ಶುಕ್ರವಾರ, ಡಿಸೆಂಬರ್ 6, 2019
17 °C
ಪ್ರಸ್ತಾವಕ್ಕೆ ಮುಖ್ಯ ಕಾರ್ಯದರ್ಶಿ ಒಪ್ಪಿಗೆ

ಕಬ್ಬನ್‌ ಪಾರ್ಕ್‌: ಎಲ್ಲಾ ರಜಾ ದಿನಗಳಲ್ಲೂ ಸಂಚಾರ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬ್ಬನ್‌ ಪಾರ್ಕ್‌: ಎಲ್ಲಾ ರಜಾ ದಿನಗಳಲ್ಲೂ ಸಂಚಾರ ನಿಷೇಧ

ಬೆಂಗಳೂರು: ವಾರಾಂತ್ಯ, ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಎಲ್ಲಾ ಸಾರ್ವತ್ರಿಕ ರಜಾ ದಿನಗಳಲ್ಲೂ ಕಬ್ಬನ್‌ ಉದ್ಯಾನದಲ್ಲಿ ವಾಹನಗಳ ಸಂಚಾರ ನಿಷೇಧಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.ಕಬ್ಬನ್‌ ಉದ್ಯಾನದಲ್ಲಿ ಎರಡನೇ ಶನಿವಾರದಂದು ವಾಹನ ಸಂಚಾರಕ್ಕೆ ನೀಡಿದ್ದ ಅನುಮತಿ ಹಿಂಪಡೆಯುವ ಕುರಿತು ಜೂನ್‌ 13ರಂದು ಉನ್ನತಾಧಿಕಾರಿಗಳ ಸಭೆ ನಡೆದಿತ್ತು.ಈ ಸಭೆಯಲ್ಲಿ ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರ್ ರಾವ್ ಹಾಗೂ ಇಲಾಖೆ ಆಯುಕ್ತ ಪಿ.ಸಿ.ರೇ ಅವರು  ‘ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ರಜೆ ಒಂದೇ ದಿನ ಇದ್ದರೆ, ಆ  ದಿನಗಳಲ್ಲೂ ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು’ ಎಂಬ ಪ್ರಸ್ತಾವ ಮುಂದಿಟ್ಟಿದ್ದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಆ ಅವರು ಸಮ್ಮತಿ ನೀಡಿದ್ದಾರೆ. ಈ ಸಂಬಂಧ ಅಧಿಸೂಚನೆ ಹೊರಡಿಸುವಂತೆ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ. ಅಧಿಕೃತ ಆದೇಶ  ಪ್ರಕಟವಾಗುವುದಷ್ಟೇ ಬಾಕಿ ಇದೆ’ ಎಂದು ಮೂಲಗಳು ತಿಳಿಸಿವೆ.ವಾಹನ ನಿಲುಗಡೆಗೆ ಸ್ಥಳ ಸಮೀಕ್ಷೆ: ‘ರಜಾದಿನಗಳಲ್ಲಿ ಉದ್ಯಾನಕ್ಕೆ ಬರುವ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.‘ಬಾಲಭವನದವರೆಗೆ ವಾಹನ ಸಂಚಾರಕ್ಕೆ  ಎಲ್ಲ ದಿನಗಳಲ್ಲೂ ಅವಕಾಶ ನೀಡಲಾಗಿದೆ. ಪ್ರತಿದಿನ ಬೆಳಿಗ್ಗೆ 8ಕ್ಕೆ ತೆರೆಯುವ ಉದ್ಯಾನದ ಪ್ರವೇಶದ್ವಾರ ಗಳನ್ನು ಇನ್ನು ಮುಂದೆ 8.30ಕ್ಕೆ ತೆರೆಯುವಂತೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಕಬ್ಬನ್‌ ಉದ್ಯಾನದಲ್ಲಿ 2ನೇ ಶನಿವಾರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಹೊರಡಿಸಿದ್ದ ಆದೇಶವನ್ನು ನಗರ ಪೊಲೀಸ್‌ ಕಮಿಷನರ್‌ ಹಿಂಪಡೆದಿದ್ದಾರೆ. ಇದರಿಂದ ಶನಿವಾರ ಉದ್ಯಾನದ ಪ್ರವೇಶದ್ವಾರಗಳು ಬಂದ್‌ ಆಗಿದ್ದವು.ಉದ್ಯಾನದ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿದೆ ಎಂದು  ನಗರ ಪೊಲೀ ಸರು 2ನೇ ಶನಿವಾರವೂ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರು. ಇದಕ್ಕೆ ನಾಗರಿಕರಿಂದ ವಿರೋಧ ವ್ಯಕ್ತವಾಗಿತ್ತು.

*

ದ್ವಿಮುಖ ಸಂಚಾರ

‘ನೃಪತುಂಗ ಹಾಗೂ ಕಸ್ತೂರಬಾ (ಕಂಠೀರವ ಕ್ರೀಡಾಂಗಣದ ಎದುರು) ರಸ್ತೆಗಳು ಅಗಲವಾಗಿರುವುದರಿಂದ ದ್ವಿಮುಖ ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ಪ್ರವೀಣ್ ಸೂದ್‌ಗೆ  ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)