ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಮಣಿದ ಭಾರತ

ಮಹಿಳೆಯರ ವಿಶ್ವಕಪ್ ಕ್ರಿಕೆಟ್
Last Updated 8 ಜುಲೈ 2017, 19:30 IST
ಅಕ್ಷರ ಗಾತ್ರ

ಲೀಸ್ಟರ್‌: ಡೇನ್‌ ವಾನ್ ನಿಕೆರಿಕ್‌ (22ಕ್ಕೆ4) ದಾಳಿಗೆ ಕುಸಿದ ಭಾರತ ತಂಡ ಮಹಿಳೆಯರ ವಿಶ್ವಕಪ್ ಪಂದ್ಯದಲ್ಲಿ  ಶನಿವಾರ ದಕ್ಷಿಣ ಆಫ್ರಿಕಾ ಎದುರು 115 ರನ್‌ಗಳಿಂದ ಸೋಲು ಅನುಭವಿಸಿದೆ.

ಸವಾಲಿನ ಮೊತ್ತದ ಎದುರು ಉತ್ತಮ ಇನಿಂಗ್ಸ್‌ ಕಟ್ಟುವಲ್ಲಿ ಭಾರತದ ಬ್ಯಾಟ್ಸ್‌ವುಮನ್‌ಗಳು ವಿಫಲರಾದರು.

ಒಬ್ಬರ ಹಿಂದೆ ಒಬ್ಬರು ಜಿದ್ದಿಗೆ ಬಿದ್ದವರಂತೆ ವಿಕೆಟ್ ಒಪ್ಪಿಸಿದರು. ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ವನಿತೆಯರ ತಂಡದ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ. 158 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡ ಭಾರತ ಸೋಲಿಗೆ ಶರಣಾಯಿತು.


ಸೆಮಿಫೈನಲ್ ತಲುಪುವ ಹಾದಿಯಲ್ಲಿ ಮಹತ್ವವೆನಿಸಿದ್ದ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿಯರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದರು.

ಸತತ ಮೂರನೇ ಪಂದ್ಯದಲ್ಲಿ ಸ್ಮೃತಿ ಮಂದಾನ (4) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಪೂನಮ್ ರಾವುತ್‌ 22 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್‌ ಸೊನ್ನೆ ಸುತ್ತಿದರು. ಈ ವೇಳೆ ದೀಪ್ತಿ ಶರ್ಮಾ (60) ಭರವಸೆ ಮೂಡಿಸಿದ್ದರು. 111 ಎಸೆತಗಳನ್ನು ಎದುರಿಸಿದ ಅವರು ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಇದರಿಂದಾಗಿ ಭಾರತ 100ರ ಗಡಿ ದಾಟಿತು. ಆದರೆ ಅವರಿಗೆ ಮಧ್ಯಮಕ್ರಮಾಂಕದ ಬ್ಯಾಟ್ಸ್‌ವುಮನ್‌ ಗಳಿಂದ ಸಹಕಾರ ಸಿಗಲಿಲ್ಲ.

ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಆಡಿದ್ದ ಮಿಥಾಲಿ ಇಲ್ಲಿ ನಿಕೆರಿಕ್‌ ಅವರಿಗೆ ವಿಕೆಟ್ ಒಪ್ಪಿಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗುವ ಉತ್ತಮ ಅವಕಾಶವನ್ನು ಕರ್ನಾಟಕದ ವೇದಾ ಕೃಷ್ಣಮೂರ್ತಿ (3) ಬಳಸಿಕೊಳ್ಳಲಿಲ್ಲ.

65 ರನ್‌ಗಳಿಗೆ ಭಾರತ 7 ವಿಕೆಟ್ ಕಳೆದುಕೊಂಡಿತು. ಕೊನೆಯ ಓವರ್‌ಗಳಲ್ಲಿ ಜೂಲನ್ ಗೋಸ್ವಾಮಿ (ಔಟಾಗದೆ 43)  ವ್ಯರ್ಥ ಹೋರಾಟ ನಡೆಸಿದರು.

ಲಿಜೆಲ್ಲಿ ಆಟದ ಸೊಬಗು: ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ವುಮನ್‌ ಲಿಜೆಲ್ಲಿ ಲೀ (92) ಅಮೋಘ ಇನಿಂಗ್ಸ್ ಕಟ್ಟಿದರು. 65 ಎಸೆತಗಳಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಸಿಡಿಸಿದ ಅವರು  ಉತ್ತಮ ಬುನಾದಿ ಹಾಕಿಕೊಟ್ಟರು.  ಡೇನ್‌ ವಾನ್ ನಿಕೆರಿಕ್‌ (57) ಬ್ಯಾಟಿಂಗ್‌ನಲ್ಲೂ ಮಿಂಚುವ ಮೂಲಕ ಆಲ್‌ರೌಂಡರ್‌ ಸಾಮರ್ಥ್ಯ ತೋರಿದರು.

ಸೆಮಿಫೈನಲ್‌ ಕನಸು: ಭಾರತದ ಸೆಮಿಫೈನಲ್‌ ಕನಸು ಈಗ ಉಳಿದ ಲೀಗ್ ಪಂದ್ಯಗಳ ಮೇಲೆ ಅವಲಂಬಿತವಾಗಿದೆ. ಮುಂದಿನ ಪಂದ್ಯಗಳಲ್ಲಿ ಭಾರತ ಪ್ರಬಲ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 273 (ಲಿಜೆಲ್ಲಿ ಲೀ 92, ಡೇನ್‌ ವಾನ್ ನಿಕೆರಿಕ್‌ 57, ಶಿಖಾ ಪಾಂಡೆ 40ಕ್ಕೆ3). ಭಾರತ:46 ಓವರ್‌ಗಳಲ್ಲಿ 158ಕ್ಕೆ ಆಲೌಟ್‌ (ದೀಪ್ತಿ ಶರ್ಮಾ 60, ಜೂಲನ್ ಗೋಸ್ವಾಮಿ ಔಟಾಗದೆ 43; ಡೇನ್‌ ವಾನ್ ನಿಕೆರಿಕ್‌ 22ಕ್ಕೆ4). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 115 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ಡೇನ್‌ ವಾನ್ ನಿಕೆರಿಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT