖಂಡರನ್ನೇ ಗುರಿಯಾಗಿಟ್ಟುಕೊಂಡು ಸಿಬಿಐ ಮತ್ತು ಇ.ಡಿ ದಾಳಿ ನಡೆಯುತ್ತಿರುವ ಬಗ್ಗೆ ಸಿಬಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)