ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಪಾಕ್ ದಾಳಿ: ಇಬ್ಬರ ಸಾವು

ಪೂಂಚ್‌ ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘನೆ; ಮೂವರಿಗೆ ಗಾಯ
Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಜಮ್ಮು: ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನೆಯು, ಪೂಂಚ್‌ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ಕೇಂದ್ರಗಳನ್ನು ಗುರಿಯಾಗಿರಿಸಿ ಶನಿವಾರ ಗುಂಡಿನ ದಾಳಿ ನಡೆಸಿದೆ.  ಈ ವೇಳೆ ಯೋಧ ಹಾಗೂ ಅವರ ಪತ್ನಿ ಸಾವನ್ನಪ್ಪಿದ್ದಾರೆ.

‘ಶನಿವಾರ ಬೆಳಿಗ್ಗೆ 6.30ರ ಸುಮಾರಿಗೆ  ಸ್ವಯಂಚಾಲಿತ ಶಸ್ತ್ರಾಸ್ತ್ರ ಹಾಗೂ ಫಿರಂಗಿ ಮೂಲಕ ಭಾರತದ ಸೇನೆ ಮೇಲೆ ದಾಳಿ ನಡೆಸಿದರು. ತಕ್ಷಣವೇ ಭಾರತೀಯ ಸೈನಿಕರು ಪ್ರತ್ಯುತ್ತರ ನೀಡಿದರು’ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ರಜೆ ಪಡೆದು ಕರ್ಮಾರಾ ಪ್ರದೇಶದಲ್ಲಿರುವ ಮನೆಯಲ್ಲಿದ್ದ ಯೋಧ ಮೊಹಮ್ಮದ್‌ ಶೌಕತ್‌, ಪತ್ನಿ ಸಫಿಯಾ ಬಿ ಅವರು ಪಾಕಿಸ್ತಾನ ನಡೆಸಿದ ಫಿರಂಗಿ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿಗೆ ಮೂವರು ಮಕ್ಕಳಿದ್ದು, ಅವರು  ತೀವ್ರವಾಗಿ ಗಾಯಗೊಂಡಿದ್ದಾರೆ. ಖಾದಿ, ಕರ್ಮಾರ್‌ ಹಾಗೂ ಗುಪ್ಲುರ್‌ ಗ್ರಾಮಸ್ಥರು ಹಾಗೂ ಸೈನಿಕರನ್ನು ಗುರಿಯಾಗಿರಿಸಿಕೊಂಡು, ಪಾಕಿಸ್ತಾನದ ಸೇನೆಯು ಎಂಟು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಫಿರಂಗಿ ದಾಳಿ ನಡೆಸಿದೆ. ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಕಳೆದ ಜೂನ್‌ ತಿಂಗಳಿನಿಂದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯು 23 ಬಾರಿ ಕದನವಿರಾಮ ಉಲ್ಲಂಘಿಸಿದ್ದು, ಮೂವರು ಯೋಧರು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.
*
ಪಾಕ್‌ ಪ್ರತಿಭಟನೆ
ಇಸ್ಲಾಮಾಬಾದ್‌:
ಭಾರತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಭಾರತದ ಉಪ ಹೈ ಕಮಿಷನರ್‌ ಜೆ.ಪಿ.ಸಿಂಗ್‌ ಅವರನ್ನು ಶನಿವಾರ ಕರೆಸಿಕೊಂಡು ತನ್ನ ಪ್ರತಿಭಟನೆ ದಾಖಲಿಸಿದೆ.

ಪಾಕಿಸ್ತಾನದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಕ್ಕೆ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನದ ಯೋಧರೇ ಮೊದಲಿಗೆ ಕದನವಿರಾಮ ಉಲ್ಲಂಘನೆ ಮಾಡಿರುವುದನ್ನು ಸಿಂಗ್‌, ಸಾರ್ಕ್‌ನ ಮಹಾನಿರ್ದೇಶಕ ಮೊಹಮ್ಮದ್‌ ಫೈಸಲ್‌ ಅವರಿಗೆ ಮನವರಿಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT