ಸೋಮವಾರ, ಡಿಸೆಂಬರ್ 16, 2019
25 °C
ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕೆ ನೆರವು ಕೋರಿದ ಭಾರತ

ಮಲ್ಯ, ಲಲಿತ್‌ಗೆ ಸಂಕಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ಮಲ್ಯ, ಲಲಿತ್‌ಗೆ ಸಂಕಷ್ಟ

ಹ್ಯಾಂಬರ್ಗ್/ಜರ್ಮನಿ: ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕೆ ಸಹಕಾರ ನೀಡುವಂತೆ ಭಾರತ ಶನಿವಾರ ಬ್ರಿಟನ್‌ಗೆ ಮನವಿ ಮಾಡಿದೆ.ಶನಿವಾರ ಜಿ–20 ಶೃಂಗಸಭೆಯ ವೇಳೆ  ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ವಿಷಯ ಪ್ರಸ್ತಾಪಿಸಿದರು.ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ ಮಲ್ಯ ಹಾಗೂ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಅವರನ್ನು ವಶಕ್ಕೆ ಪಡೆಯಲು ನಡೆಸಿರುವ ಪ್ರಯತ್ನಕ್ಕೆ ಪೂರಕವಾಗಿ ಭಾರತ ಈ ವಿಷಯ ಪ್ರಸ್ತಾಪಿಸಿದೆ.ಭಾರತದಲ್ಲಿ ಆರ್ಥಿಕ ಅಪರಾಧ ಎಸೆಗಿ ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವ ಅಪರಾಧಿಗಳನ್ನು  ತನಗೆ ಒಪ್ಪಿಸಲು ಸಹಕಾರ ನೀಡುವಂತೆ  ಮೋದಿ ಅವರು ಥೆರೆಸಾ ಅವರಿಗೆ ಮನವಿ ಮಾಡಿದರು.ಇದರ ಹೊರತಾಗಿ ಉಭಯ ರಾಷ್ಟ್ರಗಳ  ಬಾಂಧವ್ಯ ವೃದ್ಧಿಗೆ ಸಂಬಂಧಿಸಿದಂತೆ ಉಭಯ ನಾಯಕರು ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ  ಸಚಿವಾಲಯದ ವಕ್ತಾರ ಗೋಪಾಲ್ ಭಾಗ್ಲೆ ಟ್ವೀಟ್‌ ಮಾಡಿದ್ದಾರೆ.ಕೇವಲ ವಿಜಯ ಮಲ್ಯ ಮತ್ತು ಲಲಿತ್‌ ಮೋದಿ ಅವರನ್ನು ಮಾತ್ರ ದೃಷ್ಟಿಯಲ್ಲಿಇಟ್ಟುಕೊಂಡು ಭಾರತ ಮನವಿ ಮಾಡಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ  ಹೆಚ್ಚಿನ ವಿವರಣೆ ನೀಡಲು ಬಾಗ್ಲೆ ಹಿಂಜರಿದರು.ಇದು ಎಲ್ಲ ಆರ್ಥಿಕ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ಸಮಜಾಯಿಷಿ ನೀಡಿದರು. ಮಲ್ಯ ಅವರ ಹಸ್ತಾಂತರ ಕುರಿತು ಸುದ್ದಿಗಾರರು ಪದೆ ಪದೇ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದೆ  ನುಣಚಿಕೊಂಡರು.ಉಭಯ ರಾಷ್ಟ್ರಗಳು 1992ರಲ್ಲಿ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದಾದ ನಂತರ ಇಲ್ಲಿಯವರೆಗೆ ಕೇವಲ ಒಂದೇ ಒಂದು ಹಸ್ತಾಂತರ ಪ್ರಕರಣ ವರದಿಯಾಗಿದೆ.

*

‘ಪ್ರವೇಶ ಬೇಡ’

ಭಯೋತ್ಪಾದನೆ ಬೆಂಬಲಿಸುತ್ತಿರುವ ರಾಷ್ಟ್ರಗಳ ಅಧಿಕಾರಿಗಳಿಗೆ ಜಿ–20 ರಾಷ್ಟ್ರಗಳ ಒಕ್ಕೂಟದಲ್ಲಿ ಪ್ರವೇಶ ನೀಡಬಾರದು ಎಂದು ಮೋದಿ ಒತ್ತಾಯಿಸಿದರು.

ರಾಜಕೀಯ ಲಾಭ ಮತ್ತು ಸ್ವಾರ್ಥಸಾಧನೆಗಾಗಿ  ಉಗ್ರರ ಸಂಘಟನೆಗಳನ್ನು  ಪೋಷಿಸಿ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಜಾಗತಿಕಮಟ್ಟದಲ್ಲಿ ಸಂಘಟನಾತ್ಮಕ ಕ್ರಮ ಅಗತ್ಯ ಎಂದು ಅವರು ಪ್ರತಿಪಾದಿಸಿದರು.ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಪರೋಕ್ಷ ವಾಗ್ದಾಳಿ  ನಡೆಸಿದ ಅವರು, ಅಲ್‌ ಕೈದಾ, ಐಎಸ್ಐಎಸ್‌ನಂತಹ ಜಾಗತಿಕ ಉಗ್ರ ಸಂಘಟನೆಗಳ ಜತೆ ಏಷ್ಯಾದಲ್ಲಿ ಪಾಕಿಸ್ತಾನದ ಲಷ್ಕರ್‌ ಎ ತಯಬಾ (ಎಲ್‌ಇಟಿ) ಮತ್ತು ಜೈಷೆ ಏ ಮೊಹಮ್ಮದ್‌ (ಜೆಇಎಂ) ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿವೆ ಎಂದರು.2002ರ ಗೋಧ್ರೋತ್ತರ ಗಲಭೆ ಪ್ರಕರಣದ ಆರೋಪಿ ಸಮೀರ್‌ ಭಾಯ್‌ ವಿನುಭಾಯ್‌ ಪಟೇಲ್‌,ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದು,  ಅವನನ್ನು  ಬ್ರಿಟನ್‌ ಕಳೆದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಒಪ್ಪಿಸಿತ್ತು.ಹೂಡಿಕೆಗೆ ಆಹ್ವಾನ: ನಾರ್ವೆಯ ಪಿಂಚಣಿ ನಿಧಿಯ ಹಣವನ್ನು ಭಾರತದ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ಹೂಡಿಕೆ ಮಾಡುವಂತೆ ಮೋದಿ ಶನಿವಾರ ನಾರ್ವೆ ಪ್ರಧಾನಿ ಎರ್ನಾ ಸೋಲ್‌ಬರ್ಗ್‌ ಅವರಿಗೆ ಆಹ್ವಾನ ನೀಡಿದರು.ಜಿ–20 ಶೃಂಗಸಭೆಯ ವೇಳೆ ಉಭಯ ನಾಯಕರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಆರ್ಥಿಕ ಸಂಬಂಧ ವೃದ್ಧಿಗೆ ಪರಸ್ಪರ ಸಹಕಾರ  ನೀಡಲು ಒಪ್ಪಿಗೆ ಸೂಚಿಸಿದರು.

ಇದೇ ವೇಳೆ ದಕ್ಷಿಣ ಕೊರಿಯಾ ನೂತನ ಅಧ್ಯಕ್ಷ ಮೂನ್‌ ಜೇ ಇನ್‌ ಮತ್ತು ಇಟಲಿ ಪ್ರಧಾನಿ ಪೋಲ್‌ ಜೆಂಟಿಲೋನಿ, ಅರ್ಜೆಂಟೀನಾದ ಮೌರಿಸಿಯೊ ಮಕ್ರಿ ಅವರೊಂದಿಗೂ ಮೋದಿ  ಚರ್ಚೆ ನಡೆಸಿದರು.ಭಾರತಕ್ಕೆ ಭೇಟಿ ನೀಡುವಂತೆ ಇದೇ ವೇಳೆ ಮೋದಿ, ಮೂನ್‌ ಅವರಿಗೆ ಆಹ್ವಾನ ನೀಡಿದರು. ಇದನ್ನು ಅವರು ಸಂತೋಷದಿಂದ ಒಪ್ಪಿಕೊಂಡರು.

ಅಬೆ, ಟ್ರೊಡೊ ಜತೆ ಚರ್ಚೆ: ಜಪಾನ್‌ ಪ್ರಧಾನಿ ಶಿಂಜೊ ಅಬೆ ಮತ್ತು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರೊಂದಿಗೆ ಶುಕ್ರವಾರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌, ಬ್ರಿಟಿನ್‌ ಪ್ರಧಾನಿ ಥೆರೆಸಾ ಮೇ, ಜರ್ಮನ್ ಚಾನ್ಸ್‌ಲರ್‌ ಏಂಜೆಲಾ ಮರ್ಕೆಲ್‌, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ಅವರೊಂದಿಗೆ ಚರ್ಚೆ ನಡೆಸಿದರು.

ಪ್ರತಿಕ್ರಿಯಿಸಿ (+)