ಭಾನುವಾರ, ಡಿಸೆಂಬರ್ 8, 2019
20 °C
ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌; ಮೋಡಿ ಮಾಡಿದ ಅನು, ಶೀನಾ

ಭಾರತದ ಸುಧಾಗೆ ಚಿನ್ನದ ಸಂಭ್ರಮ

Published:
Updated:
ಭಾರತದ ಸುಧಾಗೆ ಚಿನ್ನದ ಸಂಭ್ರಮ

ಭುವನೇಶ್ವರ: ಅಪೂರ್ವ ಸಾಮರ್ಥ್ಯ ತೋರಿದ ಸುಧಾ ಸಿಂಗ್‌ ಅವರು ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಖಾತೆಗೆ ಏಳನೇ ಚಿನ್ನ ಸೇರ್ಪಡೆ ಮಾಡಿದ್ದಾರೆ.ಮಹಿಳೆಯರ 3,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಆತಿಥೇಯರ ಸವಾಲು ಎತ್ತಿಹಿಡಿದಿದ್ದ ಸುಧಾ ಅವರು ಕಳಿಂಗ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಶನಿವಾರ ಮೋಡಿ ಮಾಡಿದರು. ಉತ್ತರ ಪ್ರದೇಶದ ಅಥ್ಲೀಟ್‌, ಚಿನ್ನಕ್ಕೆ ಕೊರ ಳೊಡ್ಡುವ ಮೂಲಕ ತವರಿನ ಅಭಿಮಾನಿ ಗಳ ಪ್ರೀತಿಗೆ ಪಾತ್ರರಾದರು.ಒಲಿಂಪಿಯನ್‌ ಲಲಿತಾ ಬಾಬರ್‌ ಅವರು ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದರಿಂದ ಸುಧಾ ಅವರ ಮೇಲೆ ಅಪಾರ ನಿರೀಕ್ಷೆ ಇಡಲಾಗಿತ್ತು. 2009, 2011 ಮತ್ತು 2013ರ ಆವೃತ್ತಿಗಳಲ್ಲಿ ಬೆಳ್ಳಿ ಗೆದ್ದಿದ್ದ ಅವರು ತಮ್ಮ ಮೇಲಿನ ನಂಬಿಕೆ ಉಳಿಸಿಕೊಂಡರು.31 ವರ್ಷದ ಅಥ್ಲೀಟ್‌್ 9 ನಿಮಿಷ 59.47 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.  ಹೋದ ವರ್ಷ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ  ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಸುಧಾ ಅವರು ಶನಿವಾರದ ಸ್ಪರ್ಧೆಯ ಶುರುವಿನಲ್ಲಿ ಗುಂಪಿನಲ್ಲಿ ಓಡುತ್ತಿದ್ದರು. 1,500 ಮೀಟರ್ಸ್‌ ದೂರ ಕ್ರಮಿಸಿದ  ನಂತರ ಗುಂಪಿನಿಂದ ಬೇರ್ಪಟ್ಟ ಭಾರತದ ಅಥ್ಲೀಟ್‌ ನಂತರ ವೇಗ ಹೆಚ್ಚಿಸಿಕೊಂಡು ಓಡಲು ಆರಂಭಿಸಿದರು.ಉತ್ತರ ಕೊರಿಯಾದ ಹ್ಯೊ ಗ್ಯೊಂಗ್‌ ಮತ್ತು ಜಪಾನ್‌ನ ನಾನಾ ಸ್ಯಾಟೊ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಸುಧಾ, ಯಾವ ಹಂತದಲ್ಲೂ ಪ್ರತಿ ಸ್ಪರ್ಧಿಗಳಿಗೆ ಮುನ್ನಡೆ ಬಿಟ್ಟುಕೊಡದೆ ಮೊದಲಿಗರಾಗಿ ಅಂತಿಮ ರೇಖೆ ಮುಟ್ಟಿದರು. 18 ವರ್ಷದ ಹ್ಯೊ, ಈ ವಿಭಾಗದ ಬೆಳ್ಳಿ ಗೆದ್ದುಕೊಂಡರು. ಅವರು 10 ನಿಮಿಷ 13.94 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಜಪಾನ್‌ನ ನಾನಾ (10: 18.11 ಸೆ.) ಕಂಚಿಗೆ ತೃಪ್ತಿಪಟ್ಟರು.‘ಇಲ್ಲಿ ಗೆದ್ದ ಚಿನ್ನ ನನ್ನ ಪಾಲಿಗೆ ತುಂಬಾ ವಿಶೇಷವಾದುದು. ರಿಯೊ ಒಲಿಂಪಿಕ್ಸ್‌ ನಂತರ ಎಚ್‌1, ಎನ್‌1 ಸೋಂಕಿನಿಂದ ಬಳಲಿದ್ದೆ. ಆದ್ದರಿಂದ   ಆರು ತಿಂಗಳ ಕಾಲ ಟ್ರ್ಯಾಕ್‌ನಿಂದ ದೂರ ಉಳಿಯಬೇಕಾಗಿತ್ತು. ಹೀಗಾಗಿ ಸರಿ ಯಾಗಿ ಅಭ್ಯಾಸ ನಡೆಸಲೂ ಆಗಿರಲಿಲ್ಲ. 1,500 ಮೀಟರ್ಸ್‌ವರೆಗೆ ಗುಂಪಿನಲ್ಲಿ ಓಡಿ ನಂತರ ವೇಗ ಹೆಚ್ಚಿಸಿ

ಕೊಳ್ಳುವಂತೆ   ಕೋಚ್‌ ಸಲಹೆ ನೀಡಿದ್ದರು. ಅವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿದೆ. ಹೀಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು’ ಎಂದು ಸ್ಪರ್ಧೆಯ ಬಳಿಕ ಸುಧಾ ಪ್ರತಿಕ್ರಿಯಿಸಿದ್ದಾರೆ.ಅನುಗೆ ಬೆಳ್ಳಿ: ಮಹಿಳೆಯರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ್ದ ಅನು ರಾಘವನ್‌, ಭಾರತದ ಖಾತೆಗೆ ಬೆಳ್ಳಿ ಸೇರ್ಪಡೆ ಮಾಡಿದರು. ಅವರು 57.22 ಸೆಕೆಂಡುಗಳಲ್ಲಿ ಗುರಿ ಸೇರಿದರು.ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ಎನ್‌.ವಿ. ಶೀನಾ ಅವರು 13.42 ಮೀಟರ್ಸ್‌ ಸಾಮರ್ಥ್ಯ ತೋರಿ ಕಂಚಿನ ಸಾಧನೆ ಮಾಡಿದರು. ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಎಂ.ಪಿ. ಜಾಬಿರ್‌ (50.22 ಸೆ.) ಕಂಚು ಗೆದ್ದರು.ದ್ಯುತಿ ಚಾಂದ್‌, ಶ್ರಬಾನಿ ನಂದಾ, ಹಿಮಾಶ್ರೀ ರಾಯ್‌ ಮತ್ತು ಮರ್ಲಿನ್‌ ಕೆ. ಜೋಸೆಫ್‌ ಅವರಿದ್ದ ಭಾರತ ತಂಡ 4X100 ಮೀಟರ್ಸ್‌ ರಿಲೇ ಸ್ಪರ್ಧೆಯಲ್ಲಿ  44.57 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚು ತನ್ನದಾಗಿಸಿಕೊಂಡಿತು.ನವೀನ್‌ಗೆ ನಿರಾಸೆ: ಪುರುಷರ 3,000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಕಣದಲ್ಲಿದ್ದ ನವೀನ್‌ ಕುಮಾರ್‌ ಅವರು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ನವೀನ್‌ ಅವರು ಇಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲರಾದರು. ಅವರು 9 ನಿಮಿಷ 02.95 ಸೆಕೆಂಡು ಗಳಲ್ಲಿ ಗುರಿ ಕ್ರಮಿಸಿದರು. ಪುರುಷರ 110 ಮೀಟರ್ಸ್‌ ಹರ್ಡಲ್ಸ್‌ನಲ್ಲಿ  ಸಿದ್ದಾರ್ಥ್‌ ತಿಂಗಳಾಯ (13.72 ಸೆ) ಐದನೇ ಸ್ಥಾನ ತಮ್ಮದಾಗಿಸಿಕೊಂಡರು.

*

ಫೈನಲ್‌ಗೆ ಟಿಂಟು ಲೂಕಾ

ಮಿಂಚಿನ ಗತಿಯಲ್ಲಿ ಓಡಿದ ಭಾರತದ ಟಿಂಟು ಲೂಕಾ ಅವರು ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆ ಯರ 800 ಮೀಟರ್ಸ್‌ ಓಟದ ಸ್ಪರ್ಧೆ ಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಎರಡನೇ ಹೀಟ್‌ನಲ್ಲಿ ಭಾಗವಹಿಸಿದ್ದ ಲೂಕಾ 2 ನಿಮಿಷ 6.66 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ತವರಿನ ಅಭಿಮಾನಿಗಳ ಮನ ಗೆದ್ದರು.

ಈ ವಿಭಾಗದಲ್ಲಿ ಕಣದಲ್ಲಿದ್ದ ಲಿಲಿ ದಾಸ್‌ ಮತ್ತು ಅರ್ಚನಾ ಅಧವ್‌ ಅವರೂ ಫೈನಲ್‌ಗೆ ಲಗ್ಗೆ ಇಟ್ಟರು.ಲಿಲಿ ಮತ್ತು ಅರ್ಚನಾ ಅವರು ಕ್ರಮವಾಗಿ 2 ನಿಮಿಷ 07.24 ಸೆಕೆಂಡು ಹಾಗೂ 2 ನಿಮಿಷ 09.42 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.ಜಾನ್ಸನ್‌ ಮಿಂಚು:

ಪುರುಷರ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಭಾರತದ ಸವಾಲು ಎತ್ತಿಹಿಡಿದಿರುವ ಜಿನ್ಸನ್‌ ಜಾನ್ಸನ್‌ ಅವರು ಫೈನಲ್‌ಗೆ ಅರ್ಹತೆ ಪಡೆದರು.ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿದಿದ್ದ ಜಾನ್ಸನ್‌ ಮೊದಲ ಹೀಟ್‌ನಲ್ಲಿ 1 ನಿಮಿಷ 50.48 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮೂರನೇ ಹೀಟ್‌ನಲ್ಲಿ ಭಾಗವಹಿಸಿದ್ದ ವಿಶ್ವಾಂಬರ ಕೋಲೆಕರ್‌ ಅವರೂ ಮೊದಲ ಸ್ಥಾನ ಗಳಿಸಿ ಫೈನಲ್‌ಗೆ ಮುನ್ನಡೆದರು. 

ಪುರುಷರ ಲಾಂಗ್‌ಜಂಪ್‌ ಸ್ಪರ್ಧೆ ಯಲ್ಲಿ ಕಣದಲ್ಲಿದ್ದ ಅಂಕಿತ್‌ ಶರ್ಮಾ (7.42 ಮೀಟರ್ಸ್‌), ಎಸ್‌. ಸಂಶೀರ್‌ (7.42 ಮೀಟರ್ಸ್) ಮತ್ತು ಸಿದ್ದಾರ್ಥ್‌ ಮೋಹನ್‌ ನಾಯ್ಕ್‌ (7.39 ಮೀ.) ಅವರೂ ಫೈನಲ್‌ಗೆ ಲಗ್ಗೆ ಇಟ್ಟರು.

ಪ್ರತಿಕ್ರಿಯಿಸಿ (+)