ಭಾನುವಾರ, ಡಿಸೆಂಬರ್ 8, 2019
24 °C

ಹುಸಿ ಕರೆ: ಕಬ್ಬನ್‌ ಉದ್ಯಾನದಲ್ಲಿ ಬಾಂಬ್‌ಗಾಗಿ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಸಿ ಕರೆ: ಕಬ್ಬನ್‌ ಉದ್ಯಾನದಲ್ಲಿ ಬಾಂಬ್‌ಗಾಗಿ ಹುಡುಕಾಟ

ಬೆಂಗಳೂರು: ‘ಕಬ್ಬನ್‌ ಉದ್ಯಾನದಲ್ಲಿ ಬಾಂಬ್‌ ಇಟ್ಟಿದ್ದೇನೆ’ ಎಂದು ಅಪರಿಚಿತನೊಬ್ಬ ಶುಕ್ರವಾರ ರಾತ್ರಿ ಕರೆ ಮಾಡಿದ್ದರಿಂದ ಪೊಲೀಸರು, ಉದ್ಯಾನದಲ್ಲಿ  ಬಾಂಬ್‌ಗಾಗಿ ಹುಡುಕಾಟ ನಡೆಸಿದರು.

ರಾತ್ರಿ 10 ಗಂಟೆಯ ಸುಮಾರಿಗೆ ‘ನಮ್ಮ–100’ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಅಪರಿಚಿತ, ‘ಉದ್ಯಾನದಲ್ಲಿ  ಬಾಂಬ್ ಇಟ್ಟಿದ್ದೇನೆ. ಕೆಲವೇ ನಿಮಿಷದಲ್ಲಿ ಸ್ಫೋಟಗೊಳ್ಳಲಿದೆ’ ಎಂದು  ತಿಳಿಸಿದ್ದ. ನಿಯಂತ್ರಣ ಕೊಠಡಿ ಸಿಬ್ಬಂದಿ ಕಬ್ಬನ್‌ ಪಾರ್ಕ್‌ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. 

ನಂತರ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಉದ್ಯಾನಕ್ಕೆ ಧಾವಿಸಿದ ಪೊಲೀಸರು, ಮಧ್ಯರಾತ್ರಿವರೆಗೆ ಶೋಧ ನಡೆಸಿದರು. ಈ ವೇಳೆ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. ಬಳಿಕವೇ ಇದೊಂದು ಹುಸಿ ಕರೆ ಎಂಬುದು ಗೊತ್ತಾಯಿತು.

‘ಕರೆ ಮಾಡಿದ್ದ ವ್ಯಕ್ತಿ ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಮೊಬೈಲ್ ಸಂಖ್ಯೆ ಆಧರಿಸಿ ಆತನ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)